ಕೆಂಪೇಗೌಡರ ಇಚ್ಛಾಶಕ್ತಿ ಹಾಗೂ ಅಭಿವೃದ್ಧಿ ಮನೋಭಾವ ಅಳವಡಿಸಿಕೊಳ್ಳಬೇಕು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್

Get real time updates directly on you device, subscribe now.

  ಒಂದು ನಿರ್ದಿಷ್ಟ ಕೆಲಸದ ಕುರಿತು ಯೋಜನೆ ರೂಪಿಸಿದಾಗ ಅದರ ಬಗ್ಗೆ ನಮಗೆ ಇಚ್ಛಾಶಕ್ತಿ ಬಹಳ ಮುಖ್ಯ. ಈ ವಿಷಯವನ್ನು ನಾವು ಕೆಂಪೇಗೌಡರ ಜೀವನ ಚರಿತ್ರೆಯಿಂದ ಕಲಿತು, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.

ಗುರುವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲರೂ ಇಂದು ನೋಡುತ್ತಿರುವ ಆಧುನಿಕ ಬೆಂಗಳೂರಿನ ಮೂಲ ನಿರ್ಮಾತೃ ಕೆಂಪೇಗೌಡರು. ಅವರ ದೂರದೃಷ್ಠಿ, ಅಭಿವೃದ್ಧಿ ಕುರಿತಾಗಿ ಅವರಿಗಿದ್ದ ಇಚ್ಛಾಶಕ್ತಿ, ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗುವಂತದ್ದು, ನಿರ್ದಿಷ್ಟ ಗುರಿಯೊಂದನ್ನು ಸಾಧಿಸಲು ನಾವು ವಹಿಸಬೇಕಾದ ಶ್ರಮ, ಇರಬೇಕಾದ ಶ್ರದ್ಧೆಯನ್ನು ಕೆಂಪೇಗೌಡರಿAದ ಕಲಿಯಬೇಕು. ಅವರ ಅಭಿವೃದ್ಧಿ ಪರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಇಂದು ನಮ್ಮ ರಾಜ್ಯ ರಾಜಧಾನಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಜೀವನ ಶೈಲಿ ಮುಂತಾದ ವಿಷಯಗಳಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಮೂಲ ಕಾರಣ ಕೆಂಪೇಗೌಡರು ಹಾಗೂ ಅವರ ವ್ಯವಸ್ಥಿತ ನಗರ ನಿರ್ಮಾಣ ಕುರಿತ ಯೋಚನೆಗಳು ಎಂದು ಅವರು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳಲ್ಲಿಯೂ ಮಹನೀಯರಂತೆ ಸಾಧಿಸುವ ದೃಢ ಸಂಕಲ್ಪವಿರಬೇಕು. ಕಳೆದ ಸಾಲಿನಲ್ಲಿ ನಮ್ಮ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸಾಧಾರಣವಾಗಿತ್ತು. ಈ ಬಾರಿ ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ವ್ಯವಸ್ಥಿತ ಯೋಜನೆ ರೂಪಿಸಬೇಕು. ವಿದ್ಯಾರ್ಥಿಗಳಿಗೆ ಅಧಿಕ ಒತ್ತಡವಾಗದಂತೆ ಅವರಲ್ಲಿ ಓದಿನೆಡೆಗೆ ಆಸಕ್ತಿ ಬೆಳೆಸಿ, ಪರೀಕ್ಷೆ ಕುರಿತಾದ ಭಯ ಹೋಗಲಾಡಿಸಿ ವಿಶೇಷ ಕ್ರಮಗಳ ಮೂಲಕ ಉತ್ತಮ ಅಂಕಗಳನ್ನು ಗಳಿಸಲು ಶಿಕ್ಷಕರು ಕಾರ್ಯ ಯೋಜನೆ ರೂಪಿಸಬೇಕು. ಅಧಿಕಾರಿಗಳು ಅಗತ್ಯ ಸಹಕಾರ ನೀಡಿ, ಜಿಲ್ಲೆಯ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಮಾತನಾಡಿ, ಸುಮಾರು 400 ಕಿ.ಮೀ. ದೂರದಲ್ಲಿರುವ ಬೆಂಗಳೂರಿನ ನಿರ್ಮಾತೃ ಬಗ್ಗೆ, ಬೆಂಗಳೂರಿನ ಬಗ್ಗೆ ಇಂದು ನಾವೆಲ್ಲರೂ ತಿಳಿದುಕೊಳ್ಳುತ್ತಿದ್ದೇವೆ. ಆ ಊರಿಣ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದೇವೆ. ಆದರೆ ನಮ್ಮ ಜಿಲ್ಲೆಯ, ಸ್ಥಳೀಯ ವಿಷಯಗಳ ಬಗ್ಗೆ, ಚರಿತ್ರೆ, ಇತಿಹಾಸದ ಬಗ್ಗೆ ನಾವು ಪ್ರಮುಖವಾಗಿ ಹೆಚ್ಚು ತಿಳಿದುಕೊಳ್ಳಬೇಕು. ನಮ್ಮ ಜಿಲ್ಲೆಯೂ ಕೂಡ ಅನೇಕ ಚಾರಿತ್ರಿಕ, ಐತಿಹಾಸಿಕ ಹಿನ್ನೆಲೆ, ಘಟನೆಗಳಿಗೆ ಸಾಕ್ಷಿಯಾಗಿದೆ. ಜಿಲ್ಲಾ ವ್ಯಾಪ್ತಿಯ ಅನೇಕ ಸ್ಥಳಗಳಲ್ಲಿ ಐತಿಹಾಸಿಕ ಕುರುಹುಗಳು ಇವೆ. ಕಳೆದ ಎರಡು ದಿನಗಳ ಹಿಂದೆ ಕೆಂಪೇಗೌಡರನ್ನು ಬಂಧಿಸಿಟ್ಟಿದ್ದ ಸೆರೆಮನೆ ನಮ್ಮ ಜಿಲ್ಲೆಯ ಆನೆಗುಂದಿಯಲ್ಲಿ ಪತ್ತೆಯಾದ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದೆ. ಇಂತಹ ಐತಿಹಾಸಿಕ ಕುರುಹುಗಳಿರುವ ನಮ್ಮ ಸ್ಥಳೀಯ ಪರಿಸರದ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ನಮ್ಮ ಜಿಲ್ಲೆಯ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲೆಯ ಎಲ್ಲ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಕೂಡ ಆಸಕ್ತಿ ವಹಿಸಿ ನಮ್ಮ ಸ್ಥಳೀಯ ಪ್ರೇಕ್ಷಣೀಯ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಬೇಕು. ನಮ್ಮಲ್ಲಿನ ಕೀಳರಿಮೆಯನ್ನು ಬಿಟ್ಟು ಶೈಕ್ಷಣಿಕವಾಗಿ ಉನ್ನತಿ ಹೊಂದಲು ವಿದ್ಯಾರ್ಥಿಗಳು ಶ್ರಮ ಹಾಗೂ ಶ್ರದ್ಧೆಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಸಿದ್ದಲಿಂಗಪ್ಪ ಕೊಟ್ನೆಕಲ್ ಅವರು ಮಾತನಾಡಿ, ಕೆಂಪೇಗೌಡರ ತಂದೆ ಕೆಂಪನAಜೇಗೌಡರು ಮೂಲತಃ ತಮಿಳುನಾಡಿನವರು. ಅವರು ಕಾಲಕ್ರಮದಲ್ಲಿ ಬೆಂಗಳೂರಿಗೆ ಹತ್ತಿರದ ಆಹುತಿ/ಆವತಿಗೆ ಬಂದು ನೆಲೆಸಿದರು. ಅವರ ಹಿರಿಯ ಮಗನಾದ ಕೆಂಪೇಗೌಡರಿಗೆ 1513 ರಲ್ಲಿ ತಮ್ಮ ಅಧಿಕಾರ ಹಸ್ತಾಂತರಿಸಿದರು. ಅಂದಿನ ಬೆಂಗಳೂರು ಪ್ರದೇಶ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿತ್ತು. ಈ ಕಾರಣದಿಂದ ಕೆಂಪೇಗೌಡರು ಹಂಪಿ ಹಾಗೂ ಕೊಪ್ಪಳ ಪರಿಸರಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ವಿಜಯ ನಗರ ಸಾಮ್ರಾಜ್ಯದ ನಗರ ಯೋಜನೆ, ವ್ಯವಸ್ಥಿತ ಕಲ್ಪನೆಯಿಂದ ಪ್ರೇರೇಪಿತರಾಗಿ ಬೆಂಗಳೂರು ಎಂಬ ವ್ಯವಸ್ಥಿತ ನಗರವನ್ನು ನಿರ್ಮಿಸಿದರು. ಇಲ್ಲಿನ ಜಲಸಂಪನ್ಮೂಲದ ಬಗ್ಗೆ ಆಕರ್ಷಿತಗೊಂಡು ಬೆಂಗಳೂರಿನಲ್ಲಿ ನೂರಾರು ಕೆರೆಗಳನ್ನು ನಿರ್ಮಿಸಿದರು. ಅವರಿಗೂ ಕೊಪ್ಪಳ ಪರಿಸರಕ್ಕೂ ನಂಟಿತ್ತು ಎಂಬುದರ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಆನೆಗುಂದಿಯಲ್ಲಿ ಕೆಂಪೇಗೌಡರನ್ನು ಬಂಧಿಸಿಟ್ಟದ ಸೆರೆಮನೆ ಪತ್ತೆಯಾಗಿರುವುದೇ ಸಾಕ್ಷಿ. ಬೆಂಗಳೂರಿನಲ್ಲಿ ಬರಗಾಲ ಬಂದಾಗ ತುರ್ತು ಪರಿಸ್ಥಿತಿ ನಿಭಾಯಿಸಲು ವಿಜಯನಗರ ಅರಸರ ಅನುಮತಿ ಇಲ್ಲದೇ ನಾಣ್ಯ ಟಂಕಿಸಿದ್ದ ಅಪರಾಧಕ್ಕಾಗಿ ಕೆಂಪೇಗೌಡರನ್ನು ಆನೆಗುಂದಿಯ ಸೆರೆಮನೆಯಲ್ಲಿ ಬಂಧಿಸಿಡಲಾಗಿತ್ತು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ ಎಂದು ಕೆಂಪೇಗೌಡರ ಜೀವನ ಚರಿತ್ರೆ, ಇತಿಹಾಸದ ಬಗ್ಗೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಡಳಿತ ಭವನದ ಸಿಬ್ಬಂದಿ, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು. ಶಕುಂತಲಾ ಬೇನಾಳ ಹಾಗೂ ತಂಡದವರು ಸುಗಮ ಸಂಗೀತ ಹಾಗೂ ನಾಡಗೀತೆಗಳನ್ನು ಪ್ರಸ್ತುತ ಪಡಿಸಿದರು.

Get real time updates directly on you device, subscribe now.

Comments are closed.

error: Content is protected !!