ಅಂಜನಾದ್ರಿ ಬೆಟ್ಟದಲ್ಲಿ ಕ್ಲಿನಿಕ್ ತೆರೆಯಲು ಸಚಿವರಿಗೆ ಜ್ಯೋತಿ ಮನವಿ
ಕೊಪ್ಪಳ: ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಅಂಜನಾದ್ರಿಯ ಕಿಷ್ಕಿಂದಾ ಹನುಮನ ಬೆಟ್ಟದಲ್ಲಿ ಪೂರ್ಣಾವಧಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಮತ್ತು ವೆಂಟಿಲೇಟರ್ ಇರುವ ಆಂಬುಲೆನ್ಸ್ ಇರಿಸಬೇಕು ಎಂದು ಗ್ಯಾರಂಟಿ ಸಮಿತಿ ಸದಸ್ಯೆ, ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಮಾಡಿದರು.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಭೇಟಿ ಮಾಡಿದ ಅವರು, ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಅಂಜನಾದ್ರಿಯ ಕಿಷ್ಕಿಂದಾ ಹನುಮನ ಬೆಟ್ಟ ಇಂದು ದೇಶ ವಿದೇಶಗಳ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ, ಬಹಳ ಎತ್ತರದಲ್ಲಿ ಬೆಟ್ಟ ಇರುವದರಿಂದ ಭಕ್ತರು ಮೇಲೆ ಹೋಗಲು ಕಷ್ಟ ಪಡುತ್ತಿದ್ದಾರೆ, ಆದರೆ ಭಕ್ತಿಯ ಕಾರಣಕ್ಕೆ ಮೇಲೆ ತೆರಳುತ್ತಿದ್ದಾರೆ. ಪ್ರಸ್ತುತ ಕರ್ನಾಟಕ ಕಾಂಗ್ರೆಸ್ ಸರಕಾರದ ಕ್ರಾಂತಿಕಾರಿ ಹೆಜ್ಜೆಯಾದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಶಕ್ತಿಯ ಕಾರಣಕ್ಕೆ ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಇಲ್ಲಿ ಇನ್ನಷ್ಟು ಮೂಲಭೂತ ಸೌಕರ್ಯ ಒದಗಿಸುವ ಅಗತ್ಯವಿದೆ. ಜೊತೆಗೆ ಇಲ್ಲಿ ಒಂದು ಪೂರ್ಣಾವಧಿ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ಬೆಟ್ಟದ ಮೇಲೆ ತೆರೆಯಬೇಕು, ಅಲ್ಲಿ ಒಬ್ಬ ವೈದ್ಯ ಮತ್ತು ಆಕ್ಸಿಜನ್ ನಂತಹ ಮೂಲಸೌಕರ್ಯ ಒದಗಿಸಬೇಕು ಅದರೊಟ್ಟಿಗೆ ಬೆಟ್ಟದ ಕೆಳಗೆ ವೆಂಟಿಲೇಟರ್ ಇರುವ ಖಾಯಂ ಆಂಬುಲೆನ್ಸ್ ವ್ಯವಸ್ಥೆ ಮಾಡುವ ಮೂಲಕ ಅಲ್ಲಿಗೆ ತೆರಳುವ ಭಕ್ತರ ಜೀವಕ್ಕೆ ಆಸರೆಯಾಗಬೇಕು ಎಂದು ವಿನಂತಿಸಿದ್ದಾರೆ.
ಜನೇವರಿ ೨೯ರಂದು ೧೭ ವರ್ಷದ ಹುಲಗಿಯ ಬಾಲಕ ಆಕ್ಸಿಜನ್ ಸಿಗದ ಕಾರಣಕ್ಕೆ ಪ್ರಾಣ ಬಿಟ್ಟ, ಇದಕ್ಕೂ ಮೊದಲು ಇಂತಹ ಕೆಲವು ಅವಘಡಗಳು ಸಂಭವಿಸಿವೆ. ಪ್ರತಿ ಜೀವವು ಮುಖ್ಯವಾಗಿರುವದರಿಂದ ಈ ಸೌಲಭ್ಯವನ್ನು ತುರ್ತಾಗಿ ಮಾಡಿಕೊಡಬೇಕೆಂದು ಪತ್ರದಲ್ಲಿ ಕೋರಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿ ಜನರ ದಟ್ಟಣೆ ಇರುವ ಕಾರಣಕ್ಕೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ವಿನಂತಿಸಿದರು. ಇದಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಧ್ವನಿಗೂಡಿಸಿ ವ್ಯವಸ್ಥೆ ಕಲ್ಪಿಸಲು ಸಚಿವರಿಗೆ ಮನವಿ ಮಾಡಿದರು. ಸಚಿವರು ಮನವಿಗೆ ಸ್ಪಂದಿಸಿ ಆರೋಗ್ಯ ಇಲಾಖೆ ಮಂತ್ರಿಗಳಿಗೆ ಪತ್ರ ಮಾಡಲು ಆಪ್ತ ಸಹಾಯಕರಿಗೆ ಸೂಚಿಸಿ, ಶೀಘ್ರ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಕಾಂಗ್ರೆಸ್ ಮುಖಂಡರಾದ ವಿಶಾಲಾಕ್ಷಿ ತಾವರಗೇರಿ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ಜಿ.ಪಂ. ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ತಾಲೂಕ ಅಧ್ಯಕ್ಷ ಬಾಲಚಂದ್ರನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕಲ್ಲನವರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಿಬಿ, ಯುವ ಮುಖಂಡ ಸೋಮಶೇಖರ ಹಿಟ್ನಾಳ ಇತರರು ಇದ್ದರು.