ಗವಿಮಠದ ಉಚಿತ ಶಿಕ್ಷಣ ಯೋಜನೆಗಳಿಗೆ ಅನುದಾನಕ್ಕೆ ಸಿವಿಸಿ ಆಗ್ರಹ

Get real time updates directly on you device, subscribe now.

 

ಕೊಪ್ಪಳ: ಅನ್ನ, ಅಕ್ಷರ ಹಾಗೂ ಆಧ್ಯಾತ್ಮದ ತ್ರಿವಳಿ ಸಂಗಮವಾದ ಶ್ರೀ ಗವಿಮಠಕ್ಕೆ ಈ ಹಿಂದೆ ಸರಕಾರ ಆಶ್ವಾಸನೆ ನೀಡಿದಂತೆ 10 ಕೋಟಿ ರೂಪಾಯಿ ಅನುದಾನವನ್ನು ವಿದ್ಯಾರ್ಥಿಗಳ ಉಚಿತ ಪ್ರಸಾದ ವಸತಿ ನಿಲಯಕ್ಕೆ ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಜೆಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಆಗ್ರಪಡಿಸಿದ್ದಾರೆ.
5,000 ಮಕ್ಕಳ ಉಚಿತ ಪ್ರಸಾದ ನಿಲಯವು ಇದೇ ಜುಲೈ ಒಂದರಂದು ಲೋಕಾರ್ಪಣೆಗೊಳ್ಳುತ್ತಿದೆ. ಕೋಳೂರು ಹಾಗೂ ಕಾಟ್ರಳ್ಳಿಯಲ್ಲಿ ಎರಡು ನೂತನ ಕ್ಯಾಂಪಸ್ ಗಳು ತಲೆಯೆತ್ತಲಿವೆ. ಶ್ರೀಮಠದಲ್ಲಿ ನೆಲೆ ನಿಂತು ಶಿಕ್ಷಣ ಪಡೆಯುವ ಬಡ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ. ಇದು ಶ್ರೀಮಠದ ಲೋಕ ಕಲ್ಯಾಣ ಹಾಗೂ ಶಿಕ್ಷಣ ಕ್ರಾಂತಿಯ ಬಗ್ಗೆ ಜನ ಮಾನಸದ ಬೆಂಬಲವನ್ನು ಸೂಚಿಸುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯಕ್ಕೆ 10 ಕೋಟಿ ರೂಪಾಯಿ ಅನುದಾನ ಒದಗಿಸುವ ಕುರಿತು ಶ್ರೀಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡತನದ ಹಿನ್ನೆಲೆಯಿಂದ ಬಂದವರು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದು ಕಷ್ಟಪಟ್ಟು ಉನ್ನತ ಹುದ್ದೆಗೆ ಏರಿದ್ದಾರೆ. ಬಡವರ ಬಗೆಗಿನ ಅವರ ಕಾಳಜಿ ಅನನ್ಯ ಹಾಗೂ ಪ್ರಶ್ನಾತೀತ. ಸಿದ್ದರಾಮಯ್ಯ ಹಾಗೂ ಕೊಪ್ಪಳದ ಸಂಬಂಧ ನಾಲ್ಕು ದಶಕಗಳಷ್ಟು ಹಳೆಯದು. ಹೀಗಾಗಿ ಮುಖ್ಯಮಂತ್ರಿಯವರು ಈ ಕೂಡಲೇ ಶ್ರೀ ಮಠದ ಬಡವರ ಬಗೆಗಿನ ಕಾಳಜಿ ಹಾಗೂ ದುರ್ಬಲರ ಬದುಕಿಗೆ ಆಶಾಕಿರಣವಾಗಬಲ್ಲ ಶೈಕ್ಷಣಿಕ ಯೋಜನೆಗೆ ಈ ಕೂಡಲೇ ಸರಕಾರ ವಾಗ್ದಾನ ಮಾಡಿದಂತೆ 10 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿರುವ ಎಲ್ಲಾ ಶಾಸಕರು, ಸಂಸದರು ಹಾಗೂ ಇತರೆ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸರಕಾರದ ಮೇಲೆ ಒತ್ತಡ ತಂದು ಅನುದಾನವನ್ನು ಒದಗಿಸಿಕೊಟ್ಟರೆ ಅದು ಒಂದು ಶಿಕ್ಷಣ ಕ್ರಾಂತಿಗೆ ಬಹು ಮುಖ್ಯ ಕೊಡುಗೆಯಾಗಲಿದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!