ಫೆಬ್ರವರಿಯಲ್ಲಿ ಮುಖ್ಯಮಂತ್ರಿಗಳಿಂದ 450 ಬೆಡ್ ಆಸ್ಪತ್ರೆ ಉದ್ಘಾಟನೆ-ಶಾಸಕ ಹಿಟ್ನಾಳ

Get real time updates directly on you device, subscribe now.


ಕೊಪ್ಪಳಕ್ಕೆ ಮಲ್ಟಿ-ಸ್ಪೇಷಾಲಿಟಿ ಆಸ್ಪತ್ರೆ ಸಿಎಂ ಸಕಾರಾತ್ಮಕ ಸ್ಪಂದನೆ, ಬಜೆಟ್‌ನಲ್ಲಿ ಘೋಷಣೆ ಅಷ್ಟೇ ಬಾಕಿ :

ಕೊಪ್ಪಳ : 450 ಬೆಡ್ ಹಾಸಿಗೆಯ ಆಸ್ಪತ್ರೆ ಉದ್ಘಾಟನೆಗೆ ಕೊಪ್ಪಳಕ್ಕೆ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದು, 450 ಬೆಡ್ ಆಸ್ಪತ್ರೆ ಜೊತೆಗೆ ಮಲ್ಟಿ-ಸ್ಪೇಷಾಲಿಟಿ ಆಸ್ಪತ್ರೆ ನೀಡಬೇಕು ಎಂದು ಸಿಎಂ ಬಳಿ ಮನವರಿಕೆ ಮಾಡಿಕೊಂಡಿದ್ದು, ಸಕಾರಾತ್ಮಕ ಉತ್ತರವನ್ನು ನೀಡಿದ್ದು, ನೂರಕ್ಕೆ ನೂರರಷ್ಟು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡುತ್ತಾರೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಗೊಂಡಬಾಳ ಜಿ. ಪಂ ವ್ಯಾಪ್ತಿಯ ಕುಣಿಕೇರಿ ತಾಂಡ, ಕುಣಿಕೇರಿ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ ಹಾಗೂ ಅಲ್ಲಾನಗರ ಗ್ರಾಮಗಳಲ್ಲಿ ಅಂದಾಜು ಮೊತ್ತ 12.30 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿದ ಬಳಿಕ ಮಾತನಾಡಿದರು.
ನೀರಾವರಿ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಕ್ಷೇತ್ರದ ಬಹುದೊಡ್ಡ ಏತ ನೀರಾವರಿ ಯೋಜನೆಗಳಾದ ಬಹದ್ದೂರ್ ಬಂಡಿ ನವಲ್ ಕಲ್ ಹಾಗೂ ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದ್ದು ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ನೀಡಿಸುತ್ತೇವೆ.
188 ಕೋಟಿ ವೆಚ್ಚದ ಬಹದ್ದೂರ್ ಬಂಡಿ ನವಲ್ ಕಲ್ ಏತ ನೀರಾವರಿ ಯೋಜನೆಗೆ ಇನ್ನೂ ಎರಡು -ಮೂರು ದಿವಸದಲ್ಲಿ ಪ್ರಾಯೋಗಿಕ ಚಾಲನೆ ನೀಡಿ ಪರೀಕ್ಷೆ ಮಾಡಲಾಗುವುದು. ಈ ಏತ ನೀರಾವರಿ ಯೋಜನೆಯಿಂದ ಸುಮಾರು 14000 ಎಕರೆ ನೀರಾವರಿ ಪ್ರದೇಶ ಆಗಲಿದೆ.
ಏತ ನೀರಾವರಿ ಯೋಜನೆಗಳಿಗೆ ಅನುದಾನ : ಈ ಭಾಗಗಳಲ್ಲಿ ಬಾಕಿ ಉಳಿದಿರುವ ಚಿಕ್ಕಬಗನಾಳ, ಕರ್ಕಿಹಳ್ಳಿ, ಕಾಸನಕಂಡಿ ಹಾಗೂ ಲಾಚನಕೇರಿ ಏತ ನೀರಾವರಿ ಯೋಜನೆಗಳಿಗೆ ಕೂಡ ಅನುದಾನ ಒದಗಿಸಿ ಉಳಿದಿರುವ ಕಾಮಗಾರಿಯನ್ನು ಕೂಡ ಮುಗಿಸಿ ಈ ಭಾಗದ ರೈತರಿಗೆ ಅರ್ಪಿಸುತ್ತೇವೆ ಎಂದರು.
