ಕಾವ್ಯ ಚಲನಶೀಲ: ಮಹೇಶ್ ಬಳ್ಳಾರಿ

Get real time updates directly on you device, subscribe now.

        ಕೊಪ್ಪಳ: ಕಾವ್ಯ ಎಲ್ಲರಿಗೂ ದಕ್ಕುತ್ತದೆ ಎಂಬುದು ಜಡತ್ವ. ಕಾವ್ಯ ಎನ್ನುವುದು ಯಾವತ್ತಿಗೂ ದಕ್ಕುವುದಿಲ್ಲ, ಚಲನಶೀಲವಾಗಿರುತ್ತದೆ ಎಂದು ಕವಿ ಮಹೇಶ್ ಬಳ್ಳಾರಿ ಹೇಳಿದರು.
        ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ನಡೆದ ವಿದ್ಯಾರ್ಥಿಗಳ ಆಶು ಕವಿತೆ ರಚನಾ ಸ್ಪರ್ಧೆಯ ತೀರ್ಪುಗಾರರಾಗಿ ಅವರು ಮಾತನಾಡಿದರು.
        ಕಾವ್ಯದ ಜೊತೆಗೆ ನಾವು ಸಹ ಚಲನಶೀಲರಾಗುತ್ತೇವೆಯೋ,  ಆಗ ಕಾವ್ಯದ ಕೆಲವು ಮಗ್ಗುಲುಗಳಾದರೂ ದಕ್ಕಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಕವಿಗಳಿಗೆ ನಿರಂತರ ಅಧ್ಯಯನ ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುವ ಮನೋಭಾವ ಇರಬೇಕಾಗುತ್ತದೆ ಎಂದರು.
       ಈ ಪ್ರದೇಶ ಕನ್ನಡದ ತಿರುಳಿರುವ ನೆಲವಾಗಿದ್ದು, ಕವಿರಾಜಮಾರ್ಗ ಮತ್ತು ವಡ್ಡಾರಾಧನೆ ಎಂಬ ಸ್ವತಂತ್ರ ಕೃತಿಗಳನ್ನು ಕೊಟ್ಟ ಸಾಂಸ್ಕೃತಿಕ ಭೂಮಿಯಾಗಿದ್ದು, ಇಂಥ ಪವಿತ್ರ ತಾಣದಿಂದ ಸಾಹಿತ್ಯದ ಮೇರು ಪ್ರತಿಭೆಗಳು ಬೆಳೆದು ಬರಬೇಕು ಎಂದು ಅವರು ಕರೆ ನೀಡಿದರು.
        ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಾಯತ್ರಿ ಭಾವಿಕಟ್ಟಿ ಕವಿತೆ ಬರವಣಿಗೆಯ ಹಂತಗಳು ಮತ್ತು ರೂಪುರೇಷೆ ಕುರಿತು ಮಾತನಾಡಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರು ಮತ್ತು‌ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಟಿ.ವಿ.ವಾರುಣಿ ಮಾತನಾಡಿ, ಇಂಥ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಶೀಲತೆ, ಕೌಶಲ್ಯ ಬೆಳವಣಿಗೆಗೆ ಸಹಕಾರಿ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಎಚ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೂವರು ವಿದ್ಯಾರ್ಥಿಗಳು‌ ರಚಿಸಿದ ಅತ್ಯುತ್ತಮ ಆಶು ಕವಿತೆಗಳನ್ನು ಸ್ಪರ್ಧೆಯಲ್ಲಿ ಆಯ್ಕೆ ಮಾಡಲಾಯಿತು.
        ಈ ವೇಳೆ ಕನ್ನಡ ವಿಭಾಗದ ಬೋಧಕ ಸಿಬ್ಬಂದಿ  ಡಾ.ವಿಪ್ಲವಿ, ಡಾ.ಪ್ರಕಾಶ ಬಳ್ಳಾರಿ, ಡಾ.ಬೋರೇಶ್, ಸೋಮೇಶ್ ಉಪ್ಪಾರ್, ಶಿವಬಸಪ್ಪ ಮಸ್ಕಿ, ಬಸವರಾಜ ಕರುಗಲ್ ಇತರರಿದ್ದರು. ವಿದ್ಯಾರ್ಥಿನಿ ಮಂಜುಳಾ ಎಚ್.ಸಿ.ಪ್ರಾರ್ಥಿಸಿದರು. ಡಾ.ತುಕಾರಾಂ ನಾಯ್ಕ ಸ್ವಾಗತಿಸಿದರು. ಡಾ.ಮಹಾಂತೇಶ ನೆಲಾಗಣಿ ನಿರೂಪಿಸಿದರು. ಡಾ.ನಾಗರಾಜ ದೊರೆ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!