ಗೊಂಬೆ (ಕಥೆ)

Get real time updates directly on you device, subscribe now.


ಅಯ್ಯೋ! ಆರು ಗಂಟೆ ಆಯ್ತು ಅಲರಾಂ ಹೊಡಿದಿದ್ದು ಗೊತ್ತೇ ಆಗ್ಲಿಲ್ಲಾ. ಐದು ಗಂಟೆಗೆ ಅಲರಾಂ ಇಟ್ಟಿದ್ದೆ. ಬಹುಶಃ ಹೊಡೆದು ಹೊಡೆದೂ ಬಂದಾಗಿರಬೇಕು. ನಂಗೆ ಗೊತ್ತೇ ಆಗಿಲ್ಲಾ. ನಿನ್ನೆ ಆಫೀಸ್‌ದಲ್ಲಿ ಬಹಳ ಕೆಲಸ ಇದ್ವು, ಮೈ-ಕೈ ಎಲ್ಲಾ ಬ್ಯಾನ್ಯಾಗ್ಯಾವಾ. ಅದ್ಕ ಎಚ್ಚರ ಆಗಿಲ್ಲ. ನೀನಾರ ಎಬ್ಬಿಸಬಾರದಾ? ನೀನಂತೂ ಯಾವಾಗ್ಲೂ ಮಲಗೇ ರ‍್ತೀ, ನಿದ್ದೆಬಡಿಕಿ, ಮಲಗದು ಬಿಟ್ರೆ ನಿಂಗೆ ಬೇರೆ ಏನೂ ಗೊತ್ತೇ ಇಲ್ಲಾ ಎಂದು ಮೆಲು ಧ್ವನಿಯಲ್ಲಿ ಗೊಣಗಿದ. ಎಲ್ಲಿ ಹೆಂಡತಿಗೆ ಕೇಳಿಸಿದರೆ ಬೇಜಾರಾಗಬಹುದು ಎಂದು ಗೊಣಗುತ್ತಾ ವಿಜಯ ಬಾತ್‌ರೂಂ ಕಡೆ ಓಡಿದ. ಅವಸರ ಅವಸರವಾಗಿ ಸ್ನಾನ ಮಾಡಿ, ಪೂಜೆ ಮಾಡಿದ. ಮತ್ತೆ ಅಡುಗೆ ಮನೆಗೆ ದೌಡಾಯಿಸಿ ಇವತ್ತು ತಡವಾಯ್ತು, ಚಪಾತಿ ಪಲ್ಯ ಮಾಡಾಕ ಟೈಮ್ ಇಲ್ಲ. ಯಾವುದಾದರೂ ರೈಸ್ ಐಟಮ್ ಮಾಡಿದ್ರಾತು. ತಿಂದು ಅದ್ನೇ ಬಾಕ್ಸ್ಗೆ ತಗಂಡು ಹೋಗಾಮು ಎನ್ನುತ್ತಾ ಅವಸರವಸರವಾಗಿ ಚಿತ್ರಾನ್ನ ಮಾಡಿದ. ಅದ್ನೆ ಸ್ವಲ್ಪ ತಿಂದು ಅದ್ರಲ್ಲಿ ಒಂದಿಷ್ಟು ಬಾಕ್ಸ್ಗೆ ಹಾಕಿಕೊಂಡ. ಬಟ್ಟೆ ಹಾಕಿಕೊಂಡು ರೆಡಿ ಆದ. ಬ್ಯಾಗದೊಳಗೆ ಕಚೇರಿ ಫೈಲ್ಸ್, ಊಟದ ಬಾಕ್ಸ್ ಹಾಕಿಕೊಂಡು ಹೊರಡಲು ಅಣಿಯಾದ. ಬೆಡ್ ರೂಂಗೆ ಹೋದವನೇ ಜಯಾ ನಾ ಆಫೀಸ್‌ಗೆ ಹೋಗ್ತಿನಿ ಟೈಮ್ ಆತು. ಇವತ್ ಲೇಟಾಗ್ಯಾದಾ ನಾ ಬೇಗ ಹೋಗಬೇಕು, ನೀ ಎದ್ದ ಮೇಲೆ ಸ್ನಾನ ಮಾಡು, ಸ್ನಾನ ಮಾಡಿ ಊಟ ಮಾಡು, ಟೈಮ್ ರ‍್ಲಿಲ್ಲ ಅದ್ಕೆ ಚಿತ್ರಾನ್ನ ಮಾಡಿಟ್ಟಿನಿ. ಬೇಗ ಎದ್ದೇಳು, ಚಿತ್ರಾನ್ನ ತಣ್ಣಗ ಆಗ್ತಾದಾ ಎಂದು ಹೆಂಡತಿಗೆ ಹೇಳಿ ಅವಸರವಾಗಿ ಬಾಗಿಲು ಹಾಕೊಂಡು ಆಫೀಸ್ ಕಡೆ ನಡೆದ.
ಏನ ವಿಜಯ ತಡವಾಯ್ತಲ್ಲಾ? ಇಂಗಾ ಲೇಟ್ ಆದ್ರೆ ಹೆಂಗೆ? ಆಫೀಸ್‌ಗೆ ಬೇಗ ಬರಬೇಕು, ನೀನು ಸೀನೀಯರ್ ಆಫೀಸರ್, ನೀನೇ ಲೇಟಾಗಿ ಬಂದ್ರೆ ಹೆಂಗೆ? ಎಲ್ಲಾ ಜವಾಬ್ಧಾರಿ ನಿನ್ನ ಮೇಲಿದೆ. ಸರಿಯಾದ ಸಮಯಕ್ಕೆ ಬರಬೇಕು ಎಂದು ಮ್ಯಾನೇಜರ್ ಗದರಿದ. ಇಲ್ಲ ಸರ್ ಇವತ್ ಲೇಟಾಗಿ ಎದ್ದೆ. ನಿನ್ನೆ ಆಫೀಸ್‌ದಲ್ಲಿ ಬಹಳ ಕೆಲಸಗಳು ಇದ್ವು, ಅದ್ಕೆ ಮನೆಗೆ ತಡವಾಗಿ ಹೋದೆ. ಬಹಳ ದಣಿಕೆ ಆಗಿತ್ತು. ಎದ್ದೇಳದು ಸ್ವಲ್ಪ ಲೇಟ್ ಆತು. ಅದ್ಕೇ ಬರದು ತಡವಾಯಿತು ಎಂದಾಗ ಮ್ಯಾನೇಜರ್ ಬಾಯಿಗೆ ಸ್ವಲ್ಪ ವಿರಾಮ ಕೊಟ್ಟಂತಾಯಿತು. ಮನೆಯಲ್ಲಿ ಎಲ್ಲವೂ ನಾನೇ ಕೆಲಸ ಮಾಡಬೇಕು ಸರ್. ನನ್ನ ಹೆಂಡತಿ ಏನೂ ಕೆಲಸ ಮಾಡುವುದಿಲ್ಲ. ಅವಳು ಸದಾ ಮಲಗಿಯೇ ಇರುತ್ತಾಳೆ. ಎಂದು ವಿಜಯ ಗೊಣಗುತ್ತಿರುವಾಗ ಮ್ಯಾನೇಜರ್ ನಸುನಗುತ್ತಲೇ ಆಯ್ತಪ್ಪಾ ನಿನ್ನ ಹೆಂಡ್ತಿ ಕಥೆ, ನಿನ್ನ ಕಥೆ ನಂಗೇನೂ ಹೊಸದಲ್ಲ. ರ‍್ಲಿ ನಾಳೆಯಿಂದ ಬೇಗ ಬಾ, ಎಷ್ಟು ಕೆಲಸ ಪೆಂಡಿಂಗ್ ಇದಾವಾ ನೋಡೋಗು ಎಂದು ತುಸು ಗಡಸಾಗಿಯೇ ನುಡಿದ ಮ್ಯಾನೇಜರ್‌ಗೆ ಪ್ರತ್ಯೂತ್ತರವಾಗಿ ಏನೂ ಮಾತನಾಡದೇ ತನ್ನ ಟೇಬಲ್ ಕಡೆ ನಡೆದ. ಕಚೇರಿ ಸಿಬ್ಬಂದಿಗಳು ಎಲ್ಲರೂ ವಿಜಯನನ್ನು ವ್ಯಂಗವಾಗಿ ನೋಡುತ್ತಾ ಮುಗುಳ್ನಗುತ್ತಾ ಅವನನ್ನು ನೋಡುತ್ತಲೇ ಇದ್ದರೂ ವಿಜಯ ಮಾತ್ರ ಇದ್ಯಾವುದರ ಪರಿವೇ ಇಲ್ಲದಂತೆ ತನ್ನ ಟೇಬಲ್ ಕಡೆ ನಡೆದ. ಫೈಲ್‌ಗಳ ರಾಶಿ ತೆಗೆದು ತನ್ನ ಕಾರ್ಯದಲ್ಲಿ ತೊಡಗಿದ.
ಏನ್ ವಿಜಯ ಸರ್ ತಡವಾಯ್ತಲ್ಲಾ? ಹೆಂಡ್ತಿ ಬೇಗ ಎಬ್ಬಸಲಿಲ್ವಾ? ಸ್ನಾನಕ್ಕೆ ಬಿಸಿನೀರು ಕಾಯಿಸಿಕೊಡಲಿಲ್ವಾ? ಬೇಗ ಟಿಫೀನ್ ಮಾಡಿ ಕೊಟ್ಟಿಲ್ಲಾ ಅಲ್ವಾ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ ಚಪರಾಸಿ ಪರಮೇಶಿಯ ಮಾತಿಗೆ ಸ್ವಲ್ಪವೂ ಸಂಕೋಚಕ್ಕೊಳಗಾಗದೇ, ಹೌದು ಪರಮೇಶಿ ಆಕಿ ಸರಿ ಇದ್ದಿದ್ದರೆ ನನಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಆಕಿ ಸದಾ ಮಲಗಿಯೇ ಇರುತ್ತಾಳೆ. ನೀವು ದಿನಾ ಇದನ್ನೇ ಹೇಳುತ್ತಾ ರ‍್ತಿರೀ ಬಿಡಿ ಸರ್. ಅಕಿ ಎದ್ದೇಳಲ್ಲಾ, ನಿಮ್ಗೆ ಬಿಸಿ ನೀರು ಕಾಯಿಸಿ ಕೊಡಲ್ಲಾ, ಅಡುಗೆ ಮಾಡಿ ಕೊಡಲ್ಲಾ, ಮನೆ ಕೆಲಸ ಮಾಡಲ್ಲಾ. ಆದ್ರೂ ನೀವು ದಿನಾ ಇದ್ನಾ ಹೇಳ್ತೀರೀ ಬಿಡಿ ಸರ್ ಎಂದು ಪರಮೇಶಿ ಗೊಣಗುತ್ತಾ ಮ್ಯಾನೇಜರ್ ಚೇಂಬರ್ ಕಡೆ ನಡೆದ.
