ಹೆಣ್ಣನ್ನು ಅಸಮಾನಳಂತೆ ಕಾಣುವ ಸಮಯ ಈಗಿಲ್ಲ : ಜ್ಯೋತಿ
ಕುಷ್ಟಗಿ: ಹೆಣ್ಣೊಂದು ಕಲಿತರೆ ಒಂದು ಶಾಲೆಯೇ ತೆರೆದಂತೆ, ತಾಯಿಯೇ ಮಗುವಿಗೆ ಮೊದಲನೇ ಗುರು ಇವುಗಳನ್ನು ಇನ್ನಷ್ಟು ಸತ್ಯ ಮಾಡಬೇಕು, ಹೆಣ್ಣುಮಗಳನ್ನು ಗಂಡಿಗಿಂತ ಕಮ್ಮಿ ಎನ್ನುವ ಕಾಲ ಈಗಿಲ್ಲ ಎಂದು ರಾಜ್ಯಯುವ ಪ್ರಶಸ್ತಿ ವಿಜೇತರಾದ ಜ್ಯೋತಿ ಎಂ. ಗೊಂಡಬಾಳ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ದಯಾನಂದಪುರಿ ಕ್ರೀಡೆ, ಸಾಂಸ್ಕೃತೀಕ ಜಾನಪದ ಕಲಾ ಸಂಘ ಹಾಗೂ ಗಾಯತ್ರಿ ಮಹಿಳಾ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸೀಮಂತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎರಡು ದಶಕಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ, ಅಂದು ಸಮಸ್ಯೆಗಳ ಜೊತೆಗೆ ಸಂಕೋಲೆ ಹಾಗೂ ಮಾಹಿತಿ ಕೊರತೆ ಇದ್ದವು, ಕಾನೂನಿನ ಅರಿವು ಮತ್ತು ಅದನ್ನು ಕೊಡಿಸುವ ಕೈ ಇದ್ದಿಲ್ಲ, ಆದರೆ ಈಗ ಬಹಳಷ್ಟು ಬದಲಾಗಿದೆ, ಜನರಿಗೆ ಮಾಹಿತಿ ಸಿಗುತ್ತಿದೆ, ಮಾಧ್ಯಮಗಳಿವೆ, ಕಾನೂನಿನ ಪರಿಮಿತಿ ಬೇರೆಯಾಗಿದೆ, ಮಹಿಳೆ, ಸೋಷಿತೆ ಮತ್ತು ಪರಿಶಿಷ್ಟ ವರ್ಗಗಳ ಜನರಿಗೆ ಉಚಿತ ಸಲಹೆ ಸಹಕಾರ ಸಿಗುತ್ತಿದ್ದು ಅದರ ಉಪಯೋಗ ಪಡೆದುಕೊಳ್ಳಬೇಕು.
ದೌರ್ಜನ್ಯ, ಅತ್ಯಾಚಾರ, ಹಿಂಸೆ, ಸಾಮಾಜಿಕ ಅಸಮಾನತೆಗಳನ್ನು ನೋಡಿದರೆ ನಾವು ನಮಗೆ ಒಂದು ಪ್ರಶ್ನೆಯನ್ನು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ, ಮಹಿಳೆ ತನ್ನ ಶಕ್ತಿಯನ್ನು ಪ್ರತಿಯೊಂದು ರಂಗದಲ್ಲಿ ತೋರಿಸಲು ಸಿದ್ಧವಾಗಿದ್ದಾಳೆ, ತೋರಿಸುತಿದ್ದಾಳೆ. ಜೊತೆಗೆ ಆಕೆಗೆ ಒಂದಿಷ್ಟು ಕುಟುಂಬದಿಂದ ಸಮಾನತೆ, ಗೌರವ ಅವಕಾಶ ಕೊಟ್ಟಿದ್ದೆ ಆದರೆ ಆಕೆಯೂ ಖಂಡಿತ ಇನ್ನಷ್ಟು ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಬಲ್ಲಳು. ದೂರದ ಗ್ರಾಮವೊಂದರಲ್ಲಿ ಪ್ರಶಸ್ತಿಯನ್ನು ಪಡೆದಿರುವಂತಹ ಎಲ್ಲ ಮಹಿಳೆಯರು ಒಂದೊಂದು ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ, ಅವರೊಂದಿಗೆ ತಮಗೂ ಪ್ರಶಸ್ತಿಯನ್ನು ಕೊಟ್ಟಿರುವದು ಸಂತೋಷ ತಂದಿದೆ. ಹಿರಿಯರ ಮಾರ್ಗದರ್ಶನ ಪಡೆಯುವ ಮೂಲಕ ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಬೇಕು ಎಂದು ಅವರು ಹೇಳಿದರು.
ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿ, ದೇಶದಲ್ಲಿ ಇನ್ನೂ ಲಿಂಗ ಅಸಮಾನತೆಯು ಜೀವಂತವಾಗಿದೆ ಇದನ್ನು ಹೊಡೆದೊಡಿಸಲು ಮಹಿಳೆಯರು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು ಹಾಗೂ ಮಹಿಳಾ ದಿನಾಚರಣೆಗಳು ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗಬಾರದು ಸರಕಾರ ಗಂಡು ಹೆಣ್ಣಿಗೆ ಸಮಾನತೆ ಇದೆ ಎಂದು ಹೇಳುತ್ತಿದೆ ಆದರೆ ಅದು ಇನ್ನೂ ಸಂಪೂರ್ಣವಾಗಿ ಸಮಾನತೆಯು ಸಿಕ್ಕಿಲ್ಲ ವಿವಿಧ ಕ್ಷೇತ್ರಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶ ನೀಡಬೇಕಾಗಿದೆ ಎಂದರು.
ಕುಷ್ಟಗಿ ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ ಮಾತನಾಡಿ, ತಮ್ಮ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿರುವದು ಬಹಳ ಸಂತಸದ ಸಂಗತಿಯಾಗಿದೆ. ಮಹಿಳೆಯರು ತಮ್ಮ ಮಕ್ಕಳಿಗೆ ಹೆಣ್ಣು ಮತ್ತು ಗಂಡು ಎಂಬ ಬೇಧವನ್ನು ಮಾಡದೆ ಉತ್ತಮವಾದ ಗುಣಾತ್ಮಕ ಶಿಕ್ಷಣವನ್ನು ಕೊಡಿಸಬೇಕು, ಸಮಾಜದಲ್ಲಿ ಅಭಿವೃದ್ದಿಯ ಪತದತ್ತ ಸಾಗುವಂತೆ ಮಾಡಬೇಕು ಎಂದರು.
ಆರೋಗ್ಯ ಇಲಾಖೆಯ ಸಲೀಮಾಬೇಗಂ ಅರಗಿದ್ದಿ ಮಾತನಾಡಿ ಗರ್ಭೀಣಿ ಮಹಿಳೆಯರು ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು, ಸರಿಯಾದ ಉಪಕ್ರಮಗಳನ್ನು ಅನುಸರಿಸಬೇಕು, ಹೆರಿಗೆಯನ್ನು ಕಡ್ಡಾಯವಾಗಿ ಆಸ್ಪತ್ರೆಯಲ್ಲಿಯೇ ಮಾಡಿಸಿಕೊಳ್ಳಬೇಕು, ಹೆರಿಗೆಗೆ ಕತ್ತರಿ ಪ್ರಯೋಗವಾಗಬಾರದು ಎಂದರೆ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕು, ಅದಕ್ಕೆ ನಿಯಮಿತ ವ್ಯಾಯಾಮ ಉತ್ತಮ ಆಹಾರ, ಒಳ್ಳೆಯ ಸಮಾಧಾನದ ಮನಸ್ಥಿತಿ ಹೊಂದಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕ ನಟರಾಜ ಸೋನಾರ್, ಪ್ರಗತಿಪರ ಚಿಂತಕ ಮಂಜುನಾಥ ಜಿ. ಗೊಂಡಬಾಳ, ಸಿದ್ರಾಮಪ್ಪ ಅಮರಾವತಿ ಮಾತನಾಡಿದರು. ಈ ಸಂದರ್ಭದಲ್ಲಿ ಕುಷ್ಟಗಿ ಪಟ್ಟಣ ಸಹಕಾರ ಬ್ಯಾಂಕಿನ ಉಪಾಧ್ಯಕ್ಷೆ ಭುವನೇಶ್ವರಿ ಹಿರೇಮಠ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ರವೀಂದ್ರ ನಂದಿಹಾಳ, ಮಂಜೂರು ಇಲಾಹಿ ಬನ್ನು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಕಂಟ್ಲಿ, ಸಂಘಟಕ ಪರಮಶಿವಮೂರ್ತಿ, ಪೂರ್ಣಿಮಾ ದೇವಾಂಗಮಠ, ಗಾಯತ್ರಿ ಕುದುರಿಮೋತಿ, ಶಂಕ್ರಮ್ಮ ಕೊಳ್ಳಿ, ಶ್ರೀನಿವಾಸ ಕಂಟ್ಲಿ, ನಾಗರಾಜ ಕಾಳಗಿ, ರುಕ್ಮೀಣಿ ನಾಗಶೆಟ್ಟಿ, ಶಶಿಕಲಾ ಅರಳಿಕಟ್ಟಿ, ಅಮರೇಶ ತಾರಿವಾಳ, ನಬಿಸಾಬ ಇಲಕಲ್ ಇದ್ದರು.
Comments are closed.