ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ ಸಭೆಗೆ ಮಾಹಿತಿಯೊಂದಿಗೆ ಹಾಜರಾಗಲು ಅಧಿಕಾರಿಗಳಿಗೆ ಸೂಚನೆ
ರಾಯಚೂರು ಜಿಲ್ಲೆಯಲ್ಲಿ ಸೆಪ್ಟೆಂಬರ್ 26ರಂದು ನಿಗದಿಯಾದ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಸಭೆಗೆ ಕೊಪ್ಪಳ ಜಿಲ್ಲೆಯ ಅಧಿಕಾರಿಗಳು ಸಮರ್ಪಕ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಸಮಿತಿಯ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಅವರ ನೇತೃತ್ವದಲ್ಲಿ ಸದಸ್ಯರಾದ ಬಿ.ಜಿ. ಗೋವಿಂದಪ್ಪ, ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ಅಬ್ಬಯ್ಯ ಪ್ರಸಾದ, ಎಸ್.ಎನ್. ನಾರಾಯಣಸ್ವಾಮಿ ಕೆ.ಎಂ., ಮಾನಪ್ಪ ಡಿ. ವಜ್ಜಲ, ಬಸನಗೌಡ ದದ್ದಲ, ಅನಿಲ್ ಚಿಕ್ಕಮಾದು, ಬಸವರಾಜ್ ಮತ್ತಿಮೂಡ್, ಎನ್. ಶ್ರೀನಿವಾಸಯ್ಯ, ಕೆ.ಸಿ. ವೀರೇಂದ್ರ ಪಪ್ಪಿ, ಪ್ರಕಾಶ ಕೋಳಿವಾಡ, ಕೃಷ್ಣ ನಾಯಕ, ಸಿಮೆಂಟ್ ಮಂಜು, ಶ್ರೀಮತಿ ಕರೆಮ್ಮ, ಶಾಂತರಾಮ್ ಬುಡ್ನ ಸಿದ್ದಿ, ರಾಜೇಂದ್ರ ರಾಜಣ್ಣ, ವೈ.ಎಂ. ಸತೀಶ್ ಹಾಗೂ ಜಗದೇವ್ ಗುತ್ತೇದಾರ್ ಅವರನ್ನೊಳಗೊಂಡ ಸಮಿತಿಯು ಸೆಪ್ಟೆಂಬರ್ 26ರಂದು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ಅಥವಾ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ಕೊಪ್ಪಳ ಜಿಲ್ಲೆಗೆ ಸಂಬAಧಿಸಿದAತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಅಭಿವೃದ್ಧಿ, ಕಲ್ಯಾಣ, ಏಳಿಗೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.
ಎಸ್ಪಿಪಿ ಮತ್ತು ಟಿಎಸ್ಪಿ ಯೋಜನೆಗಳ ಅನುಷ್ಠಾನದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇಲಾಖಾವಾರು ಪೂರ್ವ ಸಿದ್ದತೆಯೊಂದಿಗೆ ಸಭೆಗೆ ಹಾಜರಾಗಬೇಕು. 2020-21, 2021-22 ಮತ್ತು 2023-24ನೇ ಸಾಲಿನಲ್ಲಿ ಆಗಿರುವ ಪ್ರಗತಿಯ ಬಗ್ಗೆ ಸಭೆಯಲ್ಲಿ ಕೇಳಲಾಗುವ ಯಾವುದೇ ಮಾಹಿತಿಯು ಪ್ರತಿಯೊಬ್ಬ ಇಲಾಖೆಯ ಅಧಿಕಾರಿ ಬಳಿಯಲ್ಲಿ ಇರಬೇಕು. ಅಧಿಕಾರಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ಪೂರ್ವತಯಾರಿ ಮಾಡಿಕೊಂಡು ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಯಾವುದೇ ಸಿಬ್ಬಂದಿಯನ್ನು ನೇಮಿಸದೇ ಸ್ವತಃ ಅಧಿಕಾರಿಗಳೇ ಸಭೆಗೆ ಹಾಜರಾಗಿ ಮಾಹಿತಿ ಒದಗಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸರ್ಕಾರವು ವಿವಿಧ ಇಲಾಖೆಗಳಿಗೆ ಎಸ್.ಸಿ.ಪಿ-ಟಿ.ಎಸ್.ಪಿ. ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿ ಗುರಿ ನಿಗದಿಪಡಿಸಿದೆ. ನಿಗದಿಪಡಿಸಿದ ಗುರಿಯನುಸಾರ ಬಿಡುಗಡೆಯಾದ ಅನುದಾನವನ್ನು ಸಕಾಲಕ್ಕೆ ಬಳಸಿ ಸಾಧನೆ ತೋರಬೇಕು ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಸಮುದಾಯಗಳ ಫಲಾನುಭವಿಗಳಿಗಾಗಿ ಬೇರೆ ಬೇರೆ ಇಲಾಖೆಗಳಲ್ಲಿ ಇರುವ ಸೌಲಭ್ಯಗಳ ಮಾಹಿತಿಯ ಬಗ್ಗೆ ಅರ್ಹ ಫಲಾನುಭವಿಗಳಿಗೆ ತಿಳಿಸುವ ಕಾರ್ಯವನ್ನು ಸಹ ಅಧಿಕಾರಿಗಳು ಮಾಡಬೇಕು. ಈ ಯೋಜನೆಗಳ ಲಾಭವು ಅರ್ಹರಿಗೆ ತಲುಪುವ ಹಾಗೆ ಪಾರದರ್ಶಕವಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ವಿವಿಧ ಅನುಷ್ಠಾನ ಏಜೆನ್ಸಿಗಳ ಮೂಲಕ ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ನಿರ್ಮಿಸುತ್ತಿರುವ ಕಟ್ಟಡಗಳು, ಸಮುದಾಯ ಭವನಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಎಸ್ಸಿಪಿ ಟಿಎಸ್ಪಿ ಯೋಜನೆಗಳಡಿ ಸರ್ಕಾರವು ಅನುದಾನ ಬಿಡುಗಡೆ ಮಾಡಿದ ಅವಧಿ, ಫಲಾನುಭವಿಗಳಿಗೆ ತಲುಪಿಸಿದ ಅವಧಿ, ಖರ್ಚಾದ ಮೊತ್ತ, ಬಾಕಿ ಉಳಿದ ಮೊತ್ತ ಹೀಗೆ ಎಲ್ಲ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ಸರಿಯಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್.ರುದ್ರೇಶಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜು ತಳವಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಗದೀಶ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸುರೇಶ ಕೋಕರೆ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರಿದ್ದರು.
Comments are closed.