ಬೆಂಗಳೂರು ನಿರ್ಮಾತೃ ಕೆಂಪೇಗೌಡ

Get real time updates directly on you device, subscribe now.

ಇಂದು ಕೆಂಪೇಗೌಡ ಎಂದರೆ ಬೆಂಗಳೂರು; ಬೆಂಗಳೂರು ಎಂದರೆ ಕೆಂಪೇಗೌಡ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿಯಾಗಿದೆ. ಬೆಂಗಳೂರು ನಗರವು ದೇಶದಲ್ಲಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿಯೂ ಸಹ ಪ್ರಸಿದ್ಧಿ ಪಡೆದಿದೆ. ವ್ಯಾಪಾರ-ವಹಿವಾಟು, ವಾಣಿಜ್ಯ, ಬಂಡವಾಳ ಹೂಡಿಕೆ, ವಿಜ್ಞಾನ-ತಂತ್ರಜ್ಞಾನ ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ. ಇಂದು ಬೆಂಗಳೂರು ವಿಶ್ವಮಟ್ಟಕ್ಕೆ ಬೆಳೆಯಲು ಅಂದಿನ ಯಲಹಂಕ ನಾಡಪ್ರಭು ಕೆಂಪೇಗೌಡರ ಶ್ರಮ ಇಂದು ಫಲ ನೀಡುತ್ತಿದೆ ಎಂದರೆ ತಪ್ಪಾಗಲಾರದು. ಈ ಮೊದಲೇ ಇದ್ದ ಬೆಂಗಳೂರು ನಗರವನ್ನು ಪುನರ್ ಕಟ್ಟಿ ಮಹಾನಗರವನ್ನಾಗಿ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ.

ಯಲಹಂಕದ ನಾಡಪ್ರಭುಗಳ ಮೂಲ ತಮಿಳುನಾಡು ಎಂದು ಹೇಳಲಾಗುತ್ತಿದೆ. ಇವರ ಮೂಲ ಪುರುಷ ರಣಭೈರೇಗೌಡ. ಇವನು ತಮಿಳುನಾಡಿನ ಕಂಚಿಯವನು. ಅಲ್ಲಿನ ಸ್ಥಳೀಯ ಪಾಳೇಗಾರನಾದ ಸೆಲ್ವನಾಯಕನ ಉಪಟಳ ತಾಳಲಾರದೇ ತನ್ನ ಸಹೋದರ ಪರಿವಾರದೊಂದಿಗೆ ದೇವನಹಳ್ಳಿ ಸಮೀಪವಿರುವ ಆವತಿ(ಆಹುತಿ) ಎಂಬಲ್ಲಿ ನೆಲೆಸಿದನೆಂದು ಜನಪದ ಐತಿಹ್ಯ ನಂಬಿಕೆಗಳು ಹೇಳುತ್ತಿವೆ. ಆದರೂ ಇವರ ಮೂಲದ ಬಗ್ಗೆ ಸಂಶೋಧಕರಲ್ಲಿ ಅನೇಕ ಚರ್ಚೆಗಳಿವೆ. ರಣಭೈರೇಗೌಡ ಈತನ ಮಗ ಜಯಗೌಡ. ಜಯಗೌಡನ ಮಗ ಕೆಂಪನಂಜೇಗೌಡ. ಈ ಕೆಂಪನಂಜೇಗೌಡನ ಹಿರಿಯ ಮಗನೇ ಕೆಂಪೇಗೌಡ. ಈತನಿಗೆ ಹಿರಿಯ ಕೆಂಪೇಗೌಡ, ಒಂದನೇ ಕೆಂಪೇಗೌಡ ಮತ್ತು ಕೆಂಪೇಗೌಡ ಎಂತಲೂ ಕರೆಯಲಾಗುತ್ತಿದೆ.

ಕೆಂಪೇಗೌಡನು ಹೆಸರುಘಟ್ಟ ಪ್ರದೇಶದ ಹತ್ತಿರವಿರುವ ಐವರುಕಂಡಪುರ ಅಥವಾ ಐಗೊಂಡಪುರ ಎಂಬ ಸ್ಥಳದಲ್ಲಿ ಮಾಧವಭಟ್ಟನೆಂಬ ಗುರುಗಳ ಹತ್ತಿರ ವಿದ್ಯೆಯನ್ನು ಕಲಿಯುತ್ತಾನೆ. ವಿದ್ಯೆಯನ್ನು ಪೂರೈಸಿದ ನಂತರ ತನ್ನ ತಂದೆಯೊಂದಿಗೆ ಆಗಾಗ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದ ವಿಜಯನಗರ ಸಾಮ್ರಾಜ್ಯದ ಹಂಪೆಗೆ ಆಗಮಿಸುತ್ತಿದ್ದನು. ಹಂಪೆ ಸಾಮ್ರಾಜ್ಯದ ವೈಭೋಗವನ್ನು ಕಂಡ ಕೆಂಪೇಗೌಡ ತಾನೂ ಸಹ ಇಂತಹದ್ದೆ ಒಂದು ನಗರವನ್ನು ನಿರ್ಮಾಣ ಮಾಡಬೇಕೆಂಬ ಹಂಬಲವನ್ನು ಹೊಂದುತ್ತಾನೆ.

ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ವಿಜಯನಗರ ಸಾಮ್ರಾಜ್ಯವು ಸುತ್ತಲಿನ ಪ್ರದೇಶಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡು ಆಳ್ವಿಕೆ ನಡೆಸುತ್ತಿತ್ತು. ಕನಕಗಿರಿ, ಹರಪನಹಳ್ಳಿ, ಮಧುಗಿರಿ, ತರಿಕೇರೆ, ರಾಯದುರ್ಗ, ಕೆಳದಿ, ಚಿತ್ರದುರ್ಗ, ಆವತಿ, ಯಲಹಂಕ ಮತ್ತು ಪ್ರಾರಂಭಿಕ ಮೈಸೂರು ಸಂಸ್ಥಾನ ಇತ್ಯಾದಿ ಸುಮಾರು ಮೂವತೈದಕ್ಕೂ ಅಧಿಕ ಸಂಸ್ಥಾಗಳನ್ನು ತನ್ನ ವಶದಲ್ಲಿಟ್ಟುಕೊಂಡು ಪಾಳೇಗಾರಿಕೆಯನ್ನು ವಿಭಜಿಸಿ ಸಾಮಂತರ ಮೂಲಕ ಆಡಳಿತ ನಡೆಸುತ್ತಿದ್ದರು. ಅದರಲ್ಲಿ ಆಹುತಿ ಎಂಬ ಪ್ರದೇಶದಲ್ಲಿ ರಣಭೈರೇಗೌಡ ಎಂಬ ನಾಡಪ್ರಭು ಆಳ್ವಿಕೆ ನಡೆಸುತ್ತಿದ್ದನು. ಅದನ್ನು ಆವತಿ ಎಂತಲೂ ಕರೆಯಲಾಗುತ್ತಿದೆ.

ರಣಭೈರೇಗೌಡನ ಸಹೋದರರು ಕ್ರಮೇಣ ಬೇರೆ-ಬೇರೆಯಾಗಿ ತಮ್ಮದೇ ಆದ ಆಡಳಿತ ನಡೆಸುವ ಪ್ರಯತ್ನದಲ್ಲಿ ಹೊರಟುಹೊದರು. ಆದರೆ ರಣಭೈರೇಗೌಡನು ಮಾತ್ರ ಆವತಿಯಲ್ಲಿಯೇ ಉಳಿದನು. ಇವನ ನಂತರ ಪುತ್ರ ಜಯನಂಜೇಗೌಡ ರಾಜಧಾನಿಯನ್ನು ಆವತಿಯಿಂದ ಯಲಹಂಕಕ್ಕೆ ವರ್ಗಾಯಿಸಿಕೊಂಡು ಕ್ರಿ.ಶ ೧೪೧೮ ರಿಂದ ೧೪೩೩ರ ವರಗೆ ಆಡಳಿತ ನಡೆಸಿದನು. ಜಯನಂಜೇಗೌಡನು ಹದಿನೈದು ವರ್ಷಗಳ ಆಡಳಿತದ ನಂತರ ಅವರ ಮಗ ಗಿಡ್ಡೇಗೌಡ ೧೪೩೩ ರಿಂದ ೧೪೪೩ರ ವರಗೆ ಅಧಿಕಾರ ನಡೆಸಿದನು. ಇವನ ಬಳಿಕ ಗಿಡ್ಡೇಗೌಡನ ಮಗ ಕೆಂಪನಂಜೇಗೌಡ ೧೪೪೩ರಲ್ಲಿ ಅಧಿಕಾರ ವಹಿಸಿಕೊಂಡನು. ಇವನು ಸುಮಾರು ಎಪ್ಪತ್ತು ವರ್ಷಗಳ ಕಾಲ ಆಡಳಿತ ನಡೆಸಿದನು. ಅವನ ನಂತರ ೧೫೧೩ರಲ್ಲಿ ಬೆಂಗಳೂರು ನಿರ್ಮಾತೃ ಒಂದನೆ ಕೆಂಪೇಗೌಡ ಅಧಿಕಾರದ ಗದ್ದುಗೆ ಹಿಡಿದನು. ಶೂರ-ದೀರನಾಗಿದ್ದ ಕೆಂಪೇಗೌಡ ತನ್ನ ರಾಜ್ಯವನ್ನು ವಿಸ್ತರಿಸುತ್ತಾ ಹೋದನು. ಶಿರಾ, ಚನ್ನಪಟ್ಟಣ, ಹೊಳಹೊನ್ನಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮುಂತಾದ ಪಾಳೇಗಾರರನ್ನು ಸೋಲಿಸಿ ಆ ಸಾಮಂತರನ್ನು ತನ್ನ ರಾಜ್ಯದೊಳಗೆ ಸೇರಿಸಿಕೊಂಡು ಮತ್ತಷ್ಟು ಬಲಿಷ್ಟ ರಾಜನಾಗಿ ಪ್ರಭಾವಿಸಿದನು.

