ಬರ ಪರಿಸ್ಥಿತಿಯಲ್ಲಿ ಬೆಳೆ ನಿರ್ವಹಣೆ ಕುರಿತು ರೈತರಿಗೆ ತರಬೇತಿ
: ತಾತ್ಕಾಲಿಕ ಬರ ಪರಿಸ್ಥಿತಿಯಲ್ಲಿ ಮಳೆಯಾಶ್ರಿತ ವಿವಿಧ ಬೆಳೆಗಳಾದ ಮೆಕ್ಕೆ ಜೋಳ, ಹೆಸರು, ಸಜ್ಜೆ, ಅಲಸಂದಿ ಅಲ್ಲದೇ ನವಣೆಯಂತಹ ಸಿರಿಧಾನ್ಯಗಳ ನಿರ್ವಹಣೆ ಕುರಿತು ಕೊಪ್ಪಳ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ಜುಲೈ 10 ರಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಹಾಗೂ ಕೋರಮಂಡಲ ಇಂಟರನ್ಯಾಶನಲ್ ಲಿಮಿಟೆಡ್ ಕಂಪನಿ ಸಹಯೋಗದಲ್ಲಿ ರೈತರಿಗೆ ಒಂದು ದಿನದ ತರಬೇತಿ ಹಾಗೂ ರೈತರೊಡನೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹ ಪ್ರಾಧ್ಯಾಪಕರಾದ ವಾಮನಮೂರ್ತಿ ಅವರು ಮಾತನಾಡಿ, ಬೆಳೆಗಳಿಗೆ ಕೀಟ ರೋಗಗಳ ಬಾಧೆ ಸಾಮಾನ್ಯ. ಆದರೆ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಬೆಳೆಗಳು ಮನುಷ್ಯರಂತೆ ಒತ್ತಡಕ್ಕೊಳಗಾಗುತ್ತವೆ. ಅತೀವೃಷ್ಠಿ ಅನಾವೃಷ್ಠಿ, ದೀರ್ಘಕಾಲದ ಬರ, ತಾತ್ಕಾಲಿಕ ಬರ ಅಲ್ಲದೇ ತೀವ್ರವಾದ ಚಳಿ, ಶುಷ್ಕಗಾಳಿ ಇತ್ಯಾದಿ ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ನಾನು ನೋಡಿದಂತೆ ಬೇಗ ಮುಂಗಾರು ಮಳೆ ಆದಾಗ ರೈತರು ಬಿತ್ತನೆ ಮಾಡುತ್ತಾರೆ. ಅದರಲ್ಲೂ ಹೆಸರು ಈ ಭಾಗದ ನಗದು ಬೆಳೆ (ಕ್ಯಾಶಕ್ರಾಪ್) ಆಗಿದ್ದು, ಈ ಬಾರಿ ಸುಮಾರು 20 ಸಾವಿರ ಹೆಕ್ಟೇರ್‌ನಷ್ಟು ಹೆಸರು ಬೆಳೆ ಬಿತ್ತನೆಯಾಗಿದೆ. ಆದರೆ ತೀವ್ರ ವರ್ಷಧಾರೆ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿವೆ. ಅದರಲ್ಲೂ ಹೂ ಬಿಡದ ಹಂತದಲ್ಲಿನ ಬೆಳೆಗಳಿಗೀಗ ತೀವ್ರ ಮಳೆಯ ಅವಶ್ಯಕತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಕೆಲವು ನೀರಿನಲ್ಲಿ ಕರಗುವ ಗೊಬ್ಬರಗಳಾದ ನ್ಯಾನೋಯುರಿಯಾ, ಡಿಎಪಿ ಜೊತೆಗೆ ಕೆಲವು ಸಸ್ಯಚೋದಕ ಬಳಸುವ ಮೂಲಕ ಮತ್ತು ಜೈವಿಕ ಗೊಬ್ಬರಗಳನ್ನು ಸಿಂಪರಣೆ ಮಾಡುವುದರ ಮೂಲಕ 8-10 ದಿನ ಒತ್ತಡ ಸಹಿಷ್ಣುತೆ ಪರಿಸ್ಥಿತಿಯನ್ನು ಬೆಳೆಗಳಿಗೆ ಒದಗಿಸಲು ಸಾಧ್ಯ. ಪ್ರತಿಯೊಬ್ಬ ರೈತರು ಕೃಷಿ ಹೊಂಡದAತಹ ನೀರು ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿಕೊಂಡು ನೀರಿನ ಲಭ್ಯತೆ ಇರುವಂತೆ ನಿಗಾ ವಹಿಸಬೇಕು. ಬೆಳೆಗಳಿಗೆ ಅವಶ್ಯಕತೆಗಿಂತ ಹೆಚ್ಚಿನ ನೀರು ಕೊಡದೇ ನೀರಿನ ಬಜೆಟ್ ಅನುಸರಿಸಬೇಕು ಎಂದು ತಿಳಿಸಿದರು.
ಬೆಳೆಗಳಿಗೆ ಶಿಫಾರಸು ಮಾಡಿದ ಪ್ರಮಾಣದಲ್ಲೇ ಗೊಬ್ಬರಗಳನ್ನು ಬಳಸಬೇಕಲ್ಲದೇ ಪೋಟ್ಯಾಶ್‌ಯುಕ್ತ ಸಂಯುಕ್ತ ಗೊಬ್ಬರಗಳನ್ನು ಬಳಸುವುದರಿಂದ ಪೋಟ್ಯಾಶ್ ಬೆಳೆಗಳಿಗೆ ಲಭ್ಯವಾಗಿ ಬರ ನಿರೋಧಕ ಶಕ್ತಿ ಬರುತ್ತದೆ. ಗೊಬ್ಬರಗಳನ್ನು ಶಿಫಾರಸಿನಂತೆ ವಿವಿಧ ಹಂತಗಳಲ್ಲಿ 2-3 ಬಾರಿ ಹಂತ, ಹಂತವಾಗಿ ಕೊಡಬೇಕು. ರೋಗ/ಕೀಟಗಳ ಸೂಕ್ತ ನಿರ್ವಹಣೆ ಮಾಡಬೇಕು. ಮಿಶ್ರಬೆಳೆ ಬೆಳೆದಾಗ ತೇವಾಂಶ, ಕೊರತೆ ಒತ್ತಡ ಕಡಿಮೆ ಮಾಡಬಹುದಾಗಿದೆ ಎಂದು ಸಮಗ್ರ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ರೈತರು ಮುಂಗಾರು ಬೆಳೆ ಸಮೀಕ್ಷೆ ತಾವೇ ಮಾಡಿಕೊಳ್ಳಬೇಕು ಮತ್ತು ತಪ್ಪದೇ ಬೆಳೆ ವಿಮೆ ಮಾಡಿಸಬೇಕು, ಇದರ ಬಗ್ಗೆ ಕೃಷಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕೋರಮಂಡಲ ಕಂಪನಿಯ ಕ್ಷೇತ್ರ ಅಧಿಕಾರಿ ಶ್ರೀನಿವಾಸ ಅವರು ಮಾತನಾಡಿ, ತಮ್ಮ ಕಂಪನಿಯ ಉತ್ಪನ್ನಗಳಾದ ನ್ಯಾನೋ, ಡಿ.ಎ.ಪಿ., ಗ್ರೀನಸ್ಟಾರ್ ಎನ್ನುವ ಸಸ್ಯಚೋದಕ ಅಲ್ಲದೇ ಪ್ಯಾರಂಫಾಸ್ ನಂತಹ ವಿಶಿಷ್ಟ ಉತ್ಪನ್ನಗಳ ಮಾಹಿತಿ ಹಾಗೂ ಬೆಳೆಗಳಲ್ಲಿ ಬಳಸುವ ನ್ಯಾನೋ ಡಿ.ಎ.ಪಿ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಲಕೇರಿ ಗ್ರಾಮದ 40 ಕ್ಕೂ ಹೆಚ್ಚಿನ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿ ಪಡೆದರು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಬಹುದು ಅಥವಾ ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ( ಮೊ.ನಂ. 9480247745) ಅವರನ್ನು ಸಂಪರ್ಕಿಸಬಹುದು ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
Comments are closed.