ಸಮತಾ ಸಮಾಜ ಕಟ್ಟುವ ಸಂಕಲ್ಪಕ್ಕೆ ಪ್ರೇರಣೆಯಾದ ದಿನ- ಶಿವರಾಜ್ ತಂಗಡಗಿ

Get real time updates directly on you device, subscribe now.

77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವರಾದ ಶಿವರಾಜ ತಂಗಡಗಿ ಆಶಯ
ಕೊಪ್ಪಳ ): ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮೀಡಿ ಜೀವನ ಮುಡುಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಯೊಬ್ಬ ಭಾರತೀಯರ ಮನದಲ್ಲಿ ಅಮರರಾಗಿ ಉಳಿದಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ. ಜಾತಿ, ಧರ್ಮ ಭೇದ-ಭಾವ ಹೊಂದದೆ ಎಲ್ಲರೂ ಸಮಾನರಾಗಿ ಶಾಂತಿಯಿಂದ ಬಾಳೋಣ. ದೇಶಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾದ ಈ ದಿನದಂದು ಸಮತಾ ಸಮಾಜ ಕಟ್ಟಲು ಸಂಕಲ್ಪ ಮಾಡೋಣ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಹೇಳಿದರು.
77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದಿಂದ ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15ರಂದು ನಡೆದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಕಲ ಜಾತಿ, ಧರ್ಮ, ಭಾಷೆ, ಪ್ರದೇಶಗಳ ಜನರೆಲ್ಲಾ ಒಗ್ಗಟ್ಟಾಗಿ ಬೃಹತ್ ಪ್ರಜಾಪ್ರಭುತ್ವದ ಯಶಸ್ಸಿಗಾಗಿ ನಾವೆಲ್ಲರೂ ಸಾಮರಸ್ಯದಿಂದ ಬಾಳುತ್ತಿದ್ದೇವೆ. ಬಹುಜನರ ಒಳಿತಿಗಾಗಿ ಬಹುಜನರ ಕಲ್ಯಾಣಕ್ಕಾಗಿ ಎಂಬ ಮಂತ್ರವನ್ನು ಸಾರುತ್ತ ಭವ್ಯಭಾರತ ಕಟ್ಟುವ ಸಂಕಲ್ಪ ಮಾಡೋಣ, ಭಾರತಕ್ಕೊಂದು ಹೊಸ ಭಾಷ್ಯ ಬರೆಯೋಣ ಎಂದು ಹೇಳಿದರು.
ನಮ್ಮ ದೇಶದ ಇತಿಹಾಸದಲ್ಲಿ ಆಗಸ್ಟ್ 15, 1947 ಸ್ಮರಣೀಯವಾದ, ಪ್ರತಿಯೊಬ್ಬ ಭಾರತೀಯನೂ ಸಂಭ್ರಮಿಸುವ ದಿನ ಇದಾಗಿದೆ. 200 ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟೀಷರ ದಾಸ್ಯದ ಸಂಕೋಲೆಯಿಂದ ಭಾರತವು ಬಿಡುಗಡೆಯಾದ ದಿನ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಘಳಿಗೆಯು ರೋಚಕತೆಯಿಂದ ಕೂಡಿದೆ. ಜವಾಹರಲಾಲ್ ನೆಹರೂ ಅವರು 1947 ಆಗಸ್ಟ್ 14ರ ಮಧ್ಯರಾತ್ರಿ ಭಾರತೀಯ ರಾಜ್ಯಾಂಗದ ಕುರಿತು ಐತಿಹಾಸಿಕ ಭಾಷಣ ಮಾಡಿದರು. ಈ ಸ್ವಾತಂತ್ರ್ಯವು ‘ಭವಿಷ್ಯದೊಂದಿಗೆ ಅನುಸಂದಾನ’ ಎಂದು ವ್ಯಾಖ್ಯಾನಿಸಿದರು. ಆ ದಿನ ಮಧ್ಯರಾತ್ರಿಯ ಗಂಟೆ ಭಾರಿಸುತ್ತಿರುವಾಗ ಇಡೀ ಜಗತ್ತೇ ನಿದ್ರೆಯಲ್ಲಿತ್ತು. ಆದರೆ ಆ ವೇಳೆಯಲ್ಲಿ ಭಾರತದಲ್ಲಿ ಹೊಸ ಕನಸು, ಹೊಸ ಭರವಸೆ ಚಿಗುರೊಡೆಯಿತು. ನಮ್ಮ ದೇಶವು ಆಗ ಅಧಿಕೃತವಾಗಿ ಸ್ವತಂತ್ರ ಪಡೆದುಕೊಂಡಿತು. ‘ಇತಿಹಾಸದಲ್ಲಿ ಈ ದಿನ ಸ್ಮರಣೀಯವಾಗಿದೆ. ನಾವು ಹೊಸ ಹಾದಿ ತುಳಿಯುತ್ತಿದ್ದೇವೆ.’ ಎಂದು ಆ ವೇಳೆ ನೆಹರೂ ಅವರು ಹೇಳಿದ ಮಾತು ಇಂದಿಗೂ ಸ್ಮರಣೀಯವಾಗಿದೆ ಎಂದರು.
‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ಹೇಳುತ್ತ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಕರೆ ಕೊಟ್ಟರು. ಭಾರತದಲ್ಲಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಅಗ್ರಗಣ್ಯ ನಾಯಕ ಡಾ.ಬಿ.ಆರ್.ಅಂಬೇಡ್ಕರ ಅವರು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಹೋರಾಟಕ್ಕೆ ಸ್ಫೂರ್ತಿ ನೀಡುವ ಸಂದೇಶಗಳನ್ನು ಸಾರುತ್ತ ನಾಡಿನ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿ ಚಳುವಳಿ ತೀವ್ರಗೊಂಡು ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ದೇಶದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ.
ದೇಶದ ಸ್ವಾತಂತ್ರ್ಯ ಹೋರಾಟಗಾಥೆಯು ವಿಶಿಷ್ಟವಾಗಿದೆ. ಸ್ವಾತಂತ್ರ್ಯಕ್ಕಾಗಿ ಮಡಿದವರ ಸಂಖ್ಯೆಗೆ‌ ಲೆಕ್ಕವಿಲ್ಲ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಸುಭಾಷ್‌ಚಂದ್ರ ಭೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲಬಹದ್ದೂರ್ ಶಾಸ್ತ್ರೀಜಿ,ಡಾ.ಬಿ.ಆರ್.ಅಂಬೇಡ್ಕರ್, ಗೋಪಾಲಕೃಷ್ಣ ಗೋಖಲೆ, ಲಾಲಾ ಲಜಪತರಾಯ್, ಬಾಲಗಂಗಾಧರ ತಿಲಕ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಭಗತ್ ಸಿಂಗ್, ರಾಜಗುರು, ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಹೀಗೆ ಅನೇಕ ರಾಷ್ಟ್ರೀಯ ಮಹಾಪುರುಷರ ಹೋರಾಟದ ಫಲವೇ ಈ ಸ್ವಾತಂತ್ರ್ಯವಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಹೋರಾಟಗಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದ ಕೊಪ್ಪಳ ಜಿಲ್ಲೆಯ ಮುಂಡರಗಿ ಭೀಮರಾಯರು, ಹಮ್ಮಿಗೆ ಕೆಂಚನಗೌಡರು, ಇಟಗಿಯ ವೀರಭದ್ರಯ್ಯನವರು, ಶಿರೂರು ವೀರಭದ್ರಪ್ಪನವರು, ಶಿವಮೂರ್ತಿಸ್ವಾಮಿ ಅಳವಂಡಿಯವರು, ಜನಾರ್ಧನರಾಯ ದೇಸಾಯಿಯವರು, ಎಲ್.ಕೆ.ಷರಾಫ್‌ರವರು, ಬಿಂದು ಮಾಧವರಾವ್ ಅವರು, ಬಿ.ಕೆ. ಪ್ರಾಣೇಶಾಚಾರ್ಯರವರು, ಮುರಡಿ ಭೀಮಜ್ಜ ಮೊದಲಾದ ಧೀಮಂತರುಗಳು ಹೊಂದಿದ್ದ ದೇಶಪ್ರೇಮದ ಗುಣವು ನಮಗೆಲ್ಲ ಸ್ಪೂರ್ತಿಯಾಗಿದೆ. ಅವರ ಸೇವಾಗುಣವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕೊಪ್ಪಳ ಜಿಲ್ಲೆ ರಚನೆಯಾಗಿ 25 ವರ್ಷಗಳು ಪೂರ್ಣಗೊಂಡಿದೆ. ಅದಕ್ಕಾಗಿ ಜಿಲ್ಲಾಡಳಿತದಿಂದ 25 ವರ್ಷಗಳ ಸಂಭ್ರಮಾಚರಣೆಯ ಕಾರ್ಯಕ್ರಮ ನಡೆದಿದೆ. ಕೊಪ್ಪಳ ಜಿಲ್ಲೆಯು ದಿನೇದಿನೆ ಬದಲಾವಣೆಯತ್ತ ಸಾಗುತ್ತಿದೆ ಎಂದರು.