ಕೆಂಪೇಗೌಡನು ತನ್ನ ಆಡಳಿತದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದನು. ಕೆಂಪೇಗೌಡನು ೧೫೩೧ರಲ್ಲಿ ಯಲಹಂಕದಲ್ಲಿದ್ದ ತನ್ನ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಿ ಅಲ್ಲಿ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದನು. ಬಹುಶಃ ಕೆಂಪೇಗೌಡರ ತಾಯಿ ಅಥವಾ ಹೆಂಡತಿ ಬೆಂಗಳೂರಿನವಳಾಗಿರಬೇಕೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಅದಕ್ಕಾಗಿಯೇ ತನ್ನ ರಾಜಧಾನಿಯನ್ನು ಯಲಹಂಕದಿಂದ ಬೆಂಗಳೂರಿಗೆ ವರ್ಗಾಯಿಸಿದನೆಂದು ಹೇಳಲಾಗುತ್ತಿದೆ. ಬಾಲಕನಾಗಿದ್ದಾಗ ಹಂಪೆಯ ವೈಭೋಗವನ್ನು ಕಂಡವನು. ಅಲ್ಲಿನ ಕಟ್ಟಡಗಳು, ರಸ್ತೆ, ಕೃಷಿ ಚಟುವಟಿಕೆಗೆ ನೀರಿನ ವ್ಯವಸ್ಥೆ, ನೀರಿನ ಸಂಗ್ರಹಣೆ ಇತ್ಯಾದಿಗಳು ಅವನ ಮೇಲೆ ಬಹಳ ಪ್ರಭಾವ ಬೀರಿದ್ದವು. ಅದೇ ಮಾದರಿಯಲ್ಲೇ ಬೆಂಗಳೂರನ್ನು ಅಭಿವೃದ್ಧಿ ಮಾಡುವ ಕಾರ್ಯದಲ್ಲಿ ತೊಡಗಿದನು.

ಈಗಿನ ಬೆಂಗಳೂರಿನ ದೊಡ್ಡಪೇಟೆ ಮತ್ತು ಚಿಕ್ಕಪೇಟೆಗಳ ಪರಸ್ಪರ ಸಂಧಿಸುವ ಚೌಕಾ ಪ್ರದೇಶವು ಅಂದಿನ ಬೆಂಗಳೂರು ನಗರ ಕೇಂದ್ರವಾಗಿತ್ತು. ನಗರದ ರಕ್ಷಣೆಗಾಗಿ ಕೋಟೆಯನ್ನು ನಿರ್ಮಿಸಿದನು. ಇದಲ್ಲದೇ ಬೆಂಗಳೂರು ನಗರವನ್ನು ನಾಲ್ಕು ದಿಕ್ಕಿನಿಂದಲೂ ರಕ್ಷಿಸಬೇಕೆಂಬ ಮಹಾದಾಸೆಯೊಂದಿಗೆ ನಗರದ ನಾಲ್ಕು ದಿಕ್ಕಿಗೆ ಗೋಪುರದ ಬಾಗಿಲುಗಳನ್ನು ಕಟ್ಟಿಸಿದನು. ಪಶ್ಚಿಮಕ್ಕೆ ಸೊಂಡೇಕೊಪ್ಪದ ಬಾಗಿಲು, ಉತ್ತರಕ್ಕೆ ಯಲಹಂಕದ ಬಾಗಿಲು, ದಕ್ಷಿಣಕ್ಕೆ ಮೈಸೂರು ಬಾಗಿಲು ಹಾಗೂ ಪೂರ್ವಕ್ಕೆ ಹಲಸೂರು ಬಾಗಿಲುಗಳನ್ನು ನಿರ್ಮಿಸಿ ನಗರವನ್ನು ರಕ್ಷಿಸಿದನು. ಈ ಸ್ಮಾರಕಗಳನ್ನು ಇಂದಿಗೂ ಸಹ ಕಾಣಬಹುದಾಗಿದೆ.

ಕೆಂಪೇಗೌಡರ ಉದಾರ ಕೊಡುಗೆಗಳು ಅಪಾರ. ಶಿವಗಂಗೆಯ ಭವ್ಯ ಪ್ರಕೃತಿ ಸೌಂದರ್ಯದಿಂದ ಸುಪ್ರೀತನಾಗಿ ಅಲ್ಲಿನ ಗಂಗಾಧರೇಶ್ವರಸ್ವಾಮಿ, ಹೊನ್ನಾದೇವಿ ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸಿದನು. ಅಲ್ಲದೇ ಅನೇಕ ಗುಡಿ-ಗೋಪುರ ಮತ್ತು ವಿಶೇಷವಾಗಿ ಅನ್ನ ಸತ್ರಗಳನ್ನು ನಿರ್ಮಿಸಿದನು. ಸೋಮೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಅದಕ್ಕೆ ಹೊಸ ರೂಪ ಕೊಟ್ಟಿದ್ದರಿಂದ ಬೆಂಗಳೂರನ್ನು ದಕ್ಷಿಣದ ಕಾಶಿ ಎಂಬಂತೆ ಪ್ರಸಿದ್ಧಿ ಪಡೆಯಿತು. ಕೃಷಿ ಮತ್ತು ನಗರವಾಸಿಗಳ ಉಪಯೋಗಕ್ಕಾಗಿ ಧರ್ಮಾಂಬುಧಿ ಕೆರೆ, ಕೆಂಪಾಬುಧಿ ಕೆರೆ, ಕಾರಂಜಿ ಕೆರೆ, ಸಂಪಂಗಿ ಕೆರೆ, ಹಲಸೂರು ಕೆರೆ ಮುಂತಾದ ಕೆರೆಗಳನ್ನು ನಿರ್ಮಿಸಿ ಕೃಷಿ, ತೋಟಗಾರಿಕೆ ಮುಂತಾದ ಕಾರ್ಯಗಳಿಗೆ ಉಪಯೋಗವಾಗುವಂತೆ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ.

ಕೆಂಪೇಗೌಡನು ವಿಜಯನಗರ ಸಾಮ್ರಾಜ್ಯದ ಅಭುದ್ಯಯಕ್ಕಾಗಿ ದುಡಿದ ನಿಷ್ಠಾವಂತ ಸಾಮಂತನಾಗಿದ್ದ. ಇವನು ವಿಜಯನಗರ ಸಾಮ್ರಾಜ್ಯದ ಮೂರು ಜನ ಚಕ್ರವರ್ತಿಗಳ ಆಳ್ವಿಕೆಯನ್ನು ಕಂಡವನು. ಅದರಲ್ಲಿ ವಿಶೇಷವಾಗಿ ಸಾಮ್ರಾಟ ಶ್ರೀಕೃಷ್ಣದೇವರಾಯರ ಆಡಳಿತವಧಿಯನ್ನು ಕಂಡವನು. ನಂತರದ ಸಾಮ್ರಾಟನಾದ ಅಚ್ಯುತರಾಯನ ಅವಧಿಯಲ್ಲಿಯೂ ಸಹ ಸಾಮಾಂತನಾಗಿ ಮುಂದುವರೆದುಕೊಂಡು ಹೋದನು. ಕೆಂಪೇಗೌಡನು ಬೆಂಗಳೂರು ನಗರವನ್ನು ಪುನರ್ ಕಟ್ಟಿದ ಸುದ್ದಿಯನ್ನು ತಿಳಿದ ಅಚ್ಯುತರಾಯನು ಮಹಾನವಮಿ ದಸರೆಗೆ ಕರೆಸಿ ಗೌರವ-ಸನ್ಮಾನಗಳನ್ನು ಮಾಡಿದನು. ನಂತರ ಸದಾಶಿವರಾಯ ಅಧಿಕಾರರೂಢನಾದರೂ ಅಳಿಯ ರಾಮರಾಯ ಆಡಳಿತದ ಸೂತ್ರ ನಿರ್ವಹಿಸುತ್ತಿದ್ದನು. ಇವನ ಕಾಲದಲ್ಲಿಯೂ ಸಹ ಕೆಂಪೇಗೌಡ ವಿಜಯನಗರ ಸಾಮ್ರಾಜ್ಯದೊಂದಿಗೆ ಉತ್ತಮ ಸಂಬಂಧ ಹೊಂದಿದ್ದನು.

