ವಿಜಯನಗರ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-2024
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಹೆಚ್.ಆರ್.ಗವಿಯಪ್ಪ ಸಲಹೆ
ಹೊಸಪೇಟೆ (ವಿಜಯನಗರ : ಕಾಲಕ್ಕೆ ತಕ್ಕಂತೆ ಶಿಕ್ಷಕರು ಸಹ ಬದಲಾಗಬೇಕು. ಹೊಸ ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನಗಳ ಬಗ್ಗೆ ಅರಿತು, ಕಲಿತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು ಎಂದು ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 136ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಸಾಯಿಲೀಲಾ ರಂಗಮAದಿರದಲ್ಲಿ ಸೆ.9ರಂದು ನಡೆದ ಶಿಕ್ಷಕರ ದಿನಾಚರಣೆ-2024 ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಮತ್ತು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಹಾಗೂ ದೀಪಬೆಳಗಿಸುವುದರ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಸಬೇಕೆನ್ನುವ ಹಂಬಲ ಶಿಕ್ಷಕರಲ್ಲಿರಬೇಕು. ಕಲಿಯಬೇಕೆನ್ನುವ ಆಸೆ ಮಕ್ಕಳಲ್ಲಿರಬೇಕು. ಅಂದಾಗಲೇ ಉತ್ತಮ ಕಲಿಕೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಕಲಿಕಾ ವಾತಾವರಣ, ಓದುವಂತಹ ಪರಿಸರವನ್ನು ನಿರ್ಮಾಣ ಮಾಡುವ ಮಹತ್ವದ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ತಿಳಿಸಿದರು.
ಮಕ್ಕಳನ್ನು ಓದಿಸಬೇಕು; ವಿದ್ಯಾವಂತರನ್ನಾಗಿ ಮಾಡಬೇಕು ಎನ್ನುವ ಪ್ರಜ್ಞೆ ಈಗ ಪ್ರತಿಯೊಬ್ಬ ಪಾಲಕರಲ್ಲಿ ಬರುತ್ತಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ. ಹೊಸಪೇಟೆ ನಗರದಲ್ಲಿಯೇ ಈ ವರ್ಷ ಪರೀಕ್ಷೆಗೆ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಇದು ಸಂತಷದ ಸಂಗತಿಯಾಗಿದೆ. ಹೀಗೆ ಓದಲು ಬರುವ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಹೊಸಪೇಟೆ ಸೇರಿದಂತೆ ವಿವಿಧೆಡೆಯ ಕೆಲವು ಶಾಲೆಗಳಲ್ಲಿ ಇರುವ ಕುಂದುಕೊರತೆಗಳ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ತಾವು ಜಿಲ್ಲಾಧಿಕಾರಿಗಳೊಂದಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಹಂತಹAತವಾಗಿ ಎಲ್ಲವನ್ನು ಸರಿಪಡಿಸಲಾಗುವುದು. ಯಾವುದಾದರು ಶಾಲೆಗಳಲ್ಲಿ ಕೊಠಡಿ ಸಮಸ್ಯೆ, ಕುಡಿಯುವ ನೀರಿನ ತೊಂದರೆ ಹೀಗೆ ಏನೆ ಸಮಸ್ಯೆಗಳಿದ್ದರೆ ಅದನ್ನು ಕೂಡಲೇ ತಮ್ಮ ಗಮನಕ್ಕೆ ಅಥವಾ ಜಿಲ್ಲಾಧಿಕಾರಿಗಳು ಅಥವಾ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಅದಕ್ಕೆ ತಾವು ಕೂಡಲೇ ಸ್ಪಂದನೆ ನೀಡುವುದಾಗಿ ಶಾಸಕರು ಹೇಳಿದರು.
ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್.ಎಫ್ ಇಮಾಮ್ ನಿಯಾಜಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಗುರು ಹಿರಿಯರಿಗೆ ಗೌರವಿಸುವ, ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಇರುವ ಉತ್ತಮ ಸಂಸ್ಕಾರವನ್ನು ನೀಡುವ ಪ್ರಮುಖ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಕುರಿ ಶಿವಮೂರ್ತಿ ಅವರು ಮಾತನಾಡಿ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಕರೆದೊಯ್ಯುವಂತಹ ಶಕ್ತಿ ಶಿಕ್ಷಣದಲ್ಲಿದೆ. ಮಣ್ಣಿನ ಮುದ್ದೆಯಂತಿರುವ ಮಗುವನ್ನು ಶಿಕ್ಷಣವಂತರನ್ನಾಗಿಸಿ ಕಲಿಸಿ ಬೆಳೆಸುವ ಶಿಕ್ಷಕ ವೃತ್ತಿ ಪವಿತ್ರವಾದುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಮಾತನಾಡಿ, ಪ್ರತಿಯೊಬ್ಬ ಶಿಕ್ಷಕರಿಗೆ ತನು, ಮನ, ಭಾವ, ನಡೆ, ನುಡಿ ಎಂಬ ಪಂಚಶುದ್ಧತೆಗಳ ಬಗ್ಗೆ ಅರಿವು ಇರಬೇಕು. ಬೇರೆಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ವಿಶೇಷವಾದದ್ದಾಗಿದೆ. ಶಿಕ್ಷಕರಾದವರು ಕರ್ತವ್ಯಕ್ಕೆ ಸೇರಿದ ದಿನದಿಂದ ನಿವೃತ್ತಿ ಹೊಂದುವ ದಿನದವರೆಗೂ ನಿತ್ಯ ಕಲಿಯುತ್ತ, ಕಲಿಸುತ್ತಲೇ ಹೋಗುತ್ತಾರೆ. ಮಕ್ಕಳಿಗೆ ಕಲಿಸುತ್ತ ಕಲಿಸುತ್ತ ಶಿಕ್ಷಕ ಪಾಂಡಿತ್ಯ ಹೊಂದುತ್ತಾನೆ. ತೃಪ್ತಿದಾಯಕವಾದ ಸೇವಾಮನೋಭಾವ ತಾಳುತ್ತಾನೆ. ಮಹತ್ವದ ಗುರುವಿನ ಸ್ಥಾನ ಹೊಂದಿರುವ ಶಿಕ್ಷಕರು ತಮ್ಮ ಕರ್ತವ್ಯದ ಮಹತ್ವ ಅರಿತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ ಅವರು ಮಾತನಾಡಿ, ಭಾರತ ಅಷ್ಟೇ ಎಲ್ಲ ರಾಷ್ಟçಗಳಲ್ಲಿಯೂ ಶಿಕ್ಷಕರಿಗೆ ಅತ್ಯಂತ ವಿಶೇಷ ಗೌರವದ ಸ್ಥಾನವಿದೆ. ಶಿಕ್ಷಕ ವೃತ್ತಿಯು ಎಲ್ಲ ವೃತ್ತಿಗಳಿಗಿಂತ ಮಿಗಿಲಾಗಿದೆ. ಇದು ಪ್ರತಿಯೊಬ್ಬ ಶಿಕ್ಷಕರ ಮನದಲ್ಲಿರಬೇಕು. ವಿದ್ಯಾರ್ಥಿ ಕಲಿಯಬೇಕು. ಕಲಿತು ಬೆಳೆಯಬೇಕು. ವಿದ್ಯಾರ್ಥಿಗಳು ಉತ್ತಮವಾಗಿ ಅಂಕಗಳನ್ನು ಪಡೆದು ಉನ್ನತ ಸಾಧನೆ ತೋರಿದಾಗ ಶಾಲೆಗೆ, ಕಲಿಸಿದ ಶಿಕ್ಷಕನಿಗೆ, ಗ್ರಾಮಕ್ಕೆ, ರಾಜ್ಯಕ್ಕೆ, ದೇಶಕ್ಕೆ ಹೆಸರು ಬರುತ್ತದೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್‌ನ ಬಳ್ಳಾರಿ ಉಪ ನಿರ್ದೇಶಕರಾದ ಎ.ಹನುಮಕ್ಕ ಅವರು ಪ್ರಾಸ್ತಾವಿಕ ಮಾತನಾಡಿದರು.
ಪ್ರಶಸ್ತಿ ಪ್ರದಾನ: ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣೆ ಮಾಡಲಾಯಿತು. 2023-24ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಯಿತು.
ಸಂಗೀತ ನಿನಾದ: ಸಂಗೀತ ಶಿಕ್ಷಕರಾದ ವಿಜಯಕುಮಾರ್, ಮಲ್ಲಿಕಾರ್ಜುನ ತುರುವನೂರು, ಸುಮಾ ಕಾಳಗಟ್ಟಿ ಅವರು ನಾಡಗೀತೆ ಮತ್ತು ರೈತಗೀತೆ ಹೇಳಿದರು. ಪ್ರಕಾಶ್ ಬಡಿಗೇರ್ ತಬಲ ಸಾಥ್ ಮತ್ತು ಮಹೇಶಕುಮಾರ್ ಆಚಾರ್ಯ ಅವರು ಕೀಬೋರ್ಡ್ ನುಡಿಸಿದರು. ಸಂಸ್ಕೃತಿ ಮತ್ತು ವಿಭಾ ವಿದ್ಯಾರ್ಥಿಗಳಿಂದ ನಡೆದ ಸ್ವಾಗತ ನೃತ್ಯ ಮೆಚ್ಚುಗೆ ಗಳಿಸಿತು.
ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯ ಅಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರ ಮತ್ತು ಶಿಕ್ಷಕರ ಸಂಘಟಣೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸದಸ್ಯರು ಹಾಗೂ ಶಿಕ್ಷಕರು ಇದ್ದರು.
ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಬಸಪ್ಪ ಎಂ. ಸ್ವಾಗತಿಸಿದರು. ಜಿ.ಎಂ.ಪ್ರದೀಪಕುಮಾರ್ ಚಿತ್ತವಾಡಗಿ ಹಾಗೂ ನಾಗರಾಜ ನಿರೂಪಿಸಿದರು.
Comments are closed.