ದೀಪೋತ್ಸವ ಜ್ಞಾನದ ದೀವಿಗೆಯನ್ನು ಬೆಳಗುತ್ತೇವೆ : ರಾಘವೇಂದ್ರ ಬಾಕಳೆ
ಕೊಪ್ಪಳ,: ದೀಪೋತ್ಸವ ಮನಸ್ಸಿನ ಕಲ್ಮಶ ತೊಳೆದು ಜ್ಞಾನದ ಬೆಳಕು ಹಚ್ಚುವ ಉತ್ಸವಗಳಾಗಬೇಕು ಎಂದು ಅಗ್ನಿವೀರ ತರಬೇತಿದಾರರಾದ ರಾಘವೇಂದ್ರ ಬಾಕಳೆ ಹೇಳಿದರು.
ನಗರದ ಹೊರವಲಯದಲ್ಲಿರುವ ಪುರಾತನ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೀಪೋತ್ಸವ ಎಂಬುದು ದೀಪಗಳನ್ನು ಬೆಳಗುವುದನ್ನು ಸೂಚಿಸುತ್ತದೆ. ಹಣತೆ ನಮ್ಮ ದೇಹವನ್ನು ಸಂಕೇತಿಸಿದರೆ ಬೆಳಕು ನಮ್ಮ ಆತ್ಮವನ್ನು ಸೂಚಿಸುತ್ತದೆ. ದೀಪ ಹಚ್ಚುವಾಗ ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತೇವೆ. ಅಂದರೆ ಕತ್ತಲೆಯನ್ನು ಸಂಕೇತಿಸುವ ಅಜ್ಞಾನ, ಕೋಪ, ಮದ, ಮತ್ಸರ, ಅಹಂಕಾರ, ಅಸೂಯೆ, ದ್ವೇಷ, ಕಹಿಯನ್ನು ದೇಹದಿಂದ ಹೊರಹಾಕಲ್ಪಟ್ಟು ಜ್ಞಾನದ ದೀವಿಗೆಯನ್ನು ಬೆಳಗುತ್ತೇವೆ ಎಂದರು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಸಂಜೆ ಭಕ್ತಾಧಿಗಳಿಂದ ದೀಪೋತ್ಸವ ಜರುಗಿತು. ಇದೇ ವೇಳೆ ಸೈನ್ಯಕ್ಕೆ ಆಯ್ಕೆಯಾದ ೪೦ಕ್ಕೂ ಹೆಚ್ಚು ನೂತನ ಸೈನಿಕರಿಗೆ ಮಳೆಮಲ್ಲೇಶ್ವರ ದೇವಸ್ಥಾನದ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.
ದೀಪೋತ್ಸವದಲ್ಲಿ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷರಾದ ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಸಮಿತಿಯ ಸದಸ್ಯರಾದ ಬಸವರಾಜ ಪುರದ, ರಾಜು ಶಟ್ಟರ್, ವಿರೂಪಾಕ್ಷಪ್ಪ ಮುತ್ತೇನವರ್, ಶಿವು ಕೊಣಂಗಿ, ಅಮರಸಿಂಗ್, ಸಿದ್ದಯ್ಯ ಹಿರೇಮಠ, ಮೀಸ್ತ್ರಿಮಲ್, ಪಂಡಿತ ಹಡಗಲಿ ಸೇರಿದಂತೆ ಅನೇಕರು ಇದ್ದರು.