ಬಡ ಕಟ್ಟಡ ಕಾರ್ಮಿಕರ ಬದುಕು ರಕ್ಷಿಸಲು ಆಗ್ರಹಿಸಿ ಆಗಸ್ಟ್ 5 ರಂದು ಮುಖ್ಯಮಂತ್ರಿ ಮನೆ ಚಲೋ..
ಮಂಡಳಿ ನಿಧಿ ಉಳಿಸಿ:
ಕೊಪ್ಪಳ : ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ (ಜೆಸಿಟಿಯು) ಮುಖಂಡರಿಂದ ನಗರದ ಸಾಹಿತ್ಯ ಭವನದ ಮುಂದೆ ಮುಖ್ಯಮಂತ್ರಿ ಮನೆ ಚಲೋ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ಹೈಕೋರ್ಟ ಆದೇಶದಂತೆ ಶೈಕ್ಷಣಿಕ ಧನಸಹಾಯ ಪಾವತಿಸಬೇಕು. ಖರೀದಿಗಳ ಮೂಲಕ ನಡೆಸಲಾಗುವ ವ್ಯಾಪಕ ಭ್ರಷ್ಟಾಚಾರದಿಂದ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕು ಆ ಮೂಲಕ ಮಂಡಳಿ ನಿಧಿ ಉಳಿಸಿ: ಬಡ ಕಾರ್ಮಿಕರ ಬದುಕು ರಕ್ಷಿಸಲು ಆಗ್ರಹಿಸಿ 2024 ಆಗಸ್ಟ್ 5 ರಂದು ರಾಜ್ಯದ ಸಾವಿರಾರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಬೆಂಗಳೂರಿನಲ್ಲಿ ಬೃಹತ್ ಮುಖ್ಯಮಂತ್ರಿ ಮನೆ ಚಲೋ ಚಳುವಳಿ ನಡೆಸಲು ನಿರ್ಧರಿಸಲಾಗಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರು ಭಾಗವಹಿಸಲು ಕೋರಿದರು.
ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಸಂಯೋಜನೆಗೊಂಡಿರುವ ಎಲ್ಲ ಕಟ್ಟಡ ಕಾರ್ಮಿಕ ಸಂಘಗಳ ಒಕ್ಕೂಟವಾದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ (ಜೆಸಿಟಿಯು)ನೇತೃತ್ವದಲ್ಲಿ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ರಾಜ್ಯದಾದ್ಯಂತ ಆಗಮಿಸುವ ಹತ್ತು ಸಾವಿರಕ್ಕೂ ಅಧಿಕ ಕಟ್ಟಡ ನಿರ್ಮಾಣ ಕಾರ್ಮಿಕರು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ 2007 ರಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಕಟ್ಟಡ ಮತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಮಿಕರಿಗಾಗಿ 19 ಸೌಲಭ್ಯಗಳನ್ನು ಘೋಷಿಸಿದೆ. ಇದರಲ್ಲಿ 11 ಮಾತ್ರವೇ ಜಾರಿಯಲ್ಲಿವೆ! ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣ. ಮದುವೆ.ಆರೋಗ್ಯ, ಅಪಘಾತ ಸಹಜ ಮರಣ, ಹೆರಿಗೆ ಮೊದಲಾದ ಸೌಲಭ್ಯಗಳು ಜಾರಿಯಲ್ಲಿವೆ. ಆದರೆ ಇತ್ತೀಚಿಗೆ ಕಲ್ಯಾಣ ಮಂಡಳಿಯು ಬೋಗಸ್ ಕಾರ್ಡ ನಿಯಂತ್ರಣಕ್ಕಾಗಿ ಹಲವು ಬಿಗಿ ಕ್ರಮಗಳನ್ನು ಅನುಸರಿಸುತ್ತಿದೆ ಇದು ಸ್ವಾಗತಾರ್ಹ ಆದರೆ ಬೋಗಸ್ ನಿಯಂತ್ರಣದ ನೆಪದಲ್ಲಿ ಸಾವಿರಾರು ನೈಜ ಕಟ್ಟಡ ಕಾರ್ಮಿಕರು ಬಲಿಪಶುವಾಗುತ್ತಿದ್ದಾರೆ. ನೊಂದಣಿ.ನವೀಕರಣ ಹಾಗೂ ವಿವಿಧ ಸೌಲಭ್ಯಗಳಿಗೆ ಅರ್ಜಿ ಹಾಕಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಮಂಡಳಿ ತಂತ್ರಾಂಶದಲ್ಲಿ ಪದೇ ಪದೇ ಉಂಟಾಗುತ್ತಿರುವುದರಿಂದ ಶೈಕ್ಷಣಿಕ ಧನ ಸಹಾಯ, ಮದುವೆ, ವೈದ್ಯಕೀಯ, ಹೆರಿಗೆ, ಪಿಂಚಣಿ ಮೊದಲಾದ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಸಲ್ಲಿಸಲಾದ ಸಾವಿರಾರು ಫಲಾನುಭವಿಗಳಿಗೆ ಧನ ಸಹಾಯ ಪಾವತಿ ಸರಿಯಾಗಿ ಆಗುತ್ತಿಲ್ಲ. ಶೈಕ್ಷಣಿಕ ಧನ ಸಹಾಯವನ್ನು ಶೇ 60 ರಿಂದ 80 ರವರೆಗೆ ಕಡಿತ ಮಾಡಿರುವುದರಿಂದ ಸಾವಿರಾರು ಬಡ ಕಟ್ಟಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯ ಎದುರಾಗಿದೆ. ಕಲ್ಯಾಣ ಮಂಡಳಿಯು ಶೈಕ್ಷಣಿಕ ಧನ ಸಹಾಯ ಕಡಿತ ಮಾಡಿದ್ದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್ ಹೈಕೋರ್ಟ ನಲ್ಲಿ ಅರ್ಜಿ ಹಾಕಿ ಇಬ್ಬರು ಬಡ ಕಾರ್ಮಿಕರ ಮಕ್ಕಳಿಗೆ ದಂಡ ಸಹಿತ ಧನ ಸಹಾಯ ಕೊಡಿಸಲು ಸಾಧ್ಯವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಬೊಮ್ಮಾಯಿ ಸರ್ಕಾರದ ವೇಳೆ ಕಾರ್ಮಿಕ ಸಚಿವರಾಗಿದ್ದ ಶಿವರಾಂ ಹೆಬ್ಬಾರ್ ತಮ್ಮ ಅವಧಿಯಲ್ಲಿ ಟಿವಿಗಳು, ಕಂಪ್ಯೂಟರ್‌ಗಳು, ಇನ್ನೋವಾ ಕಾರುಗಳು, ಕಚೇರಿಯ ಐಷಾರಾಮಿ ಒಳ ವಿನ್ಯಾಸ, ಜಾಹಿರಾತು, ಪ್ರಕಟಣೆ. ಸೋಫಾ, ಖುರ್ಚಿಗಳು ಇತ್ಯಾದಿಗಳ ಹೆಸರಿನಲ್ಲಿ ಮನಸೋಇಚ್ಛೆ ಖರ್ಚು ಮಾಡಿದರು. ಮುಂದುವರಿದು ಕಾರ್ಮಿಕರ ಹೆಸರಿನಲ್ಲಿ ಟೂಲ್ ಕಿಟ್, ರೇಷನ್ ಕಿಟ್, ಬೂಸ್ಟರ್ ಕಿಟ್ (ಆಯುರ್ವೇದ ಪೌಡರ್) ಸ್ಕೂಲ್ ಕಿಟ್, ಲ್ಯಾಪ್ ಟಾಪ್, ಟ್ಯಾಬ್, ವೈದ್ಯಕೀಯ ತಪಾಸಣೆ, ಆಂಬ್ಯೂಲೆನ್ಸ್, ಕ್ರೀಚ್, ಇತ್ಯಾದಿಗಳಿಗೆ ಖರ್ಚು ಮಾಡಿ ನಿಧಿಯನ್ನು ಅರ್ಧಕ್ಕೆ ಇಳಿಸಿದರು. ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಯಿತು. ಕಾರ್ಮಿಕ ಸಂಘಟನೆಗಳಿಂದ ಬೃಹತ್ ಹೋರಾಟಗಳು ನಡೆದವು.ಆದರೆ ಬಳಿಕ ಅಧಿಕಾರವಹಿಸಿಕೊಂಡ ಕಾಂಗ್ರಸ್ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ ಖರೀದಿಗಳನ್ನು ನಿಲ್ಲಿಸಿ ಕಾರ್ಮಿಕರಿಗೆ DBT ಮೂಲಕ ಸೌಲಭ್ಯ ವಿತರಿಸಿ ಎಂದು ಹೆಸರಿಗಷ್ಟೇ ಘೋಷಿಸಿದ್ದರು. ಬಳಿಕ ಕಾರ್ಮಿಕರ ಹೆಸರಲ್ಲಿ ಮತ್ತೆ ಲ್ಯಾಪ್‌ಟಾಪ್ ಖರೀದಿ, ಖಾಸಗಿ ಆಸ್ಪತ್ರೆಗಳಿಂದ ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶ ಕಿಟ್ ಖರೀದಿ (ಆಯುರ್ವೇದಿಕ್ ಪೌಡರ್) ಇತ್ಯಾದಿಗಳ ಮೂಲಕ ಈಗಾಗಲೇ ನೂರಾರು ಕೋಟಿ ರೂಪಾಯಿ ಆನಗತ್ಯ ಖರ್ಚು ಮಾಡುತ್ತಿದ್ದಾರೆ. ಹತ್ತಾರು ವರ್ಷ ಕಾನೂನು ಜಾರಿಗಾಗಿ ಬಳಿಕ ಕಲ್ಯಾಣ ಮಂಡಳಿ ರಚನೆಗಾಗಿ ಹೋರಾಟ ನಡೆಸಿದ ಕಾರ್ಮಿಕ ಸಂಘಟನೆಗಳನ್ನು ಕಾರ್ಮಿಕ ಸಚಿವರು.ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದೂರವಿಟ್ಟಿದ್ದಾರೆ. ಕಲ್ಯಾಣ ಮಂಡಳಿ ಸಭೆ ನಡೆಸದೇ ಬೇಕಾಬಿಟ್ಟಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಕಾರ್ಮಿಕರು ಸಲ್ಲಿಸಿದ ಮನವಿ, ಹೋರಾಟಕ್ಕೂ ಕಿವಿಗೊಡುತ್ತಿಲ್ಲ. ಈ ಹಿನ್ನಲೆಯಲ್ಲಿ ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಸಂಯೋಜನೆ ಗೊಂಡಿರುವ ಕಟ್ಟಡ ಕಾರ್ಮಿಕ ಸಂಘಗಳು ಈ ಕೆಳಕಂಡ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಿ ಆಗಸ್ಟ್ 5, 2024 ರಂದು ಮುಖ್ಯಮಂತ್ರಿ ಮನೆ ಚಲೋ ಹೋರಾಟವನ್ನು ಹಮ್ಮಿಕೊಂಡಿವೆ.
ಬೇಡಿಕೆಗಳು:ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶ ವಾಪಸ್ ಪಡೆಯಬೇಕು ಹೈಕೋರ್ಟ ಆದೇಶದಂತೆ 2021 ರ ಅಧಿಸೂಚನೆ ಅನ್ವಹಿಸಿ ಶೈಕ್ಷಣಿಕ ಧನ ಸಹಾಯ ಬಿಡುಗಡೆ ಮಾಡಬೇಕು. 2022-23-24 ಸಾಲಿನ ಬಾಕಿ ಅರ್ಜಿಗಳಿಗೂ ಧನ ಸಹಾಯ ಪಾವತಿಸಬೇಕು.ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸುವುದು ನಿಲ್ಲಬೇಕು ಹಾಗೂ ವಿಳಂಬ ಮಾಡದೇ ಕಾರ್ಡು ವಿತರಣೆ ಆಗಬೇಕು.ಸೌಲಭ್ಯಗಳಿಗಾಗಿ ಸಲ್ಲಿಸಿರುವ ಸಾವಿರಾರು ಅರ್ಜಿಗಳು ವಿಲೇವಾರಿ ಆಗದೇ ಕೊಳೆಯುತ್ತಿವೆ. ಇವುಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಪಿಂಚಣಿದಾರರಿಗೆ ಶೀಘ್ರವೇ ಅವರ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು. ಪಿಂಚಣಿಗೆ ಅರ್ಜಿ ಸಲ್ಲಿಸುವಲ್ಲಿ ಆಗುತ್ತಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು.ಟೆಂಡರ್ ಆಧಾರಿತ ಎಲ್ಲ ಖರೀದಿ ವ್ಯವಹಾರಗಳನ್ನು ನಿಲ್ಲಿಸಬೇಕು. ಇದುವರೆಗೆ ನಡೆದಿರುವ ಖರೀದಿಗಳಲ್ಲಿ ಅವ್ಯವಹಾರಗಳ ನಡೆದಿದ್ದು, ಈ ಬಗ್ಗೆ ನ್ಯಾಯಂಗ ತನಿಖೆಯಾಗಬೇಕು.ಹೊಸ ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆಗಳು ಹಾಗೂ ಸರ್ವರ್ ಸಮಸ್ಯೆ ಪರಿಹರಿಸಬೇಕು.ಬಾಕಿ ಇರುವ ಸೆಸ್ ಸಂಗ್ರಹ ಮಾಡಿ.ಬೃಹತ್ ಖಾಸಗಿ ಹಾಗೂ ಸಾರ್ವಜನಿಕ ನಿರ್ಮಾಣಗಳಿಗೆ ಶೇ 2 ರಷ್ಟು ಸೆಸ್ ವಿಧಿಸಬೇಕು.ಕಲ್ಯಾಣ ಮಂಡಳಿಯನ್ನು ಮತ್ತು ಸಲಹಾ ಮಂಡಳಿಯನ್ನು ಪುನ ರಚಿಸಿ ಕೇಂದ್ರ ಕಾರ್ಮಿಕ ಸಂಯೋಜಿತ ಸಂಘಗಳಿಗೆ ಅದರಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಮತ್ತು ಮಹಿಳಾ ಪ್ರಾತಿನಿಧ್ಯಕ್ಕೆ ಕಾರ್ಮಿಕ ಸಂಘದ ಪ್ರತಿನಿಧಿಗೆ ಮಾತ್ರವೇ ಅವಕಾಶ ಇರಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು ಸಂಯೋಜಿತ) ಜಿಲ್ಲಾ ಅಧ್ಯಕ್ಷ ಖಾಸೀಮ್ ಸಾಬ್ ಸರ್ದಾರ್. ಮಹೆಬೂಬ್ ದಫದಾರ. ಶಿವಾನಂದ ಬಾರಕೇರ. ಮಂಜಪ್ಪ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ರಿ.(ಎಐಟಿಯುಸಿ ಸಂಯೋಜಿತ) ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ ಪಾತ್ರೋಟಿ. ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎ. ಗಫಾರ್. ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಉಸ್ತುವಾರಿ ಡಾ : ಕೆ. ಎಸ್.ಜನಾರ್ದನ. ಜಿಲ್ಲಾ ಉಪಾಧ್ಯಕ್ಷ ಜಾಫರ್ ಕುರಿ. ಜಿಲ್ಲಾ ಸಹ ಕಾರ್ಯದರ್ಶಿ ಮೌಲಾ ಹುಸೇನ್ ಹಣಗಿ. ಮಂಜುನಾಥ್ ಪಾಟೀಲ್. ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (ರಿ )
(AIUTUC ಸಂಯೋಜಿತ) ಜಿಲ್ಲಾ ಸಂಚಾಲಕ ಶರಣು ಗಡ್ಡಿ. ಮಂಗಳೇಶ್ ರಾಠೋಡ ಗಿಣಿಗೇರಾ ಮುಂತಾದವರು ಆಗ್ರಹಿಸಿದರು.
Comments are closed.