ಅಗ್ನಿವೀರರಗೆ ದೈಹಿಕ & ವೈದ್ಯಕೀಯ ಪರೀಕ್ಷಾ ಮಾಹಿತಿಯ ಒಂದು ದಿನದ ಕಾರ್ಯಗಾರ

Get real time updates directly on you device, subscribe now.

 ಕೊಪ್ಪಳ ಜಿಲ್ಲಾಡಳಿತದ ವಿಶೇಷ ಕ್ರಮ: ಸೇನೆ ಸೇರಬಯಸುವವರಿಗೆ ಆರ್ಮಿ ಅಧಿಕಾರಿಗಳಿಂದ ಮಾರ್ಗದರ್ಶನ
ಅಗ್ನಿವೀರ್ ಲಿಖಿತ ಪರೀಕ್ಷೆಗೆ ತೇರ್ಗಡೆ ಹೊಂದಿದ ಜಿಲ್ಲೆಯ 406 ಅಭ್ಯರ್ಥಿಗಳು

: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಹಾಗೂ ಸೇನಾ ನೇಮಕಾತಿ ಕೇಂದ್ರ ಬೆಳಗಾವಿ ಇವರುಗಳ ಸಹಯೋಗದಲ್ಲಿ ಅಗ್ನಿವೀರ್ ಲಿಖಿತ ಪರೀಕ್ಷೆಗೆ ತೇರ್ಗಡೆ ಹೊಂದಿದ ಕೊಪ್ಪಳ ಜಿಲ್ಲಾ ಯುವಕರಿಗೆ ದೈಹಿಕ ಮತ್ತು ವೈದ್ಯಕೀಯ ಪರೀಕ್ಷಾ ಮಾಹಿತಿಯ ಒಂದು ದಿನದ ಕಾರ್ಯಗಾರ ಆಗಸ್ಟ್ 12ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆಯಿತು.
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸಸಿಗೆ ನೀರುಣಿಸುವುದರ ಮೂಲಕ ಈ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಯುವಕರಿಗೆ ದೇಶ ಸೇವೆ ಮಾಡಲು ಅಗ್ನಿವೀರ್ ಯೋಜನೆಯು ಸುವರ್ಣಾವಕಾಶವಾಗಿದೆ. ಕೊಪ್ಪಳ ಜಿಲ್ಲೆಯ 406 ಅಭ್ಯರ್ಥಿಗಳು ಅಗ್ನಿವೀರ್ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಅಭ್ಯರ್ಥಿಗಳಿಗೆ ಡಿಸೆಂಬರ್ ಮಾಹೆಯಲ್ಲಿ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿ ಪರಿಶೀನೆ ನಡೆಯಲಿದೆ. ಈ ಪರೀಕ್ಷೆಗಳನ್ನು ಕೊಪ್ಪಳ ಜಿಲ್ಲೆಯಲ್ಲಿಯೇ ಹಮ್ಮಿಕೊಳ್ಳುವ ಜಿಲ್ಲಾಡಳಿತದ ಕೋರಿಕೆಗೆ ಬೆಳಗಾವಿಯ ಕರ್ನಲ್ ಅವರು ಒಪ್ಪಿಗೆ ನೀಡಿದ್ದಾರೆ. ಇದಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದರು.
ಸಾಮಾನ್ಯವಾಗಿ ಮಾಹಿತಿಯ ಕೊರತೆಯಿಂದಾಗಿ ಕೆಲವು ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ವೇಳೆ ವಿಫಲವಾಗುತ್ತಾರೆ. ಈ ವಿಷಯವನ್ನು ಪರಿಗಣಿಸಿ, ಸೇನಾಧಿಕಾರಿಗಳು ಮತ್ತು ಮಾಜಿ ಸೈನಿಕರಿಂದ ಅಭ್ಯರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ. ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿಗಳ ಪರಿಶೀಲನೆಗಾಗಿ ಇನ್ನೂ ಮೂರು ತಿಂಗಳು ಕಾಲಾವಕಾಶವಿದ್ದು, ದೇಹದಾರ್ಡ್ಯತೆ ಪರೀಕ್ಷೆಗಾಗಿ ಅಭ್ಯರ್ಥಿಗಳು ಕೈಗೊಳ್ಳಬೇಕಾದ ಸಿದ್ಧತೆಗಳು, ದಾಖಲೆಗಳ ಪರಿಶೀಲನೆಯ ಮಾಹಿತಿಯನ್ನು ಈ ತರಬೇತಿ ಕಾರ್ಯಾಗಾರದಿಂದ ನೀಡಲಾಗುತ್ತಿದೆ. ಇದೊಂದು ಒಳ್ಳೆಯ ಅವಕಾಶವಾಗಿದ್ದು, ಅಭ್ಯರ್ಥಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಂಡು, ತರಬೇತಿಯಲ್ಲಿ ತಿಳಿಸುವ ಕ್ರಮಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಿ ದೈಹಿಕ ಪರೀಕ್ಷೆಗೆ ಸಿದ್ಧರಾಗಬೇಕು. ಆ ಮೂಲಕ ದೇಶದ ಸೇವೆಗೆ ಸೇರ್ಪಡೆಯಾಗಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಪಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಮೂರ್ನಾಲ್ಕು ತಿಂಗಳ ಹಿಂದೆ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 40 ರಿಂದ 50 ಜನರು ರನ್ನಿಂಗ್ ಮಾಡುತ್ತಿದ್ದರು. ಈ ಬಗ್ಗೆ ಜಿಲ್ಲಾ ಕ್ರೀಡಾಧಿಕಾರಿಗಳಲ್ಲಿ ವಿಚಾರಿಸಿದಾಗ ಕೊಪ್ಪಳ ಜಿಲ್ಲೆಯ ಯುವಕರಲ್ಲಿ ಸೇನೆಯಲ್ಲಿ ಸೇರುವ ಬಗ್ಗೆ ಬಹಳಷ್ಟು ಉತ್ಸಾಹವಿದ್ದು, ಇವರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ, ಕೊಪ್ಪಳ ಜಿಲ್ಲೆಯಿಂದ ಹೆಚ್ಚು ಜನರು ಸೇನೆಯಲ್ಲಿ ಸೇರಬಹುದಾಗಿದೆ ಎಂಬ ಮಾಹಿತಿ ನೀಡಿದ್ದರು. ಆಗ ಕೊಪ್ಪಳ ಜಿಲ್ಲಾ ಪಂಚಾಯತ್ ವತಿಯಿಂದ ಲಿಖಿತ ಪರೀಕ್ಷೆಯ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಲಾಭ ಪಡೆದುಕೊಳ್ಳಬೇಕು. ಸೇನಾ ಸೇವೆಯ ಬಳಿಕವೂ ತಮಗೆ ಹಲವಾರು ಅವಕಾಶಗಳು ಸಿಗಲಿದ್ದು, ಅಭ್ಯರ್ಥಿಗಳು ಗುರಿಯನ್ನು ಮುಂದೆ ಇಟ್ಟುಕೊಂಡು ಸಾಗಬೇಕಿದೆ ಎಂದರು.
ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಕೊಪ್ಪಳ ಜಿಲ್ಲೆಯಿಂದ ಸೇನೆಯಲ್ಲಿ ಸೇವೆ ಸಲ್ಲಿಸುವರ ಸಂಖ್ಯೆ ಕಡಿಮೆ ಇದ್ದು, ಈ ಸಂಖ್ಯೆಯನ್ನು ಹೆಚ್ಚಿಸಲು ಈ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಎರಡನೇ ಹಂತದಲ್ಲಿ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಇದರಿಂದ ಕೊಪ್ಪಳ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯ ಯುವಕರು ಸೇನೆಗೆ ಸೇರಲು ಅನುಕೂಲವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಎ.ಆರ್.ಓ ಕರ್ನಲ್ ನಿಶಾಂತ ಶೆಟ್ಟಿ, ಆರ್ಮಿ ವೈದ್ಯರಾದ ಮೇಜರ್ ಎ.ವಿಶ್ವನಾಥ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠಲ್ ಚಾಬಗೌಡರ್, ಕೊಪ್ಪಳ ತಹಶೀಲ್ದಾರರಾದ ವಿಠಲ್ ಚೌಗಲಾ, ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮಾರುತಿ ಗೊಂದಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಎ.ಬಸವರಾಜ, ಮಾಜಿ ಸೈನಿಕರಾದ ಪುಂಡಪ್ಪ ಅಡುವಳ್ಳಿ ಸೇರಿದಂತೆ ಇತರ ಅಧಿಕಾರಿಗಳು, ಮಾಜಿ ಸೈನಿಕರು ಉಪಸ್ಥಿತರಿದ್ದರು.
ಬಳಿಕ ನಡೆದ ತರಬೇತಿ ಕಾರ್ಯಾಗಾರದಲ್ಲಿ ಬೆಳಗಾವಿಯ ಎ.ಆರ್.ಓ ಕರ್ನಲ್ ನಿಶಾಂತ ಶೆಟ್ಟಿ ಅವರು ದೈಹಿಕ ಪರೀಕ್ಷೆಯ ಬಗ್ಗೆ ಮತ್ತು ಆರ್ಮಿ ವೈದ್ಯರಾದ ಮೇಜರ್ ಎ.ವಿಶ್ವನಾಥ ಅವರು ವೈದ್ಯಕೀಯ ಪರೀಕ್ಷೆಗಳ ಕುರಿತು ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಕೊಪ್ಪಳ ಜಿಲ್ಲೆಯ ಮತ್ತು ಅಕ್ಕ-ಪಕ್ಕದ ಜಿಲ್ಲೆಗಳ ಮಾಜಿ ಸೈನಿಕರುಗಳು ಸೇನಾ ಸೇವೆ ಮತ್ತು ತಮ್ಮ ಅನುಭವಗಳ ಬಗ್ಗೆ ಮಾತನಾಡಿದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: