ಇ-ಖಾತಾ ಮಾಡಿಸಿಕೊಳ್ಳಲು ಯಾವುದೇ ಸಮಯ ನಿಗದಿ ಇಲ್ಲ: ಗೊಂದಲಕ್ಕೆ ತೆರೆ ಎಳೆದ ಸಚಿವ ಕೃಷ್ಣ ಬೈರೇಗೌಡರು.

Get real time updates directly on you device, subscribe now.

.!

• ಮನೆಯಿಂದಲೇ ಇ-ಖಾತಾ ಪಡೆಯಲು ಅವಕಾಶ
• ಇ-ಖಾತಾ ಪಡೆಯಲು ಪಾಲಿಕೆಯಿಂದ ಹೆಲ್ಪ್ಡೆಸ್ಕ್
• ಮಧ್ಯವರ್ತಿಗಳ ಹಾವಳಿ-ನಕಲಿ ನೋಂದಣಿಗೆ ಶಾಶ್ವತ ಪರಿಹಾರ
• ಸಣ್ಣ-ಪುಟ್ಟ ಗೊಂದಲಗಳಿಗೆ ವಾರದಲ್ಲಿ ತೆರೆ

ಬೆಂಗಳೂರು ಅಕ್ಟೋಬರ್ 07:

ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಯಾವುದೇ ಡೆಡ್ಲೈನ್ ಇಲ್ಲ. ಹೀಗಾಗಿ ಸಾರ್ವಜನಿಕರು ಗಾಬರಿಯಾಗುವ ಅಥವಾ ಆತುರಪಡುವ ಅಗತ್ಯ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.

ಇ-ಖಾತಾ ಬಗೆಗಿನ ಗೊಂದಲಗಳ ಬಗ್ಗೆ ಸೋಮವಾರ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬೆನ್ನಿಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ಬಿಬಿಎಂಪಿ ವ್ಯಾಪ್ತಿಯ ಕೆಲವು ಭಾಗದಲ್ಲಿ ಮಧ್ಯವರ್ತಿಗಳು ಇ-ಖಾತಾ ಗೆ ಸರ್ಕಾರ ಸಮಯ ನಿಗಧಿ ಮಾಡಿದೆ ಎಂದು ಜನರಲ್ಲಿ ಗೊಂದಲ ಸೃಷ್ಟಿಸಿ, ಇ-ಖಾತೆ ಮಾಡಿಸಿಕೊಡುವುದಾಗಿ ಜನರನ್ನು ಸುಲಿಗೆ ಮಾಡಿರುವ ಘಟನೆ ಗಮನಕ್ಕೆ ಬಂದಿದೆ.

ಆದರೆ, ಆಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಸರ್ಕಾರ ಯಾವುದೇ ಸಮಯ ನಿಗದಿ ಮಾಡಿಲ್ಲ. ಹೀಗಾಗಿ ಸಾರ್ವಜನಿರಕರು ಗಾಬರಿಗೊಳಗಾಗದೆ, ಆತುರಪಡದೆ ತಮ್ಮ ಸಮಯ ನೋಡಿಕೊಂಡು ಇ-ಖಾತಾ ಮಾಡಿಸಿಕೊಳ್ಳಬಹುದು. ಊಹಾಪೋಹಗಳಿಗೆ ಕಿವಿಕೊಟ್ಟು ಆತಂಕಕ್ಕೆ ಒಳಗಾಗಬೇಡಿ” ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.

“ನಕಲಿ ನೋಂದಣಿ ಪ್ರಕರಣಗಳನ್ನು ತಡೆಯೊಡ್ಡುವ ಸಲುವಾಗಿಯೇ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ, ಇ-ಖಾತಾ ಪಡೆಯಲು ಆತುರ ಬೇಕಿಲ್ಲ. ನಿವೇಶನಗಳನ್ನು ಮಾರುವ ಅಥವಾ ಕೊಳ್ಳುವ ಪ್ರಕ್ರಿಯೆಯಲ್ಲಿ ಮಾತ್ರ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಅಲ್ಲದೆ, ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಪಾಲಿಕೆಯ ವಿಶೇಷ ಆಯುಕ್ತರ ಜೊತೆ ಚರ್ಚಿಸಿ ಇ-ಖಾತಾ ಪ್ರಕ್ರಿಯೆಯನ್ನೂ ಸರಳೀಕರಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸೂಕ್ತ ಕ್ರಮ ಜರುಗಿಸಲಾಗಿದೆ” ಎಂದು ಮಾಹಿತಿ ನೀಡಿದರು.

ಮನೆಯಿಂದಲೇ ಪಡೆಯಬಹುದು ಇ-ಖಾತಾ ..!

“ಇ-ಖಾತಾ ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಬರುವ ಅಗತ್ಯ ಇಲ್ಲ. ಬದಲಾಗಿ ಮನೆಯಿಂದಲೇ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದು” ಎಂದು ಅವರು ತಿಳಿಸಿದರು.

“ಬೆಂಗಳೂರಿನಲ್ಲಿ 21 ಲಕ್ಷ ನಿವೇಶನಗಳಿವೆ. ಈ ನಿವೇಶನಗಳ ಡ್ರಾಪ್ಟ್ಗಳನ್ನು ಬಿಬಿಎಂಪಿ ಈಗಾಗಲೇ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. ಆಸ್ತಿ ಮಾಲೀಕರು ಈ ಡ್ರಾಪ್ಟ್ ಗಳನ್ನು ನೋಡಿ, ಅಗತ್ಯ ದಾಖಲೆಗಳನ್ನು ವೆಬ್ಸೈಟ್ ನಲ್ಲೇ ಲಗತ್ತಿಸುವ ಮೂಲಕ ಯಾವುದೇ ಕಚೇರಿಗೆ ಹೋಗದೆ ಮನೆಯಿಂದಲೇ ಶಾಶ್ವತ ಇ-ಖಾತಾ ಪಡೆದುಕೊಳ್ಳಬಹುದು” ಎಂದು ಅವರು ತಿಳಿಸಿದರು.

ಇ-ಖಾತಾ ಹೆಲ್ಪ್ ಡೆಸ್ಕ್:

ಇ-ಖಾತಾ ಪಡೆಯುವ ಸಂಬಂಧ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆ ಗಮನದಲ್ಲಿದ್ದು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ತೆರೆಯುವ ಮೂಲಕ ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಸಚಿವರು, “ ಆಸ್ತಿ ಮಾಲೀಕರು ಯಾವುದೇ ಗೊಂದಲವಿಲ್ಲದೆ, ಸುಲಭವಾಗಿ ಇ-ಖಾತಾ ಪಡೆಯುವ ಸಲುವಾಗಿ ತತಕ್ಷಣ ಜಾರಿಯಾಗುವಂತೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಸಹಾಯಕ ಕಂದಾಯ ಅಧಿಕಾರಿ (ARO Office) ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ.

ಅಲ್ಲದೆ, ಇ-ಖಾತಾ ಪಡೆಯಲು ಆಸ್ತಿ ಮಾಲೀಕರು ಕೆಲವು ದಾಖಲೆಗಳನ್ನು ನೀಡುವುದು ಅಗತ್ಯವಾಗಿದ್ದು, ಅವುಗಳನ್ನು ʼಬೆಂಗಳೂರು ಒನ್ʼ ಕಚೇರಿಗಳ ಮುಖಾಂತರ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ತಮ್ಮ ಇ-ಖಾತೆಯನ್ನು ಪಡೆದುಕೊಳ್ಳಬಹುದು. ಮುಂದಿನ ಎರಡು-ಮೂರು ದಿನಗಳಲ್ಲಿ ಬೆಂಗಳೂರು-ಒನ್ ಕಚೇರಿಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುವುದು” ಎಂದರು.

ಮಧ್ಯವರ್ತಿಗಳ ಹಾವಳಿ-ನಕಲಿ ನೋಂದಣಿಗೆ ಶಾಶ್ವತ ಪರಿಹಾರ

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ನಕಲಿ ನೋಂದಣಿಗಳನ್ನು ತಪ್ಪಿಸಿ, ಆಸ್ತಿ ಮಾಲೀಕರ ಮಾಲೀಕತ್ವವನ್ನು ರಕ್ಷಿಸಲು ಇ-ಖಾತಾ ವ್ಯವಸ್ಥೆ ಶಾಶ್ವತ ಪರಿಹಾರ ನೀಡಲಿದೆ ಎಂದರು.

ಮುಂದುವರೆದು, “ಇ-ಖಾತಾಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿರುವುದು ನಿಜ. ಆದರೆ, ಆಸ್ತಿ ಮಾಲೀಕರು ಒಂದು ಬಾರಿ ಇ-ಖಾತಾ ಮಾಡಿಸಿಕೊಂಡರೆ ಯಾವ ಮಧ್ಯವರ್ತಿಗಳ ಮುಲಾಜಿಲ್ಲದೆ ಬದುಕಬಹುದು. ಸಾರ್ವಜನಿಕರ ಅನುಕೂಲಕ್ಕಾಗಿಯೇ ಹಲವು ಸವಾಲುಗಳ ನಡುವೆಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಇದು ನಕಲಿ ನೋಂದಣಿಗಳನ್ನು ತಡೆಯುವುದಕ್ಕೂ ಇದು ಸಹಕಾರಿಯಾಗಲಿದೆ.

ಇ-ಖಾತಾ ವ್ಯವಸ್ಥೆಯನ್ನು ಒಂದು ಬಾರಿ ಅನುಷ್ಠಾನ ಮಾಡಿದರೆ, ಇಡೀ ದೇಶದಲ್ಲಿ ಅತ್ಯುತ್ತಮ ಮಾದರಿ ಖಾತಾ ವ್ಯವಸ್ಥೆಯನ್ನು ನೀಡಿದಂತಾಗುತ್ತದೆ. ಸಣ್ಣ ಪುಟ್ಟ ಗೊಂದಲಗಳಿಗೆ ವಾರದಲ್ಲಿ ತೆರೆ ಬೀಳಲಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!