ರೇಷ್ಮಾಬೇಗಂ ವಡ್ಡಟ್ಟಿಯ ಯೋಗ ಸಾಧನೆಗೆ ಒಲಿದ ರಾಜ್ಯ ಯುವ ಪ್ರಶಸ್ತಿ
ಕೊಪ್ಪಳ: ತಾಲೂಕಿನ ಅಳವಂಡಿ ಹೋಬಳಿಯ ಘಟ್ಟರಡ್ಡಿಹಾಳ ಗ್ರಾಮದ ಮುಸ್ಲಿಂ ಯುವತಿ ರೇಷ್ಮಾ ಬೇಗಂ ರಾಜಾಸಾಬ ವಡ್ಡಟ್ಟಿ ತನ್ನ ನಿರಂತರ ಪರಿಶ್ರಮ ಮತ್ತು ಛಲದಿಂದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ನೀಡುವ ರಾಜ್ಯಮಟ್ಟದ ಪ್ರತಿಷ್ಠಿತ ರಾಜ್ಯ ಯುವ ಪ್ರಶಸ್ತಿಗೆ ಭಾಜನರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಸವಣೂರಿನಲ್ಲಿ ಮಾಜಿ ಸಂಸದ ನಳಿನಕುಮಾರ್ ಕಟೀಲ್ ಪ್ರದಾನ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟಗಳ ವತಿಯಿಂದ ಜಿಲ್ಲಾ ಯುವ ಸಮಾವೇಶ ತರಬೇತಿ ಕಾರ್ಯಾಗಾರ, ರಾಜ್ಯ ಮಟ್ಟದ ಜನಪದ ನೃತ್ಯ ಸ್ಪರ್ಧೆ ಮತ್ತು ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ ಮಾತನಾಡಿ, ರಾಜ್ಯದ ೩೧ ಜಿಲ್ಲೆಗಳಿಂದ ಆಯ್ಕೆಯಾದ ಯುವ ಪ್ರತಿಭೆಗಳು ಇಂದು ನಮ್ಮ ಪುತ್ತೂರಿಗೆ ಬಂದಿರುವುದು ಬಹಳ ಸಂತೋಷದ ವಿಷಯ, ಈ ತರಹದ ಇನ್ಮು ಹೆಚ್ಚಿನ ಕಾರ್ಯಕ್ರಮ ಜರುಗಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಪ್ರತಿಭೆಗಳು ಬೆಳೆಯಲಿ, ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಭಾಗೀರತಿ ಮುರುಳ್ಯಾ ಮಾತನಾಡಿ ರಾಜ್ಯದ ಎಲ್ಲ ಮೂಲೆಗಳಿಂದ ಯುವಪ್ರತಿಭೆಗಳು ಇಂದು ತಮ್ಮ ಕ್ಷೇತ್ರಕ್ಕೆ ಬಂದಿರುವುದು ಹಾಗೂ ನಾನು ನಿಮ್ಮೆಲ್ಲರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನನ್ನ ಭಾಗ್ಯ, ನಾನು ಕೂಡಾ ಯುವತಿ ಸಂಘಟನೆಯಿಂದ ಈ ಸ್ಥಾನಕ್ಕೆ ತಲುಪಲು ಸಾಧ್ಯವಾಯಿತು ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಹಾಗೂ ರಾಜ್ಯ ಪ್ರದಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ ಹಲವು ವರ್ಷಗಳಿಂದ ನಾವು ನಮ್ಮ ತಂಡ ರಾಜ್ಯದ ವಿವಿಧ ಮೂಲೆ ಮೂಲೆಗಳಿಗೂ ಹೋಗಿ ಅಲ್ಲಿನ ಹೊಸ ಪ್ರತಿಭೆಗಳನ್ನು ಹೊರಹಾಕುವ ಪ್ರಯತ್ನದಲ್ಲಿದ್ದೇವೆ, ಈ ವರ್ಷ ೨೦೨೪-೨೫ನೇ ಸಾಲಿನ ರಾಜ್ಯ ಯುವ ಪ್ರಶಸ್ತಿ ಪ್ರದಾನವು ಪೂತ್ತುರಿನಲ್ಲಿ ನಡೆಯುತ್ತಿದೆ ಹೀಗೆ ಎಲ್ಲ ೩೧ ಜಿಲ್ಲೆಗಳಿಂದ ಇಲ್ಲಿಯವರೆಗೆ ಬಂದು ಪ್ರಶಸ್ತಿ ಪಡೆದು ಇತರರಿಗೆ ಮಾದರಿಯಾಗಿದ್ದಿರಿ ನಿಮಗೆಲ್ಲ ಅಭಿನಂದನೆಗಳು ಎಂದರು.
ವೇದಿಕೆಯಲ್ಲಿ ಅಥಿತಿಗಳಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೂಟ್ಟು, ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್. ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಶಿವಪ್ರಸಾದ್ ಮೈಲೇರಿ, ಸವಣೂರು ಸ.ಉ.ಹಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ರಫ್ ಜನತಾ, ಮುಖ್ಯ ಶಿಕ್ಷಕ ನಿಂಗರಾಜು, ಬೆಳಗಾವಿ ಯುವಜನ ಒಕ್ಕೂಟದ ಅಧ್ಯಕ್ಷ ಸಿದ್ದಣ್ಣ ದುರದುಂಡಿ, ಕೊಡಗು ಜಿಲ್ಲಾಧ್ಯಕ್ಷ ಸುಕುಮಾರ್ ಹಾಗೂ ಮುಂತಾದವರಿದ್ದರು.
ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜ್ಯ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿದರು, ಮಾಮಚ್ಚನ್ ನಿರೂಪಿಸಿದರು.
ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಹಲವು ಬಹುಮಾನಗಳನ್ನು ಪಡೆದು ಹಲವಾರು ಮಕ್ಕಳನ್ನು ಯೋಗದಲ್ಲಿ ಪರಿಣಿತರನ್ನಾಗಿ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸಿರುವ ಗ್ರಾಮೀಣ ಪ್ರತಿಭೆ ರೇಷ್ಮಾ ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಯುವ ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷ ಮತ್ತು ಕಲಬುರಗಿ ವಿಭಾಗೀಯ ಸಂಚಲಕ ಮಂಜುನಾಥ ಜಿ. ಗೊಂಡಬಾಳ ಅವರು ರಾಜ್ಯ ಘಟಕಕ್ಕೆ ಶಿಫಾರಸ್ಸು ಮಾಡಿ ಪ್ರಶ್ತಿ ಕೊಡಿಸುವಲ್ಲಿ ಶ್ರಮಿಸಿದ್ದು ಇಬ್ಬರನ್ನೂ ಘಟ್ಟಿರಡ್ಡಿಹಾಳದ ಹಲವರು ಅಭಿನಂದಿಸಿದ್ದಾರೆ.