ಮಾಹಿತಿ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಿ: ನಲಿನ್ ಅತುಲ್
ಕೊಪ್ಪಳ : ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಹಿತಿ ಹಕ್ಕು ಕಾಯ್ದೆ ಕುರಿತು ಶುಕ್ರವಾರ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹಾಗೂ ವಿಷಯ ನಿರ್ವಾಹಕರಿಗೆ ಜಿಲ್ಲಾಡಳಿತ ಭವನ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಕಚೇರಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಉದ್ದೇಶಕ್ಕಾಗಿಯೇ ಮಾಹಿತಿ ಹಕ್ಕು ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆಯಡಿ ಸ್ವೀಕೃತವಾಗುವ ಅರ್ಜಿಗಳಿಗೆ ಇಲಾಖೆಗಳಿಂದ ಮಾಹಿತಿ ಒದಗಿಸಲು ಅಧಿಕಾರಿಗಳು ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳಬಾರದು. ಅರ್ಜಿಗಳ ವಿಲೇಯಲ್ಲಿ ತೊಂದರೆ ಮಾಡಿಕೊಂಡರೆ, ವಿಳಂಬವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ಬಗ್ಗೆ ಎಲ್ಲಾ ಅಧಿಕಾರಿಗಳು ಮೊದಲು ಸರಿಯಾಗಿ ಅರ್ಥೈಸಿಕೊಂಡು, ನಿಯಮಾನುಸಾರ ಮಹಿತಿ ನೀಡಬೇಕು. ಅರ್ಜಿಗಳಿಗೆ ಉತ್ತರ ನೀಡಲು ಯಾವುದೇ ರೀತಿಯ ವಿಳಂಬ ಮಾಡಬಾರದು. ನಿಗದಿತ ಅವಧಿಯೊಳಗೆ ಮಹಿತಿಯನ್ನು ಅಥವಾ ಅವಶ್ಯವಿದ್ದಲ್ಲಿ ಹಿಂಬರಹ ನೀಡಬೇಕು. ಕಾಯ್ದೆಯಡಿ ಯಾವ ಮಾಹಿತಿ ಕೊಡಬೇಕು, ಕೊಡಬಾರದು ಎಂಬುದರ ಬಗ್ಗೆ ಸುಪ್ರಿಂಕೋರ್ಟ್, ಹೈಕೋರ್ಟ್ಗಳು ಅನೇಕ ಆದೇಶಗಳನ್ನು ಹೊರಡಿಸಿವೆ. ಸರ್ಕಾರವೂ ಕೂಡ ಸುತ್ತೋಲೆಗಳನ್ನು ಹೊರಡಿಸಿದೆ, ಇವೆಲ್ಲವುಗಳ ಬಗ್ಗೆ ಅಧಿಕಾರಿಗಳು ವೆಬ್‌ಸೈಟ್ ಮೂಲಕ ಮಾಹಿತಿ ಪಡೆಯಬಹುದು ಎಂದರು.
ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರಿ ನೌಕರರ ಯಾವುದೇ ವಯಕ್ತಿಕ ಮಾಹಿತಿಯನ್ನು ನೀಡುವಂತಿಲ್ಲ. ಕಾಯ್ದೆಯಡಿ ಇಲಾಖೆಗಳಿಂದ ಯಾವ, ಯಾವ ಮಾಹಿತಿ ನೀಡಬಹುದು ಎಂಬ ವಿವರಗಳನ್ನು ತಮ್ಮ ಇಲಾಖಾ ವೆಬ್‌ಸೈಟ್‌ಗಳಲ್ಲಿ ನಮೂದಿಸಬೇಕು. ಇದರಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕುವ ಅರ್ಜಿದಾರರಿಗೂ ಅನುಕೂಲವಾಗುತ್ತದೆ. ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಅಧಿಕಾರಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ತರಬೇತಿ: ಬೆಳಗಾವಿಯ ಹಿರಿಯ ವಕೀಲರು ಹಾಗೂ ಮಾಹಿತಿ ಹಕ್ಕು ವಿಶೇಷ ತರಬೇತಿದಾರ ಅಶೋಕ ಹಲಗಲಿ ಅವರು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ವಿಶೇಷ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ಮತ್ತಿತರರಿದ್ದರು. ಕಾರ್ಯಾಗಾರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಷಯ ನಿರ್ವಾಹಕರು ಭಾಗವಹಿಸಿದ್ದರು.
Comments are closed.