ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಿವಿಸಿ ಆಗ್ರಹ
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮೂಡಾ ನಿವೇಶನ ಹಂಚಿಕೆ ಹಗರಣದಲ್ಲಿ ಪ್ರಾಸಕ್ಯೂಷನ್ ಗೆ ಅನುಮತಿ ನೀಡಿದ ಕ್ರಮ ಸರಿಯಾಗಿದೆ ಎಂಬ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ಸ್ವಾಗತಾರ್ಹ ಎಂದು ಜೆಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಹೇಳಿದ್ದಾರೆ.
ಈ ಹಗರಣದಲ್ಲಿ ಸಿದ್ದರಾಮಯ್ಯ ಅವರ ಕುಟುಂಬ ಅಕ್ರಮವಾಗಿ ಲಾಭ ಪಡೆದಿದೆ ಎಂದು ನ್ಯಾಯಾಲಯ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ತಮ್ಮ ಸಾರ್ವಜನಿಕ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ ಎಂದೇ ಹೇಳಿಕೊಂಡು ಬರುತ್ತಿದ್ದ ಸಿದ್ದರಾಮಯ್ಯನವರಿಗೆ ಕಪ್ಪು ಮೆತ್ತಿದೆ. ಹಗರಣದ ನೈತಿಕ ಹೊಣೆ ಹೊತ್ತು ಈ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಇನ್ನು ಒಳ ಜಗಳ ಆರಂಭವಾಗಲಿದೆ. ಗ್ಯಾರಂಟಿ ಯೋಜನೆ ಎಂದು ಅಧಿಕಾರಕ್ಕೆ ಬಂದ ಒಂದುವರೆ ವರ್ಷದಲ್ಲಿ ರಾಜ್ಯ ಸರಕಾರವನ್ನು ದಿವಾಳಿ ಅಂಚಿಗೆ ತಂದ ಶ್ರೇಯಸ್ಸು ಸಿದ್ದರಾಮಯ್ಯನವರದ್ದು. ಜಾತಿ ಹಾಗೂ ಧರ್ಮಗಳ ಆಧಾರದ ಮೇಲೆ ಸಮಾಜವನ್ನು ಒಡೆದ ಅವರಿಗೆ ಈಗ ಯಾವುದೇ ದಾರಿ ಇಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ರಮ ಮಾರ್ಗಗಳ ಮೂಲಕ ಅಧಿಕಾರಕ್ಕೆ ಸಿದ್ದರಾಮಯ್ಯ ಅಂಟಿಕೊಂಡರೆ ಜೆಡಿ (ಎಸ್) ಪಕ್ಷ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ. ಅವರು ರಾಜೀನಾಮೆ ಕೊಡುವವರೆಗೂ ವಿರಮಿಸುವ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಪ್ರವಾಸೋದ್ಯಮ ಇಲಾಖೆಯಲ್ಲಿ ಹಗರಣ, ದಿವಾಳಿಯಾಗುತ್ತಿರುವ ಸಾರಿಗೆ ಇಲಾಖೆ ಇಂತಹ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸಿ ಜನತೆಯ ಮೇಲೆ ಹೊರೆ ಹೆಚ್ಚಿಸಿದ ಕಾಂಗ್ರೆಸ್ ಪಕ್ಷವನ್ನು ವಜಾ ಮಾಡಿ ಈ ಕೂಡಲೇ ಹೊಸದಾಗಿ ಚುನಾವಣೆ ನಡೆಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಪಾಲರು ತರಾತುರಿಯ ನಿರ್ಣಯ ಕೈಗೊಂಡಿಲ್ಲ. ರಾಜ್ಯಪಾಲರ ಆದೇಶದಲ್ಲಿ ಯಾವುದೇ ತಪ್ಪಿಲ್ಲ.
17(A) ಅಡಿಯಲ್ಲಿ ತನಿಖೆ ನಡೆಸಲು ನ್ಯಾಯಾಲಯ ಆದೇಶ ನೀಡಿರುವುದು ಸತ್ಯಕ್ಕೆ ಸಂದ ಜಯ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
Comments are closed.