ಜೀವ ವಿಮಾ ಪಾಲಸಿ ಪರಿಹಾರ ಪಾವತಿಸಲು ಇನ್ಸೂರೆನ್ಸ್ ಕಂಪನಿಗೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ

0

Get real time updates directly on you device, subscribe now.

  ಫಿರ್ಯಾದುದಾರರಿಗೆ ಜೀವ ವಿಮಾ ಪಾಲಸಿ ಪರಿಹಾರ ಪಾವತಿಸಲು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಇನ್ಸೂರೆನ್ಸ್ ಕಂಪನಿಗೆ ಆದೇಶ ನೀಡಿದೆ.

ಗ್ರಾಹಕ ಫಿರ್ಯಾದು ಸಂಖ್ಯೆ: 34/2024 ರಲ್ಲಿ 2024ರ ಡಿಸೆಂಬರ್ 30 ರಂದು ನೀಡಿದ ಅಂತಿಮ ತೀರ್ಪಿನ ಸಾರಾಂಶದ ಅನ್ವಯ ಫಿರ್ಯಾದುದಾರರಾದ ಸುನಿತಾ ಗಂಡ ದಿ: ಪಂಪಾಪತಿ ಸಾ:ಬಸಾಪಟ್ಟಣ, ತಾ:ಗಂಗಾವತಿ ಇವರ ಗಂಡನಾದ ದಿ.ಪಂಪಾಪತಿ ಹರಿಜನ ಇವರು ತಮ್ಮ ಜೀವಿತ ಕಾಲದಲ್ಲಿ  2023ರ ಜೂನ್ 14 ರಂದು ಎದುರುದಾರರಾದ ಹೆಚ್.ಡಿ.ಎಫ್.ಸಿ ಸ್ಟ್ಯಾಂಡರ‍್ಡ್ ಲೈಪ್ ಇನ್ಸೂರೆನ್ಸ್ ಕಂಪನಿ ಲಿಂ. ಮುಂಬೈ (HDFC Standad Life Insurance Company Ltd., Mumbai) ಇವರಲ್ಲಿ ಅರ್ಧ ವಾರ್ಷಿಕ ಪ್ರಿಮಿಯಂ ರೂ. 50,000 ನ್ನು ಪಾವತಿಸಿ ಜೀವ ವಿಮಾ ಪಾಲಸಿಯನ್ನು ಪಡೆದುಕೊಂಡಿದ್ದರು. ಆದರೆ ಪಾಲಸಿದಾರರಾದ ಪಂಪಾಪತಿ ಇವರು 2023ರ ಸೆಪ್ಟೆಂಬರ್ 11 ರಂದು ಹೃದಯಘಾತದಿಂದ ನಿಧನ ಹೊಂದಿರುತ್ತಾರೆ. ನಾಮಿನಿಯಾದ ಪಾಲಸಿದಾರರ ಪತ್ನಿ ಸುನಿತಾ ಎದುರುದಾರ ಜೀವ ವಿಮಾ ಕಂಪನಿಯಲ್ಲಿ ಜೀವ ವಿಮಾ ಪಾಲಸಿಯನ್ನು ಪಡೆದ ವಿಷಯ ತಿಳಿದು ಕ್ಲೇಮ್ ಫಾರ್‌ಂ ಭರ್ತಿ ಮಾಡಿ, ಎಲ್ಲಾ ದಾಖಲಾತಿಗಳನ್ನು ಎದುರುದಾರರ ಕಂಪನಿಗೆ ನೀಡಿ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವಂತೆ ವಿನಂತಿಸಿಕೊಂಡಿರುತ್ತಾರೆ.
ಎದುರುದಾರ ವಿಮಾ ಕಂಪನಿಯವರು ಈ ಕ್ಲೇಮ್‌ನ್ನು ಸ್ವೀಕರಿಸಿ ದೂರುದಾರರ ಪಾಲಸಿಯನ್ನು ಪಡೆಯುವ ಸಂದರ್ಭದಲ್ಲಿ ಉದ್ಯೋಗ ಮತ್ತು ಆದಾಯವನ್ನು ತಪ್ಪಾಗಿ ನಮೂದಿಸಿರುತ್ತಾರೆ ಎನ್ನುವ ಕಾರಣಕ್ಕೆ ಪಾಲಸಿಯ ಕ್ಲೇಮ್‌ನ್ನು ತಿರಸ್ಕಾರ ಮಾಡಿರುತ್ತಾರೆ. ದೂರುದಾರರಿಗೆ ಎದುರುದಾರರು ವಿಮಾ ಪಾಲಸಿಯ ಪರಿಹಾರದ ಮೊತ್ತವನ್ನು ನೀಡದೇ ನಿರ್ಲಕ್ಷ ತೋರಿ ಸೇವಾ ನ್ಯೂನತೆ ಎಸಗಿದ್ದರಿಂದ ದೂರುದಾರರು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗಕ್ಕೆ ವಿಮಾ ಕಂಪನಿ ವಿರುದ್ದ ಪರಿಹಾರವನ್ನು ಕೋರಿ ದೂರನ್ನು ಸಲ್ಲಿಸಿರುತ್ತಾರೆ.
ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರನ್ನು ದಾಖಲಿಸಿಕೊಂಡ ನಂತರ ಜಿಲ್ಲಾ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ರವರು ವಾದ ಪ್ರತಿವಾದಗಳನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ದೂರುದಾರರಿಗೆ ಜೀವ ವಿಮಾ ಪಾಲಸಿ ಒಟ್ಟು ಮೊತ್ತ ರೂ 20,16,589 ಪರಿಹಾರಗಳಿಗೆ ವಾರ್ಷಿಕ ಶೇ.6ರ ಬಡ್ಡಿ ಸಮೇತ ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ದೂರುದಾರರಿಗೆ ಪಾವತಿಸುವಂತೆ ಆದೇಶಿಸಿರುತ್ತಾರೆ. ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ. 5,000 ಗಳನ್ನು ಹಾಗೂ ದೂರಿನ ಖರ್ಚು ರೂ. 5000 ಗಳನ್ನು 45 ದಿನಗಳ ಒಳಗಾಗಿ ಎದುರುದಾರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ ರ ಹಾಗೂ ಸಹಾಯಕ ಆಡಳಿತಾಧಿಕಾರಿ ಪಿ.ಎಸ್ ಅಮರದೀಪ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!