ಸರ್ವರಿಗೂ ಸಮಪಾಲಿನ ಬಜೆಟ್: ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ 14 ನೇ ಆಯವ್ಯಯ ಐತಿಹಾಸಿಕ ಬಜೆಟ್ ಆಗಿದ್ದು, ನಡೆದಂತೆ ನುಡಿದಿರುವ ‘ಅನ್ನರಾಮಯ್ಯ’ರಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಖೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಬಣ್ಣಿಸಿದ್ದಾರೆ.
ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಮುಖ್ಯಮಂತ್ರಿಗಳು ತಮ್ಮ ಬಜೆಟ್ ನಲ್ಲಿ ಬಸವಣ್ಣನವರ ಕಾಯಕ ಮತ್ತು ದಾಸೋಹ ಸ್ಮರಿಸಿದ್ದು, ಜನ ಸಾಮಾನ್ಯರಿಗೆ ಹೊರೆಯಾಗದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ತತ್ವದಡಿ ಉತ್ತಮ ಬಜೆಟ್ ನೀಡಿದ್ದಾರೆ.
ಬಜೆಟ್ ಆರ್ಥಿಕ ಶಿಸ್ತಿನಿಂದ ಕೂಡಿದ್ದು, ಐದು ಗ್ಯಾರಂಟಿ ಯೋಜನೆಗಳ ಸ್ಪಷ್ಟ ಮುನ್ನೋಟದೊಂದಿಗೆ ಅದ್ಭುತ ಬಜೆಟ್ ನೀಡಿದ್ದಾರೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಅರಿವು, ವಿದ್ಯಾಸಿರಿ ಹಾಗೂ ಶುಚಿ ಸಂಭ್ರಮ ಕಿಟ್ ವಿತರಣೆ ಯೋಜನೆಗಳನ್ನು ಘೋಷಿಸಿರುವುದು ಸ್ವಾಗತರ್ಹ.
ಇನ್ನು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರ ವಾಹನಗಳ ಖರೀದಿಗೆ 3 ಲಕ್ಷ ಸಹಾಯಧನ ಹಾಗೂ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಮುಂದಾಗಿರುವುದು ಹಿಂದುಳಿದ ವರ್ಗದ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಅವರು ಹೊಂದಿರುವ ಕಳಕಳಿಯನ್ನು ತೋರುತ್ತದೆ.
ಹಿಂದುಳಿದ ವರ್ಗಗಳ ಪ್ರವರ್ಗ – 1 ಮತ್ತು ಪ್ರವರ್ಗ 2ಎ ಜಾತಿಗಳಿಗೆ ಸೇರಿದ ಉದ್ಯಮಿಗಳಿಗೆ 10 ಕೋಟಿ ರೂ.ವರೆಗೆ ಶೇ.6ರ ಬಡ್ಡಿ ದರದಲ್ಲಿ ಸಾಲದ ನೆರವು ಘೋಷಣೆ ಮಾಡಲಾಗಿದೆ.
ಕರ್ನಾಟಕ ಎಂದು ಮರು ನಾಮಕರಣವಾಗಿ ನ.1ಕ್ಕೆ 50 ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಯೋಜನೆ ಹಾಗೂ ರಾಜ್ಯದ ಜಾನಪದವನ್ನು ಇಡೀ ರಾಜ್ಯಕ್ಕೆ ಪಸರಿಸುವ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನಪದ ಲೋಕ ಸ್ಥಾಪನೆ ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು.
ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ನಲ್ಲಿ ರೈತ ಪರ, ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಸಬಲೀಕರಣ, ಯುವಜನರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಿದ್ದು, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ತತ್ವದಡಿ ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
Comments are closed.