ರಾಜ್ಯ ಸರ್ಕಾರವು ಕಳೆದ ಮೇ ಮಾಹೆಯಲ್ಲಿ ಅಸ್ವಿತ್ವಕ್ಕೆ ಬಂದು ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ 35,410 ಕೋಟಿ ರೂ. ನಿಗದಿಪಡಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ ಜೂನ್ 11 ರಂದು ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜೂನ್ 11ರಿಂದ ಆಗಸ್ಟ್ 13ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ 63.88 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ನಮ್ಮದು ಹಳ್ಳಿಗಳ ದೇಶ. ಬಹುತೇಕ ಶ್ರಮಿಕರೇ ಇರುವ ನಾಡಿದು. ಈ ನಿಟ್ಟಿನಲ್ಲಿ ಹಸಿದ ಹೊಟ್ಟೆಗೆ ಮತ್ತು ದುಡಿಯುವ ಕೈಗಳಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಮಾತು ಕೊಟ್ಟಂತೆ ವಾರ್ಷಿಕ 10 ಸಾವಿರ ಕೋಟಿ ರೂ. ಮೊತ್ತದಲ್ಲಿ ಅನ್ನ ಭಾಗ್ಯ ಯೋಜನೆ ಜಾರಿ ಮಾಡಿದೆ. ಬಸವಣ್ಣನವರ ದಾಸೋಹ ಸಂಸ್ಕೃತಿಯಿಂದ ಪ್ರೇರೇಪಿತರಾದ ಮಾನ್ಯ ಸಿದ್ಧರಾಮಯ್ಯನವರು 10 ವರ್ಷಗಳ ಹಿಂದೆಯೇ ಈ ಯೋಜನೆ ಜಾರಿ ಮಾಡಿದ್ದಾರೆ ಎಂಬುದನ್ನು ನಾವಿಲ್ಲಿ ಸ್ಮರಿಸಬೇಕಿದೆ ಎಂದರು.
ಉಚಿತ ಬೆಳಕು ಸುಸ್ಥಿರ ಬದುಕು ಆಶಯ ಹೊಂದಿ ಗೃಹ ಜ್ಯೋತಿ ಯೋಜನೆಗೆ 10 ದಿನಗಳ ಹಿಂದೆ ಚಾಲನೆ ನೀಡಲಾಗಿದೆ. ಗುಲ್ಬರ್ಗಾ ವಿದ್ಯುಚ್ಚಕ್ತಿ ಸರಬರಾಜು ಕಂಪನಿಯಿಂದ ಫಲಾನುಭವಿಗಳಿಗೆ ಶೂನ್ಯ ಬಿಲ್ಲನ್ನು ವಿತರಣೆ ಮಾಡಿದ್ದೇವೆ. ಕೊಪ್ಪಳ ಜಿಲ್ಲೆಯಲ್ಲಿ ಈ ಯೋಜನೆಯಡಿ 2,66,440 ಗ್ರಾಹಕರು ನೋಂದಾವಣೆ ಮಾಡಿಕೊಂಡು ಆಗಸ್ಟ್ 14ರ ಅಂತ್ಯಕ್ಕೆ ಪ್ರಗತಿಯು ಶೇಕಡವಾರು 89.67 ರಷ್ಟು ಆಗಿದೆ. ಕುಟುಂಬದ ಯಜಮಾನಿಯು ಆರ್ಥಿಕವಾಗಿ ಸಬಲವಾಗುವುದು ಕುಟುಂಬದ ಹಾಗೂ ಈ ಮೂಲಕ ಸಮಾಜದ ಬೆಳವಣಿಗೆ ಬುನಾದಿಯಾಗಲಿದೆ ಎಂಬುದನ್ನರಿತು ಮತ್ತೊಂದು ಮಹತ್ವದ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿ ಬಿಪಿಎಲ್, ಎಪಿಎಲ್ ಅಂತ್ಯೋದಯ ಕಾರ್ಡನಲ್ಲಿ ನಮೂದಿಸಿರುವಂತೆ ಕುಟುಂಬ ಯಜಮಾನಿ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು 2,000 ರೂ.ಗಳನ್ನು ಡಿಬಿಟಿ ಮೂಲಕ ಪಾವತಿಸಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 3,31,365 ಅರ್ಹ ಫಲಾನುಭವಿಗಳಿದ್ದು, ಇದುವರೆಗೆ 2,69,770 ಫಲಾನುಭವಿಗಳು ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಇನ್ನುಳಿದ ಅರ್ಹ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಪೈಕಿ ಮತ್ತೊಂದು ಮಹತ್ವದ ಯುವನಿಧಿ ಯೋಜನೆಯಡಿ, 2022-23ರಲ್ಲಿ ಉತ್ತೀರ್ಣರಾಗಿ 6 ತಿಂಗಳೊಳಗೆ ಉದ್ಯೋಗ ಸಿಗದ ನಿರುದ್ಯೋಗಿ ಪದವೀಧರ, ಸ್ನಾತಕೋತ್ತರ ಪದವೀಧರರಿಗೆ ತಿಂಗಳಿಗೆ 3000 ರೂ. ಡಿಪ್ಲೋಮಾದಾರರಿಗೆ 1,500 ರೂ. ನೀಡುವ ಯೋಜನೆಯನ್ನು ರೂಪಿಸಲಾಗಿದೆ. 