ಮೇ ಸಾಹಿತ್ಯ ಮೇಳದಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕೆ ಮನವಿ

Get real time updates directly on you device, subscribe now.

ಕೊಪ್ಪಳ: ಇಲ್ಲಿನ ಮೇ ಸಾಹಿತ್ಯ ಬಳಗ, ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ ಕವಲಕ್ಕಿ, ಚಿತ್ತಾರ ಕಲಾ ಬಳಗ ಧಾರವಾಡ ಇವರ ಸಹಯೋಗದಲ್ಲಿ ಮೇ ೨೫ ಹಾಗು ೨೬ ರಂದು ನಡೆದ ೧೦ ನೇ ಮೇ ಸಾಹಿತ್ಯ ಮೇಳದಲ್ಲಿ ನಿರ್ಣಯಿಸಿದ ಬೇಡಿಕೆಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವಂತೆ ಮನವಿ ಸಲ್ಲಿಸಿದರು.
ಮೇಳದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅವಶ್ಯವಾಗಿರುವ ನಿರ್ಣಯಗಳನ್ನು ಮಂಡಿಸಿದ್ದು, ಈ ನಿರ್ಣಯಗಳ ಶೀಘ್ರ ಅನುಷ್ಠಾನಗೊಳ್ಳುವುದು ಅವಶ್ಯವಾಗಿದ್ದು ಸರಕಾರ ಅವುಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಪ್ರಗತಿಪರ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಅವುಗಳಲ್ಲಿ ತುಂಗಭದ್ರಾ ಅಣೆಕಟ್ಟೆಯಲ್ಲಿ ತುಂಬಿರುವ ೩೦ ಟಿಎಂಸಿಯಷ್ಟಿರುವ ಹೂಳು ತೆಗೆಯಬೇಕು, ನದಿಗೆ ಬಂದು ಸೇರುವ ವಿಷಕಾರಿ ತ್ಯಾಜ್ಯಗಳನ್ನು ತಡೆಯಬೇಕು, ವಿಷಕಾರಿ ತ್ಯಾಜ್ಯಗಳನ್ನು ನದಿಗೆ ಹರಿಬಿಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಆ ಕೆಲಸವನ್ನು ಮಾಡದ ಸುಮ್ಮನೆ ಉಳಿಯುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
ಇನ್ನು ಜಿಲ್ಲೆಯ ಘೋಷಿತ ಏತ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಹಿರೇಹಳ್ಳ ಅಣೆಕಟ್ಡಿನ ಎತ್ತರವನ್ನು ಒಂದು ಮೀಟರ್ ಎತ್ತರಿಸಬೇಕು. ಈಗ ತುಂಬಿರುವ ಹೂಳು ತೆಗೆಯಬೇಕು. ಹಿರೇಹಳ್ಳ ಯೋಜನೆಯಲ್ಲಿ ಜಮೀನು ಮತ್ತು ಮನೆ ಕಳೆದುಕೊಂಡ ನಿರಾಶ್ರಿತರ ವ್ಯಾಜ್ಯಗಳು ಸುಮಾರು ೪೦ ವರ್ಷಗಳಿಂದ ನ್ಯಾಯಲಯದಲ್ಲಿ ನೆನೆಗುದಿಗೆ ಬಿದ್ದಿರುವದು ಸರಕಾರಕ್ಕೆ ನಾಚಿಕೆ ತರುವ ಸಂಗತಿ. ಈ ವ್ಯಾಜ್ಯಗಳನ್ನು ೬ ತಿಂಗಳು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಿ ತಕ್ಷಣ ಪರಿಹಾರ ನೀಡಬೇಕು.
ಅಣೆಕಟ್ಟೆಯ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯನ್ನು ಅಣೆಕಟ್ಟೆ ಸುರಕ್ಷಿತ ದೃಷ್ಠಿಯಿಂದ ಕೂಡಲೇ ನಿಲ್ಲಿಸಬೇಕು.
ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಜರೂರಾಗಿ ಮಾಡಬೇಕು. ಯಾವ ಯಾವ ಗ್ರಾಮ ಕೆರೆ ಒತ್ತುವರಿಯಾಗಿದೆಯೋ ಅದನ್ನು ತೆರವುಗೊಳಿಸಬೇಕು. ಹೂಳು ತುಂಬಿದ ಕೆರೆಗಳು ಹೂಳು ಎತ್ತಬೇಕು. ಈ ಎಲ್ಲಾ ಕೆಲಸಗಳು ಒಂದುವರ್ಷದೊಳಗೆ ಆಗಬೇಕು.
ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸಬೇಕು. ಜಿಲ್ಲೆಯಲ್ಲಿ ಅಧಿಕೃತವಾಗಿರುವ ಗಣಿಗಾರಿಕೆಯಲ್ಲಿ ಭಾರಿ ಪ್ರಮಾಣ ಸ್ಪೋಟಕಗಳನ್ನು ಬಳಿಸುವದನ್ನು ನಿಷೇಧಿಸಬೇಕು. ಬಳಸಿದರೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಬೇಕು.
ಕೊಪ್ಪಳ ವಿಶ್ವವಿದ್ಯಾಲಯವನ್ನು ಎಲ್ಲಾ ಮೂಲಭೂತವಾದ ಸೌಕರ್ಯ ಜೊತೆಗೆ ವರ್ಷದ ಒಳಗಡೆ ಪೂರ್ಣಪ್ರಮಾಣ ನೇಮಕಾತಿ ಮತ್ತು ಕಟ್ಟಡ ವ್ಯವಸ್ಥೆಯಾಗಬೇಕು. ಎಲ್ಲವನ್ನು ಮಾಡುವಾಗ ಕೊಪ್ಪಳ ಜಿಲ್ಲಾ ಕೇಂದ್ರವನ್ನು ಪ್ರಧಾನವಾಗಿ ಪರಿಗಣಿಸಬೇಕು.

ಕೊಪ್ಪಳ ಜಿಲ್ಲೆಯಲ್ಲಿ ವನ್ಯಜೀವಿಗಳಾದ, ಜಿಂಕೆ, ಕರಡಿ, ತೋಳ, ನೀರುನಾಯಿ,ವನಗ್ಯಾ, ಮೊಸಳೆ, ನವಿಲು ಇವುಗಳ ಸಂರಕ್ಷಣೆಗಾಗಿ ಪಾರ್ಕ್ ನಿರ್ಮಾಣ ಮಾಡಬೇಕು. ಒಂದು ವರ್ಷದ ಕಾಲಮಿತಿಯಲ್ಲಿ ಸಂರಕ್ಷಣಾ ಪಾರ್ಕಗಳನ್ನು ಪೂರ್ಣಗೊಳಿಸಬೇಕು.
ರೈಸ್ ಪಾರ್ಕ್, ಹುಳಿಗಡಲೆ ಬೆಳೆಯುವ ಪ್ರದೇಶದಲ್ಲಿ ಹುಳಿಗಡಲೆ ಪಾರ್ಕ್ ಮಾಡಬೇಕು. ಜೊತೆಗೆ ತೋಟಗಾರಿಕಾ ಬೆಳೆಗಳಿಗಾಗಿ ಘೋಷಿತ ತೋಟಗಾರಿಕೆ ಪಾರ್ಕ್ ಅತೀ ಶೀಘ್ರ ಪೂರ್ಣಗೊಳಿಸಬೇಕು.
ಜಿಲ್ಲೆಯ ಸಾಂಸ್ಕೃತಿಕ ಕೇಂದ್ರಗಳಾದ ಕನಕಗಿರಿ, ಆನೆಗೊಂದಿ, ಇಟಗಿ, ಕೊಪ್ಪಳದ ಕೋಟೆ, ಅಶೋಕನ ಶಾಸನ, ಬಹದ್ದೂರ ಬಂಡಿ ಕೋಟೆ, ಕೋಟಿಲಿಂಗದ ಪುರ, ಕಲ್ಲೂರಿನ ಕಲ್ಲಿನಾಥೇಶ್ವರ, ಜಬ್ಬಲಗುಡ್ಡದ ಕುಮಾರರಾಮನ ಕುಮ್ಮಟದುರ್ಗ, ಹಿರೇಬೆಣಕಲ್ ಗಳಂತ ತಾಣ, ಪ್ರಾಗೈತಿಹಾಸಿಕ ಪ್ರದೇಶಗಳನ್ನು ಸಂರಕ್ಷಿಸಬೇಕು ಮತ್ತು ಅಭಿವೃದ್ಧಿಗೊಳಿಸಲು ತಕ್ಷಣವೇ ಪ್ರವಾಸೋದ್ಯಮ ಇಲಾಖೆಗೆ ನಿರ್ದೇಶನ ಕೊಡಬೇಕು. ಘೋಷಿತ ಜಾನಪದ ಲೋಕವನ್ನು ಆರಂಭಿಸಬೇಕು.
ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಬಸಾಪುರ ಕೈಗಾರಿಕಾ ಪ್ರದೇಶವನ್ನು ಕೂಡಲೇ ಆರಂಭಿಸಬೇಕು. ಘೋಷಿತ ಕೈಗಾರಿಕೆ ಎಸ್ಟೇಟ್‌ಗೆ ಸಂಬಂಧಿಸಿದ ವ್ಯಾಜ್ಯವನ್ನು ಕಾಲಮಿತಿಯಲ್ಲಿ ಬಗೆಹರಿಸಬೇಕು. ಕೈಗಾರಿಕೆ ಎಸ್ಟೇಟ್‌ಗಳನ್ನು ಮೀಸಲಾತಿ ಅನುಗುಣವಾಗಿ ಸ್ಥಾಪಿಸಬೇಕು. ಜಿಲ್ಲೆಯಲ್ಲಿರು ಎಲ್ಲಾ ಬೃಹತ್ ಕೈಗಾರಿಕಾ ಕೇಂದ್ರಗಳಲ್ಲಿ ಶೇ. ೫೦ ರಷ್ಟು ಕೊಪ್ಪಳ ಜಿಲ್ಲೆಯವರಿಗೆ ಮೀಸಲಿಡಬೇಕು. ಈ ಕುರಿತು ವಿಶೇಷ ಕಾಯ್ದೆಯಲ್ಲಿ ಶಾಸಕಾಂಗದಲ್ಲಿ ಅಂಗೀಕರಿಸಬೇಕು. ಅವಶ್ಯಕತೆಗಿಂತ ಹೆಚ್ಚುವರಿ ಭೂಮಿಯನ್ನು ಪಡೆದ ಕೈಗಾರಿಕೆಗಳ ಮಾಲಿಕರಿಂದ ಅದನ್ನು ವಾಪಸ್ ಪಡೆದು ರೈತರಿಗೆ ನೀಡುವುದು.
ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿ ಅದು ಜಿಲ್ಲೆಯಲ್ಲಿ ಸಮಾಜಿಕ ತಾರತಮ್ಯ ಎತ್ತಿ ತೋರಿಸಬೇಕು. ಜಿಲ್ಲೆಯಲ್ಲಿ ಇಂಥ ಅಸ್ಪೃಶ್ಯತೆ ಸಮರ್ಪಕವಾಗಿ ನಡೆಯುತ್ತಿಲ್ಲ. ಅಸ್ಪೃಶ್ಯತೆ ತಡೆಯುವಲ್ಲಿ ವಿಫಲಗೊಂಡಿದೆ. ಇಂಥ ಪ್ರಕರಣ ಮೇಲಿಂದ ಮೇಲೆ ಮತ್ತೆ ಮರುಕಳಿಸಿದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆಗಾರನ್ನಾಗಿಸುವ ಘೋಷಣೆಯನ್ನು ಕಟ್ಟುನಿಟ್ಟಿಗೆ ಅನುಷ್ಠಾನಗೊಳಿಸಬೇಕು.
ತಳಸಮುದಾಯದ ಆರಾದ್ಯ ದೈವವಾಗಿರುವ ಶ್ರೀಹುಲಿಗೆಮ್ಮ ದೇವಸ್ಥಾನದ ಅಭಿವೃದ್ದಿಯಾಗಬೇಕು. ಅಲ್ಲಿ ಪ್ರಾಣಿ ಬಲಿ, ದೇವದಾಸಿ ಪದ್ದತಿ ಸಂಪೂರ್ಣವಾಗಿ ನಿಲ್ಲಿಸಬೇಕು. ಲಕ್ಷಾಂತರ ಭಕ್ತರು ಬರುವ ದೇವಸ್ಥಾನದಲ್ಲಿ ಅಭಿವೃದ್ದಿ ಕಾರ್ಯಗಳಾಗಬೇಕು. ಘೋಷಿತ ಶ್ರೀಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ಕಾರ್ಯ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೇಡಿಕೆಗಳು ಕಾಲ ಮಿತಿಯಲ್ಲಿ ಅನುಷ್ಠಾನಕ್ಕೆ ಬರದೇ ಹೋದರೆ ಮುಂದೆ ತೀವ್ರ ಸ್ವರೂಪದ ಹೋರಾಟ ರೂಪಿಸಲಾಗುವದು ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಬಸವರಾಜ ಸೂಳಿಬಾವಿ, ಅಲ್ಲಮಪ್ರಭು ಬೆಟ್ಟದೂರ, ಶರಣಪ್ಪ ಬಾಚಲಾಪೂರ, ಬಸವರಾಜ ಶೀಲವಂತರ, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಡಾ. ವಿ. ಬಿ. ರಡ್ಡೇರ, ಎಂ. ಕೆ. ಸಾಹೇಬ್, ಶರಣು ಶೆಟ್ಟರ್ ಇತರರು ಇದ್ದರು, ಮನವಿಯನ್ನು ಜಿಲ್ಲಾಧಿಕಾರಿಗಳ ಪರವಾಗಿ ಎಡಿಸಿ ಸಾವಿತ್ರಿ ಕಡಿ ಸ್ವೀಕರಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: