ಅಭಿವೃದ್ದಿ ಕಾರ್ಯಗಳು ಪಕ್ಷಾತೀತವಾಗಿ ನಡೆಯಲಿ – ಸಂಸದ ರಾಜಶೇಖರ ಹಿಟ್ನಾಳ ಹೇಳಿಕೆ

Get real time updates directly on you device, subscribe now.

 ಮಾದರಿ ಗ್ರಾಮ ನಿರ್ಮಾಣಕ್ಕೆ ಪ್ರಮಾಣಿಕ ಪ್ರಯತ್ನ
ಕೊಪ್ಪಳ:
ಮಹಾತ್ಮ ಗಾಂಧಿಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಗ್ರಾಮಗಳು ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಗ್ರಾಮಗಳು ಅಭಿವೃದ್ದಿಯಾಗಬೇಕಾದರೆ ಗ್ರಾಮಗಳಲ್ಲಿ ನಡೆಯುವ ಅಭಿವೃದ್ದಿ ಕಾರ್ಯಗಳು ಪಕ್ಷಾತೀತವಾಗಿ ಮತ್ತು ಗುಣಮಟ್ಟದಲ್ಲಿ ನಡೆಯಲು ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಸಂಸದ ಕೆ. ರಾಜಶೇಖರ ಹಿಟ್ನಾಳ ಹೇಳಿದರು.