ಹೌದು ಜಯಾ ಯಾವಾಗಲೂ ಮಲಗಿಯೇ ಇರುತ್ತಾಳೆ. ಅವಳನ್ನು ಎಬ್ಬಿಸಲು ಸಾಧ್ಯವೇ? ಜೀವ ಕಳಕೊಂಡ ಗೊಂಬೆಯಂತಾಗಿದ್ದಾಳೆ. ಮಾತಾಡಲ್ಲಾ, ಮನೆಕೆಲಸ ಮಾಡಲ್ಲಾ, ಅಡುಗೆ ಮಾಡಲ್ಲಾ, ನನಗೆ ಊಟಕ್ಕೆ ತಂದು ಕೊಡಲ್ಲ, ತಾನೂ ಊಟ ಮಾಡಲ್ಲಾ. ಬರೀ ಮಲಗಿಯೇ ಇರುತ್ತಾಳೆ. ಆದರೂ ಅವಳು ನನ್ನ ಪ್ರೀತಿಯ ಮಡದಿ. ನಾನು ಅವಳನ್ನು ಪ್ರೀತಿಸಿ ಮದುವೆ ಆಗಿದ್ದೇನೆ. ಪ್ರೀತಿಗಾಗಿ ನಾನು ಅವಳನ್ನು ಕಾಡಿದ್ದು ಅಷ್ಟಿಷ್ಟಲ್ಲ.
ಜಯಾಳ ಮನೆಯಲ್ಲಿ ನಮ್ಮ ಪ್ರೀತಿಗೆ ಬಹಳ ಅಡ್ಡಿಪಡಿಸಿದ್ದರು. ನಮ್ಮ ಪ್ರೀತಿ ಕೆಡಿಸಲು ನನ್ನ ಮೇಲೆ ಹಲ್ಲೆಯಾದರೂ ನಾನು ಭಯಪಟ್ಟಿಲ್ಲ. ನಮ್ಮ ಮನೆಯವರು ಸಹ ಜಯಾಳಿಗೆ ಏನೇಲ್ಲಾ ತೊಂದರೆ ಕೊಟ್ಟರೂ ಅವಳು ಎದೆಗುಂದಲಿಲ್ಲ. ನಮ್ಮ ಪ್ರೀತಿ ಉಳಿಸಿಕೊಳ್ಳಲು ಅವಿರತ ಹೋರಾಟ ಮಾಡಿ ಯಶಸ್ವಿಯಾದೆವು. ಆದರೆ ಆ ಪ್ರೀತಿ ಉಳಿಯಿತೆ? ಆರಂಭದಲ್ಲೇ ಮುಗ್ಗರಿಸಿ ಹೋಯಿತು. ನಮ್ಮ ಪ್ರೀತಿ ಈ ರೀತಿಯಲ್ಲಿ ಅಂತ್ಯವಾಗುತ್ತದೆ ಎಂದು ನಾನು ಎಂದೂ ಆಲೋಚಿಸಿರಲಿಲ್ಲ.
ಇವತ್ತು ಮನಿಗಿ ಜಲ್ದಿ ಹೋಗ್ಬೇಕು, ಮನೆಯಲ್ಲಿ ಬಹಳ ಕೆಲಸ ಅದಾವಾ. ನೆಲ ಒರೆಸಬೇಕು, ಬಟ್ಟೆ ತೊಳೆಯಬೇಕು. ಎರಡು ಮೂರು ದಿನಗಳಿಂದ ಮನೆಯಲ್ಲಿ ಕೆಲಸಗಳು ಅಂಗೆ ಉಳಿದಾವ ಎಂದು ಗೊಣಗುತ್ತಾ ವಿಜಯ ತನ್ನ ಕೆಲಸದಲ್ಲಿ ತೊಡಗಿದ. ಪೆಂಡಿಂಗ್ ಇದ್ದ ಎಲ್ಲಾ ಫೈಲ್‌ಗಳನ್ನು ಚೆಕ್ ಮಾಡಿದ. ಮ್ಯಾನೇಜರ್ ಕೊಟ್ಟಿದ್ದ ಅಷ್ಟೂ ಫೈಲ್‌ಗಳನ್ನು ಚೆಕ್‌ಮಾಡಿ ಪರಿಶೀಲಿಸಿದ. ಬೇರೆ-ಬೇರೆ ಕಂಪನಿಗಳಿಗೆ ತಮ್ಮ ಕಚೇರಿಯಿಂದ ತಯಾರಿಸಿದ ಯೋಜನೆಗಳನ್ನು, ಪ್ಲಾನ್‌ಗಳನ್ನು ಪರಿಶೀಲಿಸಿದ. ಅದಕ್ಕೆ ತಗಲಬಹುದಾದ ಹಣಕಾಸು ಲೆಕ್ಕವನ್ನೂ ಪರಿಶೀಲಿಸಿದ. ಕಚೇರಿ ಸಿಬ್ಬಂದಿ ಟೀ, ಕಾಫೀ ಕುಡಿಯಲು ಕರೆದರೂ ಹೋಗಲಿಲ್ಲ. ಅವರೆಲ್ಲಾ ಹೋಗುವಾಗ, ಬರುವಾಗ ವಿಜಯನನ್ನು ವ್ಯಂಗ್ಯವಾಗಿ ನೋಡುತ್ತಾ ಹೋಗುತ್ತಿದ್ದರು. ಅದ್ಯಾವುದಕ್ಕೂ ತಲೆ ಕೆಡಸಿಕೊಳ್ಳದೇ ಕೆಲಸದಲ್ಲಿ ಮಗ್ನನಾಗಿದ್ದ. ಮಧ್ಯದಲ್ಲಿ ಚಪರಾಸಿ ಪರಮೇಶಿ ಬಂದು ಸರ್ ಚಹ ತಂದು ಕೊಡ್ಲೀ ಎಂದಾಗ ಮುಗಳ್ನಗುತ್ತಾ ಬೇಡ ಎಂದು ತಿರಸ್ಕರಿಸಿದ. ಸರ್ ನೀವೊಬ್ಬರೇ ಕೆಲಸ ಮಾಡಿದ್ರೆ ಏನು ಪ್ರಯೋಜನ? ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಿನ್ನೆನೂ ಕತ್ತಲಾಗುವವರೆಗೂ ಕೆಲಸ ಮಾಡಿದ್ರಿ. ಆದ್ರ ಇವತ್ತು ಸ್ವಲ್ಪ ತಡವಾದ್ದಕ್ಕೆ ಮ್ಯಾನೇಜರ್ ಕೋಪ ಮಾಡಿಕೊಂಡ್ರು. ಪ್ರಾಮಾಣಿಕ ಕೆಲಸಗಾರರ ಮೇಲೆಯೇ ಅಧಿಕಾರಿಗಳ ದರ್ಪ ಎಂದಾಗ ಅಂಗೆಲ್ಲಾ ಮ್ಯಾನೇಜರ್ ಬಗ್ಗೆ ಹಗುರವಾಗಿ ಮಾತಾಡಬಾರ್ದು. ಅವರು ನಮಗೆ ಅನ್ನ ಕೊಡುವ ಧಣಿ. ಅವರ ಮೇಲೆ ನಾವು ಕೋಪ ಮಾಡ್ಕೊಬಾರದು ಎಂದು ಪರಮೇಶಿಯ ಮೇಲೆ ಮುನಿಸಿಕೊಂಡ. ಆಯ್ತು ಸರ್ ನಿಮ್ಮ ಕರ್ತವ್ಯ ಪ್ರಜ್ಞೆಗೆ ನನ್ನ ಸಲಾಮು. ಇರ್ಲಿ ಒಂದು ಕಾಫಿ ತಂದು ಕೊಡ್ತೀನಿ ಕುಡಿರಿ. ಸ್ವಲ್ಪ ಫ್ರೆಶ್ ಆಗ್ತಿರಿ ಎಂದಾಗ ಪರಮೇಶಿಯ ಪ್ರೀತಿಯ ಮಾತುಗಳಿಗೆ ನಿರಾಕರಿಸಲಾದಿತೇ? ಹುಂ ಮಾರಾಯ ಎರಡು ತಗೊಂಡು ಬಾ, ಇಬ್ರೂ ಇಲ್ಲೇ ಕುಡಿಯೋಣ ಎಂದು ಪರಮೇಶಿಗೆ ಹಣ ಕೊಡಲು ಹೋದ. ಅಯ್ಯೋ ಬೇಡಾ ಬಿಡಿ ಸರ್ ಯಾವಾಗ್ಲೂ ನೀವೇ ಕೊಡ್ತಿರಿ. ನಾನು ಒಂದ ಸಲನಾದ್ರೂ ಕೊಟ್ಟು ನಿಮ್ಮ ಋಣ ಕಡಿಮೆ ಮಾಡ್ಕತೀನಿ, ಆಯ್ತು ಇನ್ನೊಂದು ಸಲ ಕೊಡವಂತಿ ತಗೊ ಎಂದು ವಿಜಯ ಬಲವಂತವಾಗಿ ಪರಮೇಶಿಗೆ ಹಣ ಕೊಟ್ಟು ಕಾಫಿ ತರಲು ಕಳುಹಿಸಿದ.
ಚಪರಾಸಿ ಪರಮೇಶಿ ಕಚೇರಿಗೆ ಬಹಳ ಸೀನಿಯರ್ ಮನುಷ. ಮತ್ತು ವಿಶೇಷವಾಗಿ ವಿಜಯನ ಮೇಲೆ ಅಪಾರ ಪ್ರೀತಿಯುಳ್ಳ ವ್ಯಕ್ತಿ. ಆತನಿಗೂ ಹೆಂಡತಿ ಮಕ್ಕಳಿಲ್ಲ. ಮದುವೆಯಾದ ಎರಡೇ ವರ್ಷದಲ್ಲಿ ಒಂದು ರಸ್ತೆ ಅಪಘಾತದಲ್ಲಿ ಹೆಂಡತಿ ಮಗನನ್ನು ಕಳೆದುಕೊಂಡು ಅನಾಥನಾಗಿದ್ದಾನೆ. ಹೀಗಾಗಿ ಪರಮೇಶಿ ಮನೆಯಲ್ಲಿರುವುದಕ್ಕಿಂತ ಕಚೇರಿಯಲ್ಲಿರುವುದೇ ಹೆಚ್ಚು. ವಿಜಯನದೂ ಸಹ ಪರಮೇಶನಕ್ಕಿಂತಲೂ ದೊಡ್ಡ ದುರಂತದ ಬದುಕು. ಹೀಗಾಗಿ ಇಬ್ಬರೂ ದುರಂತಕ್ಕೆ ಒಳಗಾದವರು.
