ಪಾಲಕರ ಹೊರಗಣ್ಣು ಮುಚ್ಚಿಸಿ, ಒಳಕಣ್ಣು ತೆರೆಸಿದ ನೇತ್ರಾಜ್ ಗುರುವಿನ ಮಠ
ಮಹಾನ್ ಕಿಡ್ಸ್ ಶಾಲೆಯಲ್ಲೊಂದು ವಿಭಿನ್ನ ಪಠ್ಯೇತರ ಕಾರ್ಯಕ್ರಮ
ಗಂಗಾವತಿ.ಡಿ.07: ಖಾಸಗಿ ಶಾಲೆಗಳೆಂದರೆ ಪಾಲಕರಿಂದ ದುಬಾರಿ ಫೀಜು ಪೀಕಿ, ಮಕ್ಕಳಿಗೆ ಕೇವಲ ಸಿದ್ದಪಠ್ಯ ಕ್ರಮಗಳನ್ನು ಬೋಧಿಸುವ ಕಾರ್ಖಾನೆಗಳಂತಾಗಿವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಜಯನಗರದ ಮಾಹಾನ್ ಕಿಡ್ಸ್ ಶಾಲೆಯು ಮಕ್ಕಳ ಶೈಕ್ಷಣಿಕ ಪ್ರಗತಿಯ ಜತೆಗೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗಾಗಿ ವಿಶಿಷ್ಟವಾದ ಪಠ್ಯೇತರ ಚಟುವಟಿಕೆಗಳ ಮೂಲಕ ಪಾಲಕರ ಪ್ರಶಂಸೆಗೆ ಪಾತ್ರವಾಗಿದೆ.
ಶನಿವಾರದಂದು ಬೆಳಗ್ಗೆ ಮಹಾನ್ ಕಿಡ್ಸ್ ಶಾಲೆಯಲ್ಲಿ ಕಾಂಪ್ಲಿಮೆಂಟರಿ ಟೈಂ ವಿಶೇಷ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗೆ ಹಾಗೂ ಪಾಲಕರಿಗಾಗಿ ಹಮ್ಮಿಕೊಳ್ಳಲಾಗಿತ್ತು. ನಿಜಕ್ಕೂ ಇದೊಂದು ಅತ್ಯುತ್ತಮ ವಿಶೇಷ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳ ಅಸ್ತಿತ್ವ, ಮಾನಸಿಕ ಯೋಚನೆಗಳನ್ನು ಹಾಗೂ ಅಂತರ್ ಶಕ್ತಿಯನ್ನು ಜಾಗೃತಗೊಳಿಸುವ ಕಾರ್ಯ ಮಾಡಲಾಯಿತು. ಇಂದಿನ ಆಧನಿಕ ಯುಗದ ಮಕ್ಕಳ ಮಾನಸಿಕ ಒತ್ತಡವನ್ನು ಪಾಲಕರು ಅರಿಯುವ ಬಗ್ಗೆ ಹಾಗೂ ಪಾಲಕರಲ್ಲಿನ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತಂತೆ ಸಾಕಷ್ಟು ಗೊಂದಲಗಳಿಗೆ ಪರಿಹಾರವನ್ನು ಶಾಲೆ ಅಧ್ಯಕ್ಷರು ನೇತ್ರಾಜ್ ಗುರುವಿನ ಮಠ ಅವರು ಬಹಳ ಸಮರ್ಪಕವಾಗಿ ನೀಡಿದರು.
ಇದೇ ವೇಳೆ ಮಕ್ಕಳು ಪಾಲಕರನ್ನು, ಪಾಲಕರು ಮಕ್ಕಳನ್ನು ಅರಿಯುವ ಕುರಿತು ಪ್ರಾಯೋಗಿಕವಾಗಿ ನಿರೂಪಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಾಲೆ ಅಧ್ಯಕ್ಷರು ನೇತ್ರಾಜ್ ಗುರುವಿನ ಮಠ ಅವರು, ನಿಮ್ಮ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ನೀವುಗಳು ಸಾಕಷ್ಟು ಶ್ರಮಿಸುತ್ತೀರಿ. ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವುದು ನಿಮ್ಮೆಲ್ಲರ ಕನಸು. ಹಾಗಾಗಿ ಅವರಿಗೆ ಎಲ್ಲಾ ಸೌಲಭ್ಯಗಳು ಕಲ್ಪಿಸಿ ಕೊಡುತ್ತೀರಿ. ಭೌತಿಕವಾಗಿ ಮೇಲ್ನೋಟಕ್ಕೆ ಮಕ್ಕಳು ಖುಷಿಯಾಗಿರುವಂತೆ ಕಾಣುತ್ತದೆ. ಆದರೆ ಆಂತರಿಕವಾಗಿ ಮಕ್ಕಳು ನಿಮ್ಮ ಪ್ರೀತಿಯ ಜತೆಗೆ ನಿಮ್ಮೊಂದಿಗೆ ಮುಕ್ತವಾಗಿ ಮಾತಾಡಲು ಬಯಸುತ್ತಾರೆ. ತಮ್ಮಲ್ಲಿನ ವಿಚಾರಗಳನ್ನು ನಿಮ್ಮೊಂದಿಗೆ ಚರ್ಚಿಸಲು ಬಯಸುತ್ತಾರೆ. ಅದಕ್ಕೆ ನಾವುಗಳು ಅವಕಾಶ ನೀಡಬೇಕು. ಮಕ್ಕಳು ತಪ್ಪು ಮಾಡಿದಾಗ ಗದರುವ ನಾವು. ಅವರು ಗೆದ್ದಾಗ ಮುಕ್ತವಾಗಿ ಹೊಗಳಿ ಹುರಿದುಂಬಿಸುವುದನ್ನು ಮರೆಯುತ್ತೇವೆ. ಮಕ್ಕಳಿಗಾಗಿ ಪ್ರತಿಯೊಬ್ಬ ಪಾಲಕರು ಪ್ರತಿದಿನ ಸಮಯ ಮೀಸಲಿಡಬೇಕು. ಅವರೊಂದಿಗೆ ಬೆರೆತು ಹಾಡಿ, ಕುಣಿದು ನಲಿಯಬೇಕು. ಇದರಿಂದ ನಮ್ಮ ಆಂತರಿಕ ಶಕ್ತಿ ಹೆಚ್ಚುವುದರ ಜತೆಗೆ ಮಕ್ಕಳ ಮಾನಸಿಕ ಸ್ಥಿತಿ ಸಮತೋಲನ ಸಾಧಿಸುತ್ತದೆ. ಇಂದಿನ ಮಕ್ಕಳು ಶೈಕ್ಷಣಿಕವಾಗಿ ಅತ್ಯುತ್ತಮ ಪ್ರಗತಿ ಸಾಧಿಸುತ್ತಿದ್ದಾರೆ. ಆದರೆ ದೈಹಿಕವಾಗಿ ದಿನೆದಿನೇ ಕ್ಷೀಣಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಾಲಕರು ನಿಗಾವಹಿಸಬೇಕು ಎಂದರು.
ಮಹಾನ್ ಕಿಡ್ಸ್ ಶಾಲೆಯಲ್ಲಿ ಕಾಂಪ್ಲಿಮೆಂಟರಿ ಟೈಂ ವಿಶೇಷ ಕಾರ್ಯಕ್ರಮದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಲಾಯಿತು. ಮಕ್ಕಳು ಮತ್ತು ಪಾಲಕರನ್ನು ಎದುರು ಕೂಡಿಸಿ ಕೆಲ ನಿಮಿಷಗಳ ಕಾಲ ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕೂಡಿಸಲಾಯಿತು. ನಂತರ ಮಕ್ಕಳ ಕಣ್ಣಿಗೆ ಬಟ್ಟೆ ಕಟ್ಟಿ ಪಾಲಕರಿಂದ ಮಕ್ಕಳಿಗೆ ಅವರ ಧನಾತ್ಮಕ ವಿಷಯಗಳನ್ನು ಕಿವಿಯಲ್ಲಿ ಹೇಳಿ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು. ಮಕ್ಕಳು ಕೂಡ ಪಾಲಕರಿಗೆ ಅವರ ಕುರಿತು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡರು. ನಂತರ ಮಾತನಾಡಿದ ಸಾಕಷ್ಟು ಪಾಲಕರು ಭಾವುಕರಾದರು. ನಾವು ಇವತ್ತು ನಮ್ಮ ಭಾವನೆಗಳನ್ನು ಅರಿತಿದ್ದೇವೆ. ಈ ಬಗ್ಗೆ ನಾವು ಯಾವತ್ತೂ ಗಮನ ಹರಿಸಿದ್ದಿಲ್ಲ. ಇನ್ನು ಮುಂದೆ ಮಕ್ಕಳ ಶೈಕ್ಷಣಿಕ ಪ್ರಗತಿಯ ಜತೆಗೆ ಅವರ ದೈಹಿಕ ಹಾಗೂ ಮಾನಸಿಕ ಪ್ರಗತಿಯತ್ತ ಗಮನ ಹರಿಸುತ್ತೇವೆ ಎಂದರು. ಮಕ್ಕಳು ಹಾಗೂ ಪಾಲಕರ ನಡುವಿನ ಮುಕ್ತ ಸಂವಾದವು ಸಾಕಷ್ಟು ಪಾಲಕರ ಕಣ್ಣು ತೆರಿಸಿತು. ಈ ನಿಟ್ಟಿನಲ್ಲಿ ಶನಿವಾರದಂದು ನಡೆದ ಕಾಂಪ್ಲಿಮೆಂಟರಿ ಟೈಂ ವಿಶೇಷ ಕಾರ್ಯಕ್ರಮ ಪಾಲಕರ ಪ್ರಶಂಸೆಗೆ ಪಾತ್ರವಾಯಿತು.