ತಾಲೂಕಿನ ಮೋರನಹಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕಾ ಪಂಚಾಯಿತಿ, ಗ್ರಾಮ ಪಂಚಾಯತ ಬೆಟಗೇರಿ ವತಿಯಿಂದ ಶನಿವಾರ ಹಮ್ಮಿಕೊಂಡ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ದಿ ಯೋಜನೆ (ನರೇಗಾ)ದಡಿ ಮೋರನಹಳ್ಳಿ ಗ್ರಾಮದ ದತ್ತು ಗ್ರಾಮ ಘೋಷಣೆ ಕಾರ್ಯಕ್ರಮದ ಅಂಗವಾಗಿ ನಡೆದ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನರ ಆರ್ಥಿಕ ಅಭಿವೃದ್ದಿ ಜೊತೆಗೆ ಸಮುದಾಯದ ಅಭಿವೃದ್ದಿ ಕಾರ್ಯಗಳು ನಡೆದಿವೆ. ಗ್ರಾಮೀಣ ಭಾಗಕ್ಕೆ ಇನ್ನು ಹೆಚ್ಚು ಒತ್ತು ನೀಡಿ ಲೋಕಸಭಾ ವ್ಯಾಪ್ತಿಯ ಎರಡು ಗ್ರಾಮಗಳ ಸಮಗ್ರ ಅಭಿವೃದ್ದಿಗೊಳಿಸಿ ಮಾದರಿ ಗ್ರಾಮವನ್ನು ಮಾಡುವ ಉದ್ದೇಶದಿಂದ ಮೋರನಹಳ್ಳಿ ಗ್ರಾಮವನ್ನು ಸಮಗ್ರ ಅಭಿವೃದ್ದಿಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಮಗಾರಿಗಳನ್ನು ನಡೆಸಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು. ದತ್ತು ಗ್ರಾಮ ಯೋಜನೆ ಯಶಸ್ವಿಯಾದಲ್ಲಿ ಪ್ರತಿ ವಿಧಾನ ಸಭೆ ಕ್ಷೇತ್ರ ೫ ಗ್ರಾಮಗಳನ್ನು ದತ್ತು ಪಡೆದು ಪತ್ರಿ ವರ್ಷ ಅಭಿವೃದ್ದಿ ಪಡಿಸುವ ಯೋಚನೆ ಇದೆ. ಕಾರಣ ಗ್ರಾಮಸ್ಥರು ಈ ಯೋಜನೆಗೆ ಸಹಕರಿಸಿ ಎಂದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೆಶಕ ಪ್ರಕಾಶ ವಡ್ಡರ ಮಾತನಾಡಿ, ಭಾರತ ದೇಶ ಹಳ್ಳಿಗಳ ದೇಶ, ಇವುಗಳ ಅಭಿವೃದ್ದಿಯಲ್ಲಿ ನರೇಗಾ ಯೋಜನೆ ಬಹು ಮುಖ್ಯ ಪಾತ್ರ ವಹಿಸಿದೆ. ಕಳೆದ ತಿಂಗಳು ನಡೆದ ದಿಶಾ ಸಮಿತಿ ಸಭೆಯ ಆಶಯದಂತೆ ಎರಡು ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ನರೇಗಾ, ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಸಂಸದರ, ಶಾಶಕರ ಅನುದಾನದಲ್ಲಿ ಅಭಿವೃದ್ದಿ ಮಾಡಲಾಗುವುದು. ಮೋರನಹಳ್ಳಿ ದತ್ತು ಗ್ರಾಮವಾಗಿ ಸ್ವೀಕರಿಸಿ ಸಮಗ್ರ ಅಭಿವೃದ್ದಿ ಮಾಡಲಾಗುವದು. ಒಟ್ಟು ೫.೧೩ ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಹಾಗೂ ವೈಯಕ್ತಿಕ, ಸಮುದಾಯ ಕಾಮಗಾರಿ ಕೈಕೊಳ್ಳಲಾಗುವದು. ಜಿಲ್ಲೆಯಲ್ಲಿ ಒಟ್ಟು ೨ ಲಕ್ಷ ೧೯ ಸಾವಿರ ಕುಟುಂಬಗಳು ನರೇಗಾ ಯೋಜನೆಯ ಲಾಭ ಪಡೆಯುತ್ತಿದ್ದು ಇದರಡಿ ೩ ಲಕ್ಷ ೯ ಸಾವಿರ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ನರೇಗಾ ಯೋಜನೆಯಡಿ ೨೭ ಸಾವಿರ ಸಮುದಾಯ ಕಾಮಗಾರಿ ಹಾಗೂ ೩೭ ಸಾವಿರ ವೈಯಕ್ತಿಕ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಸಿದ್ದೇಶ್ವರ ಮಠದ ಮರುಳಾರಾದ್ಯ ಶಿವಾಚಾರ್ಯ ಸ್ವಾಮೀಜಿ , ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಜಿ ಉಪನಿರ್ದೆಶಕ ಮಲ್ಲೇಶಪ್ಪ ಹೊರಪೇಟಿ ಮಾತನಾಡಿದರು. ಇದಕ್ಕೂ ಮೊದಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಷ್ಪ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ಕಳಸ, ಹಾಗೂ ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ನಂತರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ತಹಶೀಲ್ದಾರ ವಿಠ್ಠಲ ಚೌಗಲೆ, ತಾಪಂ ಇಓ ದುಂಡೇಶ ತುರಾದಿ, ಬಿಇಓ ಶಂಕರಯ್ಯ, ದಿಶಾ ಸಮಿತಿಯ ದೊಡ್ಡಬಸನಗೌಡ ಬಯ್ಯಾಪುರ, ಸರಸ್ವತಿ, ಗ್ರಾಪಂ ಅಧ್ಯಕ್ಷ ದುರಗಪ್ಪ ಭಜಂತ್ರಿ, ಪ್ರಮುಖರಾದ ವೆಂಕನಗೌಡ ಹಿರೇ ಗೌಡ್ರು, ಭರಮಪ್ಪ ನಗರ, ಗಾಳೆಪ್ಪ ಪೂಜಾರ, ಅಂದಪ್ಪ, ದೇವಪ್ಪ, ಭರಮಪ್ಪ, ರೋಹಿಣ , ಶರಣಪ್ಪ, ಯಂಕಣ್ಣ, ಲಲಿತಾ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಇತರರು ಇದ್ದರು.

 

Get real time updates directly on you device, subscribe now.

Comments are closed.

error: Content is protected !!