ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಡಿ ನೋಂದಾಯಿಸಿ: ದಸಗೀರ ಅಲಿ

Get real time updates directly on you device, subscribe now.

2024-25 ನೇ ಸಾಲಿನ ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಡಿ ನೋಂದಾಯಿಸುವಂತೆ ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ದಸಗೀರ ಅಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯು ಶಸ್ತ್ರಚಿಕಿತ್ಸಾ ಯೋಜನೆಯಾಗಿದ್ದು, ಈ ಯೋಜನೆಯಡಿ 2024-2025 ನೇ ಸಾಲಿಗೆ ನೋಂದಾಯಿಸಲು ಸರ್ಕಾರವು ಆದೇಶ ಹೊರಡಿಸಿದೆ. ಕರ್ನಾಟಕ ಸೌಹಾರ್ದ ಸಹಕಾರಿ, ಕರ್ನಾಟಕ ಸಹಕಾರ ಸಂಘದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಸಂಘಟಿಸಲ್ಪಟ್ಟಿರುವ ಎಲ್ಲಾ ಗ್ರಾಮೀಣ ಸ್ವ-ಸಹಾಯ ಗುಂಪುಗಳ ಸದಸ್ಯರು, ಸಹಕಾರಿ ಮೀನುಗಾರರು, ಮತ್ತು ಸಹಕಾರಿ ನೇಕಾರರು ಕೂಡ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಗ್ರಾಮೀಣ ಸಹಕಾರ ಸಂಘಗಳ ಕುಟುಂಬ ಸದಸ್ಯರ ಗರಿಷ್ಠ ನಾಲ್ಕು ಒಂದಕ್ಕೆ ವಾರ್ಷಿಕ ವಂತಿಗೆ ರೂ.500 ಗಳು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ.20ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ರೂ.100 ಗಳನ್ನು ಪಾವತಿಸಬೇಕು.
ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ವಂತಿಗೆ ರೂ.1000 ಗಳು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ.20 ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ರೂ.200 ಗಳನ್ನು ಪಾವತಿಸಬೇಕು.
ಸಹಕಾರ ಸಂಘಗಳಲ್ಲಿ ಕನಿಷ್ಠ ಮೂರು ವರ್ಷ ಸೇವೆ ಪೂರ್ಣಗೊಳಿಸಿ ಮಾಸಿಕ ರೂ. 30,000 ಮತ್ತು ಅದಕ್ಕಿಂತ ಕಡಿಮೆ ಒಟ್ಟು ವೇತನ ಪಡೆಯುತ್ತಿರುವ ನೌಕರರು ಮತ್ತು ಅವರ ಅರ್ಹ ಕುಟುಂಬ ಸದಸ್ಯರಯ ನಿಗದಿತ ವಾರ್ಷಿಕ ವಂತಿಗೆಯನ್ನು ಪಾವತಿಸಿ ಯಶಸ್ವಿನಿ ಯೋಜನೆಯಡಿಯಲ್ಲಿ ಸದಸ್ಯರಾಗಲು ಅರ್ಹರಿರುತ್ತಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರಿಗೆ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.
ಸಹಕಾರ ಸಂಘಗಳಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಸದಸ್ಯನಾಗಿ ಒಂದು ತಿಂಗಳು ಗತಿಸಿದ್ದಲ್ಲಿ ಈ ಯೋಜನೆಯಡಿಯಲ್ಲಿ ನೋಂದಾಯಿಸಬಹುದಾಗಿದೆ ಹಾಗೂ ವಯೋಮಿತಿಯ ನಿರ್ಬಂಧವಿರುವುದಿಲ್ಲ. ಈ ಯೋಜನೆಯಡಿ ಯಶಸ್ವಿನಿ ಸದಸ್ಯರುಗಳನ್ನು ನೋಂದಾಯಿಸುವ ಪ್ರಾರಂಭದ ಡಿಸೆಂಬರ್ 1 ರಿಂದ ಡಿ.31 ರವರೆಗೆ ನೋಂದಾಯಿಸಬೇಕು. ಈ ಯೋಜನೆಯು 2025ರ ಏಪ್ರಿಲ್ 1 ರಿಂದ 2026ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಎಲ್ಲಾ ವಿವಿಧ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿ ಸಂಘಗಳ ಮತ್ತು ಸಹಕಾರ ಇಲಾಖಾ ಕಛೇರಿಗಳನ್ನು ಖುದ್ದಾಗಿ ಅಥವಾ ಕೊಪ್ಪಳ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ದೂ.ಸಂ: 08539-221109 ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ದೂ.ಸಂ: 08839-221601 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!