ವಿಜಯ ಎಲ್ಲಾ ಕೆಲಸ ಮುಗಿಸುವ ಹೊತ್ತಿಗೆ ಸಂಜೆ ಆರುಗಂಟೆ ಹೊಡೆದಿತ್ತು. ಅಷ್ಟೊತ್ತಿಗಾಗಲೇ ಕಚೇರಿ ಎಲ್ಲಾ ಸಿಬ್ಬಂದಿ ಹೊರಟು ಹೋಗಿದ್ದರು. ಅದರಲ್ಲಿ ಮ್ಯಾನೇಜರ್ ಸಹ ಸೇರಿದ್ದ. ಪರಮೇಶಿ ಒಬ್ಬನೇ ಒಂದು ಸ್ಟೂಲ್‌ನ ಮೇಲೆ ತೂಕಡಿಸುತ್ತಾ ಕುಳಿತಿದ್ದ. ನೀನು ಮನಿಗೆ ಹೋಗು, ನಂದು ಇನ್ನೂ ಸ್ವಲ್ಪೊತ್ತು ಆಗಬಹುದು. ಎಲ್ಲಾ ಕೆಲಸ ಮುಗಿಸಿಕೊಂಡು ನಾನೇ ಕಚೇರಿಗೆ ಬೀಗ ಹಾಕಿಕೊಂಡು ರ‍್ತೀನಿ, ನೀನು ಹೋಗು. ಅಯ್ಯೊ ರ‍್ಲಿ ಬಿಡಿ ಸರ್ ನಾನು ಮನಿಗಿ ಹೋಗಿ ಏನ್ ಮಾಡ್ಲಿ? ನೀವು ಮನಿಗೆ ಹೋದ ಮೇಲೆ ಎಲ್ಲಾ ಫೈಲ್ಸ್ ಸರಿಯಾಗಿ ಹೊಂದಿಸಿಟ್ಟು ಬೀಗ ಹಾಕಿ ಹೋಗ್ತೀನಿ. ನಂಗೇನೂ ಮನೆಯಲ್ಲಿ ಯಾರೂ ಕಾಯಲ್ಲ. ನಾ ಇಲ್ಲೇ ಇದ್ರೂ ಅಷ್ಟೇ, ಮನಿಗಿ ಹೋದ್ರೂ ಅಷ್ಟೇ ಬಿಡಿ ಸರ್, ಏನ್ ಮಾಡ್ಲಿ ಎಲ್ಲಾ ನನ್ನ ಹಣೆಬರಹ ಎಂದು ಗೊಣಗುತ್ತಿರುವ ಪರಮೇಶನ ಮೇಲೆ ವಿಜಯನಿಗೆ ಸಿಂಪತಿ ಉಂಟಾಯಿತು.
ವಿಜಯ ಬಾಕಿ ಉಳಿದಿರುವ ಫೈಲ್‌ಗಳನ್ನು ಬೇಗ-ಬೇಗ ಪರಿಶೀಲನೆ ಮಾಡಿ, ರುಜು ಹಾಕಿ ಕೆಲಸ ಮುಗಿಸಿದ. ಸ್ಟೂಲ್ ಮೇಲೆ ಕುಳಿತು ಆಕಳಿಸುತ್ತಿದ್ದ ಪರಮೇಶಿಯ ಮೇಲಿನ ಪ್ರೀತಿಗಾಗಿ ಕೆಲವು ಫೈಲಗಳನ್ನು ಚೆಕ್‌ಮಾಡಿ ಉಳಿದ್ವು ನಾಳೆ ನೋಡಿದರಾತು ಬಿಡು ಎಂದು ಮನೆಗೆ ಹೊರಡಲು ಸಿದ್ಧರಾದರು. ಪರಮೇಶಿ ನಡಿ ಮನಿಗೆ ಹೋಗೋಣ ನನ್ ಸಲುವಾಗಿ ನೀನು ಕಾಯುವುದು ಬೇಡಾ. ಇವತ್ತಾದರೂ ಮನಿಗೆ ಬೇಗ ಹೋಗೋಣ ಅಂದುಕೊಂಡಿದ್ದೆ. ಆದರೆ ಕೆಲಸಗಳ ಒತ್ತಡದಲ್ಲಿ ಇವತ್ತೂ ಆಗ್ಲಿಲ್ಲಾ. ದಿನಾಲೂ ಇದೇ ಸಮಯ ಆಗುತ್ತೆ ನಡಿ ಎಂದು ವಿಜಯ ಹೊರಡಲು ಎದ್ದು ನಿಂತ. ಪರಮೇಶಿ ಟೇಬಲ್ ಮೇಲಿದ್ದ ಫೈಲ್‌ಗಳನ್ನು ಸರಿಯಾಗಿ ಹೊಂದಿಸಿದ. ಉಳಿದ ಕಾಗದ ಪತ್ರಗಳನ್ನು ಸರಿಮಾಡಿ ಕಿಟಕಿ ಮುಚ್ಚಿ, ಲೈಟ್‌ಆಫ್ ಮಾಡಿದ. ಬಾಗಿಲು ಮುಚ್ಚಿ, ಬೀಗ ಹಾಕಿ ಇಬ್ಬರೂ ಕಚೇರಿಯಿಂದ ಹೊರ ನಡೆದರು.
ಜಯಾ ನೀನು ಇನ್ನೂ ಮಲಿಗಿದ್ದೀ? ಚಿತ್ರಾನ್ನ ತಿಂದಿಲ್ಲ ಎಲ್ಲಾ ಹಳಸಿ ಹೋಗ್ಯಾದ ನೋಡು ಎಂದು ಮಂಚದ ಮೇಲೆ ಮಲಗಿದ್ದ ಜಯಾಳಿಗೆ ತಂದು ತೋರಿಸಿದ. ಅಕಿ ಅದನ್ನು ನೋಡಲು ಸಾಧ್ಯವೇ? ವಿಜಯನ ಜೊತೆಗೆ ಅಕಿ ಮಾತನಾಡಲು ಸಾಧ್ಯವೇ? ಅದು ಗೊಂಬೆ, ಆ ಗೊಂಬೆ ಮಾತನಾಡಿತೇ? ವಿಜಯ ಅದರ ಜೊತೆ ಮಾತಾಡಿ, ಮಾತಾಡಿ ಅದು ನಿರ್ಜೀವ ಗೊಂಬೆ ಎನ್ನುವುದೇ ಮರೆತಿದ್ದಾನೆ. ಅದರ ಜೊತೆಗೆ ಎಷ್ಟು ಹೊಂದಿಕೊಂಡಿದ್ದಾನೆಂದರೆ ಅದು ತನ್ನ ಹೆಂಡತಿ ಜಯಾ ಎಂದೇ ಭಾವಿಸಿದ್ದಾನೆ.
ಜಯಾ ಮತ್ತು ವಿಜಯ ಇಬ್ಬರು ಇಷ್ಟಪಟ್ಟು ಮದುವೆಯಾದವರು. ಮನೆಯಲ್ಲಿ ಏನೇ ಅಡ್ಡಿ ಇದ್ದರೂ ಅದನ್ನು ಲೆಕ್ಕಿಸಿದವರಲ್ಲಾ. ಇಬ್ಬರೂ ಒಂದನೇ ತರಗತಿಯಿಂದ ಕ್ಲಾಸ್‌ಮೇಟ್‌ಗಳು. ಪದವಿಯವರೆಗೂ ಒಂದೇ ಕಾಲೇಜಿನಲ್ಲಿ ಓದಿದವರು. ಸ್ಕೂಲ್‌ನಲ್ಲಿ ಒಂದನೇ ಕ್ಲಾಸ್ ಓದುವಾಗ ವಿಜಯ ತನ್ನ ಹತ್ತಿರ ಬಳಪ ಇಲ್ಲದಿದ್ದರಿಂದ ಜಯಾಳಿಂದ ಇಸ್ಕಂಡಿದ್ದ. ಆದರೆ ವಾಪಸ್ ಕೊಡುವಾಗ ಚಿಕ್ಕದಾಗಿ ಕೊಟ್ಟಿದ್ದಾನೆಂದು ಸ್ಕೂಲ್ ತುಂಬೆಲ್ಲಾ ಗಲಾಟೆ ಮಾಡಿ ಮೇಷ್ಟ್ರಿದ ವಿಜಯನಿಗೆ ಚನ್ನಾಗಿ ಗುಮ್ಮಿಸಿದ್ದಳು. ಅದೇ ಸಿಟ್ಟಿನಿಂದ ವಿಜಯ ನೀನು ಒಮ್ಮೆ ನನ್ನ ಕೈಯಲ್ಲಿ ಸಿಗು, ಆಗ ನಿನಗೈತಿ ಮಾರಿಹಬ್ಬ ಎಂದು ಕಾಯುತ್ತಿದ್ದ. ಒಮ್ಮೆ ಮೇಷ್ಟ್ರು ಪ್ರಶ್ನೆ ಕೇಳಿದಾಗ ಇಡೀ ಕ್ಲಾಸೇ ಉತ್ತರಿಸಿರಲಿಲ್ಲ. ವಿಜಯ ಮಾತ್ರ ಆ ಪ್ರಶ್ನೆಗೆ ಉತ್ತರಿಸಿದ್ದ. ಮೇಷ್ಟ್ರು ಉತ್ತರಿಸದವರ ಕಪಾಳಕ್ಕೆ ಹೊಡೆಯಲು ಸೂಚಿಸಿದ್ದರು. ಇದೇ ಚಾನ್ಸ್ ಎಂದ ವಿಜಯ ಜಯಾಳ ಕಪಾಳಕ್ಕೆ ಚನ್ನಾಗಿ ಹೊಡೆದಿದ್ದ. ಅಳುತ್ತಾ ಹೊರಬಂದು ಕುಳಿತಿದ್ದ ಜಯಾಳಿಗೆ ಕ್ಷಮೆ ಕೇಳಿ ಸಮಾಧಾನಪಡಿಸುವುದರೊಳಗೆ ಸಾಕು ಸಾಕಾಗಿ ಹೋಗಿತ್ತು. ನನ್ನದೇನೂ ತಪ್ಪಿಲ್ಲಾ. ಮೇಷ್ಟ್ರು ಹೇಳಿದಂತೆ ನಾನು ಕೇಳಲೇಬೇಕಿತ್ತು ಎಂದು ಹೇಳಿ ಹೇಗೋ ಸಮಾಧಾನ ಮಾಡುವ ಹೊತ್ತಿಗೆ ಸುಸ್ತಾಗಿ ಹೋಗಿತ್ತು. ಕೊನೆಗೆ ಅವಳನ್ನು ಸಮಾಧಾನ ಮಾಡಲು ಒಂದು ಗೊಂಬೆ ತಂದು