ಡಿಜಿಟಲ್ ವ್ಯವಹಾರಕ್ಕೆ ರೈತ ಉತ್ಪಾದಕರ ಸಂಸ್ಥೆಗಳಿಗೆ ಉತ್ತೇಜಿಸಿ: ನಲಿನ್ ಅತುಲ್

Get real time updates directly on you device, subscribe now.

ಜಿಲ್ಲೆಯ ರೈತ ಉತ್ಪಾದಕರ ಸಂಸ್ಥೆಗಳಿಗೆ ಡಿಜಿಟಲ್ ಮಾರುಕಟ್ಟೆ ಮೂಲಕ ವ್ಯವಹರಿಸುವಂತೆ ಉತ್ತೇಜಿಸಬೇಕು ಕೊಪ್ಪಳ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ ರಚಿತವಾದ ರೈತ ಉತ್ಪಾದಕ ಸಂಸ್ಥೆಗಳಿಗೆ 3 ತಿಂಗಳ ಸ್ಯಾಚುರೇಷನ್ ಡ್ರೈವ್ ಕುರಿತು ಕೃಷಿ ಇಲಾಖೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 22ರಂದು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರನ್ನು ಗುರುತಿಸಿ ಸಂಘಟನೆ ಮೂಲಕ ಅಗತ್ಯ ಮಾರುಕಟ್ಟೆ ಸೌಲಭ್ಯ, ಕೃಷಿ ಪರಿಕರಗಳ ಸ್ಥಳೀಯ ಲಭ್ಯತೆ, ಕೃಷಿ ಉತ್ಪನ್ನ ಸಂಸ್ಕರಣೆ, ಬೆಳೆಗಳ ಮೌಲ್ಯ ವರ್ಧನೆ, ಉಪ ಉತ್ಪನ್ನಗಳ ತಯಾರಿಕೆ ಮೂಲಕ ಮತ್ತಷ್ಟು ಲಾಭ ತಂದುಕೊಡುವುದು. ಕೃಷಿಕರನ್ನು ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಸಧೃಡವಾಗಿಸುವ, ಉತ್ಪಾದನೆಯನ್ನು ವೃದ್ಧಿಗೊಳಿಸಿ ರೈತರ ಆದಾಯವನ್ನು ಹೆಚ್ಚಿಸುವ ಮುಖ್ಯ ಉದ್ದೇಶದಿಂದ ವಿವಿಧ ಯೋಜನೆಗಳಡಿ ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ರಚಿಸಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ಮಿಷನ್ ಮಾದರಿಯಲ್ಲಿ (3 ತಿಂಗಳ ಸ್ಯಾಚುರೇಶನ್ ಡ್ರೈವ್) ಶಿಬಿರಿಗಳನ್ನು ಕೈಗೊಂಡು ಬಿತ್ತನೆ ಬೀಜ, ರಸಗೊಬ್ಬರ, ಪೀಡೆನಾಶಕ, ಕೃಷಿ ಮಾರುಕಟ್ಟೆ ಎಪಿಎಂಸಿ ಮಂಡಿ ಮತ್ತು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಘ (ಎಫ್.ಎಸ್.ಎಸ್.ಎ.ಐ) ಪರವಾನಗಿಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರೈತ ಉತ್ಪಾದಕರ ಸಂಸ್ಥೆಗಳಿಗೆ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್, ರಾಷ್ಟ್ರೀಯ ಇ-ಮಾರ್ಕೇಟ್ ಪ್ರೈ.ಲಿ ಹಾಗೂ ಇತರೆ ಡಿಜಿಟಲ್ ಮಾರುಕಟ್ಟೆ ವೇದಿಕೆಗಳಡಿ ನೋಂದಾಯಿಸಿ ವ್ಯವಹಾರ ಮಾಡಲು ಪ್ರೇರೇಪಿಸಬೇಕು. ರೈತ ಉತ್ಪಾದಕರ ಸಂಸ್ಥೆಗಳಿಗೆ ವಿವಿಧ ಯೋಜನೆಗಳಡಿ ದೊರಕುವ ಸೌಲಭ್ಯಗಳ ಬಗ್ಗೆ, ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಸಂಪರ್ಕ ಕಲ್ಪಿಸಲು ಅಗತ್ಯ ಮಾಹಿತಿ ನೀಡಬೇಕು. ಅಮೃತ ಯೋಜನೆ ಅಡಿಯಲ್ಲಿ ರಚನೆಯಾಗಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ರಾಜ್ಯ ಸರಕಾರದ ಸಹಾಯ ಧನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಹಾಗೂ ಕೇಂದ್ರ ವಲಯ ಯೋಜನೆ ಅಡಿಯಲ್ಲಿ ರಚನೆಯಾಗಿರುವ ಉತ್ಪಾದಕರ  ಕಂಪನಿಗಳಿಗೆ ಇರುವ ಸಹಾಯ ಧನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್.ರುದ್ರೇಶಪ್ಪ ಅವರು ಮಾತನಾಡಿ, ರೈತ ಉತ್ಪಾದಕರ ಸಂಸ್ಥೆಗಳ ಮೂಲಕ ರೈತರನ್ನು ಸಂಘಟಿಸಿ ಅವರ ಸಾಮರ್ಥ್ಯವನ್ನು ಬಲವರ್ಧನೆಗೊಳಿಸುವ ಮೂಲಕ ಉತ್ಪಾದನಾ ಮತ್ತು ಮಾರುಕಟ್ಟೆ ಬಲಗಳನ್ನು ಅಭಿವೃದ್ಧಿಗೊಳಿಸುವುದು. ರೈತರು ಸಾಮೂಹಿಕವಾಗಿ ಮಾರುಕಟ್ಟೆಗೆ ಅನುಗುಣವಾಗಿ ಬೆಳೆಗಳ ಉತ್ಪಾದನೆ, ಸುಸ್ಥಿರ ಸಂಪನ್ಮೂಲಗಳ ಬಳಕೆ, ಪರಿಕರಗಳ ಮಾರಾಟ, ಮೌಲ್ಯ ವರ್ಧನೆ ಹಾಗೂ ಉತ್ಪನ್ನಗಳ ಮಾರಾಟ ಮಾಡುವ ಗುರಿ ಹೊಂದಲಾಗಿದೆ. ರಾಜ್ಯ ಸರ್ಕಾರವು ಒಟ್ಟು 5 ವರ್ಷಗಳ ಅವಧಿಯಲ್ಲಿ ಪ್ರತಿ ಹೋಬಳಿ ಮಟ್ಟದಲ್ಲಿ ಕನಿಷ್ಠ ಒಂದು ರೈತ ಉತ್ಪಾದಕರ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಸುಮಾರು 5 ಲಕ್ಷ ರೈತರನ್ನು ಸಂಘಟಿಸುವ ದೂರದೃಷ್ಠಿ ಹೊಂದಿದೆ. ಪ್ರತಿ ರೈತ ಸದಸ್ಯರಿಂದ ತಲಾ 1000 ದಂತೆ ಷೇರು ಬಂಡವಾಳದ ಮೂಲಕ ಸಂಸ್ಥೆಯ ರಚನೆ, ಕಂಪನೆ ಕಾಯ್ದೆ 2013 ಕಾಯ್ದೆಯಡಿಯಲ್ಲಿ ನೊಂದಣಿ, ಗ್ರ‍್ರಾಮ ಮಟ್ಟದಲ್ಲಿ 15 ರಿಂದ 20 ಸದಸ್ಯರನ್ನೊಳಗೊಂಡಂತೆ ರೈತರ ಆಸಕ್ತ ಗುಂಪು ರಚಿಸಿ (ಎಫ್‌ಐಜಿ), 20 ರೈತ ಆಸಕ್ತ ಗುಂಪುಗಳನ್ನು ಒಗ್ಗೂಡಿಸಿ 300 ರಿಂದ 500 ರೈತ ಸದಸ್ಯರನ್ನೊಳಗೊಂಡು ಒಂದು ಎಫ್.ಪಿ.ಓ ರಚಿಸಿ, 12 ರಿಂದ 15 ಮಂದಿ ಸದಸ್ಯರನ್ನು ಸಂಸ್ಥೆ ನಿರ್ದೇಶಕರನ್ನಾಗಿ ಚುನಾಯಿಸಿ ಆಡಳಿತ ಮಂಡಳಿ ರಚಿಸಲಾಗುವುದು. ಜಲಾನಯನ ಅಭಿವೃದ್ಧಿ ಇಲಾಖೆ, ನಬಾರ್ಡ್, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆ, ಜೆ.ಎಸ್.ಡಬ್ಲ್ಯೂ ಪೌಂಡೇಶನ್ ಹಾಗೂ ಇತರೆ ಸೇರಿ ಕೊಪ್ಪಳ ಜಿಲ್ಲೆಯಲ್ಲಿ 44  ರೈತ ಉತ್ಪಾದಕರ ಸಂಸ್ಥೆಗಳು ರಚಿತವಾಗಿದ್ದು, ಇದರಲ್ಲಿ ಸಂಖ್ಯೆ 31,658 ರೈತರು ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೊಪ್ಪಳ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ, ಪಶು ಇಲಾಖೆ ಉಪನಿರ್ದೇಶಕರಾದ ಡಾ ಪಿ.ಎಂ.ಮಲ್ಲಯ್ಯ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: