ತಂತ್ರಜ್ಞಾನದ ಆವಿಷ್ಕಾರದಿಂದ ಭಾಷಾ ಮಾಧ್ಯಮ ಬೆಳವಣಿಗೆ:ಕುಲಪತಿ ಪ್ರೊ.ಬಿ.ಕೆ.ರವಿ

Get real time updates directly on you device, subscribe now.


*ಸರಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಅಕಾಡೆಮಿ ಅಧ್ಯಕ್ಷ-ಸದಸ್ಯ ಸ್ಥಾನ ನೀಡಿದ್ದು ಶ್ಲಾಘನೀಯ
*ಪ್ರತಿಭಾನ್ವಿತ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ

ಗಂಗಾವತಿ: ಆಧುನಿಕ ತಂತ್ರಜ್ಞಾನದ ಆವಿಷ್ಕಾರದಿಂದ ಭಾಷಾ ಮಾಧ್ಯಮದ ಬೆಳವಣಿಗೆಯಾಗಿದ್ದು ಪತ್ರಿಕೋದ್ಯಮದಲ್ಲಿ ಪ್ರತಿಭಾನ್ವಿತರಿಗೆ ವಿಫುಲ ಅವಕಾಶಗಳಿವೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.
ಅವರು ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನದಲ್ಲಿ ವಿದ್ಯಾರ್ಥಿಗಳು ಪತ್ರಿಕೋದ್ಯಮ ಸ್ಥಿತಿಗತಿ ಹಾಗೂ ಕನ್ನಡ ಮಾಧ್ಯಮ ಕುರಿತು ಅವಲೋಕನೆ ಅತ್ಯಗತ್ಯವಾಗಿದೆ. ತಾಂತ್ರಿಕತೆಯ ಅಭಿವೃದ್ಧಿಗೆ ಹೊಂದಿಕೊಳ್ಳುವ ಜೊತೆಗೆ, ಸಂವಹನ ವಿಷಯ ತಿಳಿದುಕೊಳ್ಳುವ ತುಡಿತ ಇರಬೇಕು. ತಂತ್ರಜ್ಞಾನ ಆವಿಷ್ಕಾರದಿಂದಲೇ ಭಾಷಾ ಮಾದ್ಯಮದ ಬೆಳವಣಿಗೆ ಉಂಟಾಗಿದೆ, ಇದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ೭೦ ದಶಕದಲ್ಲಿ ಅಚ್ಚುಮೊಳೆ ಮುದ್ರಣದ ಕಾಲದಿಂದ ಇದೀಗ ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಭಾಷಾ ಪತ್ರಿಕೆ, ವಾಹಿನಿಗಳು ಹುಟ್ಟುಕೊಂಡಿವೆ ಎಂದರು.
ಇದೇ ವಿದ್ಯಾರ್ಥಿಗಳಿಗೆ ಆಕಾಶವಾಣಿಯಲ್ಲಿ ಟೆಲಿಗ್ರಾಂ ಮೂಲಕ ಆಗಿನ ಮುಖ್ಯಮಂತ್ರಿಗಳ ವರದಿ ಮಾಡಿದ್ದ ಅನುಭವ ಹಂಚಿಕೊಂಡರು.
ಆಧುನಿಕ ತಂತ್ರಜ್ಞಾನ ಜ್ಞಾನದ ಜೊತೆಗೆ ಕುತೂಹಲ, ಪ್ರಚಲಿತ ವಿದ್ಯಮಾನಗಳ ಅರಿವು ಇರಬೇಕು. ಇದರೊಂದಿಗೆ ಗುರುತೋರುವ ಮಾರ್ಗ, ತಂದೆ ತಾಯಿ ಕನಸನ್ನು ನನಸು ಮಾಡಿಕೊಳ್ಳುವತ್ತ ಗಮನಹರಿಸಿದರೆ ವೃತ್ತಿಯಲ್ಲೂ ಯಶಸ್ಸು ಸಿಗುತ್ತದೆ ಎಂದರು.
ಇನ್ನೂ ೩-೪ ದಶಕಗಳ ಕಾಲ ಮುದ್ರಣ ಮಾಧ್ಯಮಕ್ಕೆ ಭವಿಷ್ಯ ಇದೆ. ಅಮೆರಿಕಾದ ನಿರ್ಮಾಣ ಸಂಸ್ಥೆಗಳು ಸಹ ಭಾರತ ಮನರಂಜನಾ ಉದ್ಯಮದಲ್ಲಿ ನೇರ ಬಂಡವಾಳ ಹೂಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಕ್ಷೇತ್ರದಲ್ಲಿ ಇರುವ ವಿಫುಲ ಅವಕಾಶ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಪ್ರಾಂಶುಪಾಲರಾದ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ ವಿಭಾಗದಿಂದ ಪ್ರತಿ ವರ್ಷ ಭಿನ್ನ ಕಾರ್ಯಕ್ರಮ ನಡೆಯುತ್ತಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ’ಯುವವಾಣಿ’ ವರ್ಷಕೊಮ್ಮೆ ಬರುತ್ತಿದೆ. ಇನ್ಮುಂದೆ ವರ್ಷಕ್ಕೆ ೩ ಸಂಚಿಕೆ ಹೊರತರಲು ಅಗತ್ಯ ಹಣಕಾಸಿನ ನೆರವು ಕಾಲೇಜು ವತಿಯಿಂದ ನೀಡಲಾಗುತ್ತದೆ. ಇದರ ಜೊತೆಗೆ ವಿಭಾಗಕ್ಕೆ ಬೇಕಾದ ಸ್ಟುಡಿಯೋ ನಿರ್ಮಾಣಕ್ಕೆ ಅಗತ್ಯ ಯೋಜನೆ ಮಾಡಲಾಗುತ್ತದೆ. ಬೇಕಾದ ಅಗತ್ಯ ಅನುದಾನ ಕೆಕೆಆರ್‌ಡಿಬಿ ವತಿಯಿಂದ ಒದಗಿಸಲು ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರು ತಿಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೊರತಂದ ’ಯುವವಾಣಿ’ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಇದರ ಜೊತೆಗೆ ಕೊಪಣ ಮಾಧ್ಯಮ ಹಬ್ಬದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಟ್ರೋಫಿಯನ್ನು ಗಣ್ಯರು ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ವೈ.ಎಸ್.ವಗ್ಗಿ, ವಿಭಾಗದ ಉಪನ್ಯಾಸಕರಾದ ತಾಯಪ್ಪ ಮರ್ಚೇಡ್, ಖಾಜಾ ಸಾಬ್ ಗಡಾದ್, ರಾಘವೇಂದ್ರ ಚೌಡ್ಕಿ, ಹುಲಿಗೆಮ್ಮ, ಅಭಿಷೇಕ್ ಸಿ. ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಪ್ರಾಧ್ಯಾಪಕರಾದ ಇಟಗಿ ಶೀಬಾರಾಣಿ ನೆರವೇರಿಸಿದರು.

ಪತ್ರಿಕೋದ್ಯಮಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ವೃತ್ತಿ ಕೌಶಲ್ಯ ಹಾಗೂ ಪ್ರಸ್ತುತ ವಿಚಾರಗಳ ಕುರಿತು ಮಾಧ್ಯಮ ಅಕಾಡೆಮಿಯಿಂದ ವಿಚಾರ ಸಂಕೀರ್ಣ, ಸಂವಾದ, ಗೋಷ್ಠಿ ಸೇರಿ ಹಲವು ಕೌಶಲ್ಯ ಸೇರಿ ತರಬೇತಿ ನೀಡುವ ಯೋಜನೆ ಇದ್ದು ಪ್ರಥಮ ಸಭೆಯಲ್ಲಿ ಈ ಕುರಿತು ಅಧ್ಯಕ್ಷರ ಜತೆ ಎಲ್ಲಾ ಸದಸ್ಯರು ಚರ್ಚೆ ಮಾಡಲಾಗಿದ್ದು ಪೂರ್ಣ ಪ್ರಮಾಣದ ಸದಸ್ಯರು ಸೇರಿದ ನಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಭಾರಿ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಭಾಗಕ್ಕೆ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವ ನೀಡಿದ್ದು ಅಕಾಡೆಮಿಯಲ್ಲಿ ಪತ್ರಕರ್ತರ ಪರವಾಗಿ ಕೆಲಸ ಮಾಡಲಾಗುತ್ತದೆ.
-ಕೆ.ನಿಂಗಜ್ಜ ಸದಸ್ಯರು ಕರ್ನಾಟಕ ಮಾಧ್ಯಮ ಅಕಾಡೆಮಿ.

Get real time updates directly on you device, subscribe now.

Comments are closed.

error: Content is protected !!