ಮಕ್ಕಳ ಹಕ್ಕುಗಳು, ಕಾನೂನುಗಳ ಜಾಗೃತಿ ಅತ್ಯವಶ್ಯಕ: ನ್ಯಾ.ದೇವೇಂದ್ರ ಪಂಡಿತ್
—-
ಕೊಪ್ಪಳ ಜುಲೈ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಜುಲೈ 17ರಂದು ಕನಕಗಿರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ “ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಭಾರತ ಸಂವಿಧಾನದ ಪರಿಚ್ಛೇದ 15ರ ಕ್ಲಾಜ್ 3, ಮಕ್ಕಳಿಗಾಗಿ ವಿಶೇಷ ಅವಕಾಶಗಳನ್ನು ಒದಗಿಸುವ ಅಧಿಕಾರವನ್ನು ನೀಡಿದೆ. ಮಗುವಿನ ಸುರಕ್ಷತೆಯ ಹಂತದ ಮೂಲಕ ಮಗುವನ್ನು ಒಳಗೊಂಡು ಎಲ್ಲಾ ಹಂತಗಳ ನ್ಯಾಯ ಪ್ರಕ್ರಿಯೆಯಲ್ಲಿ ರಕ್ಷಿಸುವುದು ಮತ್ತು ಗೌರವಿಸುವುದು ಅವಶ್ಯಕ. ಮಕ್ಕಳ ಲೈಂಗಿಕ ಶೋಷಣೆ, ಲೈಂಗಿಕ ದುರುಪಯೋಗಗಳು ಹೀನ ಕೃತ್ಯಗಳಾಗಿದ್ದು, ಇವುಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು ಭಾರತ ಸರಕಾರವು 2012ರ ಜೂನ್ 20ರಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ನ್ನು ಜಾರಿಗೊಳಿಸಿದೆ. ಈ ಕಾಯ್ದೆಗೆ 2019ರಲ್ಲಿ ತಿದ್ದುಪಡಿಯನ್ನು ಮಾಡಿದ್ದು, ಅದರನ್ವಯ 18 ವರ್ಷದೊಳಗಿನ ಎಲ್ಲರೂ ಸಹ ಮಕ್ಕಳು, ಗಂಡು, ಹೆಣ್ಣು ಬೇಧ ಭಾವವನ್ನು ಮಾಡುವುದಿಲ್ಲ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕನಿಷ್ಠ 10 ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ತೀವ್ರತರ ಲೈಂಗಿಕ ದೌರ್ಜನ್ಯಕ್ಕೆ ಕನಿಷ್ಠ 20 ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ ಎಂದರು.
ಮಕ್ಕಳಿಗೆ ಲೈಂಗಿಕ ಕಿರುಕುಳ ಅಂದರೆ, ಮಗುವಿಗೆ ಶಾಬ್ಧಿಕವಾಗಿ, ಸಂಜ್ಞೆಯ ಮೂಲಕ ಅಥವಾ ಲಿಖಿತವಾಗಿ ಯಾವುದೇ ರೀತಿಯಲ್ಲಿ ಚುಡಾಯಿಸುವುದು, ವಿದ್ಯುನ್ಮಾನ, ತಾಂತ್ರಿಕ ವಿಧಾನಗಳ ಮೂಲಕ ಗಮನಿಸುವುದು ಅಥವಾ ಅನುಸರಿಸುವುದು ಸಹ ಲೈಂಗಿಕ ಕಿರುಕುಳವಾಗಿರುತ್ತದೆ. ಇಂತಹ ಕೃತ್ಯಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಕೃತ್ಯವನ್ನು ಮಾಡುವುದಕ್ಕೆ ಪ್ರಚೋದಿಸುವುದು ಹಾಗೂ ಬೆಂಬಲವನ್ನು ನೀಡುವುದು ಸಹ ಶಿಕ್ಷಾರ್ಹ ಅಪರಾಧವಾಗಿದ್ದು, ಅಪರಾಧಿಗೆ ನೀಡುವಷ್ಟೇ ಶಿಕ್ಷೆಯನ್ನು ಬೆಂಬಲ, ಪ್ರೋತ್ಸಾಹ ನೀಡಿದವರಿಗೂ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಪರವಾದ ಕಾನೂನುಗಳ ಜಾಗೃತಿ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರೋಹಿಣಿ ಕೊಟಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿ, 2022ರ ಏಪ್ರೀಲ್ ಮಾಹೆಯಿಂದ ಮೀಷನ್ ವಾತ್ಸಲ್ಯ ಯೋಜನೆಯು ಜಾರಿಯಲ್ಲಿದ್ದು, ಈ ಕಾರ್ಯಕ್ರಮದಡಿಯಲ್ಲಿ, ಸಾಂಸ್ಥೀಕ ಸೇವೆಗಳು, ಅಸಾಂಸ್ಥೀಕ ಸೇವೆಗಳಾದ ದತ್ತು ಕಾರ್ಯಕ್ರಮ, ಪೋಷಕತ್ವ, ಪ್ರಾಯೋಜಕತ್ವ, ಪಿ.ಎಮ್ ರ್ಸ್ ಫಾರ್ ಚಿಲ್ಡçನ್, ವಿಶೇಷ ಪಾಲನಾ ಯೋಜನೆ, ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ, ಮಕ್ಕಳ ಸಹಾಯವಾಣಿ-1098 ಹಾಗೂ ಇ.ಆರ್.ಎಸ್.ಎಸ್ 112 ಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ತುರ್ತು ಸೇವೆಗಳು ದಿನದ 24 ಘಂಟೆಗಳು ಮತ್ತು ವಾರದ 07 ದಿನಗಳು ಕಾರ್ಯನಿರ್ವಹಿಸುತ್ತಿದ್ದು, ಸಂಕಷ್ಟಕರ ಪರಸ್ಥಿತಿಯಲ್ಲಿರುವ ಮಕ್ಕಳು ಕಂಡುಬಂದಲ್ಲಿ ಈ ದೂರವಾಣಿಗಳಿಗೆ ಮಾಹಿತಿಯನ್ನು ನೀಡಬೇಕು. ಮಾಹಿತಿ ನೀಡಿದ 60 ನಿಮೀಷದೊಳಗಾಗಿ ಮಗುವನ್ನು ರಕ್ಷಿಸಲಾಗುತ್ತದೆಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೇಷನ್ ಆಫೀಸರಾದ ಶಿವಲೀಲಾ ವನ್ನೂರು ಅವರು, ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ ಕಾಯ್ದೆ-2016ರ ಕುರಿತು ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ, ಗಂಗಾವತಿ ಅಲ್ಪಸಂಖ್ಯಾತರ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ ನಾಯಕ್, ಕನಕಗಿರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಮೌಲಾನ ಆಜಾದ ಇಂಗ್ಲೀಷ್ ಮೀಡಿಯಂ ಸ್ಕೂಲ್, ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕಲ್ಮಠ ಪ್ರೌಢ ಶಾಲೆಯ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.
ಕರ್ನಾಟಕ ಪಬ್ಲೀಕ್ ಸ್ಕೂಲನ್ ಉಪ ಪ್ರಾಂಶುಪಾಲರಾದ ದೊಡ್ಡ ಬಸವಗೌಡ ಪಾಟೀಲ್ ಸ್ವಾಗತಿಸಿ, ವಂದಿಸಿದರು.
Comments are closed.