ಗವಿಮಠ ಜಾತ್ರಾ ಮಹೋತ್ಸವ: ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆ
*ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ:* ಜಿಲ್ಲೆಯ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ವಿಭಾಗಕ್ಕೆ “ವಿಕಲಚೇತನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಮಾಜದ ಸ್ಪಂದನೆ” ಎಂಬ ವಿಷಯದ ಭಾಷಣ ಸ್ಪರ್ಧೆಯನ್ನು ಜಿಲ್ಲೆಯ ಪ್ರತಿ ಶಾಲಾ ಕಾಲೇಜುಗಳಲ್ಲಿ ಸ್ಪರ್ಧೆಯನ್ನು 2025ರ ಜನವರಿ 2 ರಂದು ಆಯೋಜಿಸಿ, ಶಾಲಾ ಕಾಲೇಜು ಮಟ್ಟದಲ್ಲಿ ಆಯ್ಕೆಯಾದ 3 ವಿಭಾಗದ ವಿದ್ಯಾರ್ಥಿಗಳಿಗೆ ಜ. 4 ರಂದು ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜಿನ ಮುಖ್ಯಸ್ಥರು ಸ್ಪರ್ಧೆಯ ದಿನಾಂಕದಂದು ಶಾಲಾ ಕಾಲೇಜುಗಳಲ್ಲಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ ವಿದ್ಯಾರ್ಥಿಗಳನ್ನು ಒಬ್ಬ ಶಿಕ್ಷಕ ಅಥವಾ ಉಪನ್ಯಾಸಕರೊಂದಿಗೆ ಕಳುಹಿಸಿಕೊಡುವುದು.
*ಜಿಲ್ಲೆಯಾದ್ಯಂತ ಜಾಗೃತಿ ನಡಿಗೆ:* ಜನವರಿ 11 ರಂದು “ಸಕಲ ಚೇತನ” ಎಂಬ ಶೀರ್ಷಿಕೆಯ “ವಿಕಲ ಚೇತನನ ನಡೆ ಸಕಲ ಚೇತನದ ಕಡೆ” ಎಂಬ ಘೋಷವಾಕ್ಯದೊಂದಿಗೆ ಜಿಲ್ಲೆಯ ಪ್ರೌಢಶಾಲೆ, ಪದವಿಪೂರ್ವ ಮತ್ತು ಇತರೆ ಎಲ್ಲಾ ಕಾಲೇಜುಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಜಾಗೃತಿ ನಡಿಗೆಯನ್ನು ಆಯೋಜಿಸಬೇಕು.
*ಕೊಪ್ಪಳ ನಗರದಲ್ಲಿ ಜಾಗೃತಿ ನಡಿಗೆ:* ಜ. 11 ರಂದು ಬೆಳಿಗ್ಗೆ 8 ಗಂಟೆಗೆ “ಸಕಲ ಚೇತನ” ಎಂಬ ಶೀರ್ಷಿಕೆಯ “ವಿಕಲ ಚೇತನನ ನಡೆ ಸಕಲ ಚೇತನದ ಕಡೆ” ಎಂಬ ಘೋಷವಾಕ್ಯದೊಂದಿಗೆ ಅಭಿಯಾನವನ್ನು ಕೊಪ್ಪಳ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ತಾಲೂಕು ಕ್ರೀಡಾಂಗಣ)ದಿಂದ ಆರಂಭವಾಗಿ ಅಶೋಕ ವೃತ್ತ, ಗಡಿಯಾರ ಕಂಬದ ಮೂಲಕ ಶ್ರೀ ಗವಿಮಠ ತಲುಪುವ ನಡಿಗೆಯ ಜಾಥಾಕ್ಕೆ ಕೊಪ್ಪಳ ನಗರದ ಎಲ್ಲಾ ಸರಕಾರಿ, ಅನುದಾನಿತ, ಖಾಸಗಿ ಪ್ರೌಢಶಾಲೆಗಳು, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಕೇಂದ್ರಗಳು ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವಂತೆ ಸಂಬಂಧಿಸಿದ ಇಲಾಖೆಗಳು ಕ್ರಮ ವಹಿಸಬೇಕು.
ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲು ಹಾಗೂ ಮುಂದಿನ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಆದೇಶಿಸಿದ್ದಾರೆ.