ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರಿಂದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ

Get real time updates directly on you device, subscribe now.

  • ಕೊಪ್ಪಳ ):ಸರ್ಕಾರದ ವಿವಿಧ ಯೋಜನೆಗಳ ಲಾಭವು ಜನತೆಗೆ ತಲುಪುವ ನಿಟ್ಟಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಬೇಕು ಎಂದು ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಗಳು ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಜುಲೈ 28ರಂದು ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಮಟ್ಟದ ಅಧಿಕಾರಿಗಳು ಜಿಲ್ಲಾ ಮಟ್ಟಕ್ಕೆ ಸೀಮಿತವಾಗದೇ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸಹ ಸಂಚಾರ ನಡೆಸಿ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ಸ್ಪಂದನೆ ನೀಡಬೇಕು. ಆಯಾ ಇಲಾಖೆಗಳಿಂದ ಸಾರ್ವಜನಿಕರಿಗೆ ನೀಡಲಾಗುವ ಸೇವೆಗಳು, ಯೋಜನೆ ಮತ್ತು ಇತರೆ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಬೆಳೆಗಳಿಗೆ ಬೇಕಾಗುವ ರಸಗೊಬ್ಬರವನ್ನು ರೈತರ ಬೇಡಿಕೆಯಂತೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ನಿರಂತರ ಮಳೆ ಸುರಿದ ಪರಿಣಾಮ ಬೆಳೆಗಳಲ್ಲಿ ಕಂಡುಬರುವ ರೋಗಗಳ ನಿಯಂತ್ರಣ, ಹತೋಟಿ ಕ್ರಮಗಳ ಕುರಿತು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಸೂಕ್ತ ಜಾಗೃತಿ ಮೂಡಿಸಬೇಕು. ಪ್ರಸ್ತುತ ಜಾನುವಾರುಗಳಲ್ಲಿ ಕಂಡುಬರುವ ಕಾಲು-ಬಾಯಿ ರೋಗ ಹಾಗೂ ಇತರೆ ಕಾಯಿಲೆಗಳ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಕುರಿ, ಮೇಕೆ, ದನಕರುಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಲಸಿಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ಕೃಷಿ ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆ ಎಲ್ಲಾ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗಬೇಕು. ಮಳೆಗಾಲ ಹಿನ್ನೆಲೆಯಲ್ಲಿ ಪೈಪ್‌ಲೈನ್ ಹಾಗೂ ಬೋರವೆಲ್‌ಗಳಲ್ಲಿ ಕಲುಷಿತ ನೀರು ಹೋಗದಂತೆ ನೋಡಿಕೊಳ್ಳಬೇಕು. ಯಾವುದೇ ರೀತಿಯ ದುರಸ್ಥಿಗಳಿದ್ದಲ್ಲಿ ತ್ವರಿತವಾಗಿ ಕ್ರಮಕೈಗೊಳ್ಳಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಜಿಲ್ಲಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು. ಇನ್ನೀತರ ಇಲಾಖೆಗಳ ಪ್ರಗತಿ  ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಇದುವರೆಗೆ ಸಿಡಿಲಿನಿಂದ ಮೃತಪಟ್ಟ 5 ಪ್ರಕರಣಗಳಿಗೆ ಹಾಗೂ ಮನೆಕುಸಿದು ಮೃತಪಟ್ಟ 2 ಪ್ರಕರಣಗಳಿಗೆ ತಲಾ 5 ಲಕ್ಷ ರೂ.ಗಳಂತೆ ಜೀವ ಹಾನಿ ಪ್ರಕರಣಗಳಿಗೆ 35,00,000 ರೂ.ಪರಿಹಾರ ವಿತರಿಸಲಾಗಿದೆ. ಏಪ್ರಿಲ್‌ನಿಂದ ಜುಲೈ ಮಾಹೆವರೆಗೆ ಜಿಲ್ಲೆಯ ಒಟ್ಟು 80 ಮನೆಹಾನಿ ಪ್ರಕರಣಗಳಿಗೆ ಪೂರ್ಣಪ್ರಮಾಣದಲ್ಲಿ ಪರಿಹಾರ ವಿತರಿಸಲಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಏಪ್ರಿಲ್‌ದಿಂದ ಇಲ್ಲಿಯವರೆಗೆ ಒಟ್ಟು 41 ಜಾನುವಾರುಗಳು ಸಾವಿಗೀಡಾಗಿದ್ದು, ಈ ಎಲ್ಲಾ ಜಾನುವಾರಗಳ ಪರಿಹಾರ ಮೊತ್ತವನ್ನು ಸಂಬಂಧಪಟ್ಟ ಸಂತ್ರಸ್ಥರಿಗೆ ವಿತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಜುಲೈ 01ರಿಂದ ಜುಲೈ26ರವರೆಗೆ ವಾಡಿಕೆ ಮಳೆ 54 ಮಿಮಿ ಇದ್ದು ವಾಸ್ತವಿಕವಾಗಿ 88 ಮಿಮಿ ಸುರಿದು ಶೇ.64ರಷ್ಟು ಹೆಚ್ಚಿನ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 3,08,000 ಹೆಕ್ಟೇರ್ ಪ್ರದೇಶದಲ್ಲಿನ ಬಿತ್ತನೆ ಗುರಿಯ ಪೈಕಿ ಇದುವರೆಗೆ 1,96,418 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಭತ್ತ, ಶಕ್ತಿಮಾನ್ ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ, ತೊಗರಿ, ಹುರುಳಿ, ಹೆಸರು, ಅಲಸಂದಿ, ಅವರೆ, ಮಡಿಕೆ, ಶೆಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು, ಔಡಲು, ಹತ್ತಿ, ಕಬ್ಬು ಬೆಳೆಗಳ ಬಿತ್ತನೆ ಮಾಡಲಾಗಿದೆ. ಅವಶ್ಯಕತೆಗೆ ತಕ್ಕಂತೆ ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ, ಎಂಓಪಿ, ಎನ್‌ಕೆಪಿಎಸ್ ಮತ್ತು ಎಸ್‌ಎಸ್‌ಪಿ ರಸಗೊಬ್ಬರ ದಾಸ್ತಾನು ಇದೆ. ಭತ್ತ, ಮೆಕ್ಕೆಜೋಳ, ಸಜ್ಜೆ, ನವಣೆ, ತೊಗರಿ, ಸೂರ್ಯಕಾಂತಿ ಸೇರಿದಂತೆ ಇನ್ನೀತರ ಬಿತ್ತನೆ ಬೀಜಗಳ ದಾಸ್ತಾನು ಸಹ ಇರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧ ವಂಟಗೋಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ಕೆ.ತೋಡಲಬಾಗಿ, ಜಿಪಂ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ ಪಿ., ಮುಖ್ಯ ಯೋಜನಾಧಿಕಾರಿ ಮಂಜುನಾಥ ಡಿ., ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗಳು
ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!