ಕಾರ್ಮಿಕರಿಗೆ ವಿವಿಧ ಯೋಜನೆಗಳ ಅರಿವು ಕಾರ್ಯಾಗಾರ

Get real time updates directly on you device, subscribe now.

ಕೊಪ್ಪಳ ): ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರಿಗೆ ಮತ್ತು ಕಾರ್ಮಿಕ ಸಂಘಟನೆಗಳಿಗೆ ನೂತನ ತಂತ್ರಾಂಶದ ಮೂಲಕ ಇ-ಕಾರ್ಡ್ ಜನರೇಷನ್, ನೋಂದಣಿ, ನವೀಕರಣ, ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಿಕೆ, ಎಸ್.ಎಸ್.ಪಿ. ಪೋರ್ಟಲ್ ಮೂಲಕ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಿಕೆ, ಮಂಡಳಿಯ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತು ಕೊಪ್ಪಳ ಜಿಲ್ಲೆಯ ನಿರ್ಮಿತಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಾಗಾರದ ಮೂಲಕ ಅರಿವು ಮೂಡಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್ ದರಗದ ಅವರು ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಮಾಲೀಕರು ಮತ್ತು ಕಾರ್ಮಿಕರ ಮಧ್ಯ ಪೂರಕವಾದ ಭಾವನೆಗಳಿರಬೇಕು. ಇಬ್ಬರಲ್ಲೂ ಪಾಲನೆಯ ಮನವಿರಬೇಕು, ಆಗ ಮಾತ್ರ ಕೆಲಸಗಳು ಚೆನ್ನಾಗಿ ನಡೆಯುತ್ತವೆ. ಕಾರ್ಮಿಕರಿಗಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಅರ್ಹ ಎಲ್ಲಾ ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಚಿ. ಗರಗ ಅವರು ಮಾತನಾಡಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 2,02,513 ಜನ ಫಲಾನುಭವಿಗಳು ನೋಂದಣಿಯಾಗಿರುತ್ತಾರೆ. ಈ ಕಾರ್ಮಿಕರಿಗೆ ಇಲ್ಲಿಯವರೆಗೂ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, 6226 ಫಲಾನುಭವಿಗಳಿಗೆ ಒಟ್ಟು 32,72,30,000 ರೂ.ಮೊತ್ತದಲ್ಲಿ ಮದುವೆ ಧನಸಹಾಯ ನೀಡಲಾಗಿದೆ.  13 ಜನ ಫಲಾನುಭವಿಗಳಿಗೆ ಒಟ್ಟು 51,573 ರೂ.ಗಳಲ್ಲಿ ಸಾಮಾನ್ಯ ವೈದ್ಯಕೀಯ, 285 ಜನರಿಗೆ ಒಟ್ಟು 70,54,524 ರೂ.ಗಳಲ್ಲಿ ಪ್ರಮುಖ ವೈದ್ಯಕೀಯ ಧನಸಹಾಯ, 1203 ಫಲಾನುಭವಿಗಳಿಗೆ ಒಟ್ಟು 3,45,62,000 ರೂ.ಮೊತ್ತದಲ್ಲಿ ಹೆರಿಗೆ ಧನಸಹಾಯ ನೀಡಲಾಗಿದ್ದು, 158 ಫಲಾನುಭವಿಗಳಿಗೆ ಒಟ್ಟು 9,48,000 ರೂ.ಗಳಲ್ಲಿ ತಾಯಿ ಮಗು ಸಹಾಯ ಹಸ್ತ ಸೌಲಭ್ಯವನ್ನು ಪಡೆದಿರುತ್ತಾರೆ ಎಂದು ತಿಳಿಸಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಎಕ್ಸಿಕ್ಯೂಟಿವ್ ಹೇಮಂತ್ ಅವರು ನೂತನ ತಂತ್ರಾಂಶದ ಮೂಲಕ ಇ-ಕಾರ್ಡ್ ಜನರೇಷನ್, ನೋಂದಣಿ, ನವೀಕರಣ, ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಿಕೆ, ಎಸ್.ಎಸ್.ಪಿ. ಪೋರ್ಟಲ್ ಮೂಲಕ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಿಕೆ, ಮಂಡಳಿಯ ವಿವಿಧ ಯೋಜನೆಗಳ ಬಗೆಗೆ ಸವಿಸ್ತಾರವಾಗಿ ವಿವರಣೆ ನೀಡಿದರು.
ಕಾರ್ಯಾಗಾರದಲ್ಲಿ ಕೊಪ್ಪಳ ವಿಭಾಗದ ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ ತಳವಾರ, ಕುಷ್ಟಗಿ ವಿಭಾಗದ ಕಾರ್ಮಿಕ ನಿರೀಕ್ಷಕಿ ನಿವೇದಿತಾ, ಗಂಗಾವತಿ ವಿಭಾಗದ ಕಾರ್ಮಿಕ ನಿರೀಕ್ಷಕ ಅಶೋಕ ಸೇರಿದಂತೆ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರು, ಕಾರ್ಮಿಕ ಇಲಾಖೆ ಸಿಬ್ಬಂದಿ ಹಾಗೂ ಮತ್ತಿತರರಿದ್ದರು.
****

Get real time updates directly on you device, subscribe now.

Comments are closed.

error: Content is protected !!