ರೈಲು ನಿಲ್ದಾಣಕ್ಕೆ ಕುಮಾರರಾಮನ ಹೆಸರಿಡಲು ಪ್ರಗತಿಪರರ ಒತ್ತಾಯ ಸರ್ವರನ್ನು ಪರಿಗಣಿಸಿ ಒಮ್ಮತದ ನಿರ್ಧಾರ : ಸಂಸದ ಹಿಟ್ನಾಳ
ಕೊಪ್ಪಳ: ಇಲ್ಲಿನ ಮುಖ್ಯ ರೈಲು ನಿಲ್ದಾಣಕ್ಕೆ ಐತಿಹಾಸಿಕ ವೀರಪುರರುಷ, ಪರನಾರಿ ಸಹೋದರ, ಗಂಡುಗಲಿ ಕುಮಾರರಾಮನ ಹೆಸರಿಡಲು ಪ್ರಗತಿಪರರ ಒಕ್ಕೂಟ ಒತ್ತಾಯಿಸಿ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದರು,.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮನವಿ ಸಲ್ಲಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಿಂತಕ, ಪ್ರೊ. ಅಲ್ಲಮಪ್ರಭು ಬೆಟ್ಟದೂರ ಅವರು, ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಕನ್ನಡವನ್ನು ಕಟ್ಟಿದ ಹೆಗ್ಗಳಿಕೆ ಇರುವ ಮತ್ತು ವಿಜಯನಗರ ಸಾಮ್ರಾಜ್ಯವನ್ನು ಕಟ್ಟುವ ಕುರಿತು ಕನಸು ಕಂಡು ಮತ್ತು ಅದಕ್ಕೆ ಬಲತಂದಿದ್ದ ಕುಮಾರರಾಮನ ಇತಿಹಾಸ ೧೩ನೇ ಶತಮಾನಕ್ಕೆ ಹೋಗುತ್ತದೆ. ಒಬ್ಬ ರಾಜ ದೇವರಾಗಿದ್ದು ಇತಿಹಾಸದಲ್ಲಿ ಎಲ್ಲಿಯಾದರೂ ಇದ್ದಿದ್ದರೆ ಅದು ಕೇವಲ ಜಬ್ಬಲಗುಡ್ಡದ ಕುಮ್ಮಟದುರ್ಗದ ದೊರೆ ಕುಮಾರರಾಮ ಮಾತ್ರ, ಅದಕ್ಕೂ ಮಿಗಿಲಾಗಿ ಆತ ಪರನಾರಿ ಸಹೋದರ ಬಿರುದಾಂಕಿತನಾಗಿದ್ದು, ಇಡೀ ಮಹಿಳಾ ಕುಲಕ್ಕೆ ಆತ ಆದರ್ಶ, ರಾಜ ಮತ್ತು ರಾಜರ ಆಳ್ವಿಕೆಗೂ ಸಹಿತ ಆತ ಆದರ್ಶನಾಗಿದ್ದಾನೆ, ಆದ್ದರಿಂದ ಆತನ ಹೆಸರನ್ನು ಇಡುವದು ಅತ್ಯಂತ ಸೂಕ್ತ ಮತ್ತು ನಿಜವಾದ ನ್ಯಾಯವನ್ನು ಕೊಟ್ಟಂತಾಗುತ್ತದೆ ಎಂದರು.
ಹೋರಾಟಗಾರರು, ಪತ್ರಕರ್ತರು ಆದ ಬಸವರಾಜ ಶೀಲವಂತರ ಮಾತನಾಡಿ, ಪ್ರಸ್ತುತ ಎರಡು ಹೆಸರುಗಳು ಚಾಲ್ತಿಯಲ್ಲಿದ್ದು, ಅಶೋಕ ವಿಶ್ವಮಾನ್ಯನಾಗಿದ್ದು ಬೇರೆ ಕಡೆಗೆ ಆತನ ಹೆಸರನ್ನು ಇಡಲು ಅವಕಾಶಗಳಿವೆ, ಆದರೆ ಎಂದೂ ಮರೆಯದ ಅದ್ಭುತ ಕೆಲಸಗಳನ್ನು ಮಾಡಿದ, ಕನ್ನಡದ ಕಡುಗಲಿಯಾದ ಕುಮಾರ ರಾಮನ ಹೆಸರನ್ನೇ ಇಡಬೇಕು, ಇಲ್ಲವಾದರೆ ನಮ್ಮ ಹೋರಾಟ ನಿರಂತರವಾಗಿರಲಿದೆ ಜೊತೆಗೆ ಬೇರೆ ಯಾವುದೇ ಹೆಸರಿಟ್ಟರೂ ನಮ್ಮ ತಕರಾರಿದೆ ಎಂದರು.