ರಸ್ತೆ ಅಭಿವೃದ್ಧಿಗೆ ಒತ್ತು : ಕೊಪ್ಪಳ ಕ್ಷೇತ್ರದಲ್ಲಿ 150 ಕೋಟಿಗೂ ಹೆಚ್ಚಿನ ಅನುಧಾನದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ಬಜೆಟ್ ನಂತರ ಇನ್ನೂ 100-150 ಕೋಟಿ ಅನುದಾನವನ್ನು ರಸ್ತೆಗಳ ಅಭಿವೃದ್ಧಿಗೆ ತರುತ್ತೇವೆ ಎಂಬ ಭರವಸೆ ವ್ಯಕ್ತಪಡಿಸಿದರು. ಇಂದು 7.50 ಕೋಟಿ ವೆಚ್ಚದಲ್ಲಿ ಗಿಣಗೇರಿ -ಗೊಂಡಬಾಳ ರಸ್ತೆಯ ಹಿರೇಬಗನಾಳ ದಿಂದ ಚಿಕ್ಕಬಗನಾಳ ಮಾರ್ಗವಾಗಿ ಲಾಚನಕೇರಿ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು. ಇನ್ನೂ ಚಿಕ್ಕಬಗನಾಳ-ಕರ್ಕಿಹಳ್ಳಿ ಸಂಪರ್ಕಿಸುವ ರಸ್ತೆಯನ್ನು ಶೀಘ್ರ ಚಾಲನೆ ನೀಡಲಾಗುವುದು. ಜೊತೆಗೆ ಲಾಚನಕೇರಾ, ಕುಣಿಕೇರಾ, ಮುಂಡರಗಿ, ಹ್ಯಾಟಿ, ಗೊಂಡಬಾಳ ಸಂಪರ್ಕಿಸುವ ರಸ್ತೆಯನ್ನು ಸಿಸಿ ರಸ್ತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ನೂತನ ಪ್ರೌಢ ಶಾಲೆ ಉದ್ಘಾಟನೆ : ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೂತನವಾಗಿ ಮಂಜೂರು ಆಗಿರುವ ಪ್ರೌಢ ಶಾಲೆಯನ್ನು ಉದ್ಘಾಟಿಸಿದರು. ಈ ಸಾಲಿನಲ್ಲಿ ಕೊಪ್ಪಳ ತಾಲೂಕಿಗೆ 6 ಪ್ರೌಢ ಶಾಲೆಗಳು ಮಂಜೂರಾಗಿವೆ ಎಂದ ಅವರು, ಕುಣಿಕೇರಿ ಗ್ರಾಮದಲ್ಲಿನ ಬಹು ದಿನಗಳ ಬೇಡಿಕೆಯಾದ ಸಣ್ಣ ಕೆರೆಗೆ ನೀರು ಹರಿಸುವುದು ಸೇರಿದಂತೆ ಗ್ರಾಮಕ್ಕೆ ಈಗಾಗಲೇ ಉಪಕೇಂದ್ರವಿದ್ದು, ಸುತ್ತಮುತ್ತಲಿನ ಭಾಗದಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು, ತುರ್ತು ಸಂದರ್ಭದಲ್ಲಿ ಚಿಕಿತ್ಸೆ ದೊರಕಿಸಲು ಅನುಕೂಲವಾಗಲು ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಿ ಮೇಲ್ದರ್ಜೆಗೆರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ನಂತರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೂಳಪ್ಪ ಹಲಗೇರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ದತ್ತು ಪುತ್ರ ಇದ್ದಂತೆ. ಕ್ಷೇತ್ರಕ್ಕೆ ಶಾಸಕರ ಹೆಚ್ಚು ಕಾಳಜಿ ಇದ್ದು, ಕ್ಷೇತ್ರಕ್ಕೆ ಇದುವರೆಗೂ 12 ರಿಂದ 13 ವರ್ಷಗಳಲ್ಲಿ 16 ರಿಂದ 17 ಸಾವಿರ ಕೋಟಿ ಅನುದಾನ ತರುವುದರಲ್ಲಿ ಶಾಸಕರಿಗೆ ಸಲ್ಲುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ ಗಲಬಿ, ಗ್ಯಾರೆಂಟಿ ಸಮಿತಿ ತಾಲೂಕು ಅಧ್ಯಕ್ಷರಾದ ಬಾಲಚಂದ್ರನ್, ಮುಖಂಡರಾದ ತೋಟಪ್ಪ ಕಾಮನೂರು, ಜಡಿಯಪ್ಪ ಬಂಗಾಳಿ, ಭೂದಾನಿ ಹುಚ್ಚಮ್ಮ ಚೌದ್ರಿ, ಪಂಪಣ್ಣ ನಾಯಕ, ಹನುಮೇಶ ಹೊಸಳ್ಳಿ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕ ಪಂಚಾಯತ್ ಇಓ ದುಂಡೇಶ್ ತುರಾದಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಗಳ ಗ್ರಾ.ಪಂ.ಸರ್ವ ಸದಸ್ಯರು, ಹಿರಿಯ ಮುಖಂಡರು, ಪಕ್ಷದ ಕಾರ್ಯಕರ್ತರು, ಯುವಕರು ಹಾಜರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು.

Get real time updates directly on you device, subscribe now.

Comments are closed.

error: Content is protected !!