ಕೆರೆ ತುಂಬಿಸುವ ಯೋಜನೆ: ವಿವಿಧ ಗ್ರಾಮಸ್ಥರೊಂದಿಗೆ ಸಭೆ, ಚರ್ಚೆ

Get real time updates directly on you device, subscribe now.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಜುಲೈ 8ರಂದು ಚಿಕೇನಕೊಪ್ಪ, ಬಿನ್ನಾಳ, ಯರೇಹಂಚಿನಾಳ, ತೊಂಡಿಹಾಳ, ಬಂಡಿಹಾಳ, ಕರಮುಡಿ, ಮುಧೋಳ ಮತ್ತು ಸೋಂಪೂರ ಹೊಸೂರ ಗ್ರಾಮಗಳಲ್ಲಿ ಸಂಚರಿಸಿ ಮಹತ್ವದ ಕೆರೆ ತುಂಬಿಸುವ ಯೋಜನೆಯ ಬಗ್ಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸುಧೀರ್ಘ ಚರ್ಚಿಸಿದರು.
ಪೂರ್ವ ನಿಗದಿಯಂತೆ ಮೊದಲಿಗೆ ಬೆಳಗ್ಗೆ ಚಿಕೇನಕೊಪ್ಪ, ಬಿನ್ನಾಳ, ಯರೇಹಂಚಿನಾಳ, ತೊಂಡಿಹಾಳ ಮತ್ತು ಬಂಡಿಹಾಳ ಗ್ರಾಮಗಳಿಗೆ ಭೇಟಿ ನೀಡಿದರು. ಮಧ್ಯಾಹ್ನ ಊಟದ ವಿರಾಮದ ನಂತರ ಕರಮುಡಿ ಹಾಗೂ ಮುಧೋಳ ಮತ್ತು ಸೋಂಪುರ ಹೊಸೂರ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.
ಈ ವೇಳೆ ರಾಯರೆಡ್ಡಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರ ತಾಲೂಕಿನ ಬಹುತೇಕ ಗ್ರಾಮಸ್ಥರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಭಾಗದಲ್ಲಿ ಯಾವುದೇ ದೊಡ್ಡ ನದಿಯಾಗಲಿ ಹಳ್ಳವಾಗಲಿ ಹರಿದಿಲ್ಲ. ಯಾವುದೇ ರೀತಿಯ ನೀರಿನ ಮೂಲಗಳಿಲ್ಲ. ಇಲ್ಲಿನ ಜನರು ನೀರಿಗಾಗಿ ಪರಿತಪಿಸುವುದನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಶಾಶ್ವತ ಪರಿಹಾರ ಸಿಗಬೇಕು ಎಂದು ಆಲೋಚಿಸಿ ದೂರದೃಷ್ಟಿಯ ಕೆರೆ ತುಂಬಿಸುವ ಯೋಜನೆಯ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದರಿಂದಾಗಿ ಯಲಬುರ್ಗಾ ಮತ್ತು ಕುಕನೂರ ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿಗಾಗಿ 2024-25ನೇ ಸಾಲಿನ ಆಯವ್ಯಯದಲ್ಲಿ 970 ಕೋಟಿ ರೂ. ನಿಗದಿಪಡಿಸಿ ಘೋಷಿಸಲಾಗಿದೆ. ಈ ಬೃಹತ್ 38 ಕೆರೆ ತುಂಬಿಸುವ ಯೋಜನೆಗೆ ಕನಿಷ್ಟ 50 ಎಕರೆಗಿಂತ ಹೆಚ್ಚಿಗೆ ಜಮೀನು ಪ್ರತಿಯೊಂದು ಗ್ರಾಮದಲ್ಲಿ ಬೇಕಾಗಿದ್ದು, ಜಮೀನುಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲಿ ಖರೀದಿಸಲಾಗುವುದು. ಈ ಯೋಜನೆ ಸಾಕಾರಗೊಂಡಲ್ಲಿ ಈ ಭಾಗದಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ತಪ್ಪಲಿದೆ. ಹೀಗಾಗಿ ಗ್ರಾಮಸ್ಥರು ಸಹಕರಿಸಿ ಸಾರ್ವಜನಿಕ ಅನುಕೂಲಕ್ಕಾಗಿ ಜಮೀನು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರಿಗೆ ಅಭಿನಂದನೆ: ಕೆರೆ ನಿರ್ಮಾಣಕ್ಕೆ ಜಮೀನು ನೀಡಲು ಮುಂದೆ ಬಂದ ಮುಧೋಳ ಗ್ರಾಮಸ್ಥರ ನಿರ್ಣಯಕ್ಕೆ ಸಭೆಯಲ್ಲಿ ಶಾಸಕರಾದ ರಾಯರೆಡ್ಡಿ ಅವರು ಗ್ರಾಮಸ್ಥರಿಗೆ ಅಭಿನಂದನೆ ತಿಳಿಸಿದರು. ಕೆರೆ ತುಂಬಿಸುವ ಯೋಜನೆಯ ಜೊತೆಗೆ ಇನ್ನೀತರ ನಾನಾ ಕಾರ್ಯಗಳಿಗು ಸಹ ಗಮನ ಹರಿಸಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ತಾವು ಬದ್ಧರಾಗಿ ಕೆಲಸ ಮಾಡುವುದಾಗಿ ಶಾಸಕರು ಗ್ರಾಮಸ್ಥರಿಗೆ ತಿಳಿಸಿದರು.
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಮುಖ್ಯ ಎಂಜಿನಿಯರ್ ಮಂಜುನಾಥ ಅವರು ಮಾತನಾಡಿ, ಈ ಕೆರೆ ತುಂಬಿಸುವ ಯೋಜನೆಯು ರಾಜ್ಯದಲ್ಲಿಯೇ ಹೊಸದು. ಸದಾಕಾಲ ಕ್ಷೇತ್ರದ ಜನರ ಹಿತವನ್ನು ಮುಖ್ಯವಾಗಿಟ್ಟುಕೊಂಡು ಯೋಚಿಸಿ ರಾಯರೆಡ್ಡಿ ಅವರು ತಮ್ಮ ಕ್ಷೇತ್ರದ ಜನರ ಅನುಕೂಲಕ್ಕಾಗಿ ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಜನರು ಸಹಕರಿಸಬೇಕು. ಮಹತ್ವದ ಈ ಯೋಜನೆಯು ಬಿಟ್ಟು ಹೋಗದಂತೆ ನೋಡಿಕೊಳ್ಳುವುದು ಕ್ಷೇತ್ರದ ಜನರ ಮಹತ್ವದ ಜವಾಬ್ದಾರಿಯಾಗಿದೆ. ಇದು ಐತಿಹಾಸಿಕ ಯೋಜನೆಯಾಗಿದೆ. ಮತ್ತೆ ಮತ್ತೆ ತರುವ ಯೋಜನೆ ಇದಲ್ಲ. ಸಾರ್ವಜನಿಕರು ಕೆರೆಗಳ ನಿರ್ಮಾನಕ್ಕೆ ಜಮೀನು ನೀಡಲು ಮುಂದೆ ಬರಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಇನ್ನೀತರ ಅಭಿಯಂತರರು, ಆಯಾ ಗ್ರಾಮದ ಹಿರಿಯರು, ರೈತರು ಮತ್ತು ರೈತ ಮುಖಂಡರು ಇದ್ದರು.

Get real time updates directly on you device, subscribe now.

Comments are closed.

error: Content is protected !!