ಎಚ್ಡಿಕೆ ಅವಹೇಳನ ಸರಿಯಲ್ಲ – ಮಹಾಂತಯ್ಯನಮಠ ಆಕ್ರೋಶ
ಜೆಡಿ(ಎಸ್) ರಾಜ್ಯ ಕಾರ್ಯದರ್ಶಿ ಮಹಾಂತಯ್ಯನಮಠ ಆಕ್ರೋಶ
ಕೊಪ್ಪಳ: ಮಾಜಿ ಸಿಎಂ ಹಾಗೂ ಪ್ರಸ್ತುತ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಉಲ್ಲೇಖಿಸಿ, ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ ಬಳಸಿರುವ ಪದಬಳಕೆ ಸರಿಯಿಲ್ಲ. ಕೂಡಲೇ ತಾವು ಆಡಿರುವ ಪದಗಳನ್ನು ವಾಪಸ್ ಪಡೆಯಬೇಕು ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ರಾಜ್ಯ ಕಂಡ ಜನಪರ, ರೈತಪರ ಸಿಎಂ ಆಗಿ ಹಾಗೂ ಪ್ರಸ್ತುತ ಕೇಂದ್ರ ಸಚಿವರಾಗಿ ದೇಶದ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನ ಪದ ಬಳಸಿರುವ ಎಡಿಜಿಪಿ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು.
ಕಾಂಗ್ರೆಸ್ ಸರಕಾರದ ಕುಮ್ಮಕ್ಕನಿಂದಲೇ ಈ ಅಧಿಕಾರಿಗಳು ತಮ್ಮ ಕೆಲಸದ ಇತಿ-ಮಿತಿ ಮೀರಿ ಮಾತನಾಡುತ್ತಿದ್ದಾರೆ.
ಈ ರೀತಿಯ ಪದ ಬಳಕೆಯನ್ನು ಜೆಡಿಎಸ್ ಖಡಾಖಂಡಿತವಾಗಿ ವಿರೋಧಿಸಲಿದೆ.
ಲೋಕಾಯುಕ್ತ ಎಡಿಜಿಪಿಗೆ ಸರ್ವೀಸ್ ಕಂಡಕ್ಟ್ ನಿಯಮದ ಬಗ್ಗೆ ಜ್ಞಾನವಿದ್ದರೇ ತಕ್ಷಣ ಕ್ಷಮಾಪಣೆ ಕೇಳಬೇಕೆಂದು ಒತ್ತಾಯಿಸಿದರು.
ಅಲ್ಲದೆ, ಎಚ್.ಡಿ.ಕುಮಾರಸ್ವಾಮಿ ಅವರು, ಎಂದಿಗೂ ಯಾರ ಬಗ್ಗೆಯೂ ಹೀಗೆ ಅಸಭ್ಯ ಪದ ಬಳಸಿದವರಲ್ಲ.
ಅಲ್ಲದೆ, ಎಡಿಜಿಪಿ ಬಗ್ಗೆಯೂ ಎಲ್ಲಿಯೂ ಏಕವಚನ ಪದ ಪ್ರಯೋಗ ಮಾಡಿಲ್ಲ.
ಆದರೂ ಕುಮಾರಸ್ವಾಮಿಯವರ ಬಗ್ಗೆ ಕೆಟ್ಟ ಪದ ಬಳಸಿದ್ದು, ಮುಂದಿನ ದಿನಗಳಲ್ಲಿ ಇವರು ತಕ್ಕ ಬೆಲೆ ತೆರಬೇಕಾಗುತ್ತದೆ.
ಇದು ಕಾಂಗ್ರೆಸ್ ಸರಕಾರಕ್ಕೆ ಮುಳುವಾಗಲಿದೆ.
ಈ ಪಕ್ಷ ಎಂತೆಂಥ ಅಧಿಕಾರಿಗಳನ್ನು ಪರೋಕ್ಷವಾಗಿ ಬೆಳೆಸುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.
ಮುಂದೆ ಇದೇ ಸರಕಾರ ಶಾಶ್ವತವಾಗಿ ರಾಜ್ಯದಲ್ಲಿ ಇರುವುದಿಲ್ಲ.
ಸ್ವಲ್ಪ ಎಚ್ಚರ ವಹಿಸಿ, ಮಾತನಾಡಿ ಎಡಿಜಿಪಿಯವರೇ ಎಂದು ಪ್ರಕಟಣೆಯ ಮೂಲಕ ಕಿಡಿಕಾರಿದ್ದಾರೆ.
—
Comments are closed.