ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಒಂದು ಗಂಟೆ ಕಾಲ “ಮೇಷ್ಟ್ರು”

Get real time updates directly on you device, subscribe now.

ಬೆಂಗಳೂರು ಡಿ3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಒಂದು ಗಂಟೆ ಕಾಲ “ಮೇಷ್ಟ್ರು” ಆಗಿ ಕಾರ್ಯ ನಿರ್ವಹಿಸಿದರು.

ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳು ಸಂವಿಧಾನದ ಬಗ್ಗೆ ಪಾಠ ಮಾಡಿದರು.

ಮುಖ್ಯಮಂತ್ರಿಗಳ ಪಾಠವನ್ನು ತದೇಕಚಿತ್ತದಿಂದ ಆಲಿಸಿದ ವಿದ್ಯಾರ್ಥಿಗಳು, ಹಲವಾರು ಪ್ರಶ್ನೆಗಳ ಮೂಲಕ ಸಂವಿಧಾನದ ಬಗ್ಗೆ ಇನ್ನಷ್ಟು ತಿಳಿದುಕೊಂಡರು.

ಸಂವಿಧಾನ ಓದು ಅಭಿಯಾನದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸಿಎಂ ಪಾಠ ಮಾಡುವ ಮೂಲಕ ಗಮನ ಸೆಳೆದರು.

ಮುಖ್ಯಮಂತ್ರಿಗಳ ಪಾಠದ ಸಾರಾಂಶ…

ಸಂವಿಧಾನದ ಶ್ರೇಷ್ಠತೆ ಮತ್ತು ವಿಫಲತೆ ಅದು ಯಾರ ಕೈಯಲ್ಲಿದೆ ಎನ್ನುವವರ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಮತ್ತು ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸಿ ಪಾಠ ಮುಂದುವರೆಸಿದರು.

ಸಂವಿಧಾನದ ಬಗ್ಗೆ ಗೌರವ ಇಲ್ಲದವರ ಕೈಗೆ ಹೋದರೆ, ಎಷ್ಟೇ ಒಳ್ಳೆ ಸಂವಿಧಾನ ಆದರೂ ಪರಿಣಾಮ ಕೆಟ್ಟದಾಗಿರುತ್ತದೆ ಎಂದರು.

ಸಂವಿಧಾನದ ಪೀಠಿಕೆಯಲ್ಲೇ ಇಡೀ ಸಂವಿಧಾನದ ಸಾರಾಂಶ ಇದೆ. ಜಾತ್ಯತೀತತೆ, ಸಾಮಾಜಿಕ ನ್ಯಾಯ ಎರಡೂ ಮೂಲ ಸಂವಿಧನದಲ್ಲಿ ಇರಲಿಲ್ಲ. ಬಳಿಕ ಸೇರ್ಪಡೆಯಾಯಿತು. ಇದನ್ನು ತೆಗೆಯಬೇಕು ಎಂದು ಕೆಲವರು ಸುಪ್ರೀಂಕೋರ್ಟ್ ಗೆ ಹೋಗಿದ್ದರು. ಆದರೆ ಸುಪ್ರೀಂಕೋರ್ಟ್ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಿತು ಎಂದರು.

ಭಾರತ ಬಹುತ್ವದ ದೇಶ. ಎಲ್ಲಾ ಜಾತಿ, ಧರ್ಮದವರಿಗೆ ಸಮಾನವಾಗಿ ನಡೆಸಿಕೊಳ್ಳುವುದು ನಮ್ಮ ದೇಶದ ಗುಣ. ಇದೇ ಸಂವಿಧಾನದ ಮೌಲ್ಯ ಎಂದರು.

ಭಾರತದಲ್ಲಿ ಅಸಮಾನತೆ ಸೃಷ್ಟಿಯಾಗಿದ್ದು ಜಾತಿ ವ್ಯವಸ್ಥೆಯಿಂದ. ಜಾತಿ ಆಧಾರದ ಮೇಲೆ ಒಬ್ಬರ ಯೋಗ್ಯತೆ ಅಳೆಯುವುದು ಅನಾಗರಿಕತನ.

ವಿದ್ಯೆ ಮತ್ತು ಸಂಪತ್ತು ಗಳಿಸುವ ಅವಕಾಶ ಶೂದ್ರರಿಗೆ ಮತ್ತು ಮಹಿಳೆಯರಿಗೆ ಇರಲಿಲ್ಲ. ಹೀಗಾಗಿ ಅಸಮಾನತೆ ಸೃಷ್ಟಿಯಾಯಿತು. ಅಪ್ಪ ಅಮ್ಮ ವಿದ್ಯಾವಂತರಾದರೆ ಮಾತ್ರ ಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡುತ್ತಾರೆ ಎನ್ನುತ್ತಾ ತಾವು ವಿದ್ಯಾಭ್ಯಾಸದಿಂದ ವಂಚಿತರಾಗಿ ಬಳಿಕ ವಿದ್ಯೆ ಕಲಿತು ವಕೀಲರಾದ ಪ್ರಸಂಗವನ್ನು ವಿವರಿಸಿದರು.

ನಮ್ಮ ಸಂವಿಧಾನದ ಹಕ್ಕುಗಳು ಏನೇನು ಅಂತ ಗೊತ್ತಿದ್ದರೆ ಮಾತ್ರ ಅವನ್ನು ಪಡೆದುಕೊಳ್ಳಬಹುದು. ಏಳು ಸ್ವಾತಂತ್ರ್ಯಗಳನ್ನು ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ. ಇದನ್ನೆಲ್ಲಾ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಹೀಗಾಗಿ ಸಂವಿಧಾನ ಓದು ಅಭಿಯಾನವನ್ನು ರಾಜ್ಯಾದ್ಯಂತ ಆರಂಭಿಸಲಾಯಿತು ಎಂದರು. ಸಂವಿಧಾನದ ಧ್ಯೇಯೋದ್ದೇಶ ಮತ್ತು ಆಶಯಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.

ಸಂವಿಧಾನ ದ್ರೋಹಿಗಳು ಸಮಾಜ ದ್ರೋಹಿಗಳು, ಜನ ವಿರೋಧಿಗಳೂ ಕೂಡ ಹೌದು. ಜಾತಿ, ಧರ್ಮದ ಹೆಸರಲ್ಲಿ ಒಬ್ಬರನ್ನು ಅಗೌರವದಿಂದ ಕಾಣುವುದು, ಮತ್ತೊಬ್ಬರು ಸಂವಿಧನೇತರ ಗೌರವ ನಿರೀಕ್ಷಿಸುವುದು ತಪ್ಪು ಎಂದರು.

ಬಸವಣ್ಣನವರು 850 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆ ಮತ್ತು ಕರ್ಮಸಿದ್ದಾಂತವನ್ನು ಧಿಕ್ಕರಿಸಿದ್ದಾರೆ. ಆದರೆ, ಇವತ್ತಿಗೂ ಇದು ಪೂರ್ತಿ ಹೋಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನದಲ್ಲಿ ಕಂದಾಚಾರಗಳಿಗೆ ಅವಕಾಶವಿಲ್ಲ. ಒಂದು ಜಾತಿ, ಒಂದು ಧರ್ಮಕ್ಕೆ ಮಾತ್ರ ಈ ದೇಶ ಸೀಮಿತವಲ್ಲ ಎಂದರು.

Get real time updates directly on you device, subscribe now.

Comments are closed.

error: Content is protected !!