ರಸ್ತೆ ಸರಿಪಡಿಸಿದ ಕಿನ್ನಾಳ ಗ್ರಾಮದ ಯುವಕರ ಕಾರ್ಯಕ್ಕೆ ಜಿಲ್ಲಾ ನ್ಯಾಯಾಧೀಶರಾದ ಚಂದ್ರಶೇಖರ ಸಿ ಅವರಿಂದ ಮೆಚ್ಚುಗೆ
ಗಣೇಶ ಉತ್ಸವ-2024ರ ಸಮಯದಲ್ಲಿ ಸಂಗ್ರಹಿಸಿದ ಹಣದಿಂದ ತಮ್ಮೂರ ರಸ್ತೆಯನ್ನು ಸರಿಪಡಿಸಿದ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಯುವಕರ ನಡೆ
ಗಣೇಶ ಉತ್ಸವ-2024ರ ಸಮಯದಲ್ಲಿ ಸಂಗ್ರಹಿಸಿದ ಹಣದಿಂದ ತಮ್ಮೂರ ರಸ್ತೆಯನ್ನು ಸರಿಪಡಿಸಿದ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಯುವಕರ ನಡೆಗೆ ಗೌರವಾನ್ವಿತ ಕೊಪ್ಪಳ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ್ ಸಿ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಳಜಿ ಇತರರಿಗೆ ಮಾದರಿ: ಇಂದಿನ ಬಹುತೇಕ ಯುವಕರು ಹಲವಾರು ವ್ಯಸನಗಳಿಗೆ ಬಲಿಯಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಓದು, ಅಧ್ಯಯನ ಕಡಿಮೆ ಆಗಿದೆ. ಬಹಳಷ್ಟು ಯುವಕರು ಯಾವುದೇ ಆದರ್ಶ, ಮೌಲ್ಯಗಳನ್ನು ಇಟ್ಟುಕೊಳ್ಳದೇ ದಿನಗಳೆಯುತ್ತಾರೆ. ನಾವು ಸರಿ ಇದ್ರೆ ಸಾಕು. ಊರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದೇ ಬಹಳಷ್ಟು ಜನ ಆಲೋಚಿಸುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ಗ್ರಾಮದ ಬಗ್ಗೆ ವಿಶೇಷ ಕಾಳಜಿ ವಹಿಸಿ, ನಮ್ಮ ಗ್ರಾಮಕ್ಕೆ ಸುಸಜ್ಜಿತ ರಸ್ತೆಯಾದಲ್ಲಿ ಅನುಕೂಲವಾಗಲಿದೆ ಎಂದು ಯೋಚಿಸಿ, ಉತ್ತಮ ಯೋಚನೆ, ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ಗಣೇಶ ಉತ್ಸವಕ್ಕೆ ಸಂಗ್ರಹಿಸಿದ ಹಣದಿಂದ ಗ್ರಾಮದ ರಸ್ತೆ ಮಾಡಿದ ಕಾರ್ಯವು ಅತ್ಯಂತ ಮಾದರಿಯಾದುದಾಗಿದೆ. ನಿಮ್ಮ ಕಾರ್ಯವು ಶ್ಲಾಘನೀಯವಾಗಿದೆ. ನಿಮ್ಮ ಕಾರ್ಯವು ಜಿಲ್ಲೆಯ ಇನ್ನೀತರ ಗ್ರಾಮಗಳ, ರಾಜ್ಯದ, ದೇಶದ ಯುವಕರಿಗೆ ಮಾದರಿಯಾಗಿದೆ ಎಂದು ನ್ಯಾ.ಚಂದ್ರಶೇಖರ ಸಿ ಅವರು ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಕರಿಂದ ಅಭಿನಂದನೆ: ನಮ್ಮ ಕಾರ್ಯದ ಬಗ್ಗೆ ಪತ್ರಿಕೆಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ ಸುದ್ದಿಯಾದಾಗ ನಮಗೆ ಸಾಕಷ್ಟು ಖುಷಿಯಾಯಿತು. ಯುವಜನರು ಒಗ್ಗೂಡಿದಲ್ಲಿ ಇಂತಹ ಹತ್ತಾರು ಕಾರ್ಯಗಳನ್ನು ಮಾಡಬಹುದಾಗಿದೆ ಎನ್ನುವಂತಹ ಪ್ರೇರಣೆ ನಮಗೆ ಸಿಕ್ಕಿದೆ. ವಿಶೇಷವಾಗಿ ಕೊಪ್ಪಳ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರು ನಮ್ಮ ಕಾರ್ಯವನ್ನು ಗುರುತಿಸಿ, ಖುದ್ದು ಜಿಲ್ಲಾ ನ್ಯಾಯಾಲಯಕ್ಕೆ ಆಹ್ವಾನ ನೀಡಿ ನ್ಯಾಯಾಧೀಶರ ಸಮ್ಮುಖದಲ್ಲಿ ಕೂಡಿಸಿ ನಮಗೆ ಆತಿಥ್ಯ ಮಾಡಿದ್ದು, ಮತ್ತಷ್ಟು ಹೊಸ ಹೊಸ ಕಾರ್ಯ ಮಾಡಲು ನಮಗೆ ವಿಶೇಷ ಸ್ಪೂರ್ತಿ ಸಿಕ್ಕಂತಾಗಿದೆ ಎಂದು ಯುವಕರು, ಗೌರವಾನ್ವಿತ ಜಿಲ್ಲಾ ನ್ಯಾಯಾಧೀಶರಾದ ಚಂದ್ರಶೇಖರ ಸಿ ಅವರಿಗೆ ಅಭಿನಂದನೆ ತಿಳಿಸಿದರು.
Comments are closed.