ಕೊಟ್ಟ. ಆಗ ಜಯಾಳ ಮನಿಸ್ಸಿನಲ್ಲಾದ ಬದಲಾವಣೆ ಹೇಳತೀರದು. ನಂಗೆ ಗೊಂಬೆ ಎಂದರೆ ಬಹಳ ಇಷ್ಟ. ನಮ್ಮ ಮನ್ಯಾಗ ಗೊಂಬೆ ಬಹಳ ಇದಾವಾ. ನಾನು ಜಾಸ್ತಿ ಗೊಂಬೆ ಜೊತೆ ಆಟ ಆಡ್ತೀನಿ, ಅದರ ಜೊತೆಯಲ್ಲೇ ಊಟ ಮಾಡ್ತೀನಿ, ರಾತ್ರಿ ಗೊಂಬೆಗಳ ಪಕ್ಕದಲ್ಲೇ ಮಲಗದು. ಅಪ್ಪ-ಅಮ್ಮನಗಿಂತ ನಂಗೆ ಗೊಂಬೆ ಅಂದ್ರೆನೇ ಬಹಳ ಇಷ್ಟ. ಅದ್ಕೆ ಮನೆಯಲ್ಲಿ ಎಲ್ರೂ ನಂಗೆ ಗೊಂಬೆ ಅಂತ ಕರಿತಾರ. ನೀನೂ ನಂಗೆ ಗೊಂಬೆ ಗಿಫ್ಟ್ ಕೊಟ್ಟಿದ್ದಿ. ನಂಗ ಬಹಳ ಸಂತೋಷ ಆಯ್ತು ಎಂದು ಬಹಳ ಖುಷಿಪಟ್ಟಿದ್ದಳು. ಆವಾಗಿನಿಂದಲೇ ಅವರಿಬ್ಬರ ಗೆಳೆತನ ಶುರುವಾಗಿತ್ತು. ವಿಜಯನೂ ಸಹ ಜಯಾಳಿಗೆ ಪ್ರೀತಿಯಿಂದ ಗೊಂಬೆ ಎಂದು ಕರೆಯುತ್ತಿದ್ದ. ಪ್ರೈಮರಿ ಮುಗಿಸಿ ಹೈಸ್ಕೂಲ್‌ದಲ್ಲಿಯೂ ಸಹ ಒಂದೇ ಕಡೆ ಅಭ್ಯಾಸ ಮಾಡಿದರು. ಮುಂದೆ ಕಾಲೇಜು ಸಹ ಒಂದೇ ಕಡೆ ಅಭ್ಯಾಸ ಮಾಡಿ ಪದವಿ ಮುಗಿಸಿದರು.
ಇಬ್ಬರ ಗೆಳೆತನ ನಂತರ ಅದು ಪ್ರೀತಿಯಾಗಿ ಬದಲಾಯಿತು. ಇಬ್ಬರ ಪ್ರೀತಿ ಇಡೀ ಊರಿಗೇ ತಿಳಿದು ಮಾತನಾಡ ಹತ್ತಿದರು. ಈ ವಿಷಯ ಜಯಾ ವಿಜಯನ ಮನೆಯವರಿಗೂ ತಲುಪಿತು. ಅವರ ಮದುವೆಗೆ ಜಯಾಳ ಮನೆಯವರ ಕಡೆ ಒಪ್ಪಲಿಲ್ಲ. ಕಾರಣ ಅವರಿಬ್ಬರ ಜಾತಿ ಬೇರೆ-ಬೇರೆಯಾಗಿತ್ತು. ಮತ್ತು ಅವನು ನಿರುದ್ಯೋಗಿ ಆಗಿದ್ದ. ಹೀಗಾಗಿ ಜಯಾಳ ಮನೆಯವರು ಒಪ್ಪಲೇ ಇಲ್ಲ. ಇಡೀ ಊರೇ ನ್ಯಾಯಪಂಚಾಯತಿ ಸೇರಿ ಮದುವೆ ಮಾಡಲು ಹೇಳಿದರೂ ಇಬ್ಬರ ಮನೆಯವರು ಒಪ್ಪಲಿಲ್ಲ. ಜಯಾ ಮತ್ತು ವಿಜಯ ಇಬ್ಬರ ಮನೆಯಲ್ಲಿಯೂ ದೊಡ್ಡ ರಾದ್ಧಾಂತವೇ ಮಾಡಿದರು. ಜಯಾಳ ಮೇಲೆ ವಿಜಯನ ಮನೆಯವರು, ವಿಜಯನ ಮೇಲೆ ಜಯಾಳ ಮನೆಯವರು ಹಲ್ಲೆ ಮಾಡಿ ಪ್ರೀತಿಗೆ ಅಡ್ಡಿಪಡಿಸಿದರು. ಆದರೆ ಪ್ರೇಮಿಗಳು ಮಾತ್ರ ಧೃತಿಗೆಡಲಿಲ್ಲ. ಈ ಊರಿನ ಸಹವಾಸವೇ ಬೇಡಾ ಎಂದು ಕೊನೆಗೆ ಊರೇ ಬಿಟ್ಟು ಓಡಿ ಹೋಗುವ ತೀರ್ಮಾನಕ್ಕೆ ಬಂದರು. ನಂತರ ಪಟ್ಟಣಕ್ಕೆ ಬಂದು ಸೇರಿದರು. ಅಲ್ಲಿ ಗೆಳೆಯರ ಸಹಾಯದಿಂದ ನೋಂದಣಿ ಕಚೇರಿಯಲ್ಲಿ ಇಬ್ಬರು ಮದುವೆಯಾದರು. ಆದರೆ ಮುಂದಿನ ಬದುಕು? ಉದ್ಯೋಗವಿಲ್ಲ, ಕೈಯಲ್ಲಿ ಹಣವಿಲ್ಲ ಬಾಡಿಗೆ ಮನೆಯಲ್ಲಿ ಅವರ ಜೀವನ, ಪರಿಸ್ಥಿತಿ ಹೇಳತೀರದು. ಒಂದೊತ್ತು ಊಟಕ್ಕೂ ತಾಪತ್ರಯ ಪಡಬೇಕಾಯಿತು. ಎಷ್ಟು ದಿನ ಹೀಗೆ ಬದುಕಲಾದೀತು? ಎಲ್ಲಾ ಕಡೆ ಅಲೆದರೂ ಉದ್ಯೋಗ ಸಿಗಲಿಲ್ಲ. ಬದುಕು ದಿನದಿಂದ ದಿನಕ್ಕೆ ದುಸ್ಥರವಾಗುತ್ತಾ ಹೋಯಿತು. ಒಂದರ್ಥದಲ್ಲಿ ವಿಜಯನಿಗೆ ಬದುಕುವುದೇ ಕಷ್ಟವೆನಿಸಿತು.
ಹೀಗಾದರೆ ನಮ್ಮ ಬದುಕು ದುರಂತಕ್ಕೀಡಾಗಬಹುದು, ಜಯಾಳಿಗೂ ಅನ್ಯಾಯವಾಗಬಹುದು ಎಂದು ಅರಿತ ವಿಜಯ. ಗೊಂಬೆ ನೀನು ಊರಿಗೆ ಹೋಗಿಬಿಡು, ನಿಮ್ಮ ಮನೆಯವರು ನಿನ್ನ ಚನ್ನಾಗಿ ನೋಡ್ಕೋತಾರೆ. ಇಲ್ಲಿದ್ದು ಕಷ್ಟಪಡುವುದು ಬೇಡಾ. ನಾನು ಹೆಂಗೋ ಬದುಕುತೀನಿ ಎಂದಾಗ ಜಯಾ ಕೆಂಡಾಮಂಡಲವಾದಳು. ನಾವು ಊರು ಬೇಡ ಅಂತ ಇಲ್ಲಿಗಿ ಬಂದಿವಿ. ನಾ ಮತ್ಯಾಕ ಊರಿಗೆ ಹೋಗ್ಲಿ? ಅಲ್ಲಿಗೆ ಹೋದ್ರೆ ನಂಗೆ ಸುಖ ಸಿಗ್ತಾದಾ? ನಾ ನಿನ್ನ ನಂಬಿ ಬಂದಿನಿ, ನಿನ್ನ ಜೊತೆಯಲ್ಲಿರುವುದೇ ನಂಗೆ ಖುಷಿ. ನಾವಿಬ್ಬರೂ ಒಂದನೇ ಕ್ಲಾಸ್‌ನಿಂದ ಫ್ರೆಂಡ್ಸ್. ನಮ್ಮದು ಗೆಳೆತನದಿಂದ ವೈವಾಹಿಕ ಜೀವನಕ್ಕೆ ಬಂದು ನಿಂತೈತಿ. ಅದು ನಮ್ಮ ಸಾವಿನವರೆಗೂ ಸಾಗಬೇಕು. ನಮ್ಮ ಪ್ರೀತಿಗೆ ಎಷ್ಟೇ ಅಡ್ಡಿಬಂದರೂ ನಾವು ಅದನ್ನು ಲೆಕ್ಕಕ್ಕೆ ತಗೊಂಡಿಲ್ಲ. ಇನ್ನು ಈ ಬಡತನಕ್ಕೆ ಹೆರ‍್ತೀವ್ಯಾ? ಬರುವ ಒಂದು ಸಣ್ಣ ಬಡತನ ನಮ್ನ ಹೆದರುಸ್ತಾದಾ? ಸಾಧ್ಯವಿಲ್ಲ. ಅದು ನಮ್ಮ ಪ್ರೀತಿಗೆ ಅವಮಾನ. ವಿಜಯ ನಾನು ಮತ್ತೆ ಊರಿಗೆ ಹೋದ್ರಾ ನಂಗೆ ಇಲ್ಲಿಗಿಂತ್ಲೂ ಅಲ್ಲಿ ಕಷ್ಟ ಹೆಚ್ಚಾಗ್ತಾವಾ. ನಾನು ಜೀವನ ಪೂರಾ ನಿನ್ನ ಜೊತೆಯಲ್ಲಿರಬೇಕಂತ ಬಂದಿನಿ. ಈ ಗೊಂಬೆಯೊಳಗೆ ಆ ನಿನ್ನ ಉಸಿರಿದೆ. ಅದ್ನಾ ಬ್ಯರ‍್ಯಾ ಮಾಡಾಕ ಆಗಲ್ಲಾ. ನಾನು ಸತ್ತಾಗ ಮಾತ್ರ ನಿನ್ನ ಬಿಟ್ಟು ಹೋಗದು ಎಂದಾಗ ವಿಜಯ ಜಯಾಳನ್ನು ಬಿಗಿದಪ್ಪಿ ಅತ್ತುಬಿಟ್ಟ.