24 ತಿಂಗಳುಗಳ ಕಾಲ ಅಥವಾ ಉದ್ಯೋಗ ಸಿಗುವವರೆಗೆ, ಸ್ವ ಉದ್ಯೋಗ ಆರಂಭಿಸಿ ಸ್ವಾವಲಂಬಿಯಾಗುವವರೆಗೆ ಯಾವುದು ಮೊದಲೋ ಅಲ್ಲಿವರೆಗೆ ಭತ್ಯೆ ನೀಡಲಾಗುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಯಾಗಿ ಕೊಪ್ಪಳ ಜಿಲ್ಲೆಗೆ ವಿಶೇಷ ಕೊಡುಗೆ ನೀಡಬೇಕು ಎಂದು ಆಶಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿದ ಭಾಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಜಾನಪದ ಲೋಕ ನಿರ್ಮಾಣಕ್ಕೆ ಅವಕಾಶ ಲಭಿಸಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ 2 ಕೋಟಿ ರೂ. ಮೀಸಲಿರಿಸಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಇದುವರೆಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಬಿತ್ತನೆ ಗುರಿ 3.08 ಲಕ್ಷ ಹೆಕ್ಟರ್ ಇದ್ದು, ಇದರಲ್ಲಿ 2.68 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈಗಾಗಲೇ ಕಾಲುವೆಗಳಲ್ಲಿ ನೀರು ಬಿಡಲಾಗಿದ್ದು ಭತ್ತದ ನಾಟಿಯು ಚುರುಕುಗೊಂಡಿರುತ್ತದೆ. ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಪ್ರಕ್ರಿಯೆ ನಡೆಯುತ್ತಿದೆ. ರೈತರು ತಾವು ಬೆಳೆದ ಬೆಳೆಗಳ ನಿಖರವಾದ ಮಾಹಿತಿ ದಾಖಲಿಸುವ ಮೂಲಕ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಜಿಲ್ಲೆಯ ಎಲ್ಲ ರೈತ ಬಂಧುಗಳು ಕೂಡಲೇ ಕಾರ್ಯೋನ್ಮುಖರಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ನಿಂದ
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 2023-24ನೇ ಸಾಲಿಗೆ 82 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯಿದ್ದು ಜುಲೈ ಅಂತ್ಯಕ್ಕೆ 70.67 ಲಕ್ಷ ಮಾನವ ದಿನಗಳು ಸೃಜಿಸಿ ಶೇ.86.67 ರಷ್ಟು ಪ್ರಗತಿ ಸಾಧಿಸಲಾಗಿದೆ. ಎನ್.ಎಫ್.ಡಿ.ಎಸ್ ಕಾರ್ಯಕ್ರಮದಡಿ ಅವಶ್ಯಕವಾದ ಔಷಧಿಗಳನ್ನು ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಕಾರ್ಯಕ್ರಮಕ್ಕಾಗಿ 22,96,682 ರೂ.ಅನುದಾನ ವೆಚ್ಚ ಮಾಡಲಾಗಿದೆ. 2023-24ನೇ ಸಾಲಿನಲ್ಲಿ 1 ರಿಂದ 10ನೇ ತರಗತಿಯವರೆಗೆ ಸರಕಾರಿ-1,93,820, ಅನುದಾನಿತ-19,457, ಅನುದಾನ ರಹಿತ 62,941 ಹಾಗೂ ಇತರೆ ಶಾಲೆಗಳ ಮಕ್ಕಳು 12,825 ಸೇರಿ ಜಿಲ್ಲೆಯಲ್ಲಿ 2,89,043 ಮಕ್ಕಳ ದಾಖಲಾತಿಯಾಗಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ಇನ್ನೂ ಅನೇಕ ಇಲಾಖೆಗಳಿಂದ ಉತ್ತಮ ಕಾರ್ಯಗಳಾಗಿವೆ ಎಂದು ತಿಳಿಸಿದರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸದರಾದ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ಕೊಪ್ಪಳ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ಸುನೀಲ್ ವಂಟಗೋಡಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ, ಡಿವೈಎಸ್ಪಿ ಶರಣಬಸಪ್ಪ ಸುಬೇದಾರ, ಜಿ.ಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಕೊಪ್ಪಳ ತಹಸೀಲ್ದಾರರಾದ ವಿಠ್ಠಲ ಚೌಗಲಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು,
ಗಣ್ಯರು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!