ರೇಷ್ಮೆ ಕೃಷಿಯಿಂದ ರೈತರಿಗೆ ನಿಶ್ಚಿತ ಆದಾಯ: ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ

Get real time updates directly on you device, subscribe now.

ರೇಷ್ಮೆ ಕೃಷಿಯಿಂದ ರೈತರಿಗೆ ನಿಶ್ಚಿತ ಆದಾಯ: ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ
—-
ಕೊಪ್ಪಳ : ಸುಸ್ಥಿರ ಕೃಷಿಗಳಲ್ಲಿ ಒಂದಾಗಿರುವ ರೇಷ್ಮೆ ಕೃಷಿಯಿಂದ ರೈತರಿಗೆ ನಿಶ್ಚಿತ ಆದಾಯ ದೊರೆಯುತ್ತದೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಹೇಳಿದರು.
ಭಾರತ ಸರ್ಕಾರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಜವಳಿ ಸಚಿವಾಲಯ ಮೈಸೂರು ಮತ್ತು ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಜುಲೈ 27ರಂದು ಕೊಪ್ಪಳದ ಮರಿಶಾಂತವೀರ ನಗರದ ಶ್ರೀ ಶಿವ ಶಾಂತ ಮಂಗಲ ಭವನದಲ್ಲಿ `ರೇಷ್ಮೆ ಕೃಷಿಯ ಗುರಿ-ಸಮೃದ್ಧಿಗೆ ದಾರಿ’ ಎಂಬ ವಿಷಯದಡಿ ಹಮ್ಮಿಕೊಳ್ಳಾಗಿದ್ದ ರೇಷ್ಮೆ ಕೃಷಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ರೇಷ್ಮೆ ಕೃಷಿಯು ನೆರವಾಗಲಿದೆ. ನಮ್ಮ ಕೊಪ್ಪಳ ಜಿಲ್ಲೆಯಲ್ಲಿಯೂ ರೇಷ್ಮೆ ಕೃಷಿಗೆ ಯೋಗ್ಯ ವಾತಾವರಣ ಇದ್ದು, ಈ ಬಗ್ಗೆ ರೈತರಿಗೆ ಮಾಹಿತಿ ಇಲ್ಲ. ರೇಷ್ಮೆ ಕೃಷಿಗಾಗಿ ಸರ್ಕಾರದಿಂದ ಹಲವಾರು ಸೌಲಭ್ಯಗಳಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ರೇಷ್ಮೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ರೈತರಿಗೆ ಹೆಚ್ಚಿನ ಮಾಹಿತಿ ನೀಡಬೇಕು. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರಿಗೆ ಅರಿವು ಮೂಡಿಸುವುದರ ಜೊತೆಗೆ ರೇಷ್ಮೆ ಕೃಷಿಯತ್ತ ಗಮನ ಸೆಳೆಯುವಂತ ಕೆಲಸವಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ರೇಷ್ಮೆ ನಿರ್ದೇಶನಾಲಯದ ಜಂಟಿ ನಿರ್ದೇಶಕಿ ಎಂ.ಎನ್ ಸಿಂಧೆ ಅವರು ಮಾತನಾಡಿ, ರೇಷ್ಮೆ ಕೃಷಿ ರೈತರಿಗೆ ಹೆಚ್ಚಿನ ಉತ್ಪಾದಕತೆ ಮತ್ತು ಆದಾಯ ನೀಡುತ್ತದೆ. ಉತ್ತಮ ಜೀವನ ನಡೆಸಲು ರೇಷ್ಮೆ ಕೃಷಿಯು ಅವಕಾಶ ಕಲ್ಪಿಸಿದೆ, ಬೇರೆ ಬೆಳೆಗಳಿಂತ ಹೆಚ್ಚಿನ ಆದಾಯ ರೇಷ್ಮೆ ಕೃಷಿಯಿಂದ ಪಡೆಯಬಹುದಾಗಿದೆ. ನರೇಗಾ ಯೋಜನೆಯಡಿ ರೇಷ್ಮೆ ಕೃಷಿ ವಿಸ್ತರಣೆಗೆ ಅವಕಾಶವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ರೇಷ್ಮೆ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಸುವ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ರೇಷ್ಮೆ ಬೆಳೆಯಲು ಉತ್ತಮ ವ್ಯವಸ್ಥೆ ಇದ್ದು, ರೈತರು ರೇಷ್ಮೆ ಕೃಷಿಕೈಗೊಳ್ಳಲು ಮುಂದೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಸಿ.ಎಸ್.ಆರ್.ಟಿ.ಐ ವಿಜ್ಞಾನಿ-ಡಿ ಡಾ.ಆರ್.ಭಾಗ್ಯ, ಧಾರವಾಡದ ರಾಯಪುರ ಸಿ.ಎಸ್.ಟಿ.ಆರ್.ಐ ಎಸ್.ಟಿ.ಎಸ್.ಸಿ ಜವಳಿ ವಿಜ್ಞಾನಿ-ಡಿ ಡಾ.ಉದಯ ಸಿ., ರೇಷ್ಮೆ ಇಲಾಖೆ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕರಾದ ನಾಗಪ್ಪ ಬಿರಾದಾರ್, ಕೊಪ್ಪಳ ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಸಿ.ಅಂಜನಮೂರ್ತಿ ಹಾಗೂ ಇತರರು ಮಾತನಾಡಿದರು.
ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ರೇಷ್ಮೆ ನಿರ್ದೇಶನಾಲಯದ ಜಂಟಿ ನಿರ್ದೇಶಕರಾದ ವಿಜಯಲಕ್ಷ್ಮಿ, ರಾಯಚೂರು ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಎಸ್.ರಾಜೇಂದ್ರ ಕುಮಾರ, ಬಳ್ಳಾರಿ ಹಾಗೂ ವಿಜಯನಗರದ ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಸುಧೀರ್,
ಕೊಪ್ಪಳ ಆರ್.ಇ.ಸಿ-ಸಿ.ಎಸ್. ಆರ್.ಟಿ.ಐ ವಿಜ್ಞಾನಿ-ಸಿ ಡಾ.ಎ.ಉಮೇಶ, ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ, ರೇಷ್ಮೆ ಇಲಾಖೆಯ ಡಿಇಓ ವೀರಣ್ಣ ಶೇಡದ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
ಮೈಸೂರು ಸಿ.ಎಸ್.ಆರ್.ಟಿ.ಐ ನಿರ್ದೇಶಕರಾದ ಡಾ.ಎಸ್.ಗಾಂಧಿ ದಾಸ್ ಸ್ವಾಗತಿಸಿದರು. ಕುಸುಮಾ ಮತ್ತು ರಂಜನಿ ಅವರು ಕಾರ್ಯಕ್ರಮವನ್ನು ಅಚ್ಚಕಟ್ಟಾಗಿ ನಿರ್ವಹಿಸಿದರು.
*ರೇಷ್ಮೆ ಕೃಷಿ ಮಾಹಿತಿಯ ಮಡಿಕೆ, ಕರ ಪತ್ರಗಳ ಬಿಡುಗಡೆ:* ಕಾರ್ಯಕ್ರಮದಲ್ಲಿ ‘ರೇಷ್ಮೆ ಹುಳುಗಳಲ್ಲಿ ರೋಗ ನಿರ್ವಹಣೆ’, “ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯ ನಿರ್ವಹಣೆ’ ಸೇರಿದಂತೆ ವಿವಿಧ ಮಾಹಿತಿಯ ಮಡಿಕೆ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
*ರೈತರೊಂದಿಗೆ ಸಂವಾದ:*
ರೇಷ್ಮೆ ಕೃಷಿ ಮೇಳದಲ್ಲಿ ಭಾಗವಹಿಸಿದ ರೇಷ್ಮೆ ಬೆಳೆಗಾರರೊಂದಿಗೆ ವಿಜ್ಞಾನಿಗಳು ಸಂವಾದ ನಡೆಸಿ ರೇಷ್ಮೆಯ ಕೃಷಿ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿದರು.
*ರೇಷ್ಮೆ ಕೃಷಿ ವಸ್ತುಪ್ರದರ್ಶನ:* ರೇಷ್ಮೆ ಕೃಷಿಗಾಗಿ ರೈತರ ಅನುಕೂಲಕ್ಕಾಗಿ ಇಲಾಖೆಯಿಂದ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳ ಬಗ್ಗೆ, ರೇಷ್ಮೆ ಕೃಷಿ ಉತ್ಪನ್ನಗಳು, ಉಪಕರಣಗಳು, ಸಲಕರಣೆಗಳು ಹಾಗೂ ಮಾಹಿತಿ ಫಲಕಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಜಿಲ್ಲೆಯ ರೇಷ್ಮೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರು.
*ಮೇಳದಿಂದ ಅನುಕೂಲ:* ರೇಷ್ಮೆ ಇಲಾಖೆಯಿಂದ ಹಮ್ಮಿಕೊಂಡ ರೇಷ್ಮೆ ಕೃಷಿ ಮೇಳದಿಂದಾಗಿ ರೇಷ್ಮೆ ಬೆಳೆ ನಿರ್ವಹಣೆ, ಬಹುಪಯೋಗಿ ಸಲಕರಣೆಗಳು, ಔಷಧಿ ಬಳಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಿಳಿದುಕೊಂಡು ಉತ್ತಮವಾಗಿ ರೇಷ್ಮೆ ಕೃಷಿ ಮಾಡಲು ಅನುಕೂಲವಾಯಿತು ಎಂದು
ರೇಷ್ಮೆ ಬೆಳೆಗಾರರಾದ ಕುಷ್ಟಗಿ ತಾಲೂಕಿನ ಗೊರೆಬಾಳ ಗ್ರಾಮದ ಯುವ ರೈತ ಈರನಗೌಡ ಹನುಮಗೌಡ ಗೌಡ್ರ ಮತ್ತು ನೀರಲಕೊಪ್ಪ ಗ್ರಾಮದ ಯುವ ರೈತ ರಾಮನಗೌಡ ಗೌಡ್ರ ಅವರು ಪ್ರತಿಕ್ರಿಯಿಸಿದರು.
*ರೈತರಿಂದ ಅನಿಸಿಕೆ:*
ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಚನ್ನಬಸಯ್ಯ ವಸ್ತ್ರದ್ ಹಾಗೂ ಕೊಪ್ಪಳ ಜಿಲ್ಲೆಯ ಮಾದರಿ ರೇಷ್ಮೆ ಕೃಷಿಕರಾದ ನಿಂಗಪ್ಪ ಮುತಗೂರ ಅವರು ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!