ವಿಜಯ ಒಮ್ಮೆ ರಸ್ತೆಯಲ್ಲಿ ಹೋಗುತ್ತಿರುವಾಗ ಕಾರಿನಲ್ಲಿ ಹೋಗುತ್ತಿದ್ದ ಗೆಳೆಯ ರಮೇಶ ಅವನನ್ನು ನೋಡಿದ. ಏನ್ ವಿಜಯ ಇಲ್ಲಿ? ಆಶ್ಚರ್ಯ! ಏನು ಮಾಡ್ತಾ ಇದ್ದಿ? ನಿನ್ನ ನೋಡಿ ಬಾಳ ದಿನ ಆತು. ಹೆಂಗಿದ್ದಿ? ಏನ್ ಕೆಲಸ ಮಾಡ್ತಾ ಇದ್ದಿ? ಎಂದು ವಿಚಾರಿಸಿದ. ಸಪ್ಪೆ ಮುಖದಿಂದ ಉತ್ತರಿಸುತ್ತಿದ್ದ ವಿಜಯನ ನೋಡಿ ಎಲ್ಲವೂ ಅರಿತುಕೊಂಡ. ರಮೇಶ ಮತ್ತು ವಿಜಯ ಇಬ್ಬರೂ ಕ್ಲಾಸ್‌ಮೇಟ್‌ಗಳು ಮತ್ತು ಒಂದೇ ಊರಿನವರು. ಅಲ್ಲಿನ ಎಲ್ಲಾ ಸಂಗತಿಗಳು ರಮೇಶನಿಗೆ ಚನ್ನಾಗಿ ಗೊತ್ತು. ನಿಮ್ಮ ಪ್ರೀತಿಗೆ ಊರಲ್ಲಿ ಅಡ್ಡಿಪಡಿಸಿದ್ದು, ಕೊನೆಗೆ ನೀವು ಊರೇ ಬಿಟ್ಟೋಗಿದ್ದು. ಎಲ್ಲಾ ನಂಗೆ ಗೊತೈತಿ. ಆದ್ರ ನೀವು ಇದೇ ಊರಾಗ ಇದ್ದೀರಿ ಅನ್ನದು ಮಾತ್ರ ನಂಗೆ ಗೊತ್ತಿರ್ಲಿಲ್ಲಾ. ಗೊಂಬೆ ಹೆಂಗದಾಳಾ? ಎಂದು ವಿಚಾರಿಸಿದ. ಅವನ ಮಾತುಗಳಿಗೆ ವಿಜಯ ಸರಿಯಾದ ರೀತಿಯಲ್ಲಿ ಉತ್ತರಿಸಲ್ಲಿಲ್ಲ. ಇರ್ಲಿ ಬಾ ಗೆಳೆಯ ಎಂದು ಸಮಾಧಾನ ಮಾಡುತ್ತಾ ಹೆಗಲ ಮೇಲೆ ಕೈಹಾಕಿ ತನ್ನ ಕಾರಿನಲ್ಲಿ ಆಫೀಸ್‌ಗೆ ಕರೆದುಕೊಂಡು ಹೋದ.
ರಮೇಶ ವಿಜಯನಿಗೆ ತನ್ನ ಕಚೇರಿಯನ್ನು ತೋರಿಸಿದ. ಅಲ್ಲಿರುವ ಎಲ್ಲಾ ಸಿಬ್ಬಂದಿಗಳಿಗೂ ಇವನು ನನ್ನ ಗೆಳೆಯ, ನನ್ನ ಕ್ಲಾಸ್‌ಮೇಟ್ ಎಂದು ಹೇಳಿ ಎಲ್ಲರಿಗೂ ಪರಿಚಯಿಸಿದ. ತನ್ನ ಚೇಂಬರ್‌ದಲ್ಲಿ ಕುಳ್ಳರಿಸಿ, ಏನೋ ವಿಜಯ ಇಷ್ಟು ಸೊರಗಿದ್ದೀಯಾ? ಊಟ ಮಾಡಿ ಎಷ್ಟೋ ದಿನ ಆಯ್ತು ಅನುವಂಗೆ ಕಾಣ್ತಾ ಇದಿಯಲ್ಲಾ, ಯಾಕೆ ಏನಾಯ್ತು? ಯಾವುದು ಕೆಲಸ ಸಿಕ್ಕಿಲ್ವಾ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ ರಮೇಶನ ಮಾತಿಗೆ ಪ್ರತ್ಯುತ್ತರವನ್ನಾಡದೇ ತಲೆ ತಗ್ಗಿಸಿ ಕುಳಿತುಕೊಂಡಿದ್ದ. ಕಣ್ಣಲ್ಲಿ ನೀರು ದಳ ದಳ ಸುರಿಯುತ್ತಿತ್ತು. ರಮೇಶನಿಗೆ ಆಶ್ಚರ್ಯ! ಏನಾಯ್ತೋ? ಅದ್ನಾರಾ ಹೇಳು. ಏನೆಂದು ಹೇಳಲಿ ರಮೇಶ ಉದ್ಯೋಗ ಇಲ್ಲ, ಕೈಯಲ್ಲಿ ಒಂದು ರೂಪಾಯಿ ಕೂಡಾ ಇಲ್ಲಾ. ಮನೆಯ ಬಾಡಿಗೆ ಕಟ್ಟಲು ಆಗ್ತಿಲ್ಲಾ, ಒಂದೊತ್ತು ಊಟಕ್ಕೂ ಪರದಾಡಂಗ ಆಗ್ಯಾದಾ. ಜಯಾಳಿಗೆ ನಾನು ಬಹಳ ಅನ್ಯಾಯ ಮಾಡಿದೆ, ಆ ಗೊಂಬೆಗೆ ಮೋಸ ಮಾಡಿದೆ. ಅವಳ್ನ ಸುಖದ ಸುಪ್ಪತ್ತಿಗೆಯಿಂದ ನರಕಕ್ಕೆ ರ‍್ಕೊಂಡು ಬಂದೆ. ನಾನು ಅವಳ್ನ ಪ್ರೀತಿಸಿ ಕಡುದ್ರೋಹ ಮಾಡಿದೆ. ಮುಂದೆ ಆ ದೇವರು ನನ್ನ ಕ್ಷಮಿಸಲ್ಲ ಎಂದು ಗೊಣಗುತ್ತಿದ್ದ ವಿಜಯನನ್ನು ಸಮಾಧಾನ ಮಾಡಿದ. ನನ್ನ ಗೊಂಬೆಯ ಕಥೆ ಇಲ್ಲಿಗೆ ಮುಗಿತು. ಎಂದು ಬಿಕ್ಕಿ-ಬಿಕ್ಕಿ ಚಿಕ್ಕಮಕ್ಕಳಂತೆ ಅತ್ತುಬಿಟ್ಟ. ಅಳಬೇಡಾ ಗೆಳೆಯ ನಾನಿದ್ದೇನೆ, ನಿನ್ನ ಕಥೆ ಮುಗಿಯಲು ನಾನು ಬಿಡುವುದಿಲ್ಲ. ಗೊಂಬೆಗಷ್ಟೇ ಅಲ್ಲಾ ನಿನಗೂ ಹೊಸ ಜೀವನದ ದಾರಿ ತೋರಸ್ತೀನಿ, ನೀನು ನನ್ನ ಕಚೇರಿಯಲ್ಲೇ ಕೆಲಸ ಮಾಡು. ಒಂದು ಕ್ಲಾರ್ಕ್ ಪೋಸ್ಟ್ ಖಾಲಿ ಐತಿ. ನೀನು ಇವತ್ತೇ ಕೆಲಸಕ್ಕೆ ಸೇರಿದ್ದೀಯಾ. ನಿನಗೆ ಇವತ್ತಿನಿಂದಲೇ ಸಂಬಳ. ನನ್ನ ಗೆಳೆಯನಿಗೆ ಅದು ನಮ್ಮ ಊರಿನವನಿಗೆ ಇಷ್ಟೂ ಸಹಾಯ ಮಾಡಾಕಾಗಲ್ವಾ ನಂಗೆ ಎಂದಾಗ ವಿಜಯನಿಗೆ ಮರುಹುಟ್ಟು ಬಂದಂತಾಯಿತು. ಅವನ ಸಂತೋಷಕ್ಕೆ ಮಿತಿಯೇ ಇಲ್ಲದಂತಾಯಿತು. ಮತ್ತೆ ನಮ್ಮ ಜೀವ ಮರುಕಳಿಸಿತು, ನಮ್ಮ ಪ್ರೀತಿಗೆ ರೆಕ್ಕೆ ಕೊಟ್ಟೆ. ಜಯಾ ನಾವಿಬ್ಬರು ಧನ್ಯರು ಎಂದು ಏನೇನೋ ಮನಸಿನಲ್ಲಿ ಗೊಣಗುತ್ತಾ ಕುಳಿತ ವಿಜಯನಿಗೆ ಕಾಫಿ ತಂದು ಕೊಟ್ಟರು. ಇಂತಹ ಕಾಫಿ ಕುಡಿದು ಎಷ್ಟೋ ದಿನ ಆಗಿತ್ತು ಗೆಳೆಯ, ನಿನ್ನ ಸಹಾಯದಿಂದ ನಾನು ಪುನರ್ಜನ್ಮ ಪಡೆದೆ ಎಂದು ಧನ್ಯತಾ ಭಾವದಿಂದ ನುಡಿದ. ಗೆಳೆಯ ಇನ್ನು ಮುಂದೆ ನೀನು ದಿನಾಲೂ ಇದೇ ತರಹದ ಕಾಫಿ ಕುಡಿ, ಇದು ನಿನ್ನ ಕಚೇರಿ. ಒಂದರ್ಥದಲ್ಲಿ ಇದಕ್ಕೆ ನೀನೇ ಮಾಲಕ ಎಂದಾಗ ವಿಜಯನಿಗೆ ಏನೇಳಬೇಕೆಂಬುದೇ ತೋಚಲಿಲ್ಲ. ತುಂಬಾ ಥ್ಯಾಂಕ್ಸ್ ಗೆಳೆಯ. ಮೊದಲು ಈ ವಿಷಯ ಗೊಂಬೆೆಗೆ ತಿಳಿಸಬೇಕು ಎಂದು ಅವಸರವಸರವಾಗಿ ಮನೆಯ ಕಡೆ ಓಡಿದ. ಸಪ್ಪೆ ಮುಖಮಾಡಿ ಕುಳಿತಿದ್ದ ಜಯಾಳಿಗೆ ಈ ಸುದ್ದಿ ತಿಳಿದು ಎಷ್ಟು ಸಂತೋಷವಾಯಿತೆಂದರೆ ತಮ್ಮ ಪ್ರೀತಿ, ಮದುವೆ ಎಲ್ಲವುಗಳಿಗಿಂತಲೂ ಹೆಚ್ಚಿನ ಖುಷಿಪಟ್ಟಂತೆ ಆಯಿತು.
ಮರುದಿನ ಬೇಗ ಎದ್ದವನೇ ಕಚೇರಿಗೆ ಓಡಿದ. ತನ್ನ ಕೆಲಸ ಕಾರ್ಯದ ಬಗ್ಗೆ ಮ್ಯಾನೇಜರ್‌ನಿಂದ ಮಾಹಿತಿ ಪಡೆದ. ಅಲ್ಲಿ ಸೀನಿಯರ್ ಪಿವನ್ ಪರಮೇಶಿಯ ಸಹಾಯದಿಂದ ಎಲ್ಲಾ ಫೈಲ್‌ಗಳನ್ನು ತನ್ನ ಟೇಬಲ್ ಮೇಲೆ ಇಟ್ಟುಕೊಂಡ. ವಿಜಯನ ಕಠಿಣಶ್ರಮ ಮತ್ತು ಪ್ರಾಮಾಣಿಕತೆ ಕಂಡ ರಮೇಶ ಅವನಿಗೆ ಹೆಚ್ಚಿನ ಜವಾಬ್ಧಾರಿ ನೀಡಿದ. ರಮೇಶನಿಗೆ ಅನೇಕ ವ್ಯವಹಾರಗಳ ಬಿಜಿ ಶಡ್ಯೂಲ್‌ದಲ್ಲಿ ಕಚೇರಿಗೆ ಬರುವುದೇ ಕಡಿಮೆಯಾಯಿತು. ವಿಜಯ ಶ್ರದ್ಧಾಪೂರ್ವಕವಾಗಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಬಹುತೇಕ ಕೆಲಸಗಳನ್ನು ಅವನಿಗೆ ಒಪ್ಪಿಸಿ ರಮೇಶ ತನ್ನ ಜವಾಬ್ಧಾರಿ ಕಡಿಮೆಮಾಡಿಕೊಂಡ.
ಬದುಕು ಹೀಗೆ ಸಾಗಿತ್ತು. ಜಯಾ ವಿಜಯರ ಜೀವನಮಟ್ಟ ಸುಧಾರಿಸಿತು. ವಿಜಯ ಕಚೇರಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರಿಂದ ಬೇರೆ-ಬೇರೆ ಕಂಪನಿಗಳಿಗೆ, ಬಿಲ್ಡರ್‌ಗಳಿಗೆ ಯೋಜನೆ, ಪ್ಲಾನ್, ಬಡ್ಜೇಟ್ ತಯಾರಿಸಿ ಕೊಡುವ ಬೇಡಿಕೆ ಹೆಚ್ಚಾಯಿತು. ಆ ಕಂಪನಿ ತಯಾರಿಸಿಕೊಡುತ್ತಿದ್ದ ಯೋಜನೆಗಳಿಗೆ ಬೇಡಿಕೆ ಎಷ್ಟು ಇತ್ತೆಂದರೆ ಸರತಿಯಲ್ಲಿ ಯೋಜನೆಗಳನ್ನು ಪಡೆಯಬೇಕಿತ್ತು. ಅದರ ಎಲ್ಲಾ ಶ್ರೇಯಸ್ಸು ವಿಜಯನಿಗೆ ಸಲ್ಲುತ್ತಿತ್ತು. ಅವನ ಪ್ರಾಮಾಣಿಕತೆ, ಬುದ್ಧಿವಂತಿಕೆ, ಜ್ಞಾನದಿಂದ ಪರಿಪೂರ್ಣವಾದ ಯೋಜನೆಗಳು ತಯಾರಾಗುತ್ತಿದ್ದವು. ಹೀಗಾಗಿ ವಿಜಯನಿಗೆ ಕಂಪನಿಯವರು ಉತ್ತಮ ಸ್ಯಾಲರಿ ಕೊಡುತ್ತಿದ್ದರು. ಅವರ ಬಡತನ ನೀಗಿ ಉತ್ತಮ ಸಂಪಾದನೆಯಾಯಿತು. ವಿಜಯ ಒಂದು ಮನೆಯನ್ನೂ ಕೂಡಾ ಖರೀದಿಸಿದ.
ಒಂದು ದಿನ ರಾತ್ರಿ ಜಯಾಳಿಗೆ ಎಷ್ಟು ಹೊತ್ತಾದರೂ ನಿದ್ದೆ ಬರಲಿಲ್ಲ, ಆಕಡೆ-ಈಕಡೆ ಒದ್ದಾಡುತ್ತಾ ಮಲಗಿದ್ದಳು. ಪಿಳಿ ಪಿಳಿ ಕಣ್ಣು ಬಿಡುತ್ತಾ ಮಲಗಿದ್ದ ಜಯಾಳನ್ನು ನೋಡಿದ ವಿಜಯ, ಯಾಕೆ ಗೊಂಬೆಗೆ ನಿದ್ದೆ ಬರ್ತಿಲ್ವಾ? ಬಹಳ ಹೊತ್ತಾತು, ನಿದ್ದೆ ಮಾಡಲ್ವಾ? ಹೌದು ಯಾಕೋ ಗೊತ್ತಿಲ್ಲ ನಿದ್ದೆ ಬರ್ತಿಲ್ಲಾ. ವಿಜಯ ನಮ್ಮ ಮದುವೆಯಾಗಿ ಎಷ್ಟು ವರ್ಷವಾಯ್ತು? ಐದು ವರ್ಷ ಆಯ್ತು. ಯಾಕೆ? ಐದು ವರ್ಷದಲ್ಲಿ ಏನೆಲ್ಲಾ ಕಷ್ಟ-ಸುಖ, ನೋವು ನಲಿವುಗಳನ್ನು ಕಂಡಿವಿ, ನನಗೆ ನೀನು ಮಗ, ನಿನಗೆ ನಾನು ಮಗಳು, ನನಗೆ ನೀನು ತಂದೆಯಾದರೆ, ನಿನಗೆ ನಾನು ತಾಯಿಯಾದೆ, ಇದು ನಮ್ಮ ಬಾಂಧ್ಯವ್ಯದಲ್ಲಿ ಕಂಡುಕೊಂಡ ಸಂಬಂಧ. ಈ ಮಧ್ಯದ ಬದುಕಿನಲ್ಲಿ ಏನೆಲ್ಲಾ ಅಡ್ಡಿ, ವಿರೋಧ, ಪ್ರೀತಿ, ಮಮತೆ ಎಲ್ಲವನ್ನೂ ಕಂಡಿವಿ. ಆದ್ರ ನಮ್ಗೆ ಯಾರ ಮೇಲೂ ಸಿಟ್ಟಿಲ್ಲಾ. ಅವರು ನಮ್ಗೆ ಏನೇ ಕಷ್ಟ ಕೊಟ್ರೂ ಕೊನೆಗೆ ನಾವು ಸುಖ ಪಡಿದಿವಿ. ನಮ್ಮ ಬದುಕು ಈ ಹಂತಕ್ಕೆ ಬಂದು ನಿಂತಿದೆ ಎಂದು ಏನೇನೋ ಮಾತನಾಡಹತ್ತಿದಳು. ರ‍್ಲಿ ಜಯಾ ಮಲಗು. ನಾಳೆ ನಮ್ಮ ಕಚೇರಿಗೆ ರಜೆ ಐತಿ. ನಾಳೆಯಾದ್ರೂ ಆರಾಮಾಗಿ ಮಲಗ್ತೀನಿ. ಹೌದು ನಾನೂ ನಾಳೆ ಬೆಳಿಗ್ಗೆ ಬೇಗ ಎದ್ದೇಳಬೇಕು, ಯಾಕೆ? ಏನು ವಿಶೇಷ? ಏನಿಲ್ಲಾ ಹಾಗೆ ಸುಮ್ನೆ, ಹೌದಾ? ನಾಳೆ ಏನು ವಿಶೇಷ ನೆನಪಾಗ್ತಿಲ್ವಲ್ಲಾ? ನಿನ್ನ ಹುಟ್ಟಿದ ದಿನ ಅಲ್ಲ, ಮದುವೆ ದಿನವಂತೂ ಅಲ್ಲ, ನಾನು ನೌಕರಿಗೆ ಸೇರಿದ ದಿನವೂ ಅಲ್ಲ, ಮತ್ತೇನು ವಿಶೇಷ? ಎಂದು ವಿಜಯ ಆಲೋಚನೆ ಮಾಡುತ್ತಾ ಮೂಲೆಕಡೆ ನೋಡಿದ. ನಿನ್ನ ಕೆಲಸ, ಆ ಕಚೇರಿ, ಆ ಪ್ಲಾನ್, ಬಡ್ಜೇಟ್ ತಯಾರಿಸೋದ್ರಾಗ ನಿನ್ನ ಟೈಮ್ ಮುಗಿತಾದಾ. ನಿಂಗೆ ಯಾವುದೂ ನೆನಪಿರಲ್ಲಾ, ಎಲ್ಲವೂ ಮರಿತಿದ್ದೀ. ಹೌದು ನಮ್ಮ ಬದುಕು ಬೀದಿಯಲ್ಲಿದ್ದಾಗ, ಒಂದು ತುತ್ತು ಅನ್ನಕ್ಕೂ ಕಷ್ಟಪಡುತ್ತಿರುವಾಗ ನಮ್ಮ ಕೈ ಹಿಡಿದ ಈ ಕರ್ತವ್ಯ ಮರೆಯಲು ಸಾಧ್ಯನಾ? ಅದು ನನ್ನ ಉಸಿರು. ನಮಗೆ ಮೊದಲ ಜನ್ಮ ಕೊಟ್ಟ ಆ ತಾಯಿಯಾದರೆ: ಮರಳಿ ನಮಗೆ ಪುನರ್ಜನ್ಮ ಕೊಟ್ಟ ತಾಯಿ ಇದು. ಅದಕ್ಕಾಗಿಯೇ ನಾವು ಎಲ್ಲವನ್ನು ಮರೆತು ದುಡಿಬೇಕು. ನನ್ನ ಗೆಳೆಯ ರಮೇಶ ನನಗೆ ಆ ಕೆಲಸ ಕೊಡದಿದ್ರೆ ಬಹುಶಃ ನಮ್ಮ ಬದುಕು ಅಂದೇ ಕೊನೆಯಾಗುತ್ತಿತ್ತೇನೋ ಎಂದು ವಿಜಯ ಏನೇನೋ ಮಾತನಾಡ ಹತ್ತಿದ. ರ‍್ಲಿ ನಾಳೆ ನಿನ್ನ ಬರ್ಥ್ಡೆ ಐತಿ. ಅದ್ಕೆ ನಿಂಗೆ ಒಂದು ಗಿಫ್ಟ್ ತರ್ತಿನಿ. ಹೌದಾ! ಕೆಲಸದ ಒತ್ತಡದಲ್ಲಿ ಯಾವುದೂ ನೆನಪಿಲ್ಲ. ನಾಳೆ ಬೆಳಿಗ್ಗೆ ನಿಂಗೆ ಒಂದು ಅದ್ಭುತ ಗಿಫ್ಟ್ ಕೊಡ್ತೀನಿ. ಅದು ನಿನ್ನ ಜೀವನದಲ್ಲೇ ಅತ್ಯಂತ ಮಹತ್ವದ ಗಿಫ್ಟ್. ಅದು ನಿನ್ನ ಜೀವನದ ಕೊನೆಯವರೆಗೂ ಇರಬೇಕು ಅಂತಹ ಪ್ರಜೆಂಟೇಷನ್ ಕೊಡ್ತೀನಿ. ಎಂದು ಏನೇನೋ ಮಾತನಾಡುತ್ತಾ ಜಯಾ ಕಣ್ಣು ಮುಚ್ಚಿದಳು.
ಜಯಾ…..ಜಯಾ ಎಂದು ಕೂಗಿದ ಪಕ್ಕದಲ್ಲಿ ಕಾಣಲಿಲ್ಲ. ಬಾತ್ ರೂಂಗೆ ಹೋಗಿರಬೇಕೆಂದು ನೋಡಿದ ಅಲ್ಲಿ ಕಾಣಲಿಲ್ಲ, ಹೊರಗಡೆಯೂ ಕಾಣಲಿಲ್ಲ. ವಿಜಯನಿಗೆ ಆಶ್ಚರ್ಯವಾಯಿತು. ಓ! ಇವತ್ ನನ್ನ ಬರ್ಥ್ಡೆ ಅಲ್ವಾ ಏನೋ ಗಿಫ್ಟ್ ರ‍್ತೀನಿ ಅಂತ ಹೋಗ್ಯಾಳ. ನೋಡಾಮು ಏನು ಅಂತಹ ಸರಪ್ರೈಜ್ ಗಿಫ್ಟ್ ರ‍್ತಾಳಾ ಎಂದು ಗೊಣಗುತ್ತಾ ಬಾತ್ ರೂಂಕಡೆ ನಡೆದ. ಸ್ನಾನಮಾಡಿ ಹೊರಬಂದ. ಏಷ್ಟೋ ಸಮಯ ಕಳೆದರೂ ಜಯಾಳ ಸುಳಿವಿಲ್ಲ. ಎಲ್ಲೊಗಿರಬಹುದು ಅದೆಂತಹ ಗಿಫ್ಟ್ ತರಾಕ ಹೋಗ್ಯಾಳ ಎಂದು ಗೊಣಗುತ್ತಾ ಕುಳಿತ. ಆಗ ಫೋನ್ ರಿಂಗಾಯಿತು. ಯಾರಿರಬಹುದು ಎಂದು ಫೋನ್ ರಿಸಿವ್ ಮಾಡಿದ. ಸರ್ ಇದು ವಿಜಯನಾ? ಹೌದು, ನೀವ್ಯಾರು? ನಾನು ಟ್ರಾಫಿಕ್ ಪೊಲೀಸ್, ನೀವು ಕೂಡಲೇ ಚೌಕಾ ರಸ್ತೆಗೆ ಬನ್ನಿ ಎಂದ. ಯಾಕೆ ಏನಾಯ್ತು ನಾನ್ಯಾಕ ಬರ್ಲಿ? ಇಲ್ಲ ಸರ್ ಒಂದು ವಿಷಯವಿದೆ ನೀವು ಬೇಗನೆ ಬನ್ನಿ ಎಂದು ಫೋನ್ ಕಟ್ ಮಾಡಿದರು. ಅನಿವಾರ್ಯವಾಗಿ ವಿಜಯ ಓಡಿದ. ಅಲ್ಲಿ ನೋಡಿದರೆ ಆಶ್ಚರ್ಯ. ರಕ್ತದ ಮಡುವಿನಲ್ಲಿ ಜಯಾ ಬಿದ್ದು ಒದ್ದಾಡುತ್ತಿದ್ದಳು. ಜಯಾ… ಜಯಾ ಏನಾಯ್ತು ಇಲ್ಲಿಗ್ಯಾಕೆ ಬಂದೆ? ಎಂದು ಅಳುತ್ತಾ ಅವಳನ್ನು ತೊಡೆಯ ಮೇಲೆ ಹಾಕಿಕೊಂಡ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ರಕ್ತ ಸುರಿಯುತ್ತಿತ್ತು. ಯಾಕೆ ಜಯಾ ಏನಾಯ್ತು? ಇವತ್ತು ನಿನ್ನ ಬರ್ಥ್ಡೆ ಅಲ್ವಾ ಅದ್ಕೆ ಏನಾದ್ರೂ ಗಿಫ್ಟ್ ತರೋಣ ಅಂತ ಬಂದಿದ್ದೆ. ದರ‍್ಯಾಗ ಏನಾಯ್ತೊ ಗೊತ್ತಿಲ್ಲ. ಪಕ್ಕದಲ್ಲಿ ನಿಂತಿದ್ದ ಪೊಲೀಸ್, ಸರ್ ಅವರು ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಅವರು ನೆಲಕ್ಕೆ ಬಿದ್ದರು. ಅವರು ಸರಿಯಾಗಿಯೇ ದಾಟುತ್ತಿದ್ದರು. ಆದರೆ ಆ ಕಾರ್ ಡ್ರೆöÊವರ್ ಸಿಗ್ನಲ್ ಗಮನಿಸಲಿಲ್ಲ ಅಂತ ಕಾಣುತ್ತೆ, ಅದಕ್ಕೆ ಈ ಅಪಘಾತ ಎಂದು ರಸ್ತೆ ಅಪಘಾತದ ಬಗ್ಗೆ ಟ್ರಾಫಿಕ್ ಪೊಲೀಸ್ ವಿವರ ನೀಡಿದ. ನಾನು ನಿಂಗೆ ಗಿಫ್ಟ್ ಕೇಳಿರಲಿಲ್ಲ. ಅಲ್ವೆ ಇವತ್ ನನ್ನ ಬರ್ಥ್ಡೆ ಅನ್ನೊದೇ ನಂಗೆ ನೆನಪಿರಲಿಲ್ಲ. ಸುಮ್ನೆ ಅಪಾಯ ತಂದುಕೊಂಡೆ ಎಂದು ವಿಜಯ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಅವಳ ಕೈಯಲ್ಲಿ ಒಂದು ಗಿಫ್ಟ್ ಇತ್ತು. ಇದೇನು? ಇವತ್ತು ನಿನ್ನ ಬರ್ಥ್ಡೆ ಅಲ್ವಾ ಅದ್ಕೆ ಈ ಗೊಂಬೆನಾ ನಿಂಗೆ ಗಿಫ್ಟ್ ಕೊಡೋಣ ಅಂತ ತರೋಕೆ ಬಂದಿದ್ದೆ ತಗೊ. ನೀನು ಯಾವಾಗ್ಲೂ ನಂಗೆ ಗೊಂಬೆ, ಗೊಂಬೆ ಅಂತಿದ್ದಿ ಅಲ್ವಾ? ತಗೊ. ನೀನು ಅವತ್ತು ನಂಗೆ ಒಂದನೇ ಕ್ಲಾಸ್‌ದಲ್ಲಿ ಗೊಂಬೆ ಕೊಟ್ಟಿದ್ದಿ ಅಲ್ವಾ, ಇವತ್ತು ನಿನ್ನ ಬರ್ಥ್ಡೆಗೆ ನನ್ನ ಗಿಫ್ಟ್ ತಗೊ ಎಂದು ಕೈಯಲ್ಲಿ ಗೊಂಬೆ ಕೊಟ್ಟು ಜಯಾ ವಿಜಯನನ್ನು ದಿಟ್ಟಿಸಿ ನೋಡುತ್ತಾ ಹಾಗೆ ಕಣ್ಣುಮುಚ್ಚಿದಳು.
ಬಾಗಿಲು ಬಡಿದ ಶಬ್ದವಾಯಿತು ವಿಜಯ ವಾಸ್ತವ ಲೋಕಕ್ಕೆ ಬಂದ. ಬಾಗಿಲು ತರೆದ, ಪರಮೇಶಿ ಬಂದು ನಿಂತಿದ್ದ. ಯಾಕೆ ಸರ್ ಲೇಟ್ ಆತು ಇನ್ನೂ ಮಲಗಿರಿ? ಇಲ್ಲ ಬಾ ಪರಮೇಶಿ ಏನೋ ನೆನಪಾತು ಬಾ ಕುತ್ಕೊ ಕಾಫಿ ಕುಡಿ. ಐದು ನಿಮಿಷದಲ್ಲಿ ರೆಡಿ ಆಗ್ತೀನಿ ಎಂದು ಬಾತ್‌ರೂಂಗೆ ಹೋದ. ಬೇಗ-ಬೇಗ ಸ್ನಾನ ಮಾಡಿ ಟಿಫೀನ್ ಮಾಡಿ ಇಬ್ಬರೂ ಕಚೇರಿ ಕಡೆ ನಡೆದರು.
