ಶಾಸಕ ರಾಘವೇಂದ್ರ ಹಿಟ್ನಾಳ ಮನೆ ಮುಂದೆ ತಮಟೆ ಚಳುವಳಿ : ಗಣೇಶ್ ಹೊರತಟ್ನಾಳ
ಕೊಪ್ಪಳ : ಒಳಮೀಸಲಾತಿ ವಿಚಾರವಾಗಿ ಡಿ.14 ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ಮನೆ ಮುಂದೆ ತಮಟೆ ಚಳುವಳಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಗಣೇಶ್ ಹೊರತಟ್ನಾಳ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಡಿ.16ರಂದು ಬೆಳಗಾವಿಯಲ್ಲಿ ಒಳ ಮೀಸಲಾತಿಗಾಗಿ ಹಕ್ಕೊತ್ತಾಯ ಸಮಾವೇಶ ನಡೆಸಲಾಗುವುದು, ಮಾದಿಗ ಸಂಘಟನೆಗಳ ಒಕ್ಕೂಟ ದಿಂದ ಒಳ ಮೀಸಲಾತಿ ಜಾರಿ ಮಾಡಿ, ಸುಪ್ರೀಂ ಕೋರ್ಟಿನ ತೀರ್ಪನ್ನು ಗೌರವಿಸಿ, ಸುಖ ಸುಮ್ಮನೆ ಕಾಲಹರಣದ ಆಯೋಗ ಬೇಡ ಎಂದು ಡಿಸೆಂಬರ್ 14 ರಂದು ರಾಜ್ಯಾದ್ಯಂತ ಎಲ್ಲಾ ಶಾಸಕರ ಮನೆ ಮುಂದೆ ತಮಟೆ ಚಳುವಳಿ ಮಾಡಿ ಶಾಸಕರಿಗೆ ಬೆಳಗಾವಿಯ ಅಧಿವೇಶನದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸದನದಲ್ಲಿ ಪ್ರಸ್ತಾಪಿಸಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿ ಮತ್ತು ಆಗಸ್ಟ್ 1, 2024 ರಂದು ಸುಪ್ರೀಂಕೋರ್ಟಿನ ಐತಿಹಾಸಿಕ ತೀರ್ಪು ಪ್ರಕಟವಾಯಿತು ಒಳ ಮಿಸಲಾತಿ ಜಾರಿ ಮಾಡುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ಆದೇಶ ನೀಡಿ ನಾಲ್ಕು ತಿಂಗಳು ಕಳೆದರೂ ಕರ್ನಾಟಕ ಸರ್ಕಾರ ಕುಂಟು ನೆಪ ಹುಡುಕುತ್ತಾ ಮೀನಾಮೇಷ ಎನಿಸುತ್ತಿದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಸ್ತುತವಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ ನೇತೃತ್ವದ ಆಯೋಗ ರಚಿಸಿದೆ, ಎರಡು ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹಸಿ ಸುಳ್ಳು ಹೇಳಿದ್ದು ಹೀಗೆ ಹೇಳಿ 45 ದಿನಗಳಾದರೂ ಆಯೋಗ ತನ್ನ ಕೆಲಸ ಆರಂಭಿಸಿಯೇ ಇಲ್ಲ ಆಯೋಗವನ್ನು ನಾಮಕಾವಸ್ತೆ ಘೋಷಿಸಿರುವುದು ಬಿಟ್ಟರೆ ಆಯೋಗಕ್ಕೆ ಕಚೇರಿ ಸಿಬ್ಬಂದಿ ಹಣಕಾಸಿನ ನೆರವು ಯಾವುದನ್ನು ಕೊಟ್ಟಿರುವುದಿಲ್ಲ,
ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಒಳ ಮೀಸಲಾತಿ ಜಾರಿ ಮಾಡುವುದಾಗಿ ಹಸಿಸುಳ್ಳು ಹೇಳಿದ್ದು ಇದೇ ಕಾಂಗ್ರೆಸ್ ನಾಯಕರು ಈಗ ಸಚಿವ ಸಂಪುಟ ಸಭೆಯನ್ನು ಯಾವುದೇ ಸಿದ್ಧತೆ ಇಲ್ಲದೆ ನಡೆಸಿ ಆಮೆ ವೇಗದಲ್ಲಿ ಸಾಗುತ್ತಿರುವುದನ್ನು ನೋಡಿದರೆ ಈ ಸರ್ಕಾರಕ್ಕೆ ಮೀಸಲಾತಿಯಲ್ಲಿ ಅವಕಾಶ ವಂಚಿತ ಅಸ್ಪೃಶ್ಯ ಸಮುದಾಯಗಳಿಗೆ ಒಳ ಮೀಸಲಾತಿ ಒದಗಿಸಲು ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಬಿಜೆಪಿ ಸರ್ಕಾರ ಇದ್ದಾಗ ಮಾಧುಸ್ವಾಮಿ ವರದಿಯನ್ನು ಸಿದ್ಧಪಡಿಸುವಾಗ ಆದಿ ಕರ್ನಾಟಕ, ಆದಿ ದ್ರಾವಿಡ ಸಮಸ್ಯೆಗೆ ಉತ್ತರಿಸಲಾಗಿದೆ 2011 ರ ಜನಸಂಖ್ಯೆಯ ಅಂಕಿ ಅಂಶ ಆಧರಿಸಿಯೇ ವರದಿಸಿದ್ದಪಡಿಸಿ ಶಿಫಾರಸ್ಸು ಮಾಡಲಾಗಿದೆ ಹೀಗಾಗಿ ಮತ್ತೆ ಅದೇ ಪ್ರಶ್ನೆಗಳಿಗೆ ಸದ್ಯ ಉತ್ತರ ಹುಡುಕಲು ಇನ್ನೊಂದು ಆಯೋಗ ರಚಿಸುವ ಅಗತ್ಯವಿಲ್ಲ.
ಈಗಾಗಲೇ ಸದಾಶಿವ ಆಯೋಗ, ಮಾಧುಸ್ವಾಮಿ ವರದಿ ಇರುವಾಗ ಮತ್ತೊಂದು ಆಯೋಗ ಬೇಕೆಂದು ಯಾವ ಒಳ ಮೀಸಲಾತಿ ಹೋರಾಟಗಾರರು ಬೇಡಿಕೆ ಇಟ್ಟಿರಲಿಲ್ಲ ಆಯೋಗ ರಚಿಸುವ ಬೇಡಿಕೆ ಒಳ ಮೀಸಲಾತಿಯನ್ನು ಅಂತರ್ಯದಲ್ಲಿ ಒಪ್ಪದ ಸೋಗಲಾಡಿಗಳದ್ದು ಈಗ ನಿಖರದ ದತ್ತಾಂಶದ ಖ್ಯಾತಿ ತೆಗೆಯುವವರು ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿಯ ಮುಂದೆ ಹೋಗಿರಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಒಳಮಿಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ಕಾಟಾಚಾರದ ಆಯೋಗ ನೇಮಕದ ನಾಟಕವಾಡುತ್ತಿದೆ ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ವಂಚಿಸುವುದನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಡಾ. ಬಾಬು ಜಗಜೀವನ್ ರಾಮ್ ಕಾಲದಿಂದಲೂ ಕಾಂಗ್ರೆಸ್ ನಿರಂತರ ಮೋಸ ಮಾಡಿಕೊಂಡು ಬಂದಿದೆ, ಒಳ ಮೀಸಲಾತಿ ಜಾರಿ ಆಗುವವರೆಗೂ ಸರ್ಕಾರಿ ನೇಮಕಾತಿ ಮಾಡಬಾರದೆಂಬ ನಮ್ಮ ಬೇಡಿಕೆಗೆ ಒಪ್ಪಿಕೊಂಡಂತೆ ಮಾಡಿದ ರಾಜ್ಯ ಸರ್ಕಾರ ಹಲವು ಇಲಾಖೆಗಳಲ್ಲಿ ಸದ್ಯ ನೇಮಕಾತಿ ಪ್ರಕ್ರಿಯೆಗಳನ್ನು ಮಾಡುತ್ತಲೇ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಸಚಿವ ಸಂಪುಟದ ಸಚಿವರುಗಳು ಹಾಗೂ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸುಪ್ರೀಂ ಕೋರ್ಟಿನ ಆದೇಶದನ್ವಯ ಒಳ ಮೀಸಲಾತಿ ನೀಡಿ ಅಸ್ಪೃಶ್ಯತೆ ಅಳಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು .
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಂಜುನಾಥ್ ಮುಸಲಾಪುರ ಸಿದ್ದು ಮಣ್ಣಿನವರ್, ನಾಗಲಿಂಗಪ್ಪ ಮಾಳೆಕೊಪ್ಪ, ರಾಜು ಕಿನ್ನಾಳ ,ದೇವರಾಜ್ ಕಿನ್ನಾಳ್ ,ನಿಂಗಪ್ಪ ಗದ್ದಿ ಉಪಸ್ಥಿತರಿದ್ದರು.