ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ರೈತರು ಅರ್ಜಿ ಸಲ್ಲಿಸಿ
“ಕರ್ನಾಟಕ ರೈತ ಸಮೃದ್ಧಿ ಯೋಜನೆ” ಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿ ಅನುಷ್ಟಾನಗೊಳಿಸಲು ಮಾರ್ಗಸೂಚಿಯನ್ವಯ ಸರ್ಕಾರವು ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದ್ದು, ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸಲು ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿಯನ್ನು ಉತ್ತೇಜಿಸಲು “ಕರ್ನಾಟಕ ರೈತ ಸಮೃದ್ಧಿ ಯೋಜನೆ”ಯನ್ನು ಅನುಷ್ಟಾನಗೊಳಿಸಲು ಯೋಜಿಸಲಾಗಿದೆ. ಕೃಷಿ ಭಾಗ್ಯ ಫಲಾನುಭವಿಗಳನ್ನು ಕೇಂದ್ರ ಬಿಂದುವಾಗಿರಿಸಿಕೊಂಡು ಚಾಲ್ತಿ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಉತ್ತೇಜಿಸುವುದರ ಜೊತೆಗೆ ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕಾಗಿಸುವುದು ಹಾಗೂ ಸದರಿ ರೈತರನ್ನು “ಮಾದರಿ ಸಮೃದ್ಧ ರೈತರನ್ನಾಗಿ” ರೂಪಿಸುವುದು ಈ ಯೋಜನೆಯ ಮುಖ್ಯ ದ್ಯೇಯವಾಗಿರುತ್ತದೆ.
“ಸಮಗ್ರ ಕೃಷಿ ಪದ್ಧತಿ” ಘಟಕದಡಿ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು, 2023-24ನೇ ಸಾಲಿನ ಕೃಷಿಭಾಗ್ಯ ಯೋಜನೆಯ ಫಲಾನುಭವಿಗಳಲ್ಲಿ ಸುಸ್ಥಿತಿಯಲ್ಲಿರುವ ಘಟಕಗಳಿರುವ ಯಾವುದೇ ಆಸಕ್ತರು 2024ರ ಡಿಸೆಂಬರ್ 10ರೊಳಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಜಿಲ್ಲೆಯ 2023-24ನೇ ಸಾಲಿನ ಕೃಷಿಭಾಗ್ಯ ಯೋಜನೆಯ ರೈತ ಬಾಂಧವರು ಈ ಕಾರ್ಯಕ್ರಮದಡಿ ನೋಂದಣಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಯನ್ನು ಪಡೆಯಲು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಿಂದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.