ಕುರಿಗಾರರಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ತಲುಪಿಸಿ: ಸಿಇಓ ರಾಹುಲ್ ರತ್ನಂ ಪಾಂಡೇಯ

0

Get real time updates directly on you device, subscribe now.

ಜಿಲ್ಲೆಯ ಕುರಿಗಾರರಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ತಲುಪಿಸುವಂತೆ ಪಶು ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಹೇಳಿದರು.

ಅವರು ಸೋಮವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಕುರಿಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಕುರಿ-ಮೇಕೆ ಸಾಕಾಣಿಕೆಗೆ ಮತ್ತು ಕುರಿಗಾರರಿಗೆ ಸರ್ಕಾರವು ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ, ಸಹಾಯಧನ ಸೌಲಭ್ಯ, ಅಗತ್ಯ ಪರಿಕರಗಳ ವಿತರಣೆ ಮತ್ತು ಜಾನುವಾರುಗಳಿಗೆ ಲಸಿಕೆ ಹೀಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಜಿಲ್ಲೆಯ ಕುರಿಗಾರರಿಗೆ ಜಾಗೃತಿ ಮೂಡಿಸಬೇಕು. ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಪ್ರಮಾಣ ಶೇ100 ರಷ್ಟಾಗಬೇಕು ಮತ್ತು ಸೌಲಭ್ಯ ವಿತರಣೆಯಲ್ಲೂ ಜಿಲ್ಲೆಯ ಪ್ರಗತಿ ಹೆಚ್ಚಾಗಬೇಕು. ಬಹಳಷ್ಟು ಕುರಿಗಾರರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಹೇಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂಬುವುದು ತಿಳಿದಿರುವುದಿಲ್ಲ  ಎಂದರು.
  ಸಂಚಾರಿ ಮತ್ತು ವಲಸೆ ಕುರಿಗಾರರಿಗೆ ಗುರುತಿನ ಚೀಟಿ ನೀಡುವ ಸರ್ಕಾರಿ ಆದೇಶದಂತೆ ಅಗತ್ಯ ಕ್ರಮ ಜರುಗಿಸಿ. ಅನುಗ್ರಹ ಯೋಜನೆಯಡಿ ಸತ್ತ ಕುರಿ-ಮೇಕೆಗಳಿಗೆ ಪರಿಹಾರ ವಿತರಣೆಯಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಅನುದಾನಕ್ಕಾಗಿ ಜಿಲ್ಲೆಯ ಕುರಿಗಾರರ ಬೇಡಿಕೆಯೊಂದಿಗೆ ಕೇಂದ್ರ ಕಚೇರಿಗೆ ಪತ್ರ ಬರೆದು ಪರಿಹಾರ ವಿತರಿಸುವಂತೆ ಕ್ರಮ ಕೈಗೊಳ್ಳಬೇಕು. ಕುರಿಗಳನ್ನು ಮಳೆಯಿಂದ ಸಂರಕ್ಷಣೆಗೆ ತಾಡಪಾಲ ಶೆಡ್, ವಲಸೆ ಕುರಿಗಾರರ ಸಂರಕ್ಷಣೆಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮತ್ತು ಕಂಬಳಿಗಳ ವಿತರಣೆ, ಸತ್ತ ಕುರಿ ಮೇಕೆಗಳಿಗೆ ಪರಿಹಾರ  ಹಾಗೂ ಕುರಿಗಾರರ ಇತರೆ ಬೇಡಿಕೆಗಳ ಪಟ್ಟಿ ತಯಾರಿಸಿ ಯೋಜನೆಯ ಅಳವಡಿಕೆ ಮತ್ತು ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಕುರಿಗಾರರ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಈ ಹಿಲ್ಲೆಯಲ್ಲಿ ಪಶು ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕುರಿಗಾರರ ಸಂಘಗಳ ಸಹಕಾರದೊಂದಿಗೆ ಕುರಿಗಾರರ ಮಕ್ಕಳ ಶಿಕ್ಷಣದ ಸ್ಥಿತಿಗತಿಗಳ ಬಗ್ಗೆ ವರದಿ ಸಲ್ಲಿಸಬೇಕು. ಜಿಲ್ಲೆಯಲ್ಲಿರುವ ಪಶು ವೈದ್ಯರ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರ ರೀತಿಯಲ್ಲಿ ಜಿಲ್ಲೆಯ ಪಶು ವೈದ್ಯಾಧಿಕಾರಿಗಳನ್ನು ನೇಮಿಸಿಕೊಳ್ಳಬೇಕು. ಇದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಅವಕಾಶವಿದ್ದು, ಪಶು ವೈದ್ಯಾಧಿಕಾರಿಗಳ ಸೇವೆಯನ್ನು ತ್ವರಿತವಾಗಿ ಪಡೆದುಕೊಳ್ಳುವಂತೆ ಸೂಚಿಸಿದರು.
ಅಳವಂಡಿ ಹೋಬಳಿಯ ಹಲಗೇರಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಗುಡದಪ್ಪ ಬಸಪ್ಪ ಬನ್ನಪ್ಪನವರ ಮಾತನಾಡಿ, ಅಮೃತ ಯೋಜನೆಯಡಿ ಅರ್ಜಿ ಸಲ್ಲಿಸಿ, ಒಂದು ವರ್ಷ ಕಳೆದರೂ ಸಹ ಫಲಾನುಭವಿಗಳಿಗೆ ಸೌಲಭ್ಯಗಳು ಇನ್ನೂ ಸಿಗುತ್ತಿಲ್ಲ. ಕೂಡಲೇ ಯೋಜನೆಯ ಲಾಭವನ್ನು ಅರ್ಹ ಕುರಿಗಾರರಿಗೆ ತಲುಪಿಸುವ ಕೆಲಸವನ್ನು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಮಡಬೇಕು. ನಮ್ಮ ಕುರಿಗಾಯಿಗಳಿಗೆ ಸರ್ಕಾರದ ಯೋಜನೆಗಳ ಲಾಭ ಸಮರ್ಪಕವಾಗಿ ತಲುಪಿಸಲು ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದರು.
ಗಂಗಾವತಿಯ ಹಿಮಾಲಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ    ಕಾರ್ಯನಿರ್ವಹಣಾಧಿಕಾರಿಕೆ.ಬಿ ಜೂಡಿ ಮಾತನಾಡಿ, ಮಾರುಕಟ್ಟೆಯಲ್ಲಿ ಕುರಿಗಳನ್ನು ಮಾರಾಟ ಮಾಡಲು ವಾರದಲ್ಲಿ ಒಮ್ಮೆ ಪ್ರತಿ ಶುಕ್ರವಾರದಂದು ಕುಕನಪಳ್ಳಿಯಲ್ಲಿ ಸಂತೆ ನಡೆಯುತ್ತದೆ. ಇದರೆ ಜೊತೆಗೆ ಡಿಜಿಟಲ್ ಮಾರುಕಟ್ಟೆ ಅತ್ಯವಶ್ಯಕವಾಗಿದ್ದು, ಗಂಗಾವತಿ ಮಾರುಕಟ್ಟೆ ಸಮಿತಿಯಲ್ಲಿ ಡಿಜಿಟಲ್ ತೂಕದ ಯಂತ್ರವನ್ನು ಅಳವಡಿಸಬೇಕು ಎಂದರು.
ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ ಪಿ.ಎಂ ಮಲ್ಲಯ್ಯ ಅವರು ಮಾತನಾಡಿ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲ ಪಡೆಯಲು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, 2025ರ ಮಾರ್ಚ್ 31ರವರೆಗೆ ಆವಕಾಶವಿರುತ್ತದೆ. ಆಸಕ್ತ ಕುರಿಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕ ಡಾ ಆನಂದ ದೇವರನಾವದಗಿ ಮಾತನಾಡಿ, ಕುರಿ ಹಾಗೂ ಮೇಕೆಗಳಿಗೆ ಔಷಧಿಗಳ ವಿತರಣೆಗಾಗಿ ಕೇಂದ್ರ ಕಚೇರಿಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದ್ದು, ಸರಬರಾಜು ಆದ ತಕ್ಷಣ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊಪ್ಪಳದ ಜೈ ಭೀಮ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಮಹಾಲಕ್ಷ್ಮೀ ಲಕ್ಷ್ಮಣ ಕಂದಾರಿ ಮಾತನಾಡಿದರು.
ಸಭೆಯಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ ವಿನೋದ ಕುಮಾರ ದಿವಟರ, ಡಾ ಶಿವರಾಜ ಎಂ ಶೆಟ್ಟರ, ಡಾ ಚನ್ನಬಸಪ್ಪ ಹಳ್ಳದ, ಡಾ. ಪ್ರಕಾಶ ಚೂರಿ, ಡಾ ಜಾಕೀರ ಹುಸೇನ್, ಕುರಿಗಾರರಾದ ಮುಕ್ಕುಂದಪ್ಪ ಅಳವಂಡಿ, ಮಹಾಂತಪ್ಪ ಹನವಾಳ ಸೇರಿದಂತೆ ಜಿಲ್ಲೆಯ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!