ಒಮ್ಮೆ ಕೆಂಪೇಗೌಡನ ಪ್ರದೇಶವು ಬೀಕರ ಕ್ಷಾಮಕ್ಕೆ ತುತ್ತಾಯಿತು. ಯಲಹಂಕದ ನಾಡಜನತೆ ಜರ್ಜರಿತವಾಯಿತು. ಅಲ್ಲಿನ ಜನತೆ ತುಂಬಾ ಕಷ್ಟಕ್ಕಿಡಾದರು. ಈ ಪರಿಸ್ಥಿತಿಯನ್ನು ಅರಿತ ಕೆಂಪೇಗೌಡ ಬೆಂಗಳೂರು ನಾಡನ್ನು ಹತೋಟಿಗೆ ತರಲು ಭೈರವ(ಭೈರವೇಶ್ವರ ಎಂತಲೂ ಕರೆಯಲಾಗುತ್ತಿದೆ) ಎಂಬ ನಾಣ್ಯಗಳನ್ನು ಟಂಕಿಸಿ ಚಲಾವಣೆಗೆ ತಂದನು. ಇದರಿಂದ ಜನರು ತಮ್ಮ ವಸ್ತುಗಳನ್ನು ಖರೀದಿಸಿಕೊಂಡು ಅವರ ಜೀವನಮಟ್ಟ ಸುಧಾರಿಸಿಕೊಳ್ಳಬಹುದೆಂದು ಅರಿತುಕೊಂಡಿದ್ದ. ಆದರೆ ಅಲ್ಲಿ ನಡೆದದ್ದೇ ಬೇರೆ. ಇದು ವಿಜಯನಗರ ಅರಸರ ಕೆಂಗಣ್ಣಿಗೆ ಗುರಿಯಾಯಿತು. ಕೆಲ ಶತೃಗಳು ಅಳಿಯ ರಾಮರಾಯನಲ್ಲಿ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರು. ವಿಜಯನಗರ ಸಾಮ್ರಾಜ್ಯದ ಅನುಮತಿ ಇಲ್ಲದೆಯೇ ನಾಣ್ಯಗಳನ್ನು ಟಂಕಿಸಿರುವುದು ಅಪರಾದವೆಂಬಂತೆ ಸಾಮ್ರಾಟನಲ್ಲಿ ಕಿವಿಕಚ್ಚಿದರು. ಇದು ಕೆಂಪೇಗೌಡನ ವರ್ತನೆಯ ಬಗ್ಗೆ ರಾಮರಾಯನಿಗೆ ಕೋಪವನ್ನುಂಟುಮಾಡಿತು. ಇದರಿಂದ ರೊಚ್ಚಿಗೆದ್ದ ರಾಮರಾಯನು ಮಹಾನವಮಿ ದಸರೆ ಮಹೋತ್ಸವಕ್ಕೆ ಕೆಂಪೇಗೌಡನನ್ನು ಬರಮಾಡಿಕೊಂಡು ಅವನ ಮೇಲಿನ ಅಪಾದನೆಗಳಿಗಾಗಿ ಆನೆಗೊಂದಿಯ ಸೆರೆಮನೆಯಲ್ಲಿ ಬಂಧಿಸಿಡಲಾಯಿತ್ತೆಂದು ಇತಿಹಾಸದಿಂದ ತಿಳಿದುಬರುತ್ತದೆ. ಕೆಂಪೇಗೌಡರನ್ನು ಬಂಧಿಸಿಟ್ಟ ಸೆರೆಮನೆ ಆನೆಗೊಂದಿಯ ಜಿಂಜರಬೆಟ್ಟದಲ್ಲಿದೆ ಎಂದು ಅಲ್ಲಿನ ಸ್ಮಾರಕ ಮತ್ತು ಅವಶೇಷಗಳ ಮೂಲಕ ಶೋಧಿಸಿದ ಸಂಶೋಧಕರಾದ ಡಾ.ಶರಣಬಸಪ್ಪ ಕೋಲ್ಕರವರು ಸಮರ್ಥಿಸಿದ್ದಾರೆ.

ಬೆಂಗಳೂರು ನಿರ್ಮಾತೃ, ದೇಶಭಕ್ತ, ಮಹಾನ್ ಸ್ವಾಮಿನಿಷ್ಠೆ, ಸಹೃದಯಿ ಕೆಂಪೇಗೌಡನ ಬಂಧನದ ವಾರ್ತೆ ನಾಡಿನ ಜನರಲ್ಲಿ ಸಿಡಿಲು ಬಡಿದಂತಾಯಿತು. ಅವನ ಬಿಡುಗಡೆಗಾಗಿ ಒತ್ತಾಯ ಮಾಡಿದರೂ ಫಲಿಸಲಿಲ್ಲ. ಅನಿವಾರ್ಯವಾಗಿ ಕೆಂಪೇಗೌಡರು ಸುಮಾರು ಐದು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಬೇಕಾಯಿತು. ಕೊನೆಗೆ ಶತೃಗಳ ಚಾಡಿಯ ಮಾತುಗಳ ಅರಿತ ಅಳಿಯ ರಾಮರಾಯರು ಕೆಂಪೇಗೌಡನನ್ನು ಬಿಡುಗಡೆ ಮಾಡಿದರು. ಇದಾದ ನಂತರ ಕೆಂಪೇಗೌಡ ಐದು ವರ್ಷಗಳ ಕಾಲ ಅಧಿಕಾರ ನಡೆಸಿದನು. ಈ ವೇಳೆಯಲ್ಲಿ ಬಹಮನಿ ಸುಲ್ತಾನ ರಾಜ್ಯಗಳು ವಿಜಯನಗರ ಸಾಮ್ರಾಜ್ಯದ ಮೇಲೆ ಯುದ್ಧ ಘೋಷಿಸಿದರು. ಇದನ್ನು ಅರಿತ ಕೆಂಪೇಗೌಡರು ತನ್ನ ಮಗ ಸೋಮಯ್ಯನೊಂದಿಗೆ ಸಾಮ್ರಾಟರ ನೆರವಿಗೆ ಧಾವಿಸಿದರು. ಎರಡು ಸಾವಿರ ಸೈನಿಕರೊಂದಿಗೆ ಆಗಮಿಸಿದ ಕೆಂಪೇಗೌಡರು ೧೫೬೫ರಲ್ಲಿ ನಡೆದ ತಾಳಿಕೋಟೆ(ರಕ್ಕಸಗಿ-ತಂಗಡಗಿ) ಯುದ್ಧದಲ್ಲಿ ಭಾಗವಹಿಸಿದನು. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯವು ಪತನವಾಯಿತು. ಅಳಿಯ ರಾಮರಾಯನು ಹತನಾದನು. ಇದರಿಂದ ಘಾಸಿಗೊಂಡ ಕೆಂಪೇಗೌಡ ಪುನಃ ಬೆಂಗಳೂರು ಸೇರಿದನು. ವಿಜಯನಗರ ಪತನಾನಂತರ ಬೆಂಗಳೂರುನಾಡು ಬಹಮನಿ ಸುಲ್ತಾರ ಅಧಿನದಲ್ಲಿ ಸೇರಿಕೊಂಡಿತು. ತಾಳಿಕೋಟೆ ಯುದ್ಧದಲ್ಲಿ ವಿಜಯನಗರ ಅವನತಿಯ ನಂತರ ಬಹಮನಿ ಸುಲ್ತಾರ ಸಾಮಂತನಾಗಿ ಬೆಂಗಳೂರು ನಾಡು ಆಳ್ವಿಕೆ ಮಾಡುತ್ತಾ ೧೫೬೯ರಲ್ಲಿ ಕೆಂಪೇಗೌಡನು ಕಾಲವಾದನು.

 

 

ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್

ಕನ್ನಡ ಉಪನ್ಯಾಸಕರು

ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,

ಕೊಪ್ಪಳ-೫೮೩೨೩೧

ಮೊಬೈಲ್: ೯೪೪೮೫೭೦೩೪೦

ಇ-mಚಿiಟ: sಞoಣಟಿeಞಚಿಟ@gmಚಿiಟ.ಛಿom

Get real time updates directly on you device, subscribe now.

Comments are closed.

error: Content is protected !!