ಪ್ರಗತಿಪರ ಮುಖಂಡರಾದ ಮಹಾಂತೇಶ ಕೊತಬಾಳ ಮತ್ತು ರತ್ನಾಕರ ತಳವಾರ ಮಾತನಾಡಿ, ಗಂಡುಗಲಿ ಕುಮಾರರಾಮ ವಾಲ್ಮೀಕಿ ಆದರೂ ಸಹ ಆತ ಸರ್ವಮಾನ್ಯ ರಾಜನಾಗಿ ಕುಮ್ಮಟದುರ್ಗವನ್ನು ಕಟ್ಟಿ ಆಳಿದ, ದೆಹಲಿ ಸುಲ್ತಾನರ ಮೂರು ದಾಳಿಗೂ ಜಗ್ಗದ ಧೀರನಾಗಿದ್ದ ಕನ್ನಡಗಿನಾದ್ದರಿಂದ ಆತನ ಶೌರ್ಯ ಪರಾಕ್ರಮಗಳನ್ನು ಉಳಿಸಲು ಈ ಕೆಲಸ ಅಗತ್ಯವಾಗಿದೆ, ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದರೂ ಆತ ಎಲ್ಲಿಯೂ ಜಾತಿಗೆ ಅಂಟಿಕೊಳ್ಳಲಿಲ್ಲ ಮತ್ತು ಆತ ಆರಂಭಿಸಿದ ಜಂಬೂ ಸವಾರಿ ಮತ್ತು ಮೈಸೂರು ಅರಮನೆಯ ರತ್ನಖಚಿತ ಅಂಬಾರಿಗಳು ಆತ ಸಾಂಸ್ಕೃತಿಕ ನಾಯಕ ಎಂದು ಸಾರಿ ಸಾರಿ ಹೇಳುತ್ತವೆ ಎಂದರು.
ಗಂಡುಗಲಿ ಕುಮಾರರಾಮನ ಜಾನಪದ ಕಾವ್ಯಗಳು ಕೃತಿ, ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ರಾಜಶೇಖರ ಹಿಟ್ನಾಳ ಅವರು, ಸರ್ವರ ಅಭಿಪ್ರಾಯ ಪಡೆದು ಒಮ್ಮತದಿಂದ ಒಂದೇ ಹೆಸರನ್ನು ರಾಜ್ಯ ಸರಕಾರದ ಮೂಲಕ ಕೇಂದ್ರಕ್ಕೆ ಕಳಿಸುವ ಹಾಗೆ ಮಾಡಬೇಕು, ಇದೊಂದು ಸಂಕೀರ್ಣ ಕೆಲಸ, ಸುಧೀರ್ಘ ಪತ್ರವ್ಯವಹಾರಗಳನ್ನು ಹೊಂದಿರುವ ಕ್ರಿಯೆಯಾಗಿದೆ ಎಂದರು. ಈಗಾಗಲೇ ಬೇರೆ ಬೇರೆ ಹೆರುಗಳು ಪ್ರಸ್ತಾಪವಾಗಿದ್ದು, ಶೀಘ್ರವೇ ಒಮ್ಮತದ ನಿರ್ಧಾರ ಮಾಡೋಣ ಎಂದರು.
ರೈಲ್ವೆ ಜನಪರ ಹೋರಾಟ ಸಮಿತಿ ಅಧ್ಯಕ್ಷರಾದ ಎಸ್. ಎ. ಗಫಾರ ಸರ್ವ ಜಾತಿ ಧರ್ಮದವರು ಕೂಡಿ ಬಾಳುವ ಈ ನಾಡಲ್ಲಿ ಕುಮಾರರಾಮ ನಿಜಕ್ಕೂ ಪ್ರಸ್ತುತ, ಆತನ ಹೆಸರೇ ಅಂತಿಮವಾಗಬೇಕು ಎಂದರು. ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲಾನವರ, ದಲಿತ ನಾಯಕ ಸುಕರಾಜ ತಾಳಕೇರಿ, ಮುಖಂಡರುಗಳಾದ ಅಂದಾನಪ್ಪ ಬೆಣಕಲ್, ಕೆ. ಬಿ. ಗೋನಾಳ, ಜ್ಯೋತಿ ಎಂ. ಗೊಂಡಬಾಳ, ನಿಂಗು ಜಿ. ಎಸ್. ಬೆಣಕಲ್, ಎಸ್. ಮಹದೇವಪ್ಪ (ಎನ್‌ಸಿಎಲ್), ಶಾಂತಯ್ಯ ಅಂಗಡಿ, ನಾಗರಾಜನಾಯಕ ಡಿ. ಡೊಳ್ಳಿನ, ದ್ಯಾಮಣ್ಣ ಪೂಜಾರ, ಶೇಖರ ಇಂದ್ರಿಗಿ ಗಿಣಗೇರಾ, ಮುತ್ತು ಪೂಜಾರ ಗಿಣಗೇರಾ, ಸಂಜಯದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿಮಠ, ಗಾಳೆಪ್ಪ ಮುಂಗೊಲಿ, ಮಖಬೂಲ್ ರಾಯಚೂರು, ಶಿವಪ್ಪ ಹಡಪದ, ಪ್ರಕಾಶ್ ಮೇದಾರ ಇತರರು ಇದ್ದರು.