ಉಳಿದ ಕೆಲಸಗಳನ್ನು ಚೆಕ್ ಮಾಡುತ್ತಾ ಕುಳಿತ. ಪ್ಲಾನ್‌ಗಳು ಬಹಳಷ್ಟು ಬಾಕಿ ಉಳಿದಿದ್ದರಿಂದ ಟೀ-ಕಾಫಿ, ಊಟಕ್ಕೂ ಹೋಗದೇ ಕೆಲಸದಲ್ಲಿ ಮಗ್ನನಾದ. ಯಾಕೆ ಸರ್ ಇವತ್ ಬಹಳ ಡಲ್ ಅದೀರಿ? ಅಂಗೇನಿಲ್ಲ ಪರಮೇಶಿ ಏನೇನೋ ನೆನಪಾತು ಅದ್ಕೆ ರಾತ್ರಿ ಮಲಗದೂ ತಡವಾದ್ದರಿಂದ ಎದ್ದೇಳದೂ ಲೇಟ್ ಆತು. ಬದುಕು ನಮಗೆ ಎಲ್ಲನೂ ಕೊಡ್ತಾದಾ. ನಾವು ಅದ್ನಾ ಸ್ವೀಕರಿಸಬೇಕಷ್ಟೇ.
ಮ್ಯಾನೇಜರ್ ತಮ್ಮ ಚೇಂಬರ್‌ನಿಂದ ಓಡಿ ಬಂದು ವಿಜಯ ನಿನ್ನ ಮನೆಗೆ ಬೆಂಕಿ ಹೊತ್ತಿಕೊಂಡಿದೆಯಂತೆ! ನಿಮ್ಮ ಮನೆಯ ಪಕ್ಕದವರು ನನಗೆ ಫೋನ್ ಮಾಡಿದ್ರೂ ಎಂದು ಗಾಬರಿಯಿಂದ ನುಡಿದ. ವಿಜಯನಿಗೆ ಸಿಡಿಲು ಬಡಿದಂತಾಯಿತು. ಜಯಾ ಒಬ್ಬಳೇ ಮನೆಯಲ್ಲಿದ್ದಾಳೆ, ಆಕಿಗೆ ಏನಾಯ್ತೋ ಎಂದು ದಿಗುಲುಗೊಂಡ. ಮಾಡುವ ಕೆಲಸ ಅರ್ದಕ್ಕೆ ಬಿಟ್ಟವನೇ ಮನೆಗೆ ಓಡಲು ಅಣಿಯಾದ. ಮ್ಯಾನೇಜರ್ ಮಾತು ಕೇಳಿದ ಪರಮೇಶಿ ನಾನೂ ಬರ್ತಿನಿ ಸರ್. ನೀನು ಬರುವುದು ಬೇಡಾ ನಾನು ಹೋಗಿ ಏನಾದ್ರೂ ಅವಶ್ಯಕತೆ ಇದ್ದರೆ ಫೋನ್ ಮಾಡಿ ತಿಳಿಸ್ತೀನಿ, ಅವಾಗ ಬರುವಂತೆ. ಇಲ್ಲ ಸರ್ ನಡಿರಿ ನಾನೂ ಬರ್ತಿನಿ ನಿಮ್ಮೊಬ್ಬರನ್ನೇ ಕಳಿಸಲು ನಂಗೆ ಇಷ್ಟ ಇಲ್ಲ, ನಡಿರಿ ಎಂದು ಇಬ್ಬರೂ ಗಾಡಿ ಹತ್ತಿಕೊಂಡು ಮನೆಯಕಡೆ ಓಡಿದರು. ದೂರದಿಂದ ನೋಡುತ್ತಾರೆ. ಮನೆಯ ಸುತ್ತಲೂ ಜನ ಸೇರಿದ್ದಾರೆ. ಮನೆಗೆ ಬೆಂಕಿ ಹತ್ತಿ ಧಗ, ಧಗ ಉರಿಯುತ್ತಿದೆ. ಬೆಂಕಿಯ ಜ್ವಾಲೆಗಳು ಚಿಮ್ಮುತ್ತಿವೆ. ಇಡೀ ಮನೆಯೇ ಕಾಣದಂತೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ವಿಜಯ ಗಾಬರಿಯಿಂದ ಜಯಾ….ಜಯಾ… ಎಂದು ಕೂಗುತ್ತಾ ನಿಗಿ, ನಿಗಿ ಉರಿಯುತ್ತಿರುವ ಮನೆಯ ಕಡೆ ಹೋಗಲು ಸಿದ್ಧನಾದ. ಇದೆನೋ ಅನಾಹುತವಾಗಬಹುದೆಂದು ಪರಮೇಶಿ ವಿಜಯನನ್ನು ಗಟ್ಟಿಯಾಗಿ ಹಿಡಿದುಕೊಂಡ. ಬಿಡು ಪರಮೇಶಿ ಜಯಾ ಒಬ್ಬಾಕಿನಾ ಮಲಿಗ್ಯಾಳ ಬೆಂಕಿ ಹತ್ತಿ ರ‍್ಯಾಕತ್ಯಾದಾ, ನಾನು ನೋಡಿ ಹೆಂಗ ಸುಮ್ಮನಿರ್ಲಿ? ಅವಳನ್ನು ಬಿಟ್ಟು ನಾ ಹೆಂಗ ಬದುಕ್ಲಿ? ವಿಜಯ ಮನೆಯ ಒಳಗೆ ಹೋಗಲು ತಯಾರಾದ. ಬೇಡಾ ಸರ್ ಬೆಂಕಿ ಬಹಳ ಹೊತ್ತಿಕೊಂಡೈತಿ. ನೀವು ಒಳಗೆ ಹೋದ್ರ ಹೊರಗ ಬರದು ಕಷ್ಟ. ಒಳಗಿರದು ಗೊಂಬೆ ಅಲ್ವಾ? ಅಗ್ನಿಶಾಮಕದವರಿಗೆ ಫೋನ್ ಮಾಡಿನಿ, ಈಗ ಬರ್ತಾರಾ ಸ್ವಲ್ಪೊತ್ತು ತಡಿರಿ. ಆ ನಿರ್ಜೀವ ಗೊಂಬೆಗಾಗಿ ನೀವು ರಿಸ್ಕ ತಗಳೋದು ಬೇಡಾ. ಪರಮೇಶಿ ನಿಂಗೆ ಅದು ಗೊಂಬೆ ಅನಿಸಿರಬಹುದು. ಆದರೆ ಅದು ನಂಗೆ ಜೀವ. ನನ್ನ ಬಹುಪಾಲು ಜೀವನ ಅದರೊಂದಿಗೆ ಕಳಿದೀನಿ. ನನ್ನ ಭಾವನೆಗಳು ಅದರೊಂದಿಗೆ ಹಂಚಿಕೊAಡಿನಿ. ಅದಿದ್ದರೆ ಮಾತ್ರ ನನ್ನ ಜೀವ ಉಳಿತಾದಾ. ಅದು ಇಲ್ಲಾಂದ್ರ ನಾನೂ ಇಲ್ಲಾ, ಅಂಗಡಿಯಲ್ಲಿ ಮತ್ತೊಂದು ಗೊಂಬೆ ತಗೊಂಡರೆ ಆದೀತು ಬಿಡಿ ಸರ್. ಪರಮೇಶಿ ಅಂಗಡಿಯಲ್ಲಿ ಗೊಂಬೆ ಸಿಗಬಹುದು ಆದ್ರ ಮತ್ತೊಬ್ಬ ಜಯಾ ಸಿಗಬಹುದೇ? ನನ್ನ ಭಾವನೆಗಳೊಂದಿಗೆ ಬದುಕುವ ಗೊಂಬೆ ಸಿಗಲು ಸಾಧ್ಯವೇ? ಇಲ್ಲಾ ನಾನು ಜಯಾಳನ್ನು ಬಿಟ್ಟು ಬದುಕಲು ಸಾಧ್ಯವಿಲ್ಲಾ ಎನ್ನುತ್ತಾ ಗಟ್ಟಿಯಾಗಿ ಕೈ ಹಿಡಿಕೊಂಡಿದ್ದ ಪರಮೇಶಿಯಿಂದ ಕೊಸರಿಕೊಂಡು ಓಡಿದ. ಬೇಡಾ ಸರ್ ಬೇಡಾ ಎಂದು ಕೂಗುತ್ತಿದ್ದ ಪರಮೇಶಿ ಮಾತುಗಳು ವಿಜಯನ ಕಿವಿಗೆ ಬೀಳಲೊಲ್ಲವು. ಬೆಂಕಿ ಉಗುಳುತ್ತಿದ್ದ ಮನೆಯ ಒಳಗೆ ನಡೆದ. ಒಂದು ಕ್ಷಣವೂ ಆಗಿರಲಿಲ್ಲಾ ಗ್ಯಾಸ್ ಧಡಾರ್ ಎಂಬ ಶಬ್ದ ಬಂತು. ಕಿಡಕಿ, ಬಾಗಿಲುಗಳಿಂದ ಸಾಗರದಂತೆ ಬೆಂಕಿ ಹೊರಬಂತು. ಇತ್ತ ಪರಮೇಶಿ ಬೋರಾಡಿ ಅಳುತ್ತಿದ್ದ. ಸೈರನ್ ಶಬ್ದ ಮಾಡುತ್ತಾ ಅಗ್ನಿಶಾಮಕದಳದ ವಾಹನ ಬಂತು. ಬೆಂಕಿಯ ಶಕೆ ತಡೆಯಲಾರದೇ ಜನ ದೂರಾ ದೂರಾ ಸರಿಯುತ್ತಿದ್ದರು. ಪರಮೇಶಿ ಮಾತ್ರ ಕಣ್ಣೀರು ಸುರಿಸುತ್ತಾ ಉರಿಯುತ್ತಿರುವ ಮನೆಯನ್ನು ದಿಟ್ಟಿಸುತ್ತಾ ಅಸಹಾಯಕನಾಗಿ ನಿಂತುಬಿಟ್ಟ.
ಡಾ.ಸಿದ್ದಲಿAಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-583231
ಮೊ. ಸಂ:-9448570340
E-mail:- [email protected]

Get real time updates directly on you device, subscribe now.

Comments are closed.

error: Content is protected !!
%d bloggers like this: