ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
Kannadanet News
—
ಕೊಪ್ಪಳ : ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರ ಅಧ್ಯಕ್ಷತೆಯಲ್ಲಿ ಜೂನ್ 3ರಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು.
ವಿವಿಧ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ವಿವಿಧ ಸ್ಥಳೀಯ ಸಂಸ್ಥೆಗಳು ಅಧಿಕಾರಿಗಳು ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದ ಕೆಸ್ವಾನ್ ಹಾಲನಲ್ಲಿ ಜೂನ್ 3ರಂದು ನಡೆದ ಸಭೆಯಲ್ಲಿ ಮಳೆಗಾಲ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳು ಮತ್ತು ಕುಡಿಯುವ ನೀರು ಸರಬರಾಜು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ಚರ್ಚಿಸಿದರು.
ಈಗಾಗಲೇ ಮುಂಗಾರು ಹಂಗಾಮು ಆರಂಭಗೊಂಡಿದೆ. ಮುಂಗಾರಿನಲ್ಲಿ ಮುಖ್ಯವಾಗಿ ಬೆಳೆಯಲಾಗುವ, ರೈತರಿಗೆ ಅವಶ್ಯವಾಗಬಹುದಾದ ಇತರ ಬೆಳೆಗಳ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳು ಹಾಗೂ ಬಿತ್ತನೆ ಬೀಜ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ತ್ವರಿತ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ವಾತಾವರಣಕ್ಕೆ ತಕ್ಕಂತೆ ಬಿತ್ತನೆ ಮಾಡುವ ರೈತರು ಕೇಳುವ ಬೀಜಗಳನ್ನೇ ಅವರಿಗೆ ಪೂರೈಸಲು ಎಲ್ಲಾ ರೀತಿಯ ಬೀಜ ದಾಸ್ತಾನಿಗೆ ವ್ಯವಸ್ತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಆಯಾ ತಾಲೂಕಿನ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗುಣಮಟ್ಟದ ಬಿತ್ತನೆ ಬೀಜಗಳ ವಿತರಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
*ಬೆಳೆಹಾನಿಗೆ ಪರಿಹಾರ:* ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಕೃಷಿ ಹಾಗು ತೋಟಗಾರಿಕಾ ಬೆಳೆ ಹಾನಿಗೆ ಕಾಲಮಿತಿಯೊಳಗೆ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು ಎಂದು ತೋಟಗಾರಿಕಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ಪ್ರಕೃತಿ ವಿಕೋಪದಿಂದ ಜಾನುವಾರು ಪ್ರಾಣಹಾನಿಯ ಪ್ರಕರಣಗಳಿಗೆ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು. ಜಾನುವಾರುಗಳಿಗೆ ವಿತರಿಸಲು ಸಾಕಾಗುವಷ್ಟು ಮೇವಿನ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ:* ಮಳೆ-ಗಾಳಿಗೆ ವಿದ್ಯುತ್ ಕಂಬಗಳು ಬಾಗಿ, ವಿದ್ಯುತ್ ತಂತಿಗಳು ಹಾಳಾದಲ್ಲಿ ಅಂತಹ ಕಡೆಗೆ ಬದಲಿ ವ್ಯವಸ್ಥೆಯನ್ನು ತುರ್ತಾಗಿ ನಡೆಸಿ ಜನರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಪ್ರವರ್ತಕಗಳ ಮತ್ತು ವಿದ್ಯತ್ ಕಂಬಗಳ ಲಭ್ಯತೆಗೆ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ಪರಿಹಾರ ವಿತರಣೆಗೆ ಕ್ರಮ:* 2023-24ನೇ ಸಾಲಿನ ಏಪ್ರೀಲ್ ಮತ್ತು ಮೇ ಮಾಹೆಯಲ್ಲಿ ಜೀವ ಹಾನಿಯ 7 ಪ್ರಕರಣಗಳಿಗೆ ಒಟ್ಟು 35 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಒಟ್ಟು 28 ಜಾನುವಾರು ಪ್ರಾಣ ಹಾನಿ ಪ್ರಕರಣಗಳಿಗೆ ಒಟ್ಟು 06,14,500ರಷ್ಟು ಪರಿಹಾರ ವಿತರಿಸಲಾಗಿದೆ. ಏಪ್ರೀಲ್ ಮತ್ತು ಮೇ ಮಾಹೆಗಳಲ್ಲಿ ಏಳು ತಾಲೂಕುಗಳು ಸೇರಿದಂತೆ 47 ಮನೆ ಹಾನಿ ಪ್ರಕರಣಗಳಿಗೆ 11,10,000 ಪರಿಹಾರ ವಿತರಿಸಲಾಗಿದೆ ಎಂದು
ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಸಭೆಗೆ ಮಾಹಿತಿ ನೀಡಿದರು.
*ಬೀಜ ವಿತರಣೆಗೆ ಅಗತ್ಯ ಕ್ರಮ:* ಮಾರ್ಚ 1ರಿಂದ ಮೇ 31ರವರೆಗೆ ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆ 60 ಮಿಮೀ ಇದ್ದು, ವಾಸ್ತವಿಕವಾಗಿ 68 ಮಿಮೀ ಸುರಿದು ಶೇ.13ರಷ್ಟು ಹೆಚ್ಚಿನ ಮಳೆಯಾಗಿದೆ. ಕೊಪ್ಪಳ ತಾಲೂಕಿನಲ್ಲಿ ವಾಡಿಕೆ ಮಳೆ 71 ಮಿಮೀ ಇದ್ದು, ವಾಸ್ತವಿಕವಾಗಿ 55 ಮಿಮೀ ಸುರಿದು ಶೇ.23ರಷ್ಟು ಮಳೆಕೊರತೆಯಾಗಿದೆ. ಕುಷ್ಟಗಿ ತಾಲೂಕಿನಲ್ಲಿ ವಾಡಿಕೆ 75 ಮಿಮಿ ಇದ್ದು ವಾಸ್ತವಿಕವಾಗಿ 74 ಮಿಮಿ ಸುರಿದು ಶೇ.02ರಷ್ಟು ಮಳೆಕೊರತೆಯಾಗಿದೆ. ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ 83 ಮಿಮಿ ಇದ್ದು ವಾಸ್ತವಿಕವಾಗಿ 72 ಮಿಮಿ ಮಳೆ ಸುರಿದು ಶೇ.13ರಷ್ಟು ಮಳೆ ಕೊರತೆಯಾಗಿದೆ. ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 71 ಮಿಮಿ ಇದ್ದು ವಾಸ್ತವಿಕವಾಗಿ 60 ಮಿಮಿ ಸುರಿದು ಶೇ.16ರಷ್ಟು ಮಳೆ ಕೊರತೆಯಾಗಿದೆ. ಕುಕನೂರ ತಾಲೂಕಿನಲ್ಲಿ ವಾಡಿಕೆ ಮಳೆ 116 ಮಿಮಿ ಇದ್ದು ವಾಸ್ತವಿಕವಾಗಿ 84 ಮಿಮಿ ಮಳೆ ಸುರಿದು ಶೇ.23ರಷ್ಟು ಮಳೆ ಕೊರತೆಯಾಗಿದೆ. ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ 50 ಮಿಮಿ ಇದ್ದು, ವಾಸ್ತವಿಕವಾಗಿ 52 ಮಿಮಿ ಸುರಿದು ಶೇ.5ರಷ್ಟು ಹೆಚ್ಚಿನ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ವಾಡಿಕೆ ಮಳೆ 79 ಮಿಮಿ ಇದ್ದು, ವಾಸ್ತವಿಕವಾಗಿ 67 ಮಿಮಿ ಸುರಿದು ಶೇ.15ರಷ್ಟು ಮಳೆ ಕೊರತೆಯಾಗಿದೆ. ರೈತರು ಆತಂಕಕ್ಕೆ ಒಳಗಾಗದ ಹಾಗೆ ಬಿತ್ತನೆ ಬೀಜಗಳ ವಿತರಣೆಗೆ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅವಶ್ಯಕ ಪ್ರಮಾಣದಲ್ಲಿ ಬಿತ್ತನೆ ಬೀಜಗಳನ್ನು ಪಡೆದು ಬಿತ್ತನೆ ಮಾಡಲು ರೈತರಿಗೆ ತಿಳಿಸಲಾಗುತ್ತಿದೆ ಎಂದು ಇದೆ ವೇಳೆ ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಉಪ ವಿಭಾಗಾಧಿಕಾರಿಗಳಾದ ಬಸವಣ್ಣಪ್ಪ ಕಲಶೆಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ ಕೆ.ವಿ.. ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.