ಸಿದ್ಧರಾಮೇಶ್ವರರು 12ನೇ ಶತಮಾನದ ಪ್ರಸಿದ್ದ ಸಮಾಜ ಸೇವಕರು – ಅರವಿಂದ ಎಸ್ ವಡ್ಡರ

Get real time updates directly on you device, subscribe now.

 : ಶಿವಯೋಗಿ ಸಿದ್ಧರಾಮೇಶ್ವರರು 12ನೇ ಶತಮಾನದ ಪ್ರಸಿದ್ದ ಸಮಾಜ ಸೇವಕರಾಗಿದ್ದರು ಎಂದು ಗಜೇಂದ್ರಗಡ ಎಸ್.ಎಸ್.ಭೂಮರೆಡ್ಡಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಅರವಿಂದ ಎಸ್ ವಡ್ಡರ ಹೇಳಿದರು.
ಅವರು ಶುಕ್ರವಾರ ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
12ನೇ ಶತಮಾನಕ್ಕೂ ಪೂರ್ವದಲ್ಲಿ ಈ ನಾಡಿನಲ್ಲಿ ಮೌಢ್ಯತೆ, ರಾಜ್ಯ ಪ್ರಭುತ್ವದೊಳಗೆ ಗುಲಾಮಗಿರಿಯ ಅಟ್ಟಹಾಸ ನಡೆದಿತ್ತು. ಜಾತಿ ವ್ಯವಸ್ಥೆಯು ತುಂಬಿ ತುಳುಕಿ ಜನರು ಶೋಷಣೆಗೆ ಒಳಗಾಗಿದ್ದರು. ಇಂತಹ ಸಂದರ್ಭದಲ್ಲಿ 12ನೇ ಶತಮಾನದ ಬಸವಾದಿ ಶರಣರ ಹೋರಾಟದಿಂದ ಕಲ್ಯಾಣ ಕ್ರಾಂತಿ ಉಘಮವಾಯಿತು. ಈ ಹೋರಾಟವು ಪ್ರಪಂಚದ ಅತೀದೊಡ್ಡ ಕಲ್ಯಾಣ ಕ್ರಾಂತಿಯಾಗಿದೆ. ಸಮಾಜದ ಸುಧಾರಣೆಯ ಪ್ರತಿಫಲವಾಗಿ ವಚನ ಸಾಹಿತ್ಯ ಹುಟ್ಟಿಕೊಂಡಿತು. ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಬೆಳಕನ್ನು ನೀಡಿದ್ದಾರೆ. ಅಂತಹ ಮಹನೀಯರುಗಳಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ವಿಶಿಷ್ಟ ವಚನಕಾರರಾಗಿ ರೂಪುಗೊಂಡವರು ಮಹಾನ್ ಶರಣ ಶಿವಯೋಗಿ ಸಿದ್ಧರಾಮೇಶ್ವರರು ಎಂದರು.
ಕ್ರಾಂತಿಕಾರಿ ಧೋರಣೆಗಳಿಂದ ಸಮಾಜ ತಿದ್ದುವ ಕಾರ್ಯ ಮಾಡುವುದರ ಜೊತೆಗೆ ಸಮಾಜ ಮುಖಿ ಕಾಯಕ ಮಾಡುವುದರ ಮೂಲಕ ಕಾಯಕ ಯೋಗಿ ಎನಿಸಿಕೊಂಡವರು ಶಿವಯೋಗಿ ಸಿದ್ಧರಾಮೇಶ್ವರರು.  ಅವರ ಬದುಕಿನ ಚಿಂತನೆಗಳನ್ನು ನಾವು ತಿಳಿದುಕೊಳ್ಳಬೇಕು ಮತ್ತು ಇತರರಿಗೂ ತಿಳಿಸಬೇಕು. ಈ ಹಿನ್ನೆಲೆಯಲ್ಲಿ ಜಯಂತಿ ಕಾರ್ಯಕ್ರಮಗಳನ್ನು ಸರ್ಕಾರದಿಂದ ಆಚರಣೆ ಮಾಡಲಾಗುತ್ತದೆ. ಶರಣರು ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸಿಮೀತವಾಗಿರದೆ, ಸಮಸ್ತ ಮಾನವ ಕುಲಕ್ಕೆ ಆದರ್ಶವಾಗಿದ್ದಾರೆ. ಮಹನೀಯರ ಜಯಂತಿ ಆಚರಣೆಯ ಜೊತೆಗೆ, ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಯಂತಿ ಆಚರಣೆಯು ಜಾಗೃತಿ ಕಾರ್ಯಕ್ರಮಗಳಾಗಬೇಕು. ಅಂದಾಗ ಇಂತಹ ಕಾರ್ಯಕ್ರಮಗಳಿಗೆ ನಿಜವಾಗಿಯೂ ಅರ್ಥ ಬರುತ್ತದೆ ಎಂದು ಹೇಳಿದರು.
ಭೋವಿ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಸುಂಕಪ್ಪ ಮಾಲಗಿತ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಮಾಸ್ತೆಪ್ಪ ಕಟ್ಟಿಮನಿ, ರಾಮಣ್ಣ ಪೂಜಾರ, ರಮೇಶ ಬಸಾಪಟ್ಟಣ, ರಾಮಣ್ಣ ಅಳವಂಡಿ, ಉಚ್ಚಪ್ಪ ಭೋವಿ, ಎಕಪ್ಪ ರ‍್ಯಾವಣಕಿ, ಲಕ್ಷ್ಮಣ ಪೂಜಾರ, ಹೊನ್ನಪ್ಪ ಭೋವಿ, ದುರ್ಗಪ್ಪ ಮ್ಯಾಗೇರಿ, ರಾಮು ಹಾಗೂ ಹಲವು ಮುಖಂಡರು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು
.

*ಸಿದ್ರಾಮೇಶ್ವರರ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಪುಷ್ಪಾರ್ಚನೆ:* ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿದ್ದ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ಶಿವಯೋಗಿ ಸಿದ್ರಾಮೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವು ಮೂಲಕ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಮಾಜಿ ಸಂಸದರಾದ ಕರಡಿ ಸಂಗಣ್ಣ ಹಾಗೂ ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
*ಅದ್ದೂರಿ ಮೇರವಣಿಗೆ:* ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ನಿಮಿತ್ತ ಸಿದ್ರಾಮೇಶ್ವರ ಭಾವಚಿತ್ರದ ಮೆರವಣಿಗೆಗೆ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಹಾಗೂ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಚಾಲನೆ ನೀಡಿದರು. ಇದೇ ವೇಳೆ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ತಹಶೀಲ್ದಾರ ವಿಠ್ಠಲ್ ಚೌಗಲಾ ಸೇರಿ ಮತ್ತಿತರರಿದ್ದರು.
ಮೆರವಣಿಗೆಯು ಶ್ರೀ ಗವಿಸಿದ್ದೇಶ್ವರ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಅಶೋಕ ಸರ್ಕಲ್ ಬಳಿಯ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ನಡೆಯಿತು. ಈ ಮೆರವಣಿಗೆಯಲ್ಲಿ ಮಹಿಳೆಯರು ತಲೆಯ ಮೇಲೆ ಕುಂಭ ಹೊತ್ತು ಸರತಿ ಸಾಲಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿತ್ತು. ಭೋವಿ ಸಮಾಜದವರು ಸೇರಿದಂತೆ ಹಲವಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!