ವಿದ್ಯಾರ್ಥಿಗಳಿಗೆ ನಾವಿನ್ಯತೆಯ ಸೃಜನಶೀಲ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ

Get real time updates directly on you device, subscribe now.

—-
ಕೊಪ್ಪಳ : 77ನೇ ಸ್ವಾತಂತ್ರ‍್ಯೋತ್ಸವ ಮಹೋತ್ಸವ ಸವಿನೆನಪಿಗಾಗಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ನಾವಿನ್ಯತೆಯ ಸೃಜನಶೀಲ ಸ್ಪರ್ಧಾ ಕಾರ್ಯಕ್ರಮವು ಆಗಸ್ಟ್ 14ರಂದು ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಡ್ ದರ್ಪಣ, ಸಖಿ ಒನ್ ಸ್ಟಾಪ್ ಸೆಂಟರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ ಕೊಪ್ಪಳ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ರೇಣುಕಾ ಪುರೋಹಿತ್ ಅವರು ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಶುಶ್ರೂಷಕ ತರಬೇತಿಯು ವೈಜ್ಞಾನಿಕವಾಗಿ ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದಾಗಿದೆ. ಇದು ವಸತಿ ಸಹಿತ ತರಬೇತಿಯಾಗಿದ್ದು, ವಿದ್ಯಾರ್ಥಿಗಳಿಗೆ ಪೋನ್ ಬಳಕೆ ಇರುವುದಿಲ್ಲ. ಪಠ್ಯ ಮತ್ತು ಪ್ರಾಯೋಗಿಕ ತರಬೇತಿ ಇರುತ್ತದೆ. ರೋಗಿಗಳ ಜೊತೆಗಿನ ಸೇವೆಯ ಕಲಿಕೆಗೆ ಒತ್ತು ನೀಡಲಾಗುತ್ತದೆ. ಈ ಬಾರಿ 77ನೇ ಸ್ವಾತಂತ್ರ‍್ಯ ಮಹೋತ್ಸವದ ನಾವೀನ್ಯತೆಯ ಸೃಜನಶೀಲ ಸ್ಪರ್ಧೆಗಳಿಂದ ವಿದ್ಯಾರ್ಥಿಗಳಿಗೆ ಹೊಸತನದ ಕಲಿಕಾ ಅನುಭವ ಮೂಡಿದೆ. ಪ್ರಬಂಧ ಸ್ಪರ್ಧೆ, ದೇಶಪ್ರೇಮ ಪದನುಡಿಗಟ್ಟು ಸ್ಪರ್ಧೆ, ಸ್ವರಚಿತ ಕವನ, ಆಶು ಭಾಷಣ ಸ್ಪರ್ಧೆ ಮತ್ತು ಚಿತ್ರಕಲೆ ಮಂಡನೆ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿವೆ. ಮಕ್ಕಳಲ್ಲಿ ಸಾಮಾಜಿಕ ಸಂವೇದನಾಶೀಲತೆ ಮೂಡಿಸುವುದು ಮುಖ್ಯವೆಂದು ವಿದ್ಯಾರ್ಥಿಗಳಿಗೆ ಸೂಕ್ತ ತಿಳಿವಳಿಕೆ ನೀಡಿದರು.
ಕಾರ್ಡ್ ದರ್ಪಣದ ಪ್ರೋಗ್ರಾಮ್ ಆಫೀಸರ್ ಸೌಭಾಗ್ಯ ದೊಡ್ಮನಿ ಅವರು ಮಾತನಾಡಿ, ಎಸ್.ಎಸ್.ಜಿ ಮಹಿಳೆಯರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮ ಮಾಡಬೇಕು.
ಮಕ್ಕಳು ಮತ್ತು ಮಹಿಳೆಯರ ಹಕ್ಕು ಭಾದ್ಯತೆ ಹಾಗೂ ಸಂವಿಧಾನ ಕಾನೂನು ಅರಿವು ಕುರಿತು ಹಲವಾರು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ನಮ್ಮ ಸಂಯೋಜಕರೊಂದಿಗೆ ಆಯೋಜಿಸುತ್ತೇವೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯ ಸಖಿ ಒನ್‌ ಸ್ಟಾಪ್ ಘಟಕದ ಆಡಳಿತಾಧಿಕಾರಿ ಯಮುನಾ ಬೆಸ್ತರ್ ಅವರು ಮಾತನಾಡಿ, ಸಂಕಷ್ಟಕ್ಕೆ ಒಳಗಾದ ಮಕ್ಕಳು ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಬರುವ ಸಖಿ ಒನ್ ಸ್ಟಾಪ್ ಸೆಂಟರ್ 2014ರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ದೌರ್ಜನ್ಯಕ್ಕೆಗೊಳಗಾದ ಮಗು ಮತ್ತು ಮಹಿಳೆಯರಿಗಾಗಿ ಸಖಿ ಘಟಕದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ, ಆಪ್ತ ಸಮಾಲೋಚನೆ, ಪೊಲೀಸ್ ನೆರವು ಮತ್ತು ಉಚಿತ ಕಾನೂನು ನೆರವು, ತಾತ್ಕಾಲಿಕ ವಸತಿ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ತುರ್ತು ಸಮಸ್ಯೆಗಳಿದ್ದಲ್ಲಿ ಸಖಿ ಘಟಕ ಸಂಖ್ಯೆ 8217646873ಗೆ ಕರೆ ಮಾಡಬಹುದೆಂದು ತಿಳಿಸಿದರು.
ಗದಗ ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಜಾತ, ಬಾಗಲಕೋಟೆ ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಶಂಕ್ರಮ್ಮ ಅವರು ಕುಟುಂಬದಲ್ಲಿ ತಾಯಿ ಮತ್ತು ಮಕ್ಕಳ ನಡುವಿನ ಬಾಂಧವ್ಯ ಹಾಗೂ ಶುಶ್ರೂಷೆ ಕಲಿಕೆಯನ್ನು ಯಶಸ್ವಿಯಿಂದ ಸಾಧಿಸುವಂತೆ ಸೂಕ್ತ ತಿಳಿವಳಿಕೆ ನೀಡಿದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿಗಳಾದ ದಾದೇಸಾಬ ಅವರು ಅನಿಷ್ಟ ದೇವದಾಸಿ ಪದ್ಧತಿಯ ಆಚರಣೆಗಳು ಕಾನೂನು ಶಿಕ್ಷಾರ್ಹ ಅಪರಾದ ಬಗ್ಗೆ ಹಾಗೂ ದೇವದಾಸಿ ಕುಟುಂಬಸ್ಥರಿಗೆ ಸಿಗುವ ಕಾನೂನು ನೆರವುಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಡ್ ದರ್ಪಣದ ಗವಿಸಿದ್ದಪ್ಪ, ದೇವದಾಸಿ ಪುನರ್ವಸತಿ ಯೋಜನಾ ಘಟಕದ ಸಕ್ಕುಬಾಯಿ, ಕಿರಿಯ ಮಹಿಳಾ ಸಹಾಯಕಿಯರ ತರಬೇತಿ ಕೇಂದ್ರದ ಶಿಕ್ಷಕರಾದ ಮಂಗಳ ಸೇರಿದಂತೆ ಮತ್ತಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!