ಹಾಸ್ಟೇಲಗಳಲ್ಲಿ ಸಮಸ್ಯೆ ತಲೆದೋರಿದರೆ ಮುಲಾಜಿಲ್ಲದೇ ಕ್ರಮ: ಶಾಸಕ ರಾಘವೇಂದ್ರ ಹಿಟ್ನಾಳ ಎಚ್ಚರಿಕೆ
) : ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆ ಅಡಿ ಬರುವ ವಿದ್ಯಾಥಿಗಳ ವಸತಿ ನಿಲಯಗಳಲ್ಲಿ ಶುದ್ಧ ಕುಡಿಯುವ ನೀರು, ಸ್ನಾನಕ್ಕೆ ಬಿಸಿ ನೀರು, ಸೂಕ್ತ ಭದ್ರತಾ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು, ತಪ್ಪಿದಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜೂನ್ 18 ರಂದು ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಕೊಪ್ಪಳ ತಾಲ್ಲೂಕು ಪಂಚಾಯತಿಯ 2024-25ನೇ ಸಾಲಿನ ಪ್ರಥಮ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಭದ್ರತೆಗೆ ಆದ್ಯತೆ ನೀಡಬೇಕು. ತಾಲ್ಲೂಕು ವ್ಯಾಪ್ತಿಯ ಎಲ್ಲ ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಅಳವಡಿಸಿ ಸೂಕ್ತ ಭದ್ರತೆ ಒದಗಿಸಬೇಕು. ಪ್ರತಿಯೊಂದು ವಸತಿ ನಿಲಯಕ್ಕೆ ಒಬ್ಬ ಹೋಮ್ ಗಾರ್ಡ್ಗಳನ್ನು ನೇಮಿಸಬೇಕು. ವಿದ್ಯಾರ್ಥಿಗಳಿಗೆ ನೀಡುವ ಊಟ, ಉಪಹಾರ ಗುಣಮಟ್ಟ ಹಾಗೂ ಶುದ್ಧತೆಯಿಂದ ಕೂಡಿರಬೇಕು. ವಸತಿ ನಿಲಯದ ಪ್ರತಿ ಸ್ಥಳದಲ್ಲಿಯೂ ಸ್ವಚ್ಛತೆಯನ್ನು ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಸ್ನಾನಕ್ಕೆ ಬಿಸಿ ನೀರು ಒದಗಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ನಿಯಮಿತವಾಗಿ ನಿಮ್ಮ ವ್ಯಾಪ್ತಿಯ ವಸತಿ ನಿಲಯಗಳಿಗೆ ಭೇಟಿ ನೀಡಿ, ವ್ಯವಸ್ಥೆಗಳನ್ನು ಪರಿಶೀಲಿಸಬೇಕು. ಏನಾದರೂ ಸಮಸ್ಯೆ ಕಂಡುಬಂದಲ್ಲಿ ಮೇಲಧಿಕಾರಿಗಳ ಅಥವಾ ಶಾಸಕರ ಗಮನಕ್ಕೆ ತಂದು ಕೂಡಲೇ ಪರಿಹರಿಸಬೇಕು. ಯಾವುದೇ ಕಾರಣಕ್ಕೂ ವಸತಿ ನಿಲಯದ ವಿದ್ಯಾಥಿಗಳಿಗೆ ಅನಗತ್ಯ ತೊಂದರೆ ಆಗಬಾರದು. ಈ ವಿಷಯಗಳನ್ನು ನಿರ್ಲಕ್ಷ್ಯ ತೋರಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದೊರೆಯುವಂತೆ ಕೃಷಿ ಅಧಿಕಾರಿಗಳು ಕ್ರಮ ವಹಿಸಬೇಕು. ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಹಾಗೂ ಮಾರಾಟ ಮಾಡುವವರ ಮೇಲೆ ನಿಗಾ ವಹಿಸಬೇಕು. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ, ಗುಣಮಟ್ಟ ಪರಿಶೀಲಿಸಬೇಕು. ರೈತರ ಬೇಡಿಕೆ ಅನುಸಾರ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ, ಅಗತ್ಯ ದಾಸ್ತಾನಿಗೆ ಅಧಿಕಾರಿಗಳು ಕ್ರಮ ವಹಿಸಬೇಕು. ಮಳೆಯಿಂದ ಹಾನಿಯಾದ ಪ್ರದೇಶ, ಮನೆ, ಜಾನುವಾರ ಹಾಗೂ ಮಾನವ ಹಾನಿ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸಿ ಪರಿಹಾರ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಶಾಸಕರು ಸೂಚಿಸಿದರು.
