ಮುಝಾಪರ್ ಅಸ್ಸಾದಿ ಅವರು ನಿವೃತ್ತರಾದಾಗ ದಿನೇಶ್ ಅಮೀನ್ ಮಟ್ಟು ರವರು ಬರೆದಿದ್ದ ಲೇಖನ

0

Get real time updates directly on you device, subscribe now.

ಮುಝಾಪರ್ ಅಸ್ಸಾದಿ ಅವರು ನಿವೃತ್ತರಾದಾಗ ಅವರ ಶಿಷ್ಯರು ಸೇರಿ ಅಭಿನಂದನಾ ಗ್ರಂಥವನ್ನು ಪ್ರಕಟಿಸಿದ್ದರು. ಅದರಲ್ಲಿ ಪ್ರಕಟವಾಗಿದ್ದ ನನ್ನ ಲೇಖನ ಇಲ್ಲಿದೆ:

ಸರ್ವಾಧಿಕಾರ, ಅರಸೊತ್ತಿಗೆ ಇಲ್ಲವೇ ಪ್ರಜಾಪ್ರಭುತ್ವ – ಆಡಳಿತ ಯಾರದ್ದೇ ಇರಲಿ, ಪ್ರಭುತ್ವ ಎಂದೂ ಬುದ್ದಿಜೀವಿಗಳನ್ನು ಸಹಿಸಿಕೊಳ್ಳುವುದಿಲ್ಲ. ಇದಕ್ಕೆ ಜಗತ್ತಿನ ಇತಿಹಾಸ ಮತ್ತು ವರ್ತಮಾನಗಳು ಸಾಕ್ಷಿ, ಭವಿಷ್ಯದಲ್ಲಿ ಕೂಡಾ ಇದು ಬದಲಾಗುವ ಭರವಸೆ ಇಲ್ಲ.
ಕರ್ನಾಟಕದ ಸಂದರ್ಭದಲ್ಲಿಯೂ ಇತ್ತೀಚಿನ ದಿನಗಳಲ್ಲಿ ಬುದ್ದಿಜೀವಿಗಳಷ್ಟು ಚರ್ಚೆಗೊಳಗಾಗಿರುವ ಮತ್ತು ಟೀಕೆ,ಗೇಲಿ,ದೂಷಣೆ, ಅಪವ್ಯಾಖ್ಯಾನಕ್ಕೆ ಒಳಗಾಗಿರುವ ಮತ್ತೊಂದು ವರ್ಗ ಇಲ್ಲ. ಈ ಬುದ್ದಿಜೀವಿಗಳು ಎಂದರೆ ಯಾರು?
ನಾವು ಅವರನ್ನು ಬಹಳ ಸರಳವಾಗಿ ಸಮಾಜದ ಸಾಕ್ಷಿಪ್ರಜ್ಞೆ ಎನ್ನುತ್ತೇವೆ. ತಮ್ಮ ನಡೆ-ನುಡಿಗಳಿಂದ ಸದಾ ಸಾರ್ವಜನಿಕ ಹಿತದೃಷ್ಟಿಯ ಪರವಾಗಿರುವ, ಸಾಮಾನ್ಯ ಜನರು ಅಭಿವ್ಯಕ್ತಿಸಲು ಅಂಜುವುದನ್ನು ಧೈರ್ಯದಿಂದ ಹೇಳುವ ಮತ್ತು ವೈಚಾರಿಕವಾದ ಸ್ಪಷ್ಟತೆಯೊಂದಿಗೆ ನಮ್ಮೊಳಗಿನ ಗೊಂದಲಗಳನ್ನು ನಿವಾರಿಸುವ ಈ ಬುದ್ದಿಜೀವಿಗಳು ನಮ್ಮ ಆತ್ಮಸಾಕ್ಷಿಯ ದನಿಗೆ ಕೊರಳಾಗುತ್ತಾ ಬಂದವರು.
ಪ್ರತಿಯೊಂದು ದೇಶ-ಕಾಲದಲ್ಲಿಯೂ ಈ ಬುದ್ದಿಜೀವಿ ವರ್ಗ ಕತ್ತಲೆಯಲ್ಲಿ ಬೆಳಕು ಹಚ್ಚುವ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಸವಾಲಿನ ಮತ್ತು ಅ‍ಷ್ಟೆ ಅಪಾಯಕಾರಿಯಾದ ಕಾಯಕವನ್ನು ಮಾಡುತ್ತಾ ಬಂದಿದೆ. ಇವರಲ್ಲಿ ಬಹಳಷ್ಟು ಮಂದಿಯನ್ನು ಅವರು ಬದುಕಿರುವಾಗ ಅರ್ಥಮಾಡಿಕೊಂಡದ್ದು ಕಡಿಮೆ, ಅಗಲಿ ಹೋದ ಮೇಲೆ ಕೊಂಡಾಡಿದ್ದೇ ಹೆಚ್ಚು.
ಸಂಖ್ಯೆಯ ದೃಷ್ಟಿಯಿಂದ ಸಮಾಜದಲ್ಲಿ ಅಲ್ಪಸಂಖ್ಯಾತರಾಗಿರುವ ಈ ಬುದ್ದಿಜೀವಿಗಳ ಮೇಲೆ ಎಲ್ಲ ದೇಶ,ಕಾಲಗಳಲ್ಲಿಯೂ ನಿರಂತರವಾಗಿ ದಾಳಿ ನಡೆಯುತ್ತಾ ಬಂದಿದ್ದರೂ ಈ ವರ್ಗದೊಳಗಿನ ಧಾರ್ಮಿಕ ಅಲ್ಪಸಂಖ್ಯಾತ ಬುದ್ದಿಜೀವಿಗಳ ಸ್ಥಿತಿ ಬದಲಾಗಿರುವ ರಾಜಕೀಯ ಮತ್ತು ಸಾಮಾಜಿಕ ದಿನಮಾನಗಳಲ್ಲಿ ಇನ್ನೂ ಕಠಿಣವಾದುದು ಮಾತ್ರವಲ್ಲ, ಅಪಾಯಕಾರಿ ಕೂಡಾ ಆಗಿದೆ.
ಕರ್ನಾಟಕದಲ್ಲಿ ಎಪ್ಪತ್ತರ ದಶಕದ ಕೊನೆಯಭಾಗದಲ್ಲಿ ಹುಟ್ಟಿಕೊಂಡ ದಲಿತ-ಬಂಡಾಯ ಚಳುವಳಿಯ ಕಾಲದ ಕೂಸುಗಳಾಗಿ ಮುಸ್ಲಿಮ್ ಸಮುದಾಯಕ್ಕೆ ಸೇರಿರುವ ಅನೇಕ ಪ್ರಗತಿಪರ ಸಾಹಿತಿಗಳು, ಚಿಂತಕರು, ಬುದ್ದಿಜೀವಿಗಳು ಹುಟ್ಟಿಕೊಂಡದ್ದನ್ನು ಕಾಣಬಹುದು. ಆ ಕಾಲದಲ್ಲಿ ಬರವಣಿಗೆ ಮತ್ತು ಹೋರಾಟಗಳಲ್ಲಿ ಸಕ್ರಿಯರಾಗಿದ್ದವರಲ್ಲಿ ಬೊಳುವಾರ್, ಸಾರಾ ಅಬೂಬಕರ್, ಬಾನು ಮುಷ್ತಾಕ್, ಫಕೀರ್ ಅಹ್ಮದ ಕಟ್ಪಾಡಿ ಮೊದಲಾದ ಲೇಖಕರು ಪ್ರಮುಖರು. ಇವರಲ್ಲಿ ಬಾನುಮುಸ್ತಾಕ್ ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ದ.ಕ.ದವರೇ ಆಗಿದ್ದರು.
ತೊಂಬತ್ತರ ದಶಕದ ಕೊನೆಯ ವರೆಗೆ ಬಹಳ ಸಕ್ರಿಯವಾಗಿದ್ದ ಮುಸ್ಲಿಮ್‍ ಸಾಹಿತಿಗಳು ಮತ್ತು ಚಿಂತಕರಲ್ಲಿ ಬಹಳಷ್ಟು ಮಂದಿ ಆ ನಂತರದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪಲ್ಲಟಗಳಿಗೆ ಕಾರಣವಾದ ಬಾಬರಿ ಮಸೀದಿ ಧ್ವಂಸ ಮತ್ತು ಹೊಸ ಆರ್ಥಿಕ ನೀತಿ ಎಂಬ ಎರಡು ವಿಷಮ ವಿದ್ಯಮಾನಗಳ ನಂತರದ ದಿನಗಳಲ್ಲಿ ಸಾರ್ವಜನಿಕ ಚರ್ಚೆ-ಸಂವಾದಗಳಿಂದ ತುಸು ದೂರವಾಗಿ ಮೌನಕ್ಕೆ ಜಾರಿಹೋಗಿದ್ದನ್ನು ಕೂಡಾ ಕಾಣಬಹುದು.
