ಕಾಂಗ್ರೆಸ್ ಸರಕಾರ ನಿಷ್ಕ್ರಿಯತೆ ಅಪಘಾತಕ್ಕೆ ಕಾರಣ: ಸಿವಿಸಿ
ಕೊಪ್ಪಳ: ಅಳವಂಡಿ ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅಪಘಾತಕ್ಕೀಡಾಗಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವುದಕ್ಕೆ ಕಾಂಗ್ರೆಸ್ ಸರಕಾರವೇ ನೇರ ಹೊಣೆ ಎಂದು
ಜೆ ಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಆರೋಪಿಸಿದ್ದಾರೆ.
ಆ ಭಾಗದಲ್ಲಿ ರಸ್ತೆಗಳಿಗೆ ಗುಂಡಿ ಬಿದ್ದಿವೆ. ರಸ್ತೆಗಳೇ ಮಾಯವಾಗಿವೆ. ರಾಜ್ಯದ ಬೇರೆಲ್ಲೂ ಕಂಡು ಬರದಂತಹ ದುಸ್ಥಿತಿಯಲ್ಲಿ ಆ ರಸ್ತೆಗಳಿವೆ. ರಸ್ತೆ ರಿಪೇರಿಗಾಗಿ ಪ್ರತಿಭಟನೆಗಳು ನಡೆದಿವೆ. ಇಷ್ಟೆಲ್ಲಾ ಆದರೂ ಕಾಂಗ್ರೆಸ್ ಪಕ್ಷದ ಶಾಸಕರು ಕಣ್ಮುಚ್ಚಿ ಕುಳಿತಿದ್ದಾರೆ. ರಸ್ತೆ ರಿಪೇರಿಗಾಗಿ ನೂರಾರು ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ದಾರಿತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಗುಂಡಿ ಬಿದ್ದ ರಸ್ತೆಯಲ್ಲಿ ಬಸ್ ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿದೆ. ನಂತರ ಅಪಘಾತವಾಗಿದೆ. ಇದಕ್ಕೆ ಆಳುವವರ ನಿಷ್ಕ್ರಿಯತೆ ಕಾರಣ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಜೆ ಡಿ (ಎಸ್) ಹಾಗೂ ಬಿಜೆಪಿ ಪಕ್ಷಗಳು ರಸ್ತೆ ಸುಧಾರಣೆಗಾಗಿ ಪ್ರತಿಭಟನೆ ನಡೆಸಿದರೆ ಆ ಪಕ್ಷಗಳ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಪಕ್ಷ ಪ್ರಕರಣ ದಾಖಲಿಸಿ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಲಾಗಿದೆ. ಉಚಿತ ಬಸ್ ಪ್ರಯಾಣದ ನೀತಿಯಿಂದ ಬಸ್ಸುಗಳು ಕಿಕ್ಕಿರಿದು ತುಂಬಿ ಪ್ರಯಾಣಿಕರ ಗೋಳು ಹೇಳತಿರದಾಗಿದೆ. ಬಸ್ ದರ ಏರಿಸುವಲ್ಲಿ ಧಾವಂತ ತೋರಿಸುವ ಸರಕಾರ ಸುರಕ್ಷಿತ ಪ್ರಯಾಣವನ್ನು ನಿರ್ಲಕ್ಷಿಸಿದೆ. ಕನಿಷ್ಠ ಸೌಲಭ್ಯವನ್ನು ಕೊಡುತ್ತಿಲ್ಲ ಇಂತಹ ಸರಕಾರವನ್ನು ಮನೆಗೆ ಕಳಿಸುವ ತನಕ ತಮ್ಮ ಪಕ್ಷ ವಿರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
Comments are closed.