ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಪ್ರಯತ್ನಿಸಿದಲ್ಲಿ ಕಠಿಣ ಕಾನೂನ ಕ್ರಮ: ಡಾ ಲಿಂಗರಾಜು

Get real time updates directly on you device, subscribe now.

ಪಿ.ಸಿ & ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ
ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆ ಅಡಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಅವಕಾಶವಿಲ್ಲ. ಆದಾಗ್ಯೂ ಇಂತಹ ಕಾನೂನು ಬಾಹಿರ ಕ್ರಮಗಳಲ್ಲಿ ಭಾಗಿಯಾದಲ್ಲಿ ಅಂತವರ ವಿರುದ್ಧ ಕಠಿಣವಾದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಆಗಸ್ಟ್ 27ರಂದು ಆಯೋಜಿಸಿದ್ದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಮತ್ತು ಎಂ.ಟಿ.ಪಿ ಕಾಯ್ದೆಯ ಅಡಿ ಬರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ-1994 ರಡಿಯಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಕಾಯ್ದೆ ಅನುಸಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತಂತೆ ಯಾವುದೇ ರೀತಿಯ ಜಾಹೀರಾತು ನೀಡುವಂತಿಲ್ಲ. ಸರ್ಕಾರಿ ಅಥವಾ ಖಾಸಗಿ ಯಾವುದೇ ವೈದ್ಯರು ಇಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಅವಕಾಶವಿದೆ. ಈ ಕಾಯ್ದೆಯಡಿ ತಪಾಸಣಾ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ತಪಾಸಣಾ ಸಮಿತಿಯನ್ನು ರಚಿಸಲಾಗಿದೆ. ತಪಾಸಣಾ ಸಮಿತಿಯು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಸಲಹಾ ಸಮಿತಿ ಸಭೆಯಲ್ಲಿ ವರದಿ ನೀಡಬೇಕು ಎಂದರು.
ಎಲ್ಲ  ಸ್ಕ್ಯಾನಿಂಗ್ ಸೆಂಟರ್‌ಗಳು ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆಯಡಿ ನಿಯಮಾನುಸಾರ ನೋಂದಣಿ ಮಾಡಿಕೊಳ್ಳಬೇಕು ಹಾಗೂ ನೋಂದಣಿ ಅವಧಿ ಪೂರ್ಣಗೊಳ್ಳುವುದಕ್ಕಿಂತ ಮೂರು ತಿಂಗಳ ಮುಂಚೆ ಅರ್ಜಿ ಸಲ್ಲಿಸಿ ನವೀಕರಣ ಮಾಡಿಕೊಳ್ಳಬೇಕು. ಸ್ಕ್ಯಾನಿಂಗ್ ಕುರಿತಾದ ಮಾರ್ಗಸೂಚಿಗಳನ್ನು ಪಾಲಿಸಿ ನಿಗದಿತ ನಮೂನೆಗಳನ್ನು ನಿರ್ವಹಿಸಬೇಕು. ನೋಂದಣಿ/ ಪರವಾನಗಿ ನವೀಕರಣವಿಲ್ಲದ ಆರೋಗ್ಯ ಸಂಸ್ಥೆಗಳ ಮೇಲೆ, ನಿಗದಿತ ನಿಯಮ ಪಾಲನೆ ಹಾಗೂ ದಾಖಲಾತಿಗಳನ್ನು ನಿರ್ವಹಿಸದ ಆರೋಗ್ಯ ಸಂಸ್ಥೆಗಳನ್ನು  ಮುಚ್ಚಿಸಲು ಅಥವಾ ಸ್ಥಗಿತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ರವೀಂದ್ರನಾಥ್ ಎಂ.ಎಚ್ ಅವರು ಮಾತನಾಡಿ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಅನುಸಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧಿಸಲಾಗಿದೆ. ಸರ್ಕಾರಿ ಅಥವಾ ಖಾಸಗಿ ಯಾವುದೇ ವೈದ್ಯರು ಇಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರಿಗೆ ಕಾರಾಗೃಹ ಶಿಕ್ಷೆ ಸಹಿತ ದಂಡವನ್ನು ವಿಧಿಸಲಾಗುವುದು. ಮೊದಲ ಅಪರಾಧಕ್ಕೆ 5 ವರ್ಷ ವೈದ್ಯಕೀಯ ಪರವಾನಿಗೆಯನ್ನು ರದ್ದುಪಡಿಸುವುದು. ನಂತರದ ಅಪರಾದಕ್ಕೆ ಸಂಬಂಧಿಸಿದ ವೈದ್ಯರ ವೈದ್ಯಕೀಯ ಪರವಾನಿಗೆಯನ್ನು ರಾಜ್ಯ ವೈದ್ಯಕೀಯ ಮಂಡಳಿಯಿಂದ ಶಾಶ್ವತವಾಗಿ ತೆಗೆದು ಹಾಕಿ, ವೈದ್ಯಕೀಯ ವೃತ್ತಿ ನಡೆಸಲು ಆಜೀವ ನಿಷೇಧ ಹೇರಲಾಗುವುದು. ಒಂದು ವೇಳೆ ಸ್ವತಃ ಮಹಿಳೆ, ಆಕೆಯ ಪತಿ ಅಥವಾ ಸಂಬಂಧಿಕರು ಭ್ರೂಣ ಲಿಂಗ ಪತ್ತೆಗೆ ಯತ್ನಿಸಿ, ವೈದ್ಯರಿಗೆ ಒತ್ತಡ ಹೇರಿದಲ್ಲಿ ಅವರಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ರೂ.50 ಸಾವಿರದಿಂದ 1 ಲಕ್ಷದವರೆಗೆ ದಂಡವನ್ನು ವಿಧಿಸಲು ಅವಕಾಶವಿದೆ ಎಂದು ಸಭೆಗೆ ತಿಳಿಸಿದರು.
*ಸಲಹಾ ಸಮಿತಿಗೆ ಅಧ್ಯಕ್ಷರ ಆಯ್ಕೆ:* ಕೊಪ್ಪಳ ಜಿಲ್ಲೆಯ ಜಿಲ್ಲಾ ಮಟ್ಟದ, ಜಿಲ್ಲಾ ಸಲಹಾ ಸಮಿತಿ (ಡಿಎಸಿ) ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ (ಡಿಐಎಂಇ) ಸಮಿತಿಯನ್ನು ಜಿಲ್ಲಾ ಸಕ್ಷಮ ಪ್ರಾಧಿಕಾರಿ, ಪಿ.ಸಿ&ಪಿ.ಎನ್.ಡಿ.ಟಿ ಕಾಯ್ದೆ ಹಾಗೂ ಜಿಲ್ಲಾಧಿಕಾರಿಗಳ ಅನುಮೋದನೆಯಂತೆ 2024ರ ಜೂನ್ 13ರಂದು ಪುನ‌ರ್ ರಚಿಸಲಾಗಿದ್ದು, ಪಿ.ಸಿ & ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿಗೆ ಅಧ್ಯಕ್ಷರನ್ನಾಗಿ ಮುನಿರಾಬಾದ್ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞರಾದ ಡಾ ಕೆ.ಹೆಚ್.ತೊಗರಿ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರು ಹಾಗೂ ಮಕ್ಕಳ ತಜ್ಞರಾದ ಡಾ.ಗಿರೀಶ, ರೆಡಿಯಾಲಜಿಸ್ಟ್ ಡಾ.ದಯಾನಂದಸ್ವಾಮಿ, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಹರೀಶ್ ಜೋಗಿ, ವಕೀಲರಾದ ಶಂಕರ್ ಬಿಸರಳ್ಳಿ,ಪ ಎನ್.ಜಿ.ಓ.ಗಳ ಪ್ರತಿನಿಧಿಗಳಾದ ಡಾ ವಿಶ್ವನಾಥ ಬಸವರಾಜ ನಲ್ವಾಡ, ಶಂಕ್ರಪ್ಪ ಬಿ ಸುರಳ್, ರೇಷ್ಮಾ ಹಾಗೂ ಸಲೀಮಾ ಜಾನ್ ಸೇರಿದಂತೆ ಪಿ.ಸಿ & ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ತಪಾಸಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!