ಕೊಪ್ಪಳ ತಾಲ್ಲೂಕಿನಲ್ಲಿ ಶೇ.206 ರಷ್ಟು ಹೆಚ್ಚಿನ ಮಳೆ :
ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಮಾತನಾಡಿ, ಕೊಪ್ಪಳ ತಾಲ್ಲೂಕಿನ ಕೊಪ್ಪಳ ಹೋಬಳಿಯಲ್ಲಿ ಜೂನ್ 01 ರಿಂದ 13 ರವರೆಗೆ ವಾಡಿಕೆ ಮಳೆ 42 ಮಿ.ಮೀ. ಇದ್ದು, ವಾಸ್ತವವಾಗಿ 135.6 ಮಿ.ಮೀ. ನಷ್ಟು ಮಳೆ ಸುರಿದಿದೆ. ಅಳವಂಡಿ ಹೋಬಳಿಯಲ್ಲಿ ವಾಡಿಕೆ ಮಳೆ 37.7 ಮಿ.ಮೀ ಇದ್ದು, ವಾಸ್ತವವಾಗಿ 139.2 ಮಿ.ಮೀ ಮಳೆ ಸುರಿದಿದೆ. ಹಿಟ್ನಾಳ ಹೋಬಳಿಯಲ್ಲಿ ವಾಡಿಕೆ ಮಳೆ 36.6 ಮಿ.ಮೀ ಇದ್ದು, ವಾಸ್ತವವಾಗಿ 131.1 ಮಿ.ಮೀ. ಮಳೆ ಸುರಿದಿದೆ. ಇರಕಲ್‌ಗಡಾ ಹೋಬಳಿಯಲ್ಲಿ ವಾಡಿಕೆ ಮಳೆ 39.6 ಮಿ.ಮೀ ಇದ್ದು, ವಾಸ್ತವವಾಗಿ 105.2 ಮಿ.ಮೀ. ಮಳೆ ಸುರಿದಿದೆ. ತಾಲ್ಲೂಕಿನಾದ್ಯಂತ ವಾಡಿಕೆ ಮಳೆ 42 ಮಿ.ಮೀ ಇದ್ದು, ವಾಸ್ತವವಾಗಿ 128.7 ಮಿ.ಮೀ ಮಳೆ ಸುರಿದಿದ್ದು, ಒಟ್ಟು ಶೇ. 206 ರಷ್ಟು ಹೆಚ್ಚಿನ ಮಳೆ ಸುರಿದಿದೆ ಎಂದು ಮಳೆ ಬಗ್ಗೆ ಮಾಹಿತಿ ನೀಡಿದರು.
ಜೂನ್ 13 ರಂತೆ 2024-25ನೇ ಸಾಲಿನ ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರವಾರು ಏಕದಳ ಧಾನ್ಯಗಳ ಬಿತ್ತನೆ ಕ್ಷೇತ್ರಾವರಣೆ ಗುರಿ ಒಟ್ಟು 51819 ಹೆ. ಇದ್ದು, ಇದುವರೆಗೂ 9687 ಹೆ. ಗುರಿ ಸಾಧಿಸಲಾಗಿದೆ. ದ್ವಿದಳ ಧಾನ್ಯಗಳ ಬಿತ್ತನೆ ಕ್ಷೇತ್ರಾವರಣೆ ಗುರಿ ಒಟ್ಟು 2732 ಹೆ. ಇದ್ದು, 347 ಹೆ. ಗುರಿ ಸಾಧಿಸಲಾಗಿದೆ. ಎಣ್ಣೆಕಾಳುಗಳ ಬಿತ್ತನೆ ಕ್ಷೇತ್ರಾವರಣೆ ಗುರಿ 4568 ಹೆ. ಇದ್ದು, 333 ಹೆ. ಗುರಿ ಸಾಧಿಸಲಾಗಿದೆ. ವಾಣಿಜ್ಯ ಬೆಳೆಗಳ ಬಿತ್ತನೆ ಕ್ಷೇತ್ರಾವರಣೆ ಗುರಿ ಒಟ್ಟು 3449 ಹೆ. ಇದ್ದು, 2172 ಹೆ. ಗುರಿ ಸಾಧಿಸಲಾಗಿದೆ. ಸಮಗ್ರವಾಗಿ ಒಟ್ಟು ಬಿತ್ತನೆ ಕ್ಷೇತ್ರಾವರಣೆ ಗುರಿ 62568 ಹೆ. ಇದ್ದು, 12539 ಹೆ. ಗುರಿ ಸಾಧಿಸಲಾಗಿದೆ ಎಂದು ಬಿತ್ತನೆ ಕ್ಷೇತ್ರದ ಮಾಹಿತಿ ನೀಡಿದರು.
ರಿಯಾಯತಿ ಯೋಜನೆಗಳಡಿ ಬಿತ್ತನೆ ಬೀಜ ವಿತರಣೆ ವಿವರ :
ಕೊಪ್ಪಳ ತಾಲ್ಲೂಕಿನ 5 ರೈತ ಸಂಪರ್ಕ ಕೇಂದ್ರಗಳಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಿಯಾಯತಿ ಯೋಜನೆಗಳಡಿ ಬಿತ್ತನೆ ಬೀಜ ವಿತರಿಸಲಾಗಿದೆ. ಕೊಪ್ಪಳ ರೈತ ಸಂಪರ್ಕ ಕೇಂದ್ರದಲ್ಲಿ 38.25 ಕ್ವಿಂ. ಭತ್ತ, 252.92 ಕ್ವಿಂ. ಮೆಕ್ಕಜೋಳ, 1.34 ಕ್ವಿಂ. ಸಜ್ಜೆ, 16.84 ಕ್ವಿಂ. ತೊಗರಿ, 8.85 ಕ್ವಿಂ.ಹೆಸರು ಸೇರಿದಂತೆ ಒಟ್ಟು 318.20 ಕ್ವಿಂ. ನಷ್ಟು ಬಿತ್ತನೆ ಬೀಜ ವಿತರಿಸಲಾಗಿದೆ. ಅಳವಂಡಿ ರೈತ ಸಂಪರ್ಕ ಕೇಂದ್ರದಿಂದ 172.92 ಕ್ವಿಂ. ಮೆಕ್ಕೆಜೋಳ, 0.72 ಕ್ವಿಂ. ಸಜ್ಜೆ, 8.15 ಕ್ವಿಂ. ತೊಗರಿ, 16.70 ಕ್ವಿಂ. ಹೆಸರು, 0.76 ಕ್ವಿಂ. ಸೂರ್ಯಕಾಂತಿ ಸೇರಿದಂತೆ ಒಟ್ಟು 199.25 ಕ್ವಿಂ. ಬಿತ್ತನೆ ಬೀಜ ವಿತರಿಸಲಾಗಿದೆ. ಇರಕಲ್‌ಗಡಾ ರೈತ ಸಂಪರ್ಕ ಕೇಂದ್ರದಿಂದ 50 ಕ್ವಿಂ. ಭತ್ತ, 62 ಕ್ವಿಂ ಮೆಕ್ಕಜೋಳ, 9.9 ಕ್ವಿಂ. ಸಜ್ಜೆ, 32 ಕ್ವಿಂ. ತೊಗರಿ, 0.8 ಕ್ವಿಂ. ಹೆಸರು ಸೇರಿದಂತೆ ಒಟ್ಟು 154.7 ಕ್ವಿಂ. ಬಿತ್ತನೆ ಬೀಜ ವಿತರಿಸಲಾಗಿದೆ. ಹುಲಗಿ ರೈತ ಸಂಪರ್ಕ ಕೇಂದ್ರದಿಂದ 45.50 ಕ್ವಿಂ. ಭತ್ತ, 28.08 ಕ್ವಿಂ. ಮೆಕ್ಕೆಜೋಳ, 0.79.5 ಕ್ವಿಂ. ಸಜ್ಜೆ, 1.50 ಕ್ವಿಂ. ತೊಗರಿ ಸೇರಿದಂತೆ ಒಟ್ಟು 75.08 ಕ್ವಿಂ. ಬಿತ್ತನೆ ಬೀಜ ವಿತರಿಸಲಾಗಿದೆ. ಇಂದರಗಿ ರೈತ ಸಂಪರ್ಕ ಕೇಂದ್ರದಿಂದ 55.48 ಕ್ವಿಂ. ಮೆಕ್ಕೆಜೋಳ, 2.41 ಕ್ವಿಂ. ಸಜ್ಜೆ, 2.85 ಕ್ವಿಂ. ತೊಗರಿ ಸೇರಿದಂತೆ ಒಟ್ಟು 60.74 ಕ್ವಿಂ. ಬಿತ್ತನೆ ಬೀಜ ವಿತರಿಸಲಾಗಿದೆ. ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಿಂದ ಜೂನ್ 11 ರವರೆಗೆ ರೈತರ ಬೇಡಿಕೆ ಅನುಸಾರ ಒಟ್ಟು 807.97 ಕ್ವಿಂ. ನಷ್ಟು ವಿವಿಧ ಬಿತ್ತನೆ ಬೀಜಗಳನ್ನು ರಿಯಾಯತಿ ದರದಲ್ಲಿ ವಿತರಿಸಲಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಪೂರೈಕೆ, ಚರಂಡಿ ವ್ಯವಸ್ಥೆ, ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ರೈತರಿಗೆ ಒದಗಿಸಬೇಕಾದ ಸೌಲಭ್ಯಗಳು, ವಿದ್ಯುತ್ ಸಮಸ್ಯೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಕೊಪ್ಪಳ ತಾಲ್ಲೂಕು ಪಂಚಾಯತಿ ಕೆ.ಡಿ.ಪಿ ನಾಮನಿರ್ದೇಶಿತ ಸದಸ್ಯರು, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ತಹಶೀಲ್ದಾರರಾದ ವಿಠ್ಠಲ್ ಚೌಗಲಾ ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು, ಅನುಷ್ಠಾನಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.
Comments are closed.