ಹೋಬಳಿ ಹಂತದಲ್ಲಿಯೇ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ – ಜಿಲ್ಲಾಧಿಕಾರಿ ನಲಿನ್ ಅತುಲ್

0

Get real time updates directly on you device, subscribe now.

ಜನಸ್ಪಂದನಾ ಕಾರ್ಯಕ್ರಮಗಳ ಮೂಲಕ ಹೋಬಳಿ ಹಂತದಲ್ಲಿಯೇ ಜನರ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ಪ್ರಯತ್ನವಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಅವರು ಮಂಗಳವಾರ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಬುದ್ದ ಬಸವ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ “ಜನ ಸ್ಪಂದನಾ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ನಿರ್ದೇಶನದನ್ವಯ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ, ಸಕಾಲದಲ್ಲಿ ಸೇವೆಗಳನ್ನು ಒದಗಿಸಲು ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈಗಾಗಲೇ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗಿದೆ. ಪ್ರಸ್ತುತ ಹೋಬಳಿ ಮಟ್ಟದಲ್ಲಿಯೂ ಜನಸ್ಪಂದನಾ ಏರ್ಪಡಿಸಿ, ಅಲ್ಲಿನ ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸಲು ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರೆಗೆ ಜರುಗಿದ ವಿವಿಧ ಜನಸ್ಪಂದನ ಕಾರ್ಯಕ್ರಮಗಳಲ್ಲಿ ಕುಂದುಕೊರತೆಗಳ ಅರ್ಜಿಗಳು ಹಾಗೂ ಮನವಿಗಳು ಸೇರಿ ಸ್ವೀಕೃತವಾದ ಒಟ್ಟು 2695 ಅರ್ಜಿಗಳಲ್ಲಿ 2683 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, 12 ಅರ್ಜಿಗಳು ಮಾತ್ರ ಬಾಕಿ ಇರುತ್ತವೆ ಎಂದರು.
ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮಗಳಾದ ಐದು ಗ್ಯಾರಂಟಿ ಯೋಜನೆಗಳು ಕೊಪ್ಪಳ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಗೃಹಲಕ್ಷ್ಮೀ ಯೋಜನೆಯಡಿ ಸುಮಾರು 3 ಲಕ್ಷ 13 ಸಾವಿರ ಮಹಿಳೆಯರಿಗೆ ಮಾಸಿಕ ರೂ. 2 ಸಾವಿರಗಳ ಸಹಾಯಧನ ಸಿಗುತ್ತಿದೆ. 2 ಲಕ್ಷ 90 ಸಾವಿರ ಕುಟುಂಬಗಳು ಅನ್ನಭಾಗ್ಯ ಯೋಜನೆಯಡಿ ಸೌಲಭ್ಯ ಪಡೆದುಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯು ಜಿಲ್ಲೆಯ 2 ಲಕ್ಷ 70 ಸಾವಿರಕ್ಕೂ ಅಧಿಕ ವಿದ್ಯುತ್ ಗ್ರಾಹಕರಲ್ಲಿ ಅನುಕೂಲವಾಗಿದೆ. ಪ್ರತಿ ತಿಂಗಳು ಸರಿ ಸುಮಾರು 33 ಲಕ್ಷ ಮಹಿಳೆಯರು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದ 3500 ಅಭ್ಯರ್ಥಿಗಳಿಗೆ ನಿರುದ್ಯೋಗ ಭತ್ಯೆಯನ್ನು ಪಾವತಿ ಮಾಡಲಾಗುತ್ತಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಈ ವರ್ಷ ನಮ್ಮ ಜಿಲ್ಲೆಗೆ 387 ಕೋಟಿ ಮಂಜೂರಾಗಿದ್ದು, ಯಲಬುರ್ಗಾಕ್ಕೆ 80 ರಿಂದ 100 ಕೋಟಿ ದೊರೆತಿದೆ. ಸರ್ಕಾರದಿಂದ ಕೆರೆ ತುಂಬಿಸುವ ಯೋಜನೆಗಾಗಿ ಯಲಬುರ್ಗಾ ಕ್ಷೇತ್ರಕ್ಕೆ 970 ಕೋಟಿ ಅನುದಾನ ಮಂಜೂರಾಗಿದೆ. ಇದಲ್ಲದೆ ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ಮೂರು ತಾಲ್ಲೂಕು ಅಸ್ಪತ್ರೆ, 8 ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳು, 3 ಸಮುದಾಯ ಆರೋಗ್ಯ ಕೇಂದ್ರಗಳು ಮಂಜೂರಾಗಿವೆ ಮತ್ತು ಕೆಲ ಆಸ್ಪತ್ರೆಗಳನ್ನು ಮೇಲ್ದರ್ಜೆಗೆರಿಸಲು ಮಂಜೂರಾತಿ ನೀಡಲಾಗಿದೆ. ಯಲಬುರ್ಗಾ ಕ್ಷೇತ್ರಕ್ಕೆ 4 ಪಿ.ಹೆಚ್.ಸಿ., ಸಿ.ಹೆಚ್.ಸಿ ಮತ್ತು 100 ಹಾಸಿಗೆಯ ಆಸ್ಪತ್ರೆ ದೊರೆತಿದೆ. ಇದರ ಜೊತೆಗೆ 8 ಪ್ರೌಢ ಶಾಲೆಗಳ ಉನ್ನತಿಕರಣ ಹಾಗೂ ವಸತಿ ಶಾಲೆಗಳು ಮಂಜೂರಾಗಿವೆ ಎಂದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವಿವಿಧ ಅರ್ಜಿ ಹಾಗೂ ಮನವಿಗಳ ಸಲ್ಲಿಕೆ: ಬೇವೂರ ಹಾಗೂ ಸುತ್ತಲಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಬೆಳೆ ಪರಿಹಾರ, ಮಾಸಾಶನ, ಜಮೀನು ವರ್ಗಾವಣೆ, ಪೌತಿ ಖಾತೆ, ಪಹಣಿ ತಿದ್ದುಪಡಿ, ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಅರ್ಜಿಗಳನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಪಿಂಚಣಿ ಸೌಲಭ್ಯ ಸೇರಿದಂತೆ ಕೆಲವೊಂದನ್ನು ಅಹವಾಲುಗಳಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಪರಿಹರಿಸುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿಧ ಇಲಾಖೆಗಳ ಕೌಂಟರ್ ಸ್ಥಾಪನೆ: ಸಾರ್ವಜನಿಕರಿಂದ ಅಹವಾಲು ಸಲ್ಲಿಕೆಗೆ ಕೌಂಟರ್ ಸ್ಥಾಪಿಸಿ, ಜಿಲ್ಲಾಡಳಿತದಿಂದ ಇಲಾಖಾವಾರು ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕೌಂಟರ್ ತೆರೆದು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರತ್ಯೇಕ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಬೇವೂರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಂದಮ್ಮ ಬಳಿಗಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಗ್ರಾ.ಪಂ ಉಪಾಧ್ಯಕ್ಷರಾದ ಲಕ್ಷ್ಮವ್ವ ಚುಕ್ಕಾಣಿ, ಯಲಬುರ್ಗಾ ತಹಸೀಲ್ದಾರ ಬಸವರಾಜ ತನ್ನಳ್ಳಿ, ಉಪ ತಹಶಿಲ್ದಾರ ವಿಜಯಕುಮಾರ ಗುಡದೂರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಸವಿತಾ ಮಹರ್ಷಿ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ
ಕೊಪ್ಪಳ, ಜನವರಿ 04 (ಕರ್ನಾಟಕ ವಾರ್ತೆ: ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಚರಿಸಲಾಯಿತು.
ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅವರು ಶ್ರೀ ಸವಿತಾ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಸವಿತಾ ಮಹರ್ಷಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಜ್ಞಾನೇಶ್ವರ ಎನ್.ಹೆಚ್., ಜಿಲ್ಲಾ ಕಾರ್ಯದರ್ಶಿ ತುಕಾರಾಮ ಎನ್.ಹೆಚ್., ಮುಖಂಡರಾದ ಮಾರುತಿ ಸುಗುರ, ನಾಗರಾಜ ಕಂಪ್ಲಿ, ರವಿ ಕುಮಾರ, ಶಿವಮೂರ್ತಿ, ಕಲ್ಲಪ್ಪ ಹೊನ್ನುಂಚಿ, ಅನಂದ, ಮಹೇಶ ಸುಗುರ, ಈಶಪ್ಪ ಮಾದಿನಾಳ ಹಾಗೂ ಮತ್ತಿತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!