ಜ.16 ರಂದು ಸಂಪೂರ್ಣ ರಾಮಾಯಣ ಬಯಲಾಟ : ಎನ್.ಎಂ.ದೊಡ್ಡಮನಿ
ಕೊಪ್ಪಳ: ಶ್ರೀ ಬಸವೇಶ್ವರ ನಗರದ ಶ್ರೀ ಮಾರುತೇಶ್ವರ ಬಯಲಾಟ ( ದೊಡ್ಡಾಟ) ಸಂಘದಿಂದ ಪ್ರತಿ ವರ್ಷದಂತೆ ಈ ವರ್ಷವು ಈ ಭಾಗದ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜನೇವರಿ 16ರಂದು ರಾತ್ರಿ 9-30 ಗಂಟೆಗೆ ಸಂಪೂರ್ಣ ರಾಮಾಯಣ ಬಯಲಾಟವು ಜೆ.ಪಿ. ಮಾರುಕಟ್ಟೆಯ ಹತ್ತಿರ ಡಾ.ಬಾಬು ಜನಜೀವನ ರಾಮ್ ವೃತ್ತದ ಬಳಿ ಉಚಿತವಾಗಿ ಪ್ರದರ್ಶನ ಗೊಳ್ಳಲಿದೆ ಎಂದು ಕಲಾವಿದ ಹಾಗೂ ಪತ್ರಕರ್ತ ನಿಂಗಪ್ಪ ದೊಡ್ಡಮನಿ ಹೇಳಿದರು.
ಅವರು ಶುಕ್ರವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ನಗರದ ಶ್ರೀ ಬಸವೇಶ್ವರ ನಗರದ ಮಾದಿಗ ಸಮಾಜದ ಹಿರಿಯರು ಸುಮಾರು 55-60 ವರ್ಷ ಗಳಿಂದ ವಿವಿಧ ಬಯಲಾಟದ ಕಥೆಗಳನ್ನು ಉಚಿತವಾಗಿ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಅದನ್ನು ಇಂದು ಕೂಡ ಸಮಾಜದ ಕಲಾವಿದರು, ಹಿರಿಯರು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದರು.
ಈ ಬಯಲಾಟದಲ್ಲಿ ಪುರುಷ ಪಾತ್ರಗಳನ್ನು ಮತ್ತು ಸ್ತ್ರೀ ಪಾತ್ರಗಳನ್ನೂ ಸಹ ಪುರುಷರೇ ನಿರ್ವಹಣೆ ಮಾಡುತ್ತಿರುವುದು ವಿಶೇಷ. ಬಯಲಾಟದ ಹಾರ್ಮೋನಿಯಂ ಮಾಸ್ತರ್ ಆಗಿ ದೇವಪ್ಪ ಹಳ್ಳಿಕೇರಿ, ಮದಲಿ ( ಮೃದಂಗ) ಮಾಸ್ತರರಾಗಿ ಗೋವಿಂದಪ್ಪ ಹ್ಯಾಟಿ, ಕಥೆಗಾರ ಮಾಸ್ತರರಾಗಿ ಹನುಮಂತಪ್ಪ ಲೇಬಗೇರಿ, ಚನ್ನಬಸಪ್ಪ ಹೊಳೆಯಪ್ಪನವರ, ಹಿಂಮ್ಯಾಳದ ಪ್ರಮುಖರಾಗಿ ಗವಿಸಿದ್ದಪ್ಪ ಗಿಣಿಗೇರಿ, ವಿರೂಪಾಕ್ಷಪ್ಪ ಕಂದಾರಿ, ಹನುಮಂತಪ್ಪ ಗಿಣಿಗೇರಿ ಇತರರು ಸಹಕರಿಸಲಿದ್ದಾರೆ,
ಈ ಬಯಲಾಟದಲ್ಲಿ ದಶರಥನಾಗಿ ದುರುಗಪ್ಪ ಕಂದಾರಿ, ಕೌಶಲ್ಯದೇವಿಯಾಗಿ ರವಿಕುಮಾರ್ ಕಿರುಬಂಡಿ, ಕೈಕೆಯಾಗಿ ದುರುಗಪ್ಪ ಈರಪ್ಪ ಕಂದಾರಿ, ಶ್ರೀ ರಾಮಚಂದ್ರನಾಗಿ ನಿಂಗಪ್ಪ ದೊಡ್ಡಮನಿ, ಲಕ್ಷ್ಮಣನಾಗಿ ನೀಲಪ್ಪ ಮ್ಯಾಗಳಮನಿ, ಸೀತಾದೇವಿಯಾಗಿ ರಾಜಶೇಖರ ದೊಡ್ಡಮನಿ, ಸೂರ್ಪನಖಿಯಾಗಿ ಚಿರಂಜೀವಿ ದೊಡ್ಡಮನಿ, ಮಾಯಾ ಸ್ತ್ರೀಯಾಗಿ ದೇವಪ್ಪ ಗಿಣಿಗೇರಿ ಹಾಗೂ ಇತರರು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಚನ್ನಬಸಪ್ಪ ಹೊಳೆಪ್ಪನವರ, ಗವಿಸಿದ್ದಪ್ಪ ಕಟ್ಟಿಮನಿ, ರಾಜಶೇಖರ ದೊಡ್ಡಮನಿ, ದೇವಪ್ಪ ಗಿಣಿಗೇರಿ, ಗವಿಸಿದ್ದಪ್ಪ ಗಿಣಿಗೇರಿ ಇತರರು ಉಪಸ್ಥಿತರಿದ್ದರು.
ಸಹೋದರರು ಶ್ರೀರಾಮಚಂದ್ರ-ಸೀತಾದೇವಿ ಪಾತ್ರ
ಸಂಪೂರ್ಣ ರಾಮಾಯಣ ಬಯಲಾಟದಲ್ಲಿ ಸಹೋದರರು ಶ್ರೀರಾಮಚಂದ್ರ ಸೀತಾದೇವಿಯಾಗಿ ಅಭಿನಯಿಸುತ್ತಿದ್ದು ಇದು ಈ ಬಯಲಾಟದಲ್ಲಿ ವಿಶೇಷ.
ಶ್ರೀರಾಮಚಂದ್ರನಾಗಿ ನಿಂಗಪ್ಪ ದೊಡ್ಡಮನಿ, ಸೀತಾದೇವಿಯಾಗಿ ರಾಜಶೇಖರ ದೊಡ್ಡಮನಿ ಸೋದರರು ಅಭಿನಯಿಸುತ್ತಿದ್ದು ಇದು ವಿಶೇಷ ಎಂದು ಹೇಳಬಹುದು.