ಸೇವಾ ನ್ಯೂನತೆ: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ತೀರ್ಪು ಪ್ರಕಟ

0

Get real time updates directly on you device, subscribe now.

ಫಿರ್ಯಾದುದಾರ ಗ್ರಾಹಕರಿಗೆ ಎದುರುದಾರ ಮಣಪ್ಪುರಂ ಗೋಲ್ಡ್ ಪೈನಾನ್ಸ್ ವತಿಯಿಂದ ಸೇವಾ ನ್ಯೂನತೆ ಉಂಟಾದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಲಾಗಿದೆ.
ಗ್ರಾಹಕ ಫಿರ್ಯಾದು ಸಂಖ್ಯೆ: 60/2024 ರಲ್ಲಿ  2024ರ ಡಿಸೆಂಬರ್ 30 ರಂದು ನೀಡಿದ ಅಂತಿಮ ತೀರ್ಪಿನ ಸಾರಾಂಶದ ಅನ್ವಯ ಫಿರ್ಯಾದುದಾರರಾದ ಹಿರೇಬಸಪ್ಪ ತಂದೆ ದಿ:ಶಂಕ್ರಪ್ಪ ಸಾ:ಬೇವೂರ್, ತಾ:ಯಲಬುರ್ಗಾ ಇವರು ತನ್ನ ವ್ಯವಸಾಯದ ಕೆಲಸಕಾರ್ಯಗಳಿಗೆ ಹಣದ ಅವಶ್ಯಕತೆ ಇರುವುದರಿಂದ 2024ರ ಮೇ 01 ರಿಂದ 03 ರವರೆಗೆ ಮೂರು ಹಂತಗಳಲ್ಲಿ ಒಟ್ಟು 62.7 ಗ್ರಾಂ ಬಂಗಾರದ ಆಭರಣಗಳನ್ನು ಮಣಪ್ಪುರಂ ಗೋಲ್ಡ್ ಪೈನಾನ್ಸ್ ಯಲಬುರ್ಗಾ ಇವರಲ್ಲಿ ಅಡವಿಟ್ಟು ರೂ. 2,84,000 ಗಳನ್ನು ಸಾಲವಾಗಿ ಪಡೆದುಕೊಂಡಿರುತ್ತಾರೆ. ದೂರುದಾರರಾದ ಹಿರೇಬಸಪ್ಪ ರವರು ಈ ಅಸಲು ಮತ್ತು ಬಡ್ಡಿಯನ್ನು ಮಣಪ್ಪುರಂ ಗೋಲ್ಡ್ ಪೈನಾನ್ಸ್ ರವರಿಗೆ ಮರುಪಾವತಿ ಮಾಡಿ ತಾನು ಅಡವಿಟ್ಟ ಬಂಗಾರದ ಆಭರಣಗಳನ್ನು ಹಿಂದಿರುಗಿಸುವಂತೆ ಕೇಳಿಕೊಂಡಿರುತ್ತಾರೆ. ಮಣಪ್ಪುರಂ ಗೋಲ್ಡ್ ಪೈನಾನ್ಸ್ ರವರು ಆಡವಿಟ್ಟ ಆಭರಣಗಳನ್ನು ಹಿಂದಿರುಗಿಸದೇ ಸೇವಾ ನ್ಯೂನತೆಯನ್ನು ಎಸಗಿದ್ದು ಆಭರಣಗಳನ್ನು ಮರಳಿಸದೇ ವಿನಾಕಾರಣ ದಿನಗಳನ್ನು ಮುಂದೂಡುತ್ತಾ ಬಂದಿರುತ್ತಾರೆ. ದೂರುದಾರನು ವಕೀಲರ ಮೂಲಕ ನೋಟಿಸ್ ನೀಡಿದಾಗ್ಯೂ ಸಹ ಸ್ಪಂದಿಸದೇ ನಿರ್ಲರ್ಕ್ಷ ತೋರಿರುತ್ತಾರೆ. ದೂರುದಾರರು ಎದುರುದಾರರ ವರ್ತನೆಯಿಂದ ಬೇಸತ್ತು ಎದುರುದಾರರಾದ ಮಣಪ್ಪುರಂ ಗೋಲ್ಡ್ ಪೈನಾನ್ಸ್ರವರ ವಿರುದ್ದ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿರುತ್ತಾರೆ.
ದೂರನ್ನು ದಾಖಲಿಸಿಕೊಂಡ ಕೊಪ್ಪಳ ಜಿಲ್ಲಾ ಆಯೋಗದ ಅಧ್ಯಕ್ಷರಾದ  ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ರವರು ವಾದ ಪ್ರತಿವಾದಗಳನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ಎದುರುದಾರ ಮಣಪ್ಪುರಂ ಗೋಲ್ಡ್ ಪೈನಾನ್ಸ್ರವರು ದೂರುದಾರರು ಅಡವಿಟ್ಟ ಬಂಗಾರದ ಆಭರಣಗಳನ್ನು 30 ದಿನಗಳ ಒಳಗಾಗಿ ಹಿಂದಿರುಗಿಸುವಂತೆ ಹಾಗೂ ದೂರುದಾರನಿಂದ ಪಡೆದ ಮೊತ್ತ ರೂ. 2,84,000 ಗಳಿಗೆ ವಾರ್ಷಿಕ ಶೇ 6 ಬಡ್ಡಿಯನ್ನು ಮಾತ್ರ ಎದುರುದಾರರಿಗೆ ಸಾಲ ಮರುಪಾವತಿ ದಿನದಿಂದ ದೂರುದಾರರಿಗೆ ನೀಡುವಂತೆ ಆದೇಶಿಸಿರುತ್ತಾರೆ ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ. 5,000 ಗಳನ್ನು ಹಾಗೂ ದೂರಿನ ಖರ್ಚು ರೂ. 5000 ಗಳನ್ನು ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ ಹಾಗೂ ಸಹಾಯಕ ಆಡಳಿತಾಧಿಕಾರಿ ಪಿ.ಎಸ್ ಅಮರದೀಪ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!