ಇದೇ ಸಮಯದಲ್ಲಿ ಧಾರ್ಮಿಕ ಸೌಹಾರ್ದ ಬದುಕಿಗೆ ಹೆಸರಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ನಿಧಾನವಾಗಿ ಹಿಂದುತ್ವದ ಪ್ರಯೋಗಶಾಲೆಯಾಗಿ ಪರಿವರ್ತನೆಗೊಂಡದ್ದು ಮತ್ತು ಹಿಂದೂ ಕೋಮುವಾದಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಮುಸ್ಲಿಮ್ ಕೋಮುವಾದ ಕೂಡಾ ತಲೆ ಎತ್ತಲಾರಂಭಿಸಿದ್ದು ಕೂಡಾ ನಿಜ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಈ ಸಾಮಾಜಿಕ ಮತ್ತು ರಾಜಕೀಯ ಪಲ್ಲಟಗಳಿಗೂ ಮುಸ್ಲಿಮ್ ಬುದ್ದಿಜೀವಿಗಳ ಮೌನಕ್ಕೂ ಇರುವ ಪರಸ್ಪರ ಸಂಬಂಧ ಇನ್ನೊಂದು ಚರ್ಚಾ ವಿಷಯ.
ಇಂತಹದ್ದೊಂದು ನಿರ್ವಾತದ ಸಮಯದಲ್ಲಿ ಕಾಣಿಸಿಕೊಂಡ ಲೇಖಕರಲ್ಲಿ ಪ್ರಮುಖ ಹೆಸರು- ಮುಜಾಪರ್ ಅಸ್ಸಾದಿ ಅವರದ್ದು. ತಮ್ಮನ್ನು ‘’ಮೂಲತ: ಬಾಗ್ದಾದಿನವರು, ಪರ್ಷಿಯಾ ದೇಶದಿಂದ ಬಂದು ಕರ್ನಾಟಕದಲ್ಲಿ ನೆಲೆ ನಿಂತು ಭಾರತೀಯರಾದವರು’ ಎಂದು ಮುಜಾಪರ್ ಅಸ್ಸಾದಿಯವರು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಂಡರೂ ಇವರ ನೆಲೆಮೂಲ ದಕ್ಷಿಣಕನ್ನಡವೇ ಆಗಿದೆ.
ಒಂದು ಕಾಲದಲ್ಲಿ ಚಳುವಳಿಗಾರರನ್ನು ಹುಟ್ಟುಹಾಕುತ್ತಿದ್ದ ಮತ್ತು ಅವರಿಗೆ ಗುರುಗಳಾಗಿ ಗುರಿ ತಲುಪಲು ದಾರಿ ತೋರುತ್ತಾ ಜನಜಾಗೃತಿಯ ಕುಲುಮೆಯಲ್ಲಿನ ಬೆಂಕಿ ಆರದಂತೆ ನೋಡಿಕೊಳ್ಳುತ್ತಿದ್ದವರು ವಿಶ್ವವಿದ್ಯಾಲಯಗಳ ಮೇಸ್ಟ್ರುಗಳು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಾಳಜಿ ಮತ್ತು ಬದ್ದತೆಯ ಮೇಸ್ಟ್ರುಗಳ ಸಂತತಿ ನಶಿಶಿ ಹೋಗಿ, ಬಹುತೇಕ ಮೇಸ್ಟ್ರುಗಳೆಲ್ಲ ಯುಜಿಸಿ ಫಲಾನುಭವಿಗಲಾಗಿ ವಿ.ವಿಗಳ ದಂತಗೋಪುರಗಳಲ್ಲಿ ಕಳೆದುಹೋಗುತ್ತಿದ್ದಾರೆ ಎಂದು ಕೇಳಿಬರುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಮುಜಾಪರ್ ಅಸ್ಸಾದಿಯವರನ್ನು ನೋಡಿದರೆ ಅವರ ಪ್ರಾಮುಖ್ಯದ ಅರಿವಾಗುತ್ತದೆ .
ಜೆಎನ್ ಯುವಿನಿಂದ ಪಿ ಹೆಚ್.ಡಿ ಮತ್ತು ಶಿಕಾಗೋ ವಿ.ವಿ.ಯಿಂದ ಪೋಸ್ಟ್ ಡಾಕ್ಟರೇಟನ್ನು ಪಡೆದಿರುವ ಅಸ್ಸಾದಿಯವರು ನಮ್ಮ ನಡುವಿನ ಚಿಂತಕರ ಪೈಕಿ ಅತ್ಯುನ್ನತ ಶೈಕ್ಷಣಿಕ ಅರ್ಹತೆಯನ್ನು ಪಡೆದವರು. ಮಂಗಳೂರು, ಗೋವಾ ಮತ್ತು ಮೈಸೂರು ವಿ.ವಿಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದು ಮಾತ್ರವಲ್ಲ ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ದೇಶ-ವಿದೇಶಗಳ ವಿಶ್ವವಿದ್ಯಾಲಯಗಳಿಗೆ ಹೋಗಿ ಉಪನ್ಯಾಸ ನೀಡಿದ್ದಾರೆ. ಹತ್ತಕ್ಕೂ ಹೆಚ್ಚು ಪುಸ್ತಕಗಳು ಮತ್ತು ನೂರಾರು ಲೇಖನಗಳನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಬರೆದಿದ್ದಾರೆ. ರಾಜ್ಯದ ರೈತ ಚಳುವಳಿಯ ವಿಷಯದ ಮೇಲೆಯೇ ಪಿಎಚ್ ಡಿ ಗಳಿಸಿರುವ ಅಸ್ಸಾದಿಯವರು ಜಾತಿ ಮತ್ತು ಧರ್ಮ, ಕೃಷಿ, ಜಾಗತೀಕರಣ, ಸಾಮಾಜಿಕ ಚಳುವಳಿಗಳು, ಗಾಂಧಿವಾದ, ಜಾಗತಿಕರಣ ಹೀಗೆ ವೈವಿಧ್ಯಮಯ ಕ್ಷೇತ್ರಗಳ ಬಗ್ಗೆ ಅಧ್ಯಯನ ಮಾಡಿದ ಮತ್ತು ಬರೆದಿರುವ ಅಪೂರ್ವ ವಿದ್ವಾಂಸ.
ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರೂ ಇವರು ತಮ್ಮ ತರಗತಿಗಳು ಇಲ್ಲವೇ ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ಸೀಮಿತವಾದವರಲ್ಲ. ಹೀಗಾಗಿಯೇ ಅವರಿಗೆ ರಾಜ್ಯದಾದ್ಯಂತ ಶಿಷ್ಯರ ಬಳಗ ಇದೆ. ಇವರನ್ನು ಮುಸ್ಲಿಮ್ ಚಿಂತಕ ಎಂದು ಬ್ರಾಂಡ್ ಮಾಡುವುದು ಅವರ ಪ್ರತಿಭೆಗೆ ಮಾಡುವ ಅಪಚಾರವಾಗುತ್ತದೆ
ಮುಜಾಪರ್ ಅಸ್ಸಾದಿಯವರ ಇತ್ತೀಚಿನ ‘’ಅಲ್ಪಸಂಖ್ಯಾತರು ಮತ್ತು ಜಾತಿವ್ಯವಸ್ಥೆ’’ ಎಂಬ ಪುಸ್ತಕ ಇಡೀ ಮುಸ್ಲಿಮ್ ಸಮುದಾಯವನ್ನು ಇಲ್ಲಿಯ ವರೆಗೆ ನಾವು ನೋಡಿರದ ನೋಟದಲ್ಲಿ ಕಾಣಲು ನೆರವಾಗುವಂತಹ ಒಂದು ಅಪೂರ್ವ ಪುಸ್ತಕ. ಸುಳ್ಳು, ಅಪಪ್ರಚಾರ ಮತ್ತು ಅಪನಂಬಿಕೆಗಳ ಸುಳಿಯಲ್ಲಿ ಸಿಕ್ಕಿಹೋಗಿರುವ ಮುಸ್ಲಿಮ್ ಸಮುದಾಯವನ್ನು ಮುಸ್ಲಿಮೇತರ ಸಮುದಾಯ ಅರ್ಥಮಾಡಿಕೊಂಡದ್ದಕ್ಕಿಂತ ಅಪಾರ್ಥ ಮಾಡಿಕೊಂಡದ್ದೇ ಹೆಚ್ಚು.
ಮುಸ್ಲಿಮ್ ಸಮುದಾಯದ ಬಹುತೇಕ ತಥಾಕಥಿತ ನಾಯಕರು ಕೂಡಾ ‘’ನಮ್ಮೊಳಗಿನ ಸಮಸ್ಯೆಗಳನ್ನು ನಾವೇ ಸರಿಮಾಡಿಕೊಳ್ಳುತ್ತೇವೆ’’ ಎಂದು ಪ್ರತ್ಯೇಕತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಅಸ್ಸಾದಿಯವರು ಹಿಂದೂ ಮತ್ತು ಮುಸ್ಲಿಮರ ನಡುವಿನ ಬದಲಾಗುತ್ತಿರುವ ಸಂಬಂಧವನ್ನು ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನದಿಂದ ವಿಶ್ಲೇಷಣೆಗೊಳಪಡಿಸುತ್ತಾ ಬಂದವರು. ತಮ್ಮವರ ನೋವು-ತಳಮಳ-ಬಿಕ್ಕಟ್ಟುಗಳನ್ನು ಬಿಚ್ಚಿಡುತ್ತಾ ಅನ್ಯ ಸಮಾಜದವರು ಮುಸ್ಲಿಮರನ್ನು ಹೆಚ್ಚು ಅರ್ಥಮಾಡಿಕೊಳ್ಳಲು ನೆರವಾಗುತ್ತಿರುವವರು. ಇದರಿಂದ ಮುಸ್ಲಿಮರು ಕೂಡಾ ತಮ್ಮನ್ನು ತಾವು ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ.. ಇದು ಇಂದಿನ ಸಮಾಜಕ್ಕೆ ಅತಿ ಅಗತ್ಯವಾದುದು ಕೂಡಾ ಆಗಿದೆ.

  • ಮುಜಾಫರ್ ಅಸ್ಸಾದಿ ಅವರ ಪ್ರತಿಭೆ ಮತ್ತು ಅರ್ಹತೆಗೆ ತಕ್ಕ ಗೌರವ ಸಿಕ್ಕಿಲ್ಲ ಎನ್ನುವುದು ವಾಸ್ತವ. ಯಾವುದಾದರೂ ಒಂದು ಸಣ್ಣ ಅವಕಾಶದಿಂದ ವಂಚಿತರಾದರೂ ಬಂಡೇಳುವ ಇಲ್ಲವೇ ಸೈದ್ದಾಂತಿಕವಾಗಿ ರಾಜಿ ಮಾಡಿಕೊಂಡು ಆಸೆ ಪೂರೈಸಿಕೊಂಡ ಅನೇಕ ವಿದ್ವಾಂಸರನ್ನು ಕಾಣಬಹುದು. ಆದರೆ ಮುಜಾಪರ್ ಅವರು ಸೈದ್ದಾಂತಿಕವಾಗಿ ಎಂದೂ ಸೂಜಿ ಮೊನೆಯಷ್ಟೂ ರಾಜಿಮಾಡಿಕೊಂಡವರಲ್ಲ. ತನ್ನ ಸೈದ್ದಾಂತಿಕ ಬದ್ದತೆಯನ್ನು ದುರ್ಬಳಕೆ ಮಾಡಿಕೊಂಡು ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿದವರೂ ಅಲ್ಲ.
    2013ರ ಪ್ರಾರಂಭದಲ್ಲಿ ಆಗಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಭಾಗವಹಿಸಿದ್ದ ಅರಸು ಸ್ಮರಣೆಯ ಕಾರ್ಯಕ್ರಮದಲ್ಲಿ ಮುಜಾಪರ್ ಅಸ್ಸಾದಿಯವರ ಜೊತೆ ನಾನೂ ಉಪನ್ಯಾಸಕನಾಗಿದ್ದೆ. ಆ ಕಾರ್ಯಕ್ರಮದಲ್ಲಿ ಮಾತನಾಡಿದ ಅಸ್ಸಾದಿಯವರು ಸಿದ್ದರಾಮಯ್ಯನವರನ್ನು ಭಾವಿ ಮುಖ್ಯಮಂತ್ರಿ ಎಂದು ಸಂಬೋಧಿಸಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದು ಮಾತ್ರವಲ್ಲ ಸಿದ್ದರಾಮಯ್ಯನವರು ಯಾಕೆ ಮುಖ್ಯಮಂತ್ರಿಯಾಗಬೇಕು ಎನ್ನುವುದನ್ನು ಸೈದ್ದಾಂತಿಕ ಹಿನ್ನೆಲೆಯಲ್ಲಿ ಬಿಚ್ಚು ಮಾತಿನ ಮೂಲಕ ಪ್ರತಿಪಾದಿಸಿದ್ದರು. ಇಂತಹ ಮಾತುಗಳನ್ನು ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಯಾಗಿದ್ದ ನೀವು ಆಡಬಹುದೇ? ಅಕಸ್ಮಾತ್ ಕಾಂಗ್ರೆಸ್ ಅಧಿಕಾರಕ್ಕೆ ಬರದೆಹೋದಲ್ಲಿ ನಿಮಗೆ ತೊಂದರೆಯಾಗುವುದಿಲ್ಲವೇ? ಎಂದು ನಾನು ಆತಂಕದಿಂದ ಪ್ರಶ್ನಿಸಿದ್ದೆ. ಅವರ ನನ್ನ ಅಂಗೈಯನ್ನು ಒತ್ತಿ ನಕ್ಕು ಸುಮ್ಮನಾಗಿದ್ದರು.
    ವಿಪರ್ಯಾಸವೆಂದರೆ ಸರ್ವ ಬಗೆಯ ಅರ್ಹತೆಗಳನ್ನು ಹೊಂದಿದ್ದ ಮುಜಾಪರ್ ಅಸ್ಸಾದಿ ಅವರು ಕಾಂಗ್ರೆಸ್ ಪಕ್ಷದ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಉನ್ನತ ಸ್ಥಾನಕ್ಕೇರಲೇ ಇಲ್ಲ. ಇದೇ ಸಮಯದಲ್ಲಿ ಸೈದ್ದಾಂತಿಕವಾಗಿ ವಿರುದ್ದ ದಿಕ್ಕಿನಲ್ಲಿದ್ದವರು ರಾಜ್ಯದ ಹಲವು ವಿಶ್ವವಿದ್ಯಾಲಯದ ಕುಲಪತಿಗಳಾದರು. ಅವಕಾಶದಿಂದ ವಂಚಿತರಾದರೂ ಇದರ ವಿರುದ್ದ ಖಾಸಗಿಯಾಗಿಯೂ ಮುಜಾಪರ್ ಅಸಮಾಧಾನವನ್ನು ಹೊರಹಾಕಿಲ್ಲ ಮತ್ತು ಸೈದ್ದಾಂತಿಕವಾಗಿ ರಾಜಿ ಮಾಡಿಕೊಳ‍್ಳಲಿಲ್ಲ.
    ಇಂತಹ ಅಪರೂಪದ ವಿದ್ವತ್, ಬದ್ದತೆ ಮತ್ತು ಕಾಳಜಿಗಳನ್ನು ಹೊಂದಿರುವ ಡಾ.ಮುಜಾಪರ್ ಅಸ್ಸಾದಿಯವರು ಅವರಿಗಾಗಿ ಅಲ್ಲ, ನಮಗಾಗಿ ಇನ್ನಷ್ಟು ಕಾಲ ಸಮಾಜದಲ್ಲಿ ಸಕ್ರಿಯರಾಗಿ ಇರಬೇಕಾಗಿದೆ. ಅಂತಹ ಅವಕಾಶಗಳು ಅವರಿಗೆ ಒದಗಿ ಬರಲಿ.

ಚಿತ್ರ: ಸರಿಯಾಗಿ ಹತ್ತು ದಿನಗಳ ಹಿಂದೆ ನಾವಿಬ್ಬರೂ‌ ಜೊತೆಯಾಗಿ ಭಾಗವಹಿಸಿದ್ದವ
ಕಾರ್ಯಕ್ರಮ.

Get real time updates directly on you device, subscribe now.

Leave A Reply

Your email address will not be published.